News Karnataka Kannada
Sunday, April 28 2024
ಶಿವಮೊಗ್ಗ

ಕೊರೋನದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ಶಿಕ್ಷಣ ಮತ್ತು ಸುರಕ್ಷತೆಗೆ ಕ್ರಮ: ಬಿ.ವೈ.ರಾಘವೇಂದ್ರ

By Raghavendra
Photo Credit :

ಶಿವಮೊಗ್ಗ,ಮೇ.30: ವಿಶ್ವದಾದ್ಯಂತ ಇನ್ನಿಲ್ಲದಂತೆ ಕಾಡಿದ ಮಹಾಮಾರಿ ಕೊರೋನ-19 ರಿಂದಾಗಿ ತಮ್ಮ ಪೋಷಕರನ್ನೆ ಕಳೆದುಕೊಂಡು ಅನಾಥರಾಗಿರುವ ಅಪ್ರಾಪ್ತ ಮಕ್ಕಳ ಶಿಕ್ಷಣ ಮತ್ತು ಸುರಕ್ಷತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ಕೈಗೊಂಡಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.

ಪಿ.ಎಂ.ಕೇರ್ಸ್ ಫಾರ್ ಚಿಲ್ಡ್ರನ್ಸ್ ಯೋಜನೆ ಅನುಷ್ಠಾನದ ಕುರಿತು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ದೇಶದ ಎಲ್ಲಾ ಜಿಲ್ಲೆಗಳಲ್ಲಿನ ಸಂತ್ರಸ್ಥ ಕುಟುಂಬಗಳ ಮಕ್ಕಳಿಗೆ ಸಾಂತ್ವನ ಹೇಳುವ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸಂತ್ರಸ್ಥ ಮಕ್ಕಳಿಗೆ ಸೌಲಭ್ಯಗಳ ಕಿಟ್‍ನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.

ಕೊರೋನದಿಂದಾಗಿ ರಾಜ್ಯದಲ್ಲಿ ಸುಮಾರು 216ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡು ಪೋಷಕರ ಪ್ರೀತಿ ವಾತ್ಸಲ್ಯದಿಂದ ವಂಚಿತರಾಗಿರುವುದು ಅತ್ಯಂತ ನೋವಿನ ಸಂಗತಿ. ಇಂತಹ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ಒದಗಿಸಲು ಸರ್ಕಾರಗಳು ಅಗತ್ಯ ಕ್ರಮ ಕೈಗೊಂಡಿರುವುದು ಸಮಾಧಾನಕರ ವಿಷಯ ಎಂದ ಅವರು, ಜಿಲ್ಲಾಧಿಕಾರಿಗಳು ಮತ್ತು ಸಂತ್ರಸ್ಥ ಪ್ರತಿ ಮಗುವಿನ ಹೆಸರಲ್ಲಿ ಜಂಟಿಯಾಗಿ ಠೇವಣಿ ಇರಿಸಿದ ಹಣವನ್ನು ಮಗುವಿನ 23ವಯಸ್ಸಿಗೆ ಒಟ್ಟು 10ಲಕ್ಷ ರೂ.ಗಳ ಹಣವನ್ನು ಮಗುವಿನ ಮುಂದಿನ ಭವಿಷ್ಯಕ್ಕಾಗಿ ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ ಇಂತಹ 05 ಮಕ್ಕಳನ್ನು ಗುರುತಿಸಲಾಗಿದ್ದು, ಈಗಾಗಲೇ ಸಂತ್ರಸ್ಥ ಮಕ್ಕಳ ಹೆಸರಲ್ಲಿ 5.0 ಲಕ್ಷ ರೂ.ಗಳ ಠೇವಣಿಯನ್ನು ಅಂಚೆ ಕಚೇರಿಯಲ್ಲಿ ಇರಿಸಲಾಗಿದೆ. ಅಲ್ಲದೇ ಮುಖ್ಯಮಂತ್ರಿಗಳ ಬಾಲಸೇವಾ ಯೋಜನೆಯಡಿ ಸೌಲಭ್ಯ ನೀಡಲಾಗುತ್ತಿದೆ ಎಂದ ಅವರು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಿಗೆ ದಾಖಲಿಸಲು ಕ್ರಮವಹಿಸಲಾಗಿದೆ. ಇದರೊಂದಿಗೆ 5.00ಲಕ್ಷ ರೂ.ಗಳ ವರೆಗೆ ಉಚಿತ ಆರೋಗ್ಯವಿಮೆ ಸೌಲಭ್ಯ ಒದಗಿಸಲಾಗಿದೆ ಎಂದರು.

ಸವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಪ್ರಧಾನಮಂತ್ರಿ ಸುರಕ್ಷಾ ಯೋಜನೆಯ ಎಲ್ಲಾ ಅನುಮೋದಿತ ಮಕ್ಕಳಿಗೆ ರೂ.50,000/-ಗಳ ಪರಿಹಾರಧನವನ್ನು ರಾಜ್ಯದ ವಿಪತ್ತು ನಿರ್ವಹಣಾ ನಿಧಿಯಿಂದ ನೀಡಲಾಗಿದೆ. ಅಲ್ಲದೇ ಮಾಹೆಯಾನ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ರೂ.2,000/-ಗಳ ಆರ್ಥಿಕ ಸೌಲಭ್ಯವನ್ನು 2021-22ನೇ ಆರ್ಥಿಕ ಸಾಲಿಗೆ ಒದಗಿಸಲಾಗಿದೆ ಎಂದವರು ನುಡಿದರು.

ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾತನಾಡಿ, ಪೋಷಕರನ್ನು ಕಳೆದುಕೊಂಡ ಮಕ್ಕಳ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವರ ಉಜ್ವಲ ಭವಿಷ್ಯ ರೂಪಿಸುವಲ್ಲಿ ಸರ್ಕಾರ ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ. ಅವರ ಶೈಕ್ಷಣಿಕ ಚಟುವಟಿಕೆಗಳು ನಿರಂತರವಾಗಿರುವಂತೆ ನೋಡಿಕೊಳ್ಳಲಿದೆ. ಅವರ 23ನೇ ವಯಸ್ಸಿಗೆ 10ಲಕ್ಷ ರೂ.ಗಳ ಇಡಿಗಂಟನ್ನು ಒದಗಿಸಲು ಕ್ರಮ ಕೈಗೊಂಡಿದೆ ಎಂದರು.

ಕೊರೋನ ಮಹಾಮಾರಿ ಅನೇಕ ಮಕ್ಕಳ ಬದುಕಲ್ಲಿ ಕಪ್ಪುಛಾಯೆ ಮೂಡಿಸಿದೆ. ಇನ್ನೂ ಅನೇಕ ಕುಟುಂಬಗಳು ಆಶ್ರಯದಾತರಾಗಿದ್ದ ಮನೆಯ ಯಜಮಾನನನ್ನೆ ಕಳೆದುಕೊಂಡು ಬದುಕು ದುಸ್ತರವಾಗಿಸಿದೆ. ಎದುರಾಗುವ ಸಮಸ್ಯೆ-ಸವಾಲುಗಳನ್ನು ಎದುರಿಸಲಾಗದೆ ಪ್ರತಿ ಕ್ಷಣವೂ ತಪಸ್ಸಿನಂತೆ ಕಳೆಯುವಂತಾಗಿರುವುದು ನೋವು ತಂದಿದೆ. ಇಂತಹ ಕುಟುಂಬಗಳ ಸದಸ್ಯರ ನೆರವಿಗೆ ಸರ್ಕಾರ ಜೊತೆಗಿರಲಿದೆ ಎಂದರು.

ಸಂತ್ರಸ್ಥ ಮಕ್ಕಳ ಉನ್ನತ ಶಿಕ್ಷಣ, ವೃತ್ತಿಪರ ತರಬೇತಿಗೂ ಅಗತ್ಯ ಸಹಕಾರ ನೀಡಲಿದೆ. ಮಾತ್ರವಲ್ಲ ಉನ್ನತ ವಿದ್ಯಾಬ್ಯಾಸಕ್ಕೆ ಶೈಕ್ಷಣಿಕ ಸಾಲ ನೀಡಲು ಕ್ರಮವಹಿಸಲಾಗಿದೆ. ಅನಾರೋಗ್ಯದಿಂದ ಬಳಲುವ ಮಕ್ಕಳ ಚಿಕಿತ್ಸೆಗೆ ಆಯುಷ್ಮಾನ್ ಕಾರ್ಡನ್ನು ನೀಡಲಾಗಿದೆ. ಇದರಿಂದಾಗಿ ರೂ.5.00ಲಕ್ಷ ರೂ.ಗಳ ವರೆಗೆ ಉಚಿತ ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ ಎಂದರು.

ಅಲ್ಲದೇ ಒಟ್ಟಾರೆಯಾಗಿ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಫಿಟ್‍ಇಂಡಿಯಾ, ಖೇಲೋ ಇಂಡಿಯಾ ಅಭಿಯಾನ ರೂಪಿಸಿ ಅನುಷ್ಠಾನಗೊಳಿಸಲಾಗಿದೆ. ಇದರೊಂದಿಗೆ ಯೋಗವನ್ನು ಜೋಡಿಸಲಾಗಿದೆ. ಕೊರೋನದಂತಹ ಸಂದಿಗ್ದ ಸಂದರ್ಭದಲ್ಲಿಯೂ ದೇಶದಲ್ಲಿ ಮಾತ್ರವಲ್ಲ ವಿದೇಶಗಳಿಗೆ ಔಷಧ ಪೂರೈಸಿ, ಮಾನವೀಯತೆ ಮೆರೆದಿದೆ ಎಂದ ಅವರು, ದೇಶ ಅಭಿವೃದ್ಧಿಯಡೆಗೆ ಮುನ್ನಡೆಯುತ್ತಿದೆ. ಈ ದೇಶದ ನಿರೀಕ್ಷಿತ ಪ್ರಗತಿಯಲ್ಲಿ ಯುವಜನತೆ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂಬ ಆಶಯವಿದೆ. ಎಲ್ಲಾ ಯುವಜನರು ತಮ್ಮ ಕನಸನ್ನು ಸಾಕಾರಗೊಳಿಸುವ ಸಂಕಲ್ಪ ಮಾಡುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರುದ್ರೇಗೌಡರು, ಶಾಸಕ ಕೆ.ಬಿ.ಅಶೋಕನಾಯ್ಕ್, ಮೇಯರ್ ಶ್ರೀಮತಿ ಸುನಿತಾ ಅಣ್ಣಪ್ಪ, ಜಿಲ್ಲಾಧಿಕಾರಿ ಡಾ|| ಆರ್.ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ಡಾ|| ನಾಗೇಂದ್ರ ಎಫ್.ಹೊನ್ನಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಜಿ.ಜಿ.ಸುರೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ರಾಜೇಶ್ ಸುರಗೀಹಳ್ಳಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕುಮಾರ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿದೇಶಕ ನಾಗರಾಜ ಕಾಗಲ್ಕರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂತ್ರಸ್ಥ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು