News Karnataka Kannada
Sunday, May 05 2024
ಚಿಕಮಗಳೂರು

ಚಿಕ್ಕಮಗಳೂರು: ಬಸವನಹಳ್ಳಿ ಕೆರೆ ಕಾಮಗಾರಿ ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

Congress protests against corruption in Basavanahalli lake works
Photo Credit : News Kannada

ಚಿಕ್ಕಮಗಳೂರು: ನಗರದ ಹೃದಯ ಭಾಗದಲ್ಲಿರುವ ಬಸವನಹಳ್ಳಿಕೆರೆ ಕಾಮಗಾರಿಯಲ್ಲಿ ನಡೆದಿರುವ ಭಾರೀ ಭ್ರಷ್ಟಚಾರವನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರುಗಳು ತಾಲ್ಲೂಕು ಕಚೇರಿ ಆವರಣದಿಂದ ಮೆರವಣಿಗೆಯಲ್ಲಿ ಸಾಗಿ ಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್‌ಗೊಳಿಸುವ ಮೂಲಕ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ|| ಅಂಶುಮಂತ್ ರೈತರ ಬದುಕಿಗೆ ಕೆರೆ ನೀರು ಕೊಡುವ ಮೂಲವಾದರೆ, ಕ್ಷೇತ್ರದ ಶಾಸಕರು ಅದೇ ಕೆರೆಯನ್ನು ತಮ್ಮ ವೈಯಕ್ತಿಕ ಬದುಕಿನ ಆಧಾಯ ಮಾಡಿಕೊಂಡು ಭಾರೀ ಭ್ರಷ್ಟಚಾರದಲ್ಲಿ ತೊಡಗಿರುವ ಜೊತೆಗೆ ಕಳಪೆ ಕಾಮಗಾರಿ ನಡೆಸಿ ಕೋಟಿಗಟ್ಟಲೇ ಹಣವನ್ನು ಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು.

ಕ್ಷೇತ್ರದ ನಾಗರೀಕರು ಸತತವಾಗಿ ಇಪತ್ತು ವರ್ಷಗಳ ಕಾಲ ಶಾಸಕರಿಗೆ ಅಧಿಕಾರ ನೀಡಿದರೂ ಸಹ ಪ್ರತಿಯೊಂದು ವಿಚಾರದಲ್ಲಿ ತಮ್ಮ ವೈಯಕ್ತಿಕ ಆದಾಯ ಮಾಡಿಕೊಂಡು ಲಾಭ ಗಳಿಸುವ ಜೊತೆಗೆ ಕಳಪೆ ಕಾಮಗಾರಿಯ ಸರದಾರರರಾಗಿ ಸಿ.ಟಿ.ರವಿ ದಾಪುಗಾಲು ಇಟ್ಟು ಸಾರ್ವಜನಿಕರ ತೆರಿಗೆ ಹಣವನ್ನು ಬೇಕಾಬಿಟ್ಟಿ ಯಾಗಿ ಪೋಲು ಮಾಡುತ್ತಿದ್ದಾರೆ ಎಂದು ದೂರಿದರು.

