News Karnataka Kannada
Thursday, April 25 2024
Cricket
ಚಿಕಮಗಳೂರು

ಕಸದ ಕೊಂಪೆಯಾಗುತ್ತಿವೆ ಜಿಲ್ಲೆಯ ಪ್ರವಾಸಿ ತಾಣಗಳು

Tourist places in the district are becoming a garbage dump
Photo Credit : News Kannada

ಚಿಕ್ಕಮಗಳೂರು: ಜಿಲ್ಲೆ ಪ್ರವಾಸಿ ತಾಣವಾಗಿರುವುದೇ ಒಂದು ಶಾಪದಂತೆ ಆಗಿದೆ ಎಂದು ಪ್ರವಾಸಿ ತಾಣಗಳ ಸಮೀಪ ವಾಸಿಸುತ್ತಿರುವ ಜನ ಹೇಳುವಂತಾಗಿದೆ.

ಜಿಲ್ಲೆಗೆ ವಾರಾಂತ್ಯದಲ್ಲಿ ರಾಜ್ಯ ಹಾಗೂ ಇತರ ರಾಜ್ಯಗಳಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಜನ ತಮ್ಮದೇ ಆದ ವಾಹನ ವ್ಯವಸ್ಥೆ ಮಾಡಿಕೊಂಡು ಬರುತ್ತಿದ್ದಾರೆ. ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳಾದ ಚಂದ್ರದ್ರೋಣ ಪರ್ವತ ಸಾಲು ಸೇರಿದಂತೆ ಕಳಸ, ಕುದುರೆಮುಖ, ಮೂಡಿಗೆರೆ ದೇವರ ಮನೆಯ ಪ್ರಕೃತಿ ಸೌಂದರ್ಯದ ತಾಣಗಳು ಜನರ ನೂಕುನುಗ್ಗಲಿನಿಂದ ನಲುಗಿ ಜೊತೆಗೆ ಕಸದ ಕೊಂಪೆಗಳೂ ಆಗುತ್ತಿವೆ.

ಈ ಬೆಟ್ಟ ಪ್ರದೇಶಗಳು ಕೇವಲ ಪ್ರಾಕೃತಿಕ ಸೌಂದರ್ಯಕ್ಕೆ ಸೀಮಿತವಾಗದೆ ಬಹಳಷ್ಟು ನೀರಿನ ಮೂಲಗಳು ಹಾಗೂ ಜಲಾನಯನ ಪ್ರದೇಶಗಳೂ ಆಗಿವೆ. ಇಲ್ಲಿ ಹುಟ್ಟುವ ಹಳ್ಳಗಳು ಬೆಟ್ಟದ ತಡಿಯಲ್ಲಿರುವ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಮೂಲಗಳೂ ಆಗಿವೆ. ತುಂಗಾ, ಭದ್ರಾ, ಯಗಚಿ, ವೇದಾವತಿ, ಹೇಮಾವತಿ-ಈ ನದಿಗಳಿಗೆ ಉಪನದಿಗಳಾಗೂ ನೀರು ತುಂಬಿಸುತ್ತವೆ. ಇಂಥ ಸೂಕ್ಷ್ಮ ಪ್ರದೇಶಗಳು ಈಗ ವಾರಾಂತ್ಯದಲ್ಲಿ ಜನ, ವಾಹನ ಓಡಾಟದಿಂದ ತೀವ್ರ ಮಾಲಿನ್ಯಕ್ಕೆ ಒಳಗಾಗುತ್ತಿವೆ. ಬರುವ ಪ್ರವಾಸಿಗರಲ್ಲಿ ಬಹುತೇಕ ಮಂದಿ ಕೇವಲ ಸೌಂದರ್ಯವನ್ನುಆಸ್ವಾದಿಸದೆ ಇಲ್ಲೇ ನೀರಿನ ಬಾಟಲಿಗಳು, ಹಲವು ಕಡೆ ಮದ್ಯದ ಬಾಟಲಿ ಮತ್ತು ಬಹಳಷ್ಟು ಪ್ರಮಾಣದಲ್ಲಿ ಪ್ಲಾಸ್ಟಿಕ್ ಮತ್ತುಇನ್ನಿತರ ತ್ಯಾಜ್ಯಗಳನ್ನು ಎಸೆದು ಹೋಗುತ್ತಿದ್ದು, ಈಗಾಗಲೇ ಹಸುರಿನ ಮಧ್ಯದಲ್ಲಿ ಈ ತ್ಯಾಜ್ಯದ ಗುಡ್ಡೆಗಳೇ ಕಾಣಲಾರಂಭಿಸಿವೆ.

ಈ ಬೆಟ್ಟಗಳ ತಾಳಿಕೆ ಸಾಮರ್ಥ್ಯವನ್ನುಅರಿಯದೆ ಸರ್ಕಾರವು ಪ್ರವಾಸಿಗರು ಅಪಾರ ಸಂಖ್ಯೆಯಲ್ಲಿ ತಮ್ಮ ವಾಹನದಲ್ಲಿ ಮನಸೋಯಿಚ್ಛೆ ಬಂದು ಹೋಗುವಂತೆ ಅವಕಾಶ ಕಲ್ಪಿಸಿದ್ದು, ಯಾವುದೇ ರೀತಿಯ ನಿಯಂತ್ರಣವನ್ನು ಹೇರದೆ ಸ್ಥಳೀಯರ ಓಡಾಟಕ್ಕೂ ಭಾರೀ ಸಮಸ್ಯೆಯನ್ನು ಈ ಪ್ರವಾಸೋದ್ಯಮ ಉಂಟು ಮಾಡುತ್ತಿದೆ.

ದೀರ್ಘ ವಾರಾಂತ್ಯವಾದಲ್ಲಿ ವಾಹನಗಳು ನಗರಗಳ ವಾಹನ ದಟ್ಟಣೆಯನ್ನು ಮೀರಿಸಿ ಇಲ್ಲಿ ಹರಿದಾಡುತ್ತವೆ. ಉದಾಹರಣೆಗೆ ಜೂನ್ ತಿಂಗಳ ೨೯ ರಿಂದ ಜುಲೈ ೨ ನೇ ತಾರೀಕಿನವರೆಗೂ ರಜಾ ಬಂದಿದ್ದು, ಆಗ ಒಂದು ದಿನಕ್ಕೆ ಬಂದ ವಾಹನಗಳ ಸಂಖ್ಯೆ ಎರಡೂವರೆ ಸಾವಿರಕ್ಕೂ ಹೆಚ್ಚು. ಅಂದರೆ ಹತ್ತರಿಂದ ಹದಿನೈದು ಸಾವಿರ ಜನ ಒಂದು ದಿನದಲ್ಲಿ ಈ ಪ್ರದೇಶಗಳಿಗೆ ಭೇಟಿ ನೀಡಿದ್ದು, ಇದರಿಂದ ಆಗಿರುವ ತ್ಯಾಜ್ಯದ ಪ್ರಮಾಣ ಎಣಿಸಲಾರದಷ್ಟು. ಹಸುರಿನಿಂದ ಆವೃತವಾದ ಅತ್ಯಂತ ನಿರ್ಮಲ ನೈಸರ್ಗಿಕ ವಾತಾವರಣವನ್ನು ಹಾಳುಗೆಡವುತ್ತಿದೆಯಲ್ಲದೆ, ಘನತ್ಯಾಜ್ಯದಜೊತೆಗೆ ವ್ಯಕ್ತಿಶಃ ಆಗುತ್ತಿರುವ ಕೊಳಕು ಸಹ ಈ ಸುಂದರ ಪ್ರದೇಶಗಳನ್ನು ಹಾಳುಗೆಡವುತ್ತಾ ಮುಂದಿನ ದಿನಗಳಲ್ಲಿ ಈ ಬೆಟ್ಟಗಳು ಕೊಳಚೆ ಪ್ರದೇಶವಾಗುವ ಅಪಾಯ ಸ್ಥಳೀಯರನ್ನು ಕಾಡುತ್ತಾ ಇಲ್ಲಿಂದ ಕೆಳಗಿನ ಗ್ರಾಮಗಳಿಗೆ ಬರುವ ಅಶುದ್ಧ ನೀರನ್ನೇ ಕುಡಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಕಳೆದ ಹತ್ತು ವರ್ಷದಿಂದಲೂ ಈ ಸೂಕ್ಷ್ಮ ಪ್ರದೇಶಗಳಿಗೆ ಪ್ರವಾಸೋದ್ಯಮ ನೀತಿಯೊಂದನ್ನು ರೂಪಿಸಿ ದಿನಕ್ಕೆ ಇಷ್ಟೇ ವಾಹನ ನಿಗದಿತ ಸಂಖ್ಯೆಯಲ್ಲಿ ಸಾಗಬೇಕೆಂದು ಅದಕ್ಕೆ ಕಾಲಮಿತಿ ಹಾಗೂ ಹೋಗಿ ಬರುವ ಸಮಯವನ್ನು ನಿಗದಿಪಡಿಸಲು ಪರಿಸರಾಸಕ್ತ ಸಂಘಟನೆಗಳು ಜಿಲ್ಲಾಡಳಿತವನ್ನು ಆ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದರೂ ಈವರೆಗೂ ಅವುಗಳನ್ನು ಜಾರಿಗೆತರಲು ಸರ್ಕಾರ ಮುಂದಾಗಿಲ್ಲ.

ಇತ್ತೀಚೆಗೆ ಜಿಲ್ಲಾಡಳಿತ ಎಲ್ಲಾ ವಾಹನಗಳು ಒಟ್ಟಾಗಿ ಈ ಪ್ರದೇಶಗಳಿಗೆ ಹೋಗಿ ವಾಹನ ದಟ್ಟಣೆ ಹೆಚ್ಚಾಗುವುದನ್ನು ತಪ್ಪಿಸಲು ಚಂದ್ರದ್ರೋಣ ಪರ್ವತಕ್ಕೆ ಹೋಗುವ ರಸ್ತೆಯಲ್ಲಿ ನಗರದಿಂದ ಮೂರು ಕಿ.ಮೀ. ದೂರದಲ್ಲಿರುವ ಅಲ್ಲಂಪುರದಲ್ಲಿ ಪ್ರವಾಸಿ ವಾಹನಗಳನ್ನು ನಿಲ್ಲಿಸಲು ಜಾಗ ನೀಡಿ ಜಿಲ್ಲಾಡಳಿತ ಒದಗಿಸುವ ವಾಹನಗಳಲ್ಲಿ ಒಟ್ಟಾಗಿ ಹೋಗುವಂತೆ ಮಾಡಲು ಐದು ಎಕರೆ ಭೂಮಿಯನ್ನು ಗುರುತು ಮಾಡಿತ್ತು. ಈ ನಿಲುಗಡೆ ಸ್ಥಳದಲ್ಲೇ ಪ್ರವಾಸಿಗರಿಗೆ ಅಗತ್ಯವಾದ ಅಂಗಡಿ ಮುಂಗಟ್ಟು, ಉಪಾಹಾರ ಗೃಹ, ಶೌಚಾಲಯ ಒದಗಿಸುವ ಆಲೋಚನೆಗೂ ಮುಂದಾಗಿ ನೀಲಿ ನಕಾಶೆಯನ್ನು ತಯಾರಿಸಿತ್ತು.

ಪ್ರವಾಸೋದ್ಯಮ ಇಲಾಖೆ ಈ ವಾಹನ ನಿಲುಗಡೆ ಸ್ಥಳವನ್ನು ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಒದಗುವಂತೆ ಅಭಿವೃದ್ಧಿಪಡಿಸಲು ಸುಮಾರು ೬೦ ಲಕ್ಷ ರೂ.ಗಳನ್ನು ಒದಗಿಸಿತ್ತು. ಆದರೆ ಭೂದಾನ ಪ್ರಕ್ರಿಯೆಯಲ್ಲಿ ಶಾಲೆಗೆ ನೀಡಿದ್ದ ಜಾಗ ಇದೀಗ ರಾಜ್ಯಾದ್ಯಂತ ಸರ್ಕಾರಿ ಜಾಗವಾಗಿ ಮಾರ್ಪಟ್ಟಿದ್ದು, ಅದನ್ನು ಬಳಸಿಕೊಂಡು ಪ್ರವಾಸಿ ಸ್ಥಳಗಳಲ್ಲಿ ವಾಹನ ದಟ್ಟಣೆ ತಡೆಯಲು ಕ್ರಮ ಕೈಗೊಳ್ಳಲು ಮುಂದಾದಾಗ ಅದಕ್ಕೆ ಅಪಸ್ವರ ವ್ಯಕ್ತವಾದ ಹಿನ್ನೆಲೆಯಲ್ಲಿಇದು ಕಾರ್ಯಗತವಾಗಿಲ್ಲ.

ಈ ಪ್ರವಾಸಿ ಸ್ಥಳಗಳ ಸೂಕ್ಷ್ಮತೆ ಹಾಗೂ ಅಲ್ಲಿನ ಪರಿಸರದ ಮೇಲೆ ಉಂಟಾಗುವತೀವ್ರ ರೀತಿಯ ಪರಿಣಾಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾಗೂ ಈ ಪ್ರದೇಶಗಳು ವನ್ಯಜೀವಿಗಳ ಓಡಾಟದ ಹಾಗೂ ಅತೀ ಸೂಕ್ಷ್ಮ ಹಾಗೂ ವಿರಳ ಪ್ರಾಣಿ-ಪಕ್ಷಿಗಳ ಆವಾಸ ಸ್ಥಾನವೂ ಆಗಿರುವ ಹಿನ್ನೆಲೆಯಲ್ಲಿ ಮತ್ತು ಆ ಪ್ರದೇಶದಲ್ಲಿ ಹುಟ್ಟಿ ಹರಿಯುವ ಜಲಮೂಲಗಳನ್ನು ರಕ್ಷಿಸುವ ದೃಷ್ಟಿಯಿಂದ ಕಠಿಣ ನಿಯಂತ್ರಣ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ.

ಈ ಸ್ಥಳಗಳನ್ನು ಇದೇರೀತಿಯ ಸ್ವೇಚ್ಛಾಚಾರದ ಪ್ರವಾಸೋದ್ಯಮಕ್ಕೆ ಬಿಟ್ಟಲ್ಲಿ ಅವುಗಳು ಮಾಲಿನ್ಯದ ಕೂಪಗಳಾಗಿ ಮೂಲ ಸ್ವರೂಪವನ್ನು ಕಳೆದುಕೊಳ್ಳಲಿವೆ. ಎಂದು ಪರಿಸರ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು