ಉಡುಪಿ: ಪೋನ್ ಕರೆ ಮಾಡಿದ ಅಪರಿಚಿತ ವ್ಯಕ್ತಿಯೋರ್ವ ತಂದೆಯ ಸ್ನೇಹಿತನೆಂದು ನಂಬಿಸಿ ಯುವಕನಿಂದ ಲಕ್ಷಾಂತರ ರೂ. ಲಪಟಾಯಿಸಿದ ಘಟನೆ ಮಣಿಪಾಲದಲ್ಲಿ ನಡೆದಿದೆ.
ಮಣಿಪಾಲ ಹಾಸ್ಟೆಲ್ ನಿವಾಸಿ ಚಿತ್ರಾಂಗ್ ಜುನಿವಾಲ್ ಹಣ ಕಳೆದುಕೊಂಡ ಯುವಕ. ಈತನಿಗೆ ಅಪರಿಚಿತ ವ್ಯಕ್ತಿ ಮೊಬೈಲ್ ನಲ್ಲಿ ಕರೆ ಮಾಡಿ, ‘ನಾನು ನಿಮ್ಮ ಅಂಕಲ್, ನಿನ್ನ ತಂದೆ ನನಗೆ ನಂಬರ್ ಕೊಟ್ಟಿರುವುದಾಗಿ ಹೇಳಿ, ನಿಮ್ಮ ಖಾತೆಗೆ ತಪ್ಪಾಗಿ 25 ಸಾವಿರ ರೂ. ಹಣ ಡೆಪಾಸಿಟ್ ಆಗಿದೆ. ಅದನ್ನು ಕೂಡಲೇ ಪೇಟಿಎಂ ಮೂಲಕ ಹಿಂದಿರುಗಿಸಿ ಎಂದು ತಿಳಿಸಿದ್ದನು. ಅದನ್ನು ನಂಬಿದ ಚಿತ್ರಾಂಗ್ ಜುನಿವಾಲ್, ಪೇಟಿಯಂ ಮೂಲಕ 24,500 ರೂ. ಹಣ ವರ್ಗಾವಣೆ ಮಾಡಿದ್ದರು. ಆದರೆ ಆ ಹಣ ಖಾತೆಗೆ ಜಮೆ ಆಗಿಲ್ಲ ಎಂದು ಅಪರಿಚಿತ ವ್ಯಕ್ತಿ ಚಿತ್ರಾಂಗ್ ಜುನಿವಾಲ್ಗೆ ಪದೇ ಪದೇ ಕರೆ ಮಾಡಿ, ಒಟ್ಟು 2 ಲಕ್ಷ 13 ಸಾವಿರದ 999 ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.