ಕೆರೆ ಕಾಮಗಾರಿ ವಿಚಾರದಲ್ಲಿ ಜಿಲ್ಲಾಡಳಿತವು ಶಾಸಕರ ಕೈಗೊಂಬೆಯಾಗಿ ವರ್ತಿಸುತ್ತಿದೆ. ಕಾಮಗಾರಿಗಳಲ್ಲಿ ಯಾವುದೇ ಕಡಿವಾಣ ಹಾಕದಿರುವುದು ಗಮನಿಸಿದರೆ ಮೇಲ್ನೋಟಕ್ಕೆ ಶಾಮೀಲಾಗಿರುವುದು ಕಂಡುಬರುತ್ತಿದೆ. ಶಾಸಕರು ಕ್ಷೇತ್ರದಲ್ಲಿ ಅಧಿಕಾರ ವಹಿಸಿಕೊಂಡು ನಂತರ ನಿರ್ಲಕ್ಷ್ಯ ಧೋರಣೆ ಹಾಗೂ ಬೇಜವಾಬ್ದಾರಿ ಕಾರ್ಯ ನಿರ್ವಹಿಸಿ ಸಾರ್ವಜನಿಕರ ಹಣವನ್ನು ಸ್ವಂತ ಆದಾಯವನ್ನಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಅರ್ಧದಷ್ಟು ಮುಚ್ಚಿರುವ ಬಸವನಹಳ್ಳಿ ಕೆರೆಯ ಕಾಮಗಾರಿಯ ವಿವರವನ್ನು ಜಿಲ್ಲಾಡಳಿತ ನಾಮಫಲಕದ ಮೂಲಕ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಈ ಕಳಪೆ ಕಾಮಗಾರಿಯ ಹಿಂದೆ ಯಾವ ಯಾವ ಅಧಿಕಾ ರಿಗಳು ಹಾಗೂ ಗುತ್ತಿಗೆದಾರರ ಕೈವಾಡವಿದೆಯೋ ಅವರ ವಿರುದ್ಧ ಸೂಕ್ತ ಕಾನೂನು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಮಾತನಾಡಿ ವಿಧಾನಸೌಧದಲ್ಲೂ ಕೂಡಾ ಸಿ.ಟಿ.ರವಿ ಅವರ ಕಳಪೆ ಕಾಮಗಾರಿ, ಭ್ರಷ್ಟಾಚಾರ, ಕೋಟಿ ರವಿ ಎಂದು ಚರ್ಚೆಗಳಾಗುತ್ತಿವೆ. ಜಿಲ್ಲೆಯ ಎಲ್ಲಾ ಗುತ್ತಿಗೆಯನ್ನು ತಮ್ಮ ಭಾವನ ಮೂಲಕ ಮಾಡಿಕೊಳ್ಳುತ್ತಿರುವುದರಿಂದ ಸಣ್ಣಪುಟ್ಟ ಗುತ್ತಿಗೆದಾರರು ಆತ್ಮಹತ್ಯೆ ಮಾಡಿ ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ದೂರಿದರು.

ಕೆರೆಯನ್ನು ಮುಚ್ಚದಂತೆ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಸಹ ಶಾಸಕರು ಆ ಕಾರ್ಯದಲ್ಲಿ ನಿರತರಾ ಗಿದ್ದು ಇವೆಲ್ಲವುಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಸಿ.ಟಿ.ರವಿ ಜಿಲ್ಲೆಯನ್ನು ಮಾರಾಟ ಮಾಡುವುದರಲ್ಲಿ ಸಂಶಯವಿಲ್ಲ. ಇವುಗಳನ್ನು ಜನತೆ ಗಮನದಲ್ಲಿಟ್ಟುಕೊಂಡು ಮುಂದೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗುರುತಿಸಿ ಆಯ್ಕೆ ಮಾಡುವುದರೊಂದಿಗೆ ಭ್ರಷ್ಟಚಾರಕ್ಕೆ ಮುಕ್ತಾಯ ಹಾಡಬೇಕು ಎಂದು ಹೇಳಿದರು.

ಎಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ ಶಾಸಕ ಸಿ.ಟಿ.ರವಿ ಏಕಾಪಾತ್ರಾಭಿನಯವನ್ನು ಹೆಚ್ಚು ಅಭ್ಯಾಸ ಮಾಡಿಕೊಂಡಿದ್ದಾರೆ. ಕೆರೆಯ ಕಾಮಗಾರಿ ವಿಚಾರದಲ್ಲಿ ಗುತ್ತಿಗೆದಾರರಾಗಿ ಅವರ ಸಂಬಂಧಿಕರನ್ನು ಶಾಸಕರೇ ಆಯ್ಕೆ ಮಾಡುತ್ತಾರೆ. ನಂತರ ತೆರಳಿ ಪರಿಶೀಲನೆ ನಡೆಸಿ ಕಳಪೆಯಾಗಿದ್ದರೆ ಸಾರ್ವಜನಿಕರೆದುರು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ನಂತರ ಸಂಧಾನಕ್ಕೂ ಶಾಸಕರು ಮುಂದಾಗುತ್ತಾರೆ ಎಂದು ಟೀಕಿಸಿದರು.

ಕೆಪಿಸಿಸಿ ರಾಜ್ಯ ವಕ್ತಾರ ಹೆಚ್.ಹೆಚ್.ದೇವರಾಜ್ ಮಾತನಾಡಿ ಕೆರೆಯ ಮಧ್ಯದಲ್ಲಿ ವಿವೇಕಾನಂದರ ಪ್ರತಿಮೆ ಸ್ಥಾಪಿಸಿ ಐಲ್ಯಾಂಡ್ ಮಾಡುವುದಾಗಿ ಹೇಳಿದ ಶಾಸಕರು ಹೈಜಾಕ್ ಮಾಡಿದ್ದಾರೆ. ಕೆರೆಯ ಅಭಿವೃದ್ದಿ ವಿಚಾರದಲ್ಲಿ ಕೋಟಿಗಟ್ಟಲೇ ಹಣವನ್ನು ಸರ್ಕಾರದಿಂದ ಮಂಜೂರು ಮಾಡಿಕೊಂಡು ಮನಸ್ಸಿಗೆ ಬಂದಂತೆ ಖರ್ಚು ಮಾಡು ತ್ತಿದ್ದಾರೆ ಎಂದು ಆರೋಪಿಸಿದರು.

ಕೂಡಲೇ ಮುಖ್ಯಮಂತ್ರಿಗಳು ಹಾಗೂ ಉಸ್ತುವಾರಿ ಸಚಿವರು ಜಿಲ್ಲೆಯ ಬಗ್ಗೆ ಅಪಾರ ಗೌರವ ಹೊಂದಿದ್ದರೆ ಕಾಮಗಾರಿ ವಿಚಾರವನ್ನು ಕೂಡಲೇ ತನಿಖೆಗೊಳಪಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಮಾತನಾಡಿ ಕೆರೆಯ ಅಭಿವೃದ್ದಿಗಾಗಿ ಸರ್ಕಾರದಿಂದ ಸುಮಾರು ೩೦ ಕೋಟಿ ಅನುದಾನ ಮಂಜೂರು ಮಾಡಿಕೊಂಡಿದ್ದು ಸ್ಥಳೀಯರಿಂದ ಕಾಮಗಾರಿ ಕೆಲಸ ಮಾಡಿಸಿ ಕೊಂಡರೆ ತಮ್ಮ ಬಂಡವಾಳ ತಿಳಿಯುತ್ತದೆಯೋ ಎಂಬ ಆತಂಕದಿಂದ ಇತರೆ ಜಿಲ್ಲೆಯವರಿಂದ ಜನರನ್ನು ಕರೆಸಿ ಕಾಮಗಾರಿ ನಡೆಸಲು ಮುಂದಾಗುತ್ತಿದ್ದಾರೆ ಎಂದು ದೂರಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಶ್ರೀನಿವಾಸ್, ಪಕ್ಷದ ಮಾಜಿ ಅಧ್ಯಕ್ಷ ಡಾ|| ಡಿ.ಎಲ್.ವಿಜಯ್‌ಕುಮಾರ್, ಮುಖಂಡರುಗಳಾದ ಎ.ಎನ್.ಮಹೇಶ್, ಎಂ.ಸಿ.ಶಿವಾನಂದಸ್ವಾಮಿ, ರೇಖಾ ಹುಲಿಯಪ್ಪಗೌಡ, ಸಿ.ಎನ್.ಅಕ್ಮಲ್, ಹಿರೇಮಗಳೂರು ಪುಟ್ಟಸ್ವಾಮಿ, ರವೀಶ್ ಬಸಪ್ಪ, ಹಿರೇಮಗಳೂರು ರಾಮಚಂದ್ರ, ಉಪ್ಪಳ್ಳಿ ಅನ್ಸರ್, ನಯಾಜ್, ನೂರ್ ಅಹ್ಮದ್, ನಾಗಭೂಷಣ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು