News Karnataka Kannada
Saturday, April 27 2024
ಶಿವಮೊಗ್ಗ

ಶಿವಮೊಗ್ಗ | ಕಾರ್ಮಿಕರ ಬದುಕು ಹಸನುಗೊಳಿಸಲು ಅನೇಕ ಕಾರ್ಯಕ್ರಮಗಳು: ಸಚಿವ ಶಿವರಾಮ್ ಹೆಬ್ಬಾರ್

Minister Shivaram Hebbar
Photo Credit : By Author

ಶಿವಮೊಗ್ಗ ಜೂನ್ 28 : ವಿವಿಧ ಹೊಸ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಕಾರ್ಮಿಕರ ಜೀವನದಲ್ಲಿ ವಿಶ್ವಾಸ ತುಂಬುವ ಕೆಲಸವನ್ನು ಕಾರ್ಮಿಕ ಇಲಾಖೆ ಮಾಡುತ್ತಿದೆ ಎಂದು ಕಾರ್ಮಿಕ ಸಚಿವರು ಅರಬೈಲ್ ಶಿವರಾಮ್ ಹೆಬ್ಬಾರ್ ನುಡಿದರು.

ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಇಂದು ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಏರ್ಪಡಿಸಲಾಗಿದ್ದ ಆರೋಗ್ಯ ತಪಾಸಣೆ, ತರಬೇತಿ ಮತ್ತು ಸಂಚಾರಿ ಆರೋಗ್ಯ ಕ್ಲಿನಿಕ್ ಯೋಜನೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಶಿವಮೊಗ್ಗದ ಸಂಸದರ ಅತ್ಯುತ್ಸಾಹದಿಂದಾಗಿ ಜಿಲ್ಲೆಯಲ್ಲಿ ಇಂದು ತ್ವರಿತವಾಗಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ನಮ್ಮ ಸರ್ಕಾರ ಕಾರ್ಮಿಕರ ಬದುಕನ್ನು ಹಸನು ಮಾಡಲು ಪಣ ತೊಟ್ಟು ಅನೇಕ ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇಂದು ಚಾಲನೆ ನೀಡಲಾದ ಉಚಿತ ಆರೋಗ್ಯ ತಪಾಸಣೆಯಲ್ಲಿ 21 ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಖಾಸಗಿಯಲ್ಲಿ ಮಾಡಿಸಿದರೆ ಒಬ್ಬರಿಗೆ ರೂ.12 ಸಾವಿರದವರೆಗೆ ವೆಚ್ಚ ತಗುಲುತ್ತದೆ. ಇಂತಹ ಪರೀಕ್ಷೆಯನ್ನು ಮೊದಲ ಹಂತದಲ್ಲಿ ಸುಮಾರು 30 ಸಾವಿರ ಕಾರ್ಮಿಕರಿಗೆ ಮಾಡಲಾಗುತ್ತಿದೆ. ಕಾರ್ಮಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕು.

ರಾಜ್ಯದಲ್ಲಿ 32 ಲಕ್ಷ ಕಟ್ಟಡ ಕಾರ್ಮಿಕರಿದ್ದಾರೆ. 70 ಲಕ್ಷ ಅಸಂಘಿತ ಕಾರ್ಮಿಕರು ಇ-ಶ್ರಮ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡಿದ್ದಾರೆ. ಕಾರ್ಮಿಕರ ಒಳಿತಿಕಾಗಿ ಕೇಂದ್ರ ಸರ್ಕಾರ ಕಾನೂನುಗಳನ್ನು ಸುಗಮಗೊಳಿಸಿದೆ. ಇಂದು ಶಿವಮೊಗ್ಗ ತಾಲ್ಲೂಕಿನ ಸಿದ್ಲೀಪುರದಲ್ಲಿ ಕಟ್ಟಡ ಕಾರ್ಮಿಕರ ವಸತಿ ಸಮುಚ್ಚಯ ಕಾಮಗಾರಿಗೆ ಗುದ್ದಲಿಪೂಜೆ ಆಗಿದ್ದು, ಇದಕ್ಕೆ ಸಂಸದರು ಹೆಚ್ಚುವರಿಯಾಗಿ ರೂ.8 ರಿಂದ 10 ಕೋಟಿ ಕೇಳಿದ್ದಾರೆ, ಜೊತೆಗೆ ಮತ್ತೆ 30 ಸಾವಿರ ಜನರಿಗೆ ಉಚಿತ ಆರೋಗ್ಯ ತಪಾಸಣೆಗೆ ಟೆಂಡರ್ ಕರೆಯುವಂತೆ ಕೋರಿದ್ದು ಇದಕ್ಕೆ ನನ್ನ ಒಪ್ಪಿಗೆ ಇದೆ. ಸರ್ಕಾರ ಸದಾ ಕಾರ್ಮಿಕರ ಜೊತೆ ಇದೆ.
ಕಾರ್ಮಿಕರ ಮಕ್ಕಳ ಶ್ರೇಯೋಭಿವೃದ್ದಿಗಾಗಿ ಇಲಾಖೆ ಒಟ್ಟು 750 ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ(500 ಕೆಎಎಸ್+250ಐಎಎಸ್) ಉಚಿತ ತರಬೇತಿ ನೀಡುವ ಯೋಜನೆ, ಎಸ್‍ಎಸ್‍ಎಲ್‍ಸಿ ಯಲ್ಲಿ 600 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ 15 ಸಾವಿರ ಗೌರವಧನ ಮತ್ತು 10 ಸಾವಿರ ಬೋನಸ್ ಒಟ್ಟು 25 ಸಾವಿರ ಘೋಷಿಸಿದೆ. 2591 ಮಕ್ಕಳು 600 ಕ್ಕಿಂತ ಹೆಚ್ಚು ಅಂಕ ಪಡೆದಿರುವುದು ಶ್ಲಾಘನೀಯವಾಗಿದ್ದು ಈ ಸಾಲಿನಲ್ಲಿ ಅವರು ಈ ಸೌಲಭ್ಯ ಪಡೆಯುತ್ತಿದ್ದಾರೆ. ಸುಮಾರು 37 ಲಕ್ಷ ವೆಚ್ಚದಲ್ಲಿ 18 ತಿಂಗಳ ಪೈಲಟ್ ತರಬೇತಿಯನ್ನು ಕಾರ್ಮಿಕರ ಮಕ್ಕಳಿಗೂ ನೀಡುವ ಸಲುವಾಗಿ 31 ಜಿಲ್ಲೆಗಳಿಂದ ಒಟ್ಟು 31 ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ನೀಡುವ ಯೋಜನೆ ಜಾರಿಗೆ ತರಲಾಗಿದೆ.

ಒಟ್ಟಾರೆ ಕಾರ್ಮಿಕರ ಮತ್ತು ಅವರ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಇಲಾಖೆಯಲ್ಲಿ ಅಧಿಕಾರಿಗಳ ತಂಡ ಶ್ರಮಿಸುತ್ತಿದೆ ಎಂದ ಅವರು ಕೋವಿಡ್ ಸಂಕಷ್ಟದ ಸಮಯದಲ್ಲಿ ಕಾರ್ಮಿಕರ ಹಿತ ಕಾಯಲು ಕರ್ನಾಟಕದ ಕಾರ್ಮಿಕ ಇಲಾಖೆ ಚಾರಿತ್ರಿಕ ಕೆಲಸ ಮಾಡಿದೆ ಎಂದು ಸ್ಮರಿಸಿದರು.

ರೇಷ್ಮೆ, ಯುವ ಸಬಲೀಕರಣ, ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ ಮಾತನಾಡಿ, ಎಲ್ಲ ಋತುಮಾನಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಇಂತಹ ಆರೋಗ್ಯ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಿ ಕಾರ್ಮಿಕರ ಜೀವ ಉಳಿಸುವ ಈ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲರೂ ಪಡೆಯಬೇಕು. ಕೆಲಸದ ವೇಳೆ ಸುಮಾರು 500 ರಿಂದ 1000 ಜನರಿಗೆ ಸೂರು ಒದಗಿಸುವ ಕಾರ್ಮಿಕರ ವಸತಿ ಸಮುಚ್ಚಯ ನಿರ್ಮಾಣ ಹಾಗೂ ಕಾರ್ಮಿಕರ ಹಿತಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಕಾರ್ಮಿಕರನ್ನು ಪ್ರೀತಿಸುವ ಸಚಿವರು, ಅವಿರತ ಕೆಲಸ ಮಾಡುವ ಸಂಸದರು ಎಲ್ಲ ಇರುವುದು ಕಾರ್ಮಿಕರ ಸುದೈವ ಎಂದರು.

