ಉಡುಪಿ: ಪ್ರತಿಭಟನಾಕಾರರಿಗೆ ನೋಟಿಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಜಿಪಂ ಸಭಾಂಗಣದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್ ಹಾಗೂ ಎಸ್ಪಿ ಡಾ. ಅರುಣ್ ಅವರ ಮಧ್ಯೆ ಕೆಲ ನಿಮಿಷಗಳ ಕಾಲ ಮಾತಿನ ಜಟಾಪಟಿ ನಡೆಯಿತು.
ಲಾರಿ ಮುಷ್ಕರ ಮಾಡಿದ್ದ ವೇಳೆ ಎಸ್ಪಿ ಡಾ. ಅರುಣ್ ನೋಟಿಸ್ ನೀಡಿದ್ದರು. ಈ ವಿಚಾರಕ್ಕೆ ಎಸ್ಪಿ ವಿರುದ್ಧ ಸುನಿಲ್ ಕುಮಾರ್ ಕೆಂಡಮಂಡಲರಾದರು. ಪ್ರತಿಭಟನೆ ಹೇಗೆ ಮಾಡಬೇಕು ಎಂದು ನೀವು ನಿರ್ಧರಿಸುತ್ತೀರಾ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಯಾವ ರೀತಿ ಪ್ರತಿಭಟನೆ ಮಾಡಬೇಕು ಎಂದು ನಿಬಂಧನೆಗಳನ್ನು ಹೇಳಿ. ನಾವು ಮನೆಯಲ್ಲಿ ಕೂತು ಭಜನೆ ಮಾಡಬೇಕಾ?. ನಮ್ಮ ಜಿಲ್ಲೆಯಲ್ಲಿ ಹೇಗೆ ಪ್ರತಿಭಟನೆ ಮಾಡಬೇಕೆಂದು ನೀವೇ ಹೇಳಿ ಎಂದು ಹರಿಹಾಯ್ದರು.
ನಾನು ಕಾನೂನು ಪ್ರಕಾರ ಕಾರ್ಯನಿರ್ವಹಿಸುತ್ತೇನೆ ಎಂದು ಮಾಜಿ ಸಚಿವರ ಮಾತಿಗೆ ಎಸ್ಪಿ ತಿರುಗೇಟು ನೀಡಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಹೆಬ್ಬಾಳ್ಕರ್ ಅವರು, ಸುನಿಲ್ ಕುಮಾರ್ ಅವರನ್ನು ಸಮಾಧಾನಪಡಿಸಿದರು. ಸಾಕು ಸುಮ್ನಿರಪ್ಪಾ…ಜಾಸ್ತಿ ಆಯ್ತು ಎಂದು ಎಸ್ಪಿಗೆ ಬುದ್ದಿವಾದ ಹೇಳಿದರು.