ಕಾರವಾರ: ಜಿಲ್ಲೆಯ ಜನರ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲರಿಗೂ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ನೀಡಿ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯುವಂತೆ ಕ್ರಮಕೈಗೊಳ್ಳಬೇಕು ಎಂದು ಸಂಸದ ಅನಂತಕುಮಾರ ಹೆಗಡೆ ಅವರು ಹೇಳಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ದಿಶಾ ಅನುಪಾಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಪೂರೈಕೆಯು ತುಂಬಾ ನಿಧಾನಗತಿಯಲ್ಲಿ ಸಾಗುತ್ತಿದ್ದು ತ್ವರಿತ ಗತಿಯಲ್ಲಿ ಕಾರ್ಡ್ ಗಳನ್ನು ವಿತರಿಸುವ ವ್ಯವಸ್ಥೆ ಆಗಬೇಕು ಎಂದರು. ಜಿಲ್ಲೆಯಲ್ಲಿ 230 ಗ್ರಾಮ ಒನ್ ಕೇಂದ್ರಗಳಿದ್ದು, 229 ಬಾಪೂಜಿ ಕೇಂದ್ರಗಳಿದ್ದು ಹಾಗೂ ನಾಗರಿಕ ಸೇವಾ ಕೇಂದ್ರಗಳಿದ್ದು ಈ ಮೂರು ಕೇಂದ್ರಗಳಲ್ಲಿಯೂ ಆರೋಗ್ಯ ಕಾರ್ಡ್ ವಿತರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ 5 ಲಕ್ಷ ವರೆಗೆ ವೈದ್ಯಕೀಯ ಸೌಲಭ್ಯ ಹಾಗೂ ಎಪಿಎಲ್ ಕಾರ್ಡ್ ಹೊಂದಿದವರಿಗೆ 1.5 ಲಕ್ಷದ ವರೆಗೆ ವೈದ್ಯಕೀಯ ಸೌಲಭ್ಯ ನೀಡಲಾಗುವುದು. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದರು. ಹಾಗೆಯೇ ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರಿಗೆ ಪರಿಹಾರ ವದಗಿಸಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಸಭೆಯಲ್ಲಿ ಶಾಸಕರಾದ ಶಾಸಕಿ ರೂಪಾಲಿ ನಾಯ್ಕ, ದಿನಕರ ಕೆ ಶೆಟ್ಟಿ, ಸುನಿಲ್ ನಾಯ್ಕ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಶಾಂತಾರಾಮ ಸಿದ್ದಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರ್ ಖಂಡೂ, ಪಂಚಾಯಿತಿ ರಾಜ್ಯ ವಿಕೇಂದ್ರೀಕರಣ ಯೋಜನಾ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಪ್ರಮೋದ ಹೆಗಡೆ ಹಾಗೂ ಜಿಲ್ಲಾ ಮಟ್ಟದ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಇದ್ದರು.