ಸಂಸದರಾದ ಬಿ.ವೈ.ರಾಘವೇಂದ್ರ ಸಂಚಾರಿ ಆರೋಗ್ಯ ಕ್ಲಿನಿಕ್ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಇಂದು ವಲಸೆ ಕಾರ್ಮಿಕರ ಸೂರಿಗಾಗಿ ವಸತಿ ಸಮುಚ್ಚಯ, ಉಚಿತ ಆರೋಗ್ಯ ತಪಾಸಣೆ, ಭದ್ರಾವತಿಯಲ್ಲಿ ರೂ.7 ಕೋಟಿ ವೆಚ್ಚದಲ್ಲಿ ಕಾರ್ಮಿಕರ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆಯಂತಹ ಅಭಿವೃದ್ದಿ ಕೆಲಸಗಳು ನಡೆಯುತ್ತಿರುವುದು ಸಂತಸದ ವಿಚಾರ. ಇನ್ನು 2-3 ದಿನದಲ್ಲಿ ಕಾರ್ಮಿಕರು ಇರುವಲ್ಲಿಯೇ ಸಂಚಾರಿ ವಾಹನದಲ್ಲಿ ಆರೋಗ್ಯ ತಪಾಸಣೆ ಸಹ ನಡೆಯಲಿದೆ. ಮೇಜರ್ ಶಸ್ತ್ರಚಿಕಿತ್ಸೆಗಳಿದ್ದಲ್ಲಿ ವೆಚ್ಚ ಮರುಪಾವತಿ ವ್ಯವಸ್ಥೆ ಇದೆ. ಅಸಂಘಟಿತ ಕಾರ್ಮಿಕರ ಅಭಿವೃದ್ದಿಗಾಗಿ ಇ-ಶ್ರಮ್ ನೋಂದಣಿ ಗುರಿ ತಲುಪಬೇಕು. ವಿವಿಧ ರೀತಿಯ ಕಾರ್ಮಿಕರು, ಆಶಾ, ಅಂಗನವಾಡಿ, ಕ್ಷೌರಿಕ, ಬ್ಯೂಟಿಪಾರ್ಲರ್‍ನವರು ಇ-ಶ್ರಮ್ ತಂತ್ರಾಂಶದಡಿ ಸಿಎಸ್‍ಸಿ, ಗ್ರಾಮ ಒನ್ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಬಹುದು.
ರಾಗಿಗುಡ್ಡದಲ್ಲಿ 100 ಹಾಸಿಗೆ ಸಾಮಥ್ರ್ಯದ ಇಎಸ್‍ಐ ಆಸ್ಪತ್ರೆಗೆ ಶಂಕುಸ್ಥಾಪನೆಯಾಗಿದ್ದು, ಉತ್ತಮ ಕಾರ್ಯನಿರ್ವಹಣೆಗೆ ಮೆಗ್ಗಾನ್ ಆಸ್ಪತ್ರೆಯೊಂದಿಗೆ ಟೈ-ಅಪ್ ಮಾಡುವ ಬಗ್ಗೆ ಹಾಗೂ ಕಾರ್ಮಿಕರಿಗೆ ಕನಿಷ್ಟ ವೇತನ ಜಾರಿ ಕುರಿತು ಕಾರ್ಮಿಕ ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಸಾಂಕೇತಿಕವಾಗಿ ಇ-ಶ್ರಮ್ ಗುರುತಿನ ಚೀಟಿ, ಪೈಂಟ್ ಕಿಟ್ ವಿತರಿಸಲಾಯಿತು.
ಶಾಸಕರಾದ ಕೆ.ಬಿ ಅಶೋಕ್‍ನಾಯ್ಕ, ಅರುಣ್.ಡಿ.ಎಸ್, ಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ, ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ, ದತ್ತಾತ್ರಿ ಎಸ್, ಪಾಲಿಕೆ ಉಪಮಹಾಪೌರ ಶಂಕರ್ ಗನ್ನಿ, ಎಸ್.ಎನ್.ಚನ್ನಬಸಪ್ಪ, ಪಾಲಿಕೆ ಸದಸ್ಯರು, ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷ, ಸಿಇಓ ಗುರುಪ್ರಸಾದ್ ಎಂ.ಪಿ ಜಿಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿ.ಪಂ ಸಿಇಓ ಎಂ.ಎಲ್.ವೈಶಾಲಿ, ವಿವಿಧ ಸಂಘಟನೆ ಮುಖಂಡರು, ಪದಾಧಿಕಾರಿಗಳು, ಕಟ್ಟಡ ಕಾರ್ಮಿಕರು ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು