News Karnataka Kannada
Monday, May 06 2024
ಉಡುಪಿ

ವಿಚಿತ್ರಾತಿಚಿತ್ರಗಳ ಉರಿಪಿಂಡ ನಮ್ಮ ಸೂರ್ಯ

Our sun is the fiery of strange images
Photo Credit : News Kannada

ಉಡುಪಿ: ನಮ್ಮ ಭೂಮಿಯ ಲಕ್ಷ ಲಕ್ಷ ಸಸ್ಯಗಳು, ಪ್ರಾಣಿಗಳು, ಇಡೀ ಮನುಕುಲದ ಸೃಷ್ಟಿ, ಸ್ಥಿತಿ ಲಯಕ್ಕೂ ಕಾರಣೀಕರ್ತ ನಮ್ಮ ಸೂರ್ಯ. ಸೌರವ್ಯೂಹದ 8 ಗ್ರಹಗಳು ಸುಮಾರು 182 ಉಪಗ್ರಹಗಳಾದ ಚಂದ್ರರು, ಲಕ್ಷ ಕೋಟಿ ಕಲ್ಲುಂಡೆಗಳು, ಲಕ್ಷ ಲಕ್ಷ ಧೂಮಕೇತುಗಳು ಎಲ್ಲವನ್ನೂ ಅವುಗಳದೇ ಅಕ್ಷಗಳಲ್ಲಿ ತಿರುತಿರುಗಿಸಿ ಕುಣಿಸುವವ ನಮ್ಮ ಸೂರ್ಯ. ಭೂಮಿ ಸೂರ್ಯರ ದೂರ ಸುಮಾರು 15 ಕೋಟಿ ಕಿಮೀ ಆದರೆ ಸೂರ್ಯನ ಗುರುತ್ವ ಹಿಡಿತ ಸುಮಾರು ಇದರ ಲಕ್ಷ ಪಟ್ಟು ದೂರದ ವರೆಗೂ (ಒಂದು ಲಕ್ಷ AU)ವ್ಯಾಪಿಸಿದೆ.

ನಮ್ಮ ಸೂರ್ಯ, ನಮ್ಮ ಆಕಾಶಗಂಗೆಯ ಅಸಂಖ್ಯ ನಕ್ಷತ್ರಗಳಲ್ಲಿ ಒಂದು ಸಾಮಾನ್ಯ ನಕ್ಷತ್ರ. ಸುಮಾರು ಸಾವಿರ ಕೋಟಿ ವರ್ಷದ ತನ್ನ ಆಯುಷ್ಯದಲ್ಲಿ 460 ಕೋಟಿ ವರ್ಷಕ್ರಮಿಸಿ ಈಗ ಮಧ್ಯ ವಯಸ್ಕ, ನಮ್ಮ ಸೂರ್ಯ. ತನ್ನ ಅಂತಿಮ ಹಂತದಲ್ಲಿ ಬೃಹತ್ ನಕ್ಷತ್ರಗಳಂತೆ ಸೂಪರ್ ನೋವಾ ಆಗಲಾರ, ಕಪ್ಪುರಂಧ್ರ ಬ್ಲಾಕ್ ಹೋಲೂ ಆಗಲಾರ. ಇನ್ನು 540 ಕೋಟಿ ವರ್ಷಗಳ ನಂತರ ಶ್ವೇತ ಕುಬ್ಜನಾಗಿ ನಂದಿ ಧೂಳಾಗುವನು. ನಮ್ಮ ಸುರುಳಿ ಗೆಲಾಕ್ಸಿ, ಆಕಾಶ ಗಂಗೆಯ ಸುಮಾರು 10 ಸಾವಿರ ಕೋಟಿ ನಕ್ಷತ್ರಗಳಂತೆ ತನ್ನ ಪಾಡಿಗೆ ತಾನು ಗೆಲಾಕ್ಸಿಯ ಕೇಂದ್ರದ ಸುತ್ತ ಸುಮಾರು 28 ಸಾವಿರ ಜ್ಯೋತಿ ವರ್ಷ ದೂರದಲ್ಲಿ ಸುತ್ತುತ್ತಿದ್ದಾನೆ.

ಆಶ್ಚರ್ಯವೆಂದರೆ ನಮ್ಮ ಸೌರವ್ಯೂಹದ ಒಟ್ಟು ದ್ರವ್ಯರಾಶಿಯ 99.86 ಅಂಶ ತನ್ನಲ್ಲೇ ಇರಿಸಿಕೊಂಡಿರುವ ನಮ್ಮ ಸೂರ್ಯನ ದ್ರವ್ಯರಾಶಿ ಭೂಮಿಯ ದ್ರವ್ಯರಾಶಿಗಿಂತ ಸುಮಾರು 3 ಲಕ್ಷದ 33ಸಾವಿರದ 333ಪಟ್ಟು ಹೆಚ್ಚು. ನಮ್ಮ ಭೂಮಿಯ ಗಾತ್ರಕ್ಕಿಂತ 13 ಲಕ್ಷ ಪಟ್ಟು ದೊಡ್ಡದಿರುವ ಸೂರ್ಯ ಹೊಟ್ಟೆಮೇಲೆ 108 ಭೂಮಿ ಮಣಿಗಳ ಸರವಿಡಬಹುದು. ಸಕಲ ವಿದ್ಯುತ್ ಕಾಂತೀಯ ಕಿರಣಗಳನ್ನೂ ದಶದಿಶೆಗೆ ಹೊರ ಸೂಸುತ್ತಿರುವ ನಮ್ಮ ಸೂರ್ಯ ಸೌರವ್ಯೂಹದ ಆಧಾರಸ್ತಂಭ.

ಅದೇನು ಭೂತಾಯಿಯ ಅದೃಷ್ಟವೋ, ಬೇರೆ ಯಾವ ಗ್ರಹದಲ್ಲೂ ಜೀವ ಜಂತುಗಳಿಗೆ ಬೇಕಾಗುವ ವಾತಾವರಣ ಸೌರವ್ಯೂಹದ ಬೇರಾವ ಗ್ರಹ ಉಪಗ್ರಹಗಳಲ್ಲಿ ಇರಿಸದೇ ನಮ್ಮಸೂರ್ಯ ಭೂತಾಯಿಯನ್ನು ಪ್ರೀತಿಸುವವ. ನ್ಯೂಕ್ಲಿಯರ್ ಸಮ್ಮಿಲನ ಕ್ರಿಯೆಯಿಂದ ಕೊತಕೊತ ಕುದಿಯುವ ಪ್ಲಾಸ್ಮಾದ ಈ ನಮ್ಮ ಸೂರ್ಯನಲ್ಲಿ ಪ್ರಮುಖವಾಗಿ ಮೂರು ಪದರಗಳು. ಕೇಂದ್ರದ ಕೋರ್ , ರೇಡಿಯೇಟಿವ್ ಝೋನ್ ಹಾಗೂ ಕನ್ವಿಕ್ಟಿವ್ ಝೋನ್. ಸುಮಾರು 13 ವಿಲಿಯನ್ ಡಿಗ್ರಿ ಸೆಲ್ಸಿಯಸ್ ನ ಉಷ್ಣತೆಯಲ್ಲಿರುವ ಕೇಂದ್ರ ಕೋರ್ ನ ನಂತರ ತಣಿಯುತ್ತಿರುವ ಇತರ ಪದರಗಳು. ಇವುಗಳ ನಂತರ ಹೊರಭಾಗದ ವಾತಾವರಣದಲ್ಲಿ ಪುನ: ಮೂರುಕವಚಗಳು ಫೋಟೊಸ್ಫಿಯರ್, ಕ್ರೋಮೋಸ್ಪಿಯರ್ ಹಾಗೂ ಕೊರೋನಾ. ಅತ್ಯಂತ ಪರಮಾಶ್ಚರ್ಯವೆಂದರೆ ಈ ಸೂರ್ಯನ ಹೊರ ಪದರಗಳ ಉಷ್ಣತೆ ತಣಿದ ಹೊರ ಕವಚ ಫೋಟೋಸ್ಫಯರ್ನದ್ದು ಸುಮಾರು 6ಸಾವಿರ ಡಿಗ್ರಿ ಆದರೆ ಅದರ ಕೊನೇಯ ಹೊರ ಕವಚ, ಕೊರೋನಾದಲ್ಲಿ 15 ಲಕ್ಷ ಡಿಗ್ರಿಗಿಂತಲೂ ಹೆಚ್ಚು.ಇವುಗಳ ಸೋಜಿಗ ಇನ್ನೂ ಗೊತ್ತಾಗಿಲ್ಲ.

