ಮೈಸೂರು: ಮೈಸೂರು ಮೂಲದ ಮಹಿಳೆ ಮತ್ತು ಅವರ ಮಕ್ಕಳಿಬ್ಬರು ಐರ್ಲೆಂಡ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ಮೈಸೂರು ಮೂಲದ ಸೀಮಾ ಬಾನು ಸೈಯದ್ (37 ವರ್ಷ), ಮಗಳು ಅಸ್ಫಿರಾ ರಿಝಾ(11 ವರ್ಷ) ಮಗ ಫೈಜಾನ್ ಸೈಯದ್ (6 ವರ್ಷ) ಅವರ ಶವಗಳು ದಕ್ಷಿಣ ಡಬ್ಲಿನ್ನಲ್ಲಿರುವ ಬ್ಯಾಲಿಂಟೀರ್ ಲೆವೆಲಿನ್ ಎಸ್ಟೇಟ್ ನಲ್ಲಿರುವ ನಿವಾಸದಲ್ಲಿ ಪತ್ತೆಯಾಗಿದೆ. ಇದು ಕೊಲೆ ಎಂದು ಶಂಕಿಸಲಾಗಿದ್ದು, ಐದು ದಿನಗಳ ಹಿಂದೆ ಕೊಲೆಗೈದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇಬ್ಬರು ಮಕ್ಕಳು ಒಂದು ಕೊಠಡಿಯಲ್ಲಿ, ತಾಯಿಯ ಶವ ಮತ್ತೊಂದು ಕೊಠಡಿಯಲ್ಲಿ ಪತ್ತೆಯಾಗಿದೆ. ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ. ಸೀಮಾ ಬಾನು ವರ್ಷದ ಹಿಂದಷ್ಟೇ ಮೈಸೂರಿನಿಂದ ಐರ್ಲೆಂಡ್ ತೆರಳಿದ್ದರು. ಘಟನೆ ಬೆಳಕಿಗೆ ಬಂದಾಗ ಮಹಿಳೆಯ ಪತಿ ಮನೆಯಲ್ಲಿ ಇರಲಿಲ್ಲ. ಸೀಮಾಳ ಗಂಡ ಸಮೀರ್ ಸೈಯದ್ ಡಬ್ಲಿನ್ ನಗರದಿಂದ ಹೊರಗಿದ್ದ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಸಮೀರ್ ಸೈಯದ್ ಮೂಲತಃ ಮೈಸೂರಿನ ನಿವಾಸಿಯಾಗಿದ್ದು ದುಬೈನಲ್ಲಿದ್ದರು. ಕಳೆದ ಫೆಬ್ರವರಿ ತಿಂಗಳಲ್ಲಿ ದುಬೈನಿಂದ ಐರ್ಲೆಂಡ್ ಗೆ ತೆರಳಿದ್ದು ಅಲ್ಲಿ ಹೊಸ ಉದ್ಯೋಗ ಸಿಕ್ಕಿದ್ದರಿಂದ ಕುಟುಂಬದ ಜೊತೆ ವಾಸಿಸುತ್ತಿದ್ದರು.
ಪಾರ್ಥೀವ ದೇಹಗಳಿಗಾಗಿ ಕುಟುಂಬದ ಮನವಿ: ಮೈಸೂರಿನ ಸೀಮಾ ಬಾನು ಕುಟುಂಬಸ್ಥರು ಭಾರತೀಯ ವಿದೇಶಾಂಗ ಇಲಾಖೆಯನ್ನು ಸಂಪರ್ಕಿಸಿದ್ದು ಶವ ಊರಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ತಾಯಿ, ಮಕ್ಕಳ ಹತ್ಯೆ ಬಗ್ಗೆ ಐರ್ಲೆಂಡಿನ ಭಾರತೀಯ ಪ್ರಾಧಿಕಾರ ಆಘಾತ ವ್ಯಕ್ತಪಡಿಸಿದೆ. ಶವ ತರಲು ಸುಮಾರು ₹ 15 ಲಕ್ಷ ಖರ್ಚಾಗುತ್ತದೆ. ಅಷ್ಟೊಂದು ಹಣ ನಮ್ಮ ಬಳಿ ಇಲ್ಲ. ನಮ್ಮ ಪ್ರೀತಿ ಪಾತ್ರದ ಶವವನ್ನು ಕಳುಹಿಸಿಕೊಟ್ಟರೆ ಜೀವನ ಪೂರ್ತಿ ನಿಮಗೆ ಋಣಿಯಾಗಿರುತ್ತೇವೆ. ಕೊನೆ ಒಂದು ಬಾರಿಯಾದರೂ ಅವರ ಮುಖಗಳನ್ನು ನೋಡಲು ಬಯಸಿದ್ದೇವೆ. ದಯವಿಟ್ಟು ಶವಗಳನ್ನು ಕಳುಹಿಸಿಕೊಡಿ. ನಮಗೆ ಸಹಾಯ ಮಾಡಿ ಎಂದು ಐರೀಸ್ ವೆಬ್ಸೈಟ್ ಆರ್ಟಿಐ ಜತೆ ಮಾಡಿ ಮನವಿ ಮಾಡಿದ್ದಾರೆ.