ಉಡುಪಿ: ಹಂಗಾರಕಟ್ಟೆ ಬಂದರಿನಿಂದ ಕೋಡಿ ಬೆಂಗ್ರೆ ತಲುಪಲು ಈಗ ಹೊಸ ಬಾರ್ಜಿನ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ. ಈ ಮೊದಲು ಸಣ್ಣ ಬಾರ್ಜಿನ ವ್ಯವಸ್ಥೆ ಇದ್ದು ಅದರಲ್ಲಿ ಪ್ರಯಾಣಿಕರನ್ನು ಮತ್ತು ಬೈಕುಗಳನ್ನು ಮಾತ್ರ ಸಾಗಿಸಬಹುದಾಗಿತ್ತು. ಸಣ್ಣ ಬಾರ್ಜು ದುರಸ್ತಿಯಾದ ಕಾರಣದಿಂದಾಗಿ ಈ ದೊಡ್ಡ ಬಾರ್ಜಿನ ವ್ಯವಸ್ಥೆಯನ್ನು ಮಾಡಲಾಗಿದೆ.
ದೊಡ್ಡ ಬಾರ್ಜಿನಲ್ಲಿ ಒಂದು ಸಲ ಹಂಗಾರಕಟ್ಟೆಯಿಂದ ಕೋಡಿಬೆಂಗ್ರೆಗೆ ಕರೆದೊಯ್ಯುವ ವೇಳೆ 9 ಕಾರು ಮತ್ತು 30 ಬೈಕುಗಳನ್ನು ಸಾಗಿಸಬಹುದು.
ಬೈಕುಗಳಿಗೆ 10 ರೂ., ಕಾರು ಮತ್ತು ಆಟೋರಿಕ್ಷಾಗಳಿಗೆ 25 ರೂ., ಟೆಂಪೋಗಳಿಗೆ 50 ರೂ., ಲಾರಿ ಹಾಗೂ ಬಸ್ಸುಗಳಿಗೆ 100 ರೂ. ಹಾಗೂ ಪ್ರಯಾಣಿಕರಿಗೆ 5ರೂ. ದರ ನಿಗದಿಪಡಿಸಲಾಗಿದೆ.
ಈ ಬಾರ್ಜಿನ ಮೂಲಕ ಬೆಂಗ್ರೆ ಮಾರ್ಗವಾಗಿ ಮಲ್ಪೆ ಪ್ರಯಾಣ ಬೆಳೆಸಬಹುದು. ಆದರಿಂದ ಪ್ರಯಾಣಿಕರಿಗೆ 08-10 ಕಿಲೋ ಮೀಟರ್ ಉಳಿತಾಯವಾಗುತ್ತದೆ. ಮಲ್ಪೆಯಿಂದ ಕುಂದಾಪುರ ಕಡೆಗೆ ತೆರಳುವ ಮೀನುಗಾರಿಕಾ ವಾಹನಗಳಿಗೆ ಈ ಬಾರ್ಜು ಬಹಳಷ್ಟು ಉಪಯೋಗವಾಗಲಿದೆ. ವಾಣಿಜ್ಯೋದ್ಯಮ ವಹಿವಾಟುಗಳಿಗೆ ತುಂಬಾ ಉಪಯೋಗವಾಗಲಿದೆ.