ಆಶ್ಚರ್ಯವೆಂದರೆ 62 ಮೂಲವಸ್ತುಗಳನ್ನು ಹೊಂದಿರುವ ನಮ್ಮ ಸೂರ್ಯ ನಲ್ಲಿ , ಸುಮಾರು 75 ಅಂಶ ಹೈಡ್ರೋಜನ್. ಸೂರ್ಯ ನಿರಂತರ ನ್ಯೂಕ್ಲಿಯರ್ ಸಮ್ಮಿಲನ ಕ್ರಿಯೆಗಳ ಹರಿಕಾರ. ಕೇಂದ್ರದಲ್ಲಿ ಹೈಡ್ರೋಜನ್ ನಂತರ ಹೀಲಿಯಂ, ಕಾರ್ಬನ್ ಹೀಗೆ ಹೊರಹೊರಗೆ ನೀರುಳ್ಳಿ ಪದರದಲ್ಲಿರುವಂತೆ ಪದರಪದರಗಳಲ್ಲಿ ನಡೆಯುತ್ತಿರುತ್ತದೆ. ಸಹಸ್ರಾರು ವರ್ಷಗಳಿಂದ ಸೂರ್ಯನನ್ನು ಅರಿಯಲು ಮಾನವ ಪ್ರಯತ್ನ ನಡೆಯುತ್ತಲೇ ಇದೆಯಾದರೂ ಅದ್ಯಯನ, ಚಿಂತನ ಮಂಥನಗಾಳಾಗಿದ್ದರೂ ಸಮೀಪಿಸಲು ಆಗದ ಉರಿ ಗೋಲವಾದುದರಿಂದ ಪ್ರಾಯೋಗಿಕವಾಗಿ ಅರಿಯಲು ಅಸಾಧ್ಯ.

ಹಾಗಾಗಿ soho, Parker, ಸೋಹೋ, ಪಾರ್ಕರ್ ಮೊದಲಾದ ಅನೇಕ ಕೃತಕ ಉಪಗ್ರಹಗಳುದೂರದಲ್ಲಿ ನಿಂತು ಅಥವಾ ಸುತ್ತ ತಿರುಗುತ್ತಾ ಅಧ್ಯಯನ ಮಾಡುತ್ತಿವೆ. ಸೂರ್ಯ ಭೂಮಿ ಜೊತೆಯಾಗಿ ಸೂರ್ಯನನ್ನು ನೆಮ್ಮದಿಯಿಂದ ಅಧ್ಯಯನ ಮಾಡಲು ಒಂದು ಒಳ್ಳೆಯ ಸ್ಥಳ ಮಾಡಿವೆ. ಅದೇ ಎಲ್ 1 ಸ್ಥಳ. ಭೂಮಿ ಸೂರ್ಯರ ಸರಾಸರಿ ದೂರ 15 ಕೋಟಿ ಕಿಮೀ. ಈ ದೂರದ ನಡುವೆ ಭೂಮಿಗೆ ಸಮೀಪ, ಭೂಮಿಯಿಂದ ಸುಮಾರು 15 ಲಕ್ಷ ಕಿಮೀ ದೂರದಲ್ಲಿ ಈ ಎರಡರ ಗುರುತ್ವ ನಮ್ಮ ಕೃತಕ ಉಪಗ್ರಹಕ್ಕೆ ಸಮಾನವಾಗುವುದರಿಂದ ಅಲ್ಲೇ ನಾವು ಹಾರಿಸಿದ ಉಪಗ್ರಹ ಆರಾಮವಾಗಿ ಆ ಜಾಗದಲ್ಲಿ ನೆಲೆಸುತ್ತದೆ.ಭಾರತೀಯ ವಿಜ್ಞಾನಿಗಳು ಈ ಪವಿತ್ರ ಸ್ಥಳ ಎಲ್ 1 ನಲ್ಲಿ ನಮ್ಮ ನೆಚ್ಚಿನ ಕೃತಕ ಉಪಗ್ರಹ ಆದಿತ್ಯ ಎಲ್1 ನ್ನು ಇರಿಸಲು ಮುಂದಾಗಿದ್ದಾರೆ. ಸೂರ್ಯನ ಬಗ್ಗೆ ಅನೇಕ ಪ್ರಯೋಗಗಳನ್ನು ಮಾಡಿ ಸೂರ್ಯನನ್ನು ಅರಿಯಲು ಹೊರಟಿದ್ದಾರೆ.

ಇದು ಭಾರತದ 140 ಕೋಟಿ ಜನರ ಹೆಮ್ಮೆ .
ಸೋಜಿಗಗಳ ಗೂಡಾದ ಸೂರ್ಯನನ್ನು ಅರಿಯಲು 7 ವಿಭಾಗಗಳಲ್ಲಿ ಆದಿತ್ಯ ಎಲ್1 ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಗೆಲೀಲಿಯೋ 1610 ರಲ್ಲಿ ಕಂಡ ಸೂರ್ಯನ ಕಲೆಗಳು ಇವತ್ತಿಗೂ ವಿಸ್ಮಯ. ಜೊತೆ ಜೊತೆ ಯಾಗಿರುವ ಇವುಗಳ ಸಂಖ್ಯೆ ಪ್ರತೀ ವರ್ಷ ಬೇರೆಬೇರೆ. 11ವರ್ಷಕ್ಕೆ ಪುನರಾವರ್ತಿಸುವ ಇವು ಒಂದು ವರ್ಷ ಇರುವುದೇ ಇಲ್ಲ. ಫೋಟೋ ಸ್ಪಿಯರ್ ನಿಂದ ಚಿಮ್ಮುವ ಕಾಂತೀಯ ಸಮೂಹ ಬಹು ವಿಸ್ಮಯ ಇವುಗಳಿಗೆ ಕಾರಣವೆಂದು ಅಂದಾಜಿಸಲಾಗಿದೆ. ಸೂರ್ಯನ ಕಾಂತೀಯ ವಿಸ್ಮಯ , ಸೌರ ಕಲೆಗಳು, ಕೊರೋನಾ ವಿಚಿತ್ರ, ಬಿಡಗಡೆಯಾಗಿ ದಶ ದಿಶೆಗಳಿಗೆ ರಾಚುವ ವಿದ್ಯುತ್ಕಾಂತೀಯ ಕಿರಣಗಳ ಸೌರಮಾರುತಗಳ ವೈಭವ, ಕೊರೋನಲ್ ಮಾಸ್ ಇಜೆಕ್ಷನ್ ನ ಶಕ್ತಿಯುತ ಕಣಗಳ ಪ್ರವಾಹ ಗಳ ಮುನ್ಸೂಚನೆ ಹೀಗೆ ಅನೇಕ ಪ್ರಯೋಗಗಳನ್ನು ಮಾಡಲು ಆದಿತ್ಯ ಎಲ್1 ಅಣಿಯಾಗಿದೆ.

ಒಂದು ರೀತಿಯಲ್ಲಿ ನಮ್ಮ ಅರಮನೆಗಳ ಹೊರ ಕೋಟೆಯ ಮೇಲಿರುವ ಕಾವಲುಗಾರನಂತೆ ಸೂರ್ಯನಿಂದ ಬರುವ ಕಣ ಪ್ರವಾಹಗಳ ಮುನ್ನೆಚ್ಚರಿಕೆಯ ಕಾವಲುಗಾರ ನಮ್ಮ ಆದಿತ್ಯ ಎಲ್1 . ಈ ಶಕ್ತಿಯುತ ಕಣಗಳು ನಮ್ಮ ವಿದ್ಯುತ್ ವ್ಯವಸ್ಥೆಯನ್ನು ತಲ್ಲಣ ಗೊಳಿಸಿಯಾವು, ಹಾಗೆ ನಮ್ಮ ಸುತ್ತಲ ಆಕಾಶದಲ್ಲಿರುವ ಕೃತಕ ಉಪಗ್ರಹಗಳನ್ನೂ ಹಾಳು ಮಾಡಿಯಾವು. ನಮ್ಮ ಭೂ ವಾತಾವರಣದ ಕಣಗಳನ್ನೂ ತಲ್ಲಣ ಗೊಳಿಸಿಯಾವು.

ವಿಶ್ವವೇ ಭಾರತದ ವಿಜ್ಞಾನಿಗಳ ಈ ಕುತೂಹಲ ಪ್ರಯೋಗವನ್ನು ನಿಬ್ಬೆರಗಾಗಿ ವೀಕ್ಷಿಸುತ್ತಿವೆ. ನಮ್ಮ ವಿಜ್ಞಾನಿಗಳ ಈ ಪ್ರಾಮಾಣಿಕ ಪ್ಯಯತ್ನ ಕ್ಕೆ ನಮ್ಮ ಅನ್ನದಾತ ಜ್ಞಾನದಾತ ಆದಿತ್ಯ ಶುಭಹೇಳಲಿ. ನಮ್ಮ ನೆಚ್ಚಿನ ಆದಿತ್ಯ ಎಲ್1 ಗೆ ನಮ್ಮೆಲ್ಲರ ಶುಭಾಶಯಗಳು.
ಖಗೋಳತಜ್ಞ ಡಾ. ಎ. ಪಿ. ಭಟ್ ಉಡುಪಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು