News Karnataka Kannada
Friday, May 03 2024
ಚಾಮರಾಜನಗರ

ಆಹಾರ ಸುರಕ್ಷತೆ ಗುಣಮಟ್ಟ ಕಾಯ್ದೆ ಕುರಿತು ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಸೂಚನೆ

Vidhana Soudha
Photo Credit :

ಚಾಮರಾಜನಗರ, ;ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಬಗ್ಗೆ ವರ್ತಕರು, ಆಹಾರ ಪದಾರ್ಥಗಳ ಮಾರಾಟಗಾರರು, ಆಹಾರ ತಯಾರಿಕೆ, ಸಂಸ್ಕರಣೆ, ವಿತರಕರಿಗೆ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಸುರಕ್ಷಿತ ಆಹಾರ ಪದಾರ್ಥಗಳ ಸೇವನೆಯಿಂದ ಆರೋಗ್ಯಕ್ಕೆ ಆಗುವ ಹಾನಿಯ ಬಗ್ಗೆ ಮತ್ತು ಇಂತಹ ಪ್ರಕರಣಗಳಲ್ಲಿ ಕೈಗೊಳ್ಳಬಹುದಾದ ಕಾನೂನು ಕ್ರಮಗಳ ಬಗ್ಗೆ ವರ್ತಕರು, ಆಹಾರ ಪದಾರ್ಥಗಳ ಮಾರಾಟಗಾರರು, ವಿತರಕರಿಗೆ ಹೆಚ್ಚಿನ ತಿಳಿವಳಿಕೆ ನೀಡಬೇಕಿದೆ. ಈ ಉದ್ದೇಶಕ್ಕಾಗಿಯೇ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದರು. ಕಲಬೆರಕೆ ವಸ್ತುಗಳು, ಸುರಕ್ಷಿತವಲ್ಲದ ಆಹಾರ ಪದಾರ್ಥಗಳು, ಕುಡಿಯುವ ನೀರು, ಧಾನ್ಯಗಳು, ಮಸಾಲ ಪದಾರ್ಥಗಳು ಸೇರಿದಂತೆ ಎಲ್ಲ ಬಗೆಯ ಆಹಾರ ಪದಾರ್ಥಗಳ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ವಸ್ತುಗಳ ಮಾದರಿ ಸಂಗ್ರಹಿಸಿ ಆಹಾರ ಪ್ರಯೋಗ ಶಾಲೆಗಳಿಗೆ ಕಳುಹಿಸಿ ವಿಶ್ಲೇಷಣೆ ವರದಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಆಹಾರ ತಯಾರಿಕೆ, ಸಂಸ್ಕರಣೆ, ಸಂಗ್ರಹ, ವಿತರಣೆ ಮತ್ತು ಮಾರಾಟದಲ್ಲಿ ನಿರತರಾಗಿರುವ ಆಹಾರ ಉದ್ದಿಮೆದಾರರು ತಮ್ಮ ಪದಾರ್ಥಗಳ ತಯಾರಿಕೆ ಸ್ಥಳ ಮತ್ತು ಪರಿಸರವನ್ನು ನೈರ್ಮಲ್ಯವಾಗಿರಿಸಿಕೊಳ್ಳಬೇಕು. ತಯಾರಿಸಿದ ಆಹಾರ ಕಲುಷಿತವಾಗದಂತೆ ನೋಡಿಕೊಳ್ಳಬೇಕು. ಪೋಷಕಾಂಶ ನಾಶವಾಗದ ರೀತಿಯಲ್ಲಿ ಆಹಾರ ತಯಾರಿಸಬೇಕು. ತಯಾರಿಸಿದ ಆಹರವನ್ನು ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಬಳಕೆ ಮಾಡಬೇಕಾಗುತ್ತದೆ. ತಯಾರಿಕೆಗೆ ಶುದ್ದವಾದ ನೀರು, ಪದಾರ್ಥಗಳನ್ನು ಬಳಸಬೇಕಿದೆ. ಈ ಎಲ್ಲವನ್ನು ಪಾಲನೆ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಎಲ್ಲ ಆಹಾರ ತಯಾರಕರ, ವಿತರಕರು, ಸಂಗ್ರಹಣೆ, ವ್ಯಾಪಾರಸ್ಥರು ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಯ್ದೆಗೆ ಒಳಪಟ್ಟಿರುತ್ತಾರೆ. ನ್ಯಾಯಬೆಲೆ ಅಂಗಡಿಗಳು ಅಕ್ಷರ ದಾಸೋಹ ಕಾರ್ಯಕ್ರಮದಡಿ ಕಾರ್ಯನಿರ್ವಹಿಸುವ ಶಾಲೆಗಳು, ಹಾಲು ಉತ್ಪಾದಕರ ಸಂಘಗಳು, ಸರ್ಕಾರಿ ಅಥವಾ ಖಾಸಗಿ ಉಗ್ರಾಣಗಳು, ಹಣ್ಣು ತರಕಾರಿ ವ್ಯಾಪಾರಿಗಳು, ದಾಸ್ತಾನುಗಾರರು, ಮಾಂಸ ಮೀನು ಮಾರಾಟಗಾರರು, ರಸ್ತೆಬದಿ ಆಹಾರ ಪದಾರ್ಥಗಳ ಮಾರಾಟಗಾರರು ಕಾಯ್ದೆಯಡಿ ನೊಂದಣಿ, ಪರವಾನಗಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಈ ಬಗ್ಗೆ ಹೆಚ್ಚಿನ ತಿಳಿವಳಿಕೆ ನೀಡುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಕುಡಿಯುವ ನೀರು ತಯಾರಿಕಾ ಘಟಕಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಪರವಾನಗಿ ಪಡೆದುಕೊಳ್ಳಬೇಕಿದೆ. ಅನಧಿಕೃತ ಕುಡಿಯುವ ನೀರು ತಯಾರಿಕಾ ಘಟಕಗಳನ್ನು ಪತ್ತೆಹಚ್ಚಲು ಸಮಿತಿ ರಚಿಸಲಾಗಿದೆ. ಮಕ್ಕಳಿಗೆ ಸರಬರಾಜು ಮಾಡುವ ಹಾಲು ಇನ್ನಿತರ ಆಹಾರ ಪದಾರ್ಥಗಳ ತಯಾರಿಕಾ ದಿನಾಂಕ, ಅವಧಿ ಮೀರಿರುವ ದಿನಾಂಕವನ್ನು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು. ಅಂಗನವಾಡಿಗಳಿಗೆ ಭೇಟಿ ನೀಡಿ ಆಹಾರ ಸುರಕ್ಷತೆ, ಕುಡಿಯುವ ನೀರು, ನೈರ್ಮಲ್ಯ ಬಗ್ಗೆ ಖಾತರಿಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದರು.
ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಜಯಸಿಂಹ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಜಿಲ್ಲಾ ಅಂಕಿತ ಅಧಿಕಾರಿ ಡಾ. ಜಿ.ಸಿ. ಬೆಟ್ಟಸ್ವಾಮಿ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ಬಿ. ಬಸವರಾಜು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಪಿ. ಮಂಜುನಾಥ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆÉಯ ಉಪನಿರ್ದೇಶಕ ಯೋಗಾನಂದ, ಇನ್ನಿತರ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು