News Karnataka Kannada
Saturday, May 11 2024
ಉಡುಪಿ

ಪೋಪ್ ಹದಿನಾರನೇ ಬೆನಡಿಕ್ಟ್ ನಿಧನಕ್ಕೆ ಉಡುಪಿ ಬಿಷಪ್ ಸಂತಾಪ

Udupi Bishop condoles the death of Pope Benedict XVI
Photo Credit : News Kannada

ಉಡುಪಿ: ಇಪ್ಪತ್ತೊಂದನೇ ಶತಮಾನದ ಪ್ರಮುಖ ಹಾಗೂ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಪೋಪ್ ಹದಿನಾರನೇ ಬೆನೆಡಿಕ್ಟ್ ರವರು ದೈವಾಧೀನರಾದ ಸುದ್ಧಿ ನಮ್ಮನ್ನು ಅತೀವ ದುಃಖದಲ್ಲಿ ಮುಳುಗಿಸಿದೆ. ದಿವಂಗತರ ಆತ್ಮಕ್ಕೆ ಭಗವಂತ ಶಾಂತಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ‌ ಸಂತಾಪ ಸೂಚಿಸಿದರು.

ಜರ್ಮನ್ ಮೂಲದ ಜೊಸೆಫ್ ರಾಟ್‍ಝಿಂಗರ್ ಮಹಾಮುತ್ಸದ್ಧಿ, ದೇವಶಾಸ್ತ್ರ್ರಜ್ಞ ಮತ್ತು ಅಪ್ರತಿಮ ಆಡಳಿತಗಾರರಾಗಿದ್ದರು. ಪೋಪ್ ಆಗಿ ಚುನಾಯಿತರಾಗುವ ಮೊದಲೇ ಮಹಾಧರ್ಮಾಧ್ಯಕ್ಷರಾಗಿ, ಕಾರ್ಡಿನಲ್ ಆಗಿ ವ್ಯಾಟಿಕನ್ ಆಡಳಿತ ಮಾತ್ರವಲ್ಲ, ಕಥೋಲಿಕ ಧರ್ಮಸಭೆಯ ವಿಶ್ವಾಸ ಹಾಗೂ ಬೋಧನೆಯಲ್ಲಿ ತಮ್ಮನ್ನೇ ಆಳವಾಗಿ ತೊಡಗಿಸಿಕೊಂಡಿದ್ದರು. ಅವರು ಬರೆದ ಹತ್ತಾರು ಗ್ರಂಥಗಳು ಅವರ ಪಾಂಡಿತ್ಯಕ್ಕೆ ಸಾಕ್ಷಿಯಾಗಿ ಉಳಿದಿವೆ. ಮಹಾನ್ ಪೋಪ್ ಎರಡನೇ ಜಾನ್ ಪಾಲ್‍ರವರ ನಿಧನದ ಬಳಿಕ, 2005 ರಲ್ಲಿ ಪೋಪ್ ಆಗಿ ಸರ್ವಾನುಮತದಿಂದ ಚುನಾಯಿತರಾಗಿ `ಹದಿನಾರನೇ ಬೆನೆಡಿಕ್ಟ್’ ಎಂಬ ಹೆಸರನ್ನು ಪಡೆದು, ಎಂಟು ವರ್ಷಗಳ ಕಾಲ ಕಥೋಲಿಕ ಧರ್ಮಸಭೆಯ ನೂರಾರು ಕೋಟಿ ಕ್ರೈಸ್ತ ವಿಶ್ವಾಸಿಗಳ ಕಣ್ಮಣಿಯಾದರು. ಅನಾರೋಗ್ಯದ ನಿಮಿತ್ತ, 2013 ರಲ್ಲಿ ಧರ್ಮಸಭೆಯ 600 ವರ್ಷಗಳ ಚರಿತ್ರೆಯಲ್ಲಿ ಮೊತ್ತ ಮೊದಲ ಬಾರಿಗೆ ಪೋಪ್ ಪದಕ್ಕೆ ರಾಜೀನಾಮೆಯಿತ್ತು ವಿಶ್ರಾಂತಿಯ ಜೀವನವನ್ನು ನಡೆಸಿದರು.

ಸರಳತೆ, ಸಜ್ಜನಿಕೆ, ಮಿತಭಾಷಿ ಹಾಗೂ ಆಳವಾದ ಪಾಂಡಿತ್ಯದ ಪೋಪ್ ಹದಿನಾರನೇ ಬೆನೆಡಿಕ್ಟ್ ವಿಶ್ವದಾದ್ಯಂತ ಕ್ರೈಸ್ತ ವಿಶ್ವಾಸವನ್ನು ಬಲಪಡಿಸಿದರು. ತಮ್ಮ ಎಂಟು ವರ್ಷಗಳ ಚುಟುಕು ಆಡಳಿತ ಅವಧಿಯಲ್ಲಿ ಭಾರತಕ್ಕೆ ಆಗಮಿಸಲು ಅವರಿಗೆ ಅವಕಾಶ ಸಿಗಲಿಲ್ಲವಾದರೂ, ಭಾರತ ದೇಶದ ಬಗ್ಗೆ ಉನ್ನತ ಅಭಿಮಾನ ಅವರಿಗಿತ್ತು. 2012 ರಲ್ಲಿ ಉಡುಪಿ ಹೊಸ ಧರ್ಮಕ್ಷೇತ್ರವನ್ನು ಘೋಷಿಸಿದವರೂ ಅವರೇ. ಉಡುಪಿ ಧರ್ಮಕ್ಷೇತ್ರದ ಬಗ್ಗೆ ಅವರಿಗೆ ಬಹಳ ಕಾಳಜಿ ಹಾಗೂ ಆಸಕ್ತಿಯಿತ್ತು.
ನಿವೃತ್ತರಾದ ನಂತರ, ತಮ್ಮ ಸಮಯವನ್ನು ಪ್ರಾರ್ಥನೆ, ಧ್ಯಾನ ಹಾಗೂ ಅಧ್ಯಯನದಲ್ಲಿ ಕಳೆಯುತ್ತಿದ್ದ ಪೋಪ್ ಬೆನೆಡಿಕ್ಟ್ ಯಾವುದೇ ಗಂಭೀರ ಅಸ್ವಸ್ಥತೆ ಅಥವ ಕಾಯಿಲೆಯಿಂದ ಬಳಲುತ್ತಿರಲಿಲ್ಲ. ತಮ್ಮ ತೊಂಬತ್ತೈದನೇ ವಯಸ್ಸಿನಲ್ಲಿ ಡಿಸೆಂಬರ್ 31 ರಂದು ಮುಂಜಾನೆ ಅವರು ಶಾಂತಿಯಿಂದ ದೈವಾಧೀನರಾದರು.

ನಿವೃತ್ತ ಪೋಪ್ ಜಗದ್ಗುರುಗಳು ಅಸ್ತಂಗತರಾದುದು ಇಡೀ ಕ್ರೈಸ್ತ ಸಮುದಾಯಕ್ಕೆ ಅತ್ಯಂತ ದುಃಖಕರ ವಿಷಯ. ಮೃತರಿಗಾಗಿ ಉಡುಪಿ ಧರ್ಮಕ್ಷೇತ್ರದ ಎಲ್ಲಾ ದೇವಾಲಯಗಳು ಹಾಗೂ ಧಾರ್ಮಿಕ ನಿವಾಸಗಳಲ್ಲಿ ಡಿಸೆಂಬರ್ 31 ಹಾಗೂ ಜನವರಿ 1 ರಂದು ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಗುವುದು.

ದೈವಾಧೀನರಾದ ಪೋಪ್ ಹದಿನಾರನೇ ಬೆನಡಿಕ್ಟ್ ರವರನ್ನು ದಯಾಮಯ ಭಗವಂತನು ತಮ್ಮ ದಿವ್ಯ ಸನ್ನಿಧಿಗೆ ಬರಮಾಡಿಕೊಳ್ಳಲಿ ಎಂದು ನಮ್ಮೆಲ್ಲರ ಪ್ರಾರ್ಥನೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು