ಮಂಗಳೂರು: ಬೆಂಗಳೂರು – ಮಂಗಳೂರು ವಂದೇಭಾರತ್ ರೈಲು ಪರೀಕ್ಷಾರ್ಥವಾಗಿ ಸೆ. 10ರಂದು ಮತ್ತೂಮ್ಮೆ ಸಂಚಾರ ನಡೆಸಲಿದೆ. ಬೆಳಗ್ಗೆ ಬೆಂಗಳೂರಿನ ಯಶವಂತ ಪುರದಿಂದ ಹೊರಟು ಮಧ್ಯಾಹ್ನ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ತಲುಪಲಿದೆ. ಬಳಿಕ ಮಂಗಳೂರಿನಿಂದ ಬೆಂಗಳೂರಿಗೆ ವಾಪಸಾಗಲಿದೆ ಎಂದು ತಿಳಿದುಬಂದಿದೆ.
ಸೆ. 5ರಂದು ವಂದೇ ಭಾರತ್ ರೈಲು ಪರೀಕ್ಷಾರ್ಥವಾಗಿ, ಮುಖ್ಯವಾಗಿ ಸಮಯ ನಿಗದಿಗಾಗಿ ಬೆಂಗಳೂರು- ಮಂಗಳೂರು ನಡುವೆ ಸಂಚರಿಸಿತ್ತು. ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಆಗಮಿಸಿ ವಾಪಸಾಗಿತ್ತು. ಆದರೆ ಕೆಲವು ತಾಂತ್ರಿಕ ತೊಡಕುಗಳಿಂದಾಗಿ ನಿಗದಿತ ಅವಧಿಗಿಂತ ಸುಮಾರು 2 ಗಂಟೆ ವಿಳಂಬವಾಗಿ ಮಂಗಳೂರಿಗೆ ಆಗಮಿಸಿತ್ತು. ಗುರುವಾರ ಮತ್ತೊಮೆ¾ ಸಮಯ ನಿಗದಿಗೆ ಸಂಬಂಧಿಸಿದಂತೆ ಸಂಚಾರ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರೀಕ್ಷಾರ್ಥ ವೇಳೆ ರೈಲು ಬೆಂಗಳೂರಿನಿಂದ 6 ಗಂಟೆಗೆ ಹೊರಟು ಸಂಜೆ ಮಂಗಳೂರಿಗೆ ತಲುಪಿದೆ. ಈ ವೇಳಾಪಟ್ಟಿಯನ್ನು ನಿಗದಿ ಮಾಡಬಾರದು. ಬದಲಾಗಿ ಮಂಗಳೂರಿನಿಂದ ಬೆಳಗ್ಗೆ 5 ಅಥವಾ 6 ಗಂಟೆಗೆ ಹೊರಟು ಮಧ್ಯಾಹ್ನದೊಳಗೆ ಬೆಂಗಳೂರು ತಲುಪಿ 4 ಗಂಟೆಗೆ ಬೆಂಗಳೂರಿನಿಂದ ಮಂಗಳೂರಿಗೆ ಹೊರಡುವಂತೆ ಸಮಯ ನಿಗದಿ ಮಾಡಬೇಕು ಎಂದು ರೈಲ್ವೇ ಬಳಕೆದಾರರು ಆಗ್ರಹಿಸಿದ್ದಾರೆ.
ಮಂಗಳೂರು-ಬೆಂಗಳೂರು ವಂದೇಭಾರತ್ ರೈಲನ್ನು ಮಡ್ಡಾಂವ್ಗೆ ವಿಸ್ತರಿಸುವ ಪ್ರಯತ್ನಗಳು ನಡೆಯುತ್ತಿದ್ದು, ಇದಕ್ಕೆ ಅವಕಾಶ ಕೊಡಬಾರದು ನೀಡಬಾರದು ಎಂದು ದ. ಕ. ಜಿಲ್ಲೆಯ ರೈಲ್ವೇ ಬಳಕೆದಾರರು ಆಗ್ರಹಿಸಿದ್ದಾರೆ.

