News Karnataka Kannada
Saturday, April 27 2024
ವಿಶೇಷ

ಕಾರ್ಕಳದ ಮುಕುಟಮಣಿ ಪರಶುರಾಂ ಥೀಂ ಪಾರ್ಕ್‌

karkalas-mukutamani-parashuram-theme-park
Photo Credit : News Kannada

ಕಾರ್ಕಳಕ್ಕೆ ಈಗ ಪರಶುರಾಮ ಥೀಮ್ ಪಾರ್ಕ್ ಮುಕುಟಮಣಿ. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ಈ ಥೀಮ್ ಪಾರ್ಕ್ ಕಾರ್ಕಳವನ್ನು ಪ್ರವಾಸಿ ತಾಣವಾಗಿ ತರೆದುಕೊಳ್ಳುವಲ್ಲಿ ಸಹಕಾರಿಯಾಗಿದೆ. ತುಳುನಾಡು ಸೃಷ್ಟಿಕರ್ತ ಎಂದೇ ಖ್ಯಾತಿ ಪಡೆದಿರುವ ಪರಶುರಾಮನಿಗೆ ಥೀಮ್ ಪಾರ್ಕ್ ಕರಾವಳಿಯಲ್ಲಿ ನಿರ್ಮಾಣವಾಗಿರುವುದು ನಿಜಕ್ಕೂ ಅವಿಸ್ಮರಣೀಯ.

ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ೪೫೦ಅಡಿ ಎತ್ತರದ ಉಮಿಕಲ್ ಬೆಟ್ಟದ ಮೇಲೆ ೩೩ ಅಡಿ ಎತ್ತರದ ಪರಶುರಾಮನ ಕಂಚಿನ ಪ್ರತಿಮೆಯು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆಯಲ್ಲದೆ ಕರಾವಳಿಯ ಹೆಮ್ಮೆಯ ಪ್ರತೀಕವಾಗಿ ಬಿಂಬಿತವಾಗಿದೆ. ಪರಶುರಾಮನನ್ನು ಭಗವಾನ್ ವಿಷ್ಣುವಿನ ಆರನೇ ಅವತಾರ ಎಂದೇ ಕರೆಯಲಾಗುತ್ತದೆ. ಪುರಾಣಗಳಲ್ಲಿ ಆತನ ಬಗೆಗೆ ತಿಳಿದಿದ್ದೇವೆಯೇ ಹೊರತು ಕರಾವಳಿಯಲ್ಲಿ ಆತನಿಗಾಗಿ ಯಾವುದೇ ಕಾರ್ಯಗಳನ್ನು ಮಾಡಿರಿಲಿಲ್ಲ. ಆತನನ್ನು ಉಲ್ಲೇಖಿಸಿ ಯಾವುದೇ ರೀತಿಯ ಚಟುವಟಿಕೆಗಳಿರಲಿಲ್ಲ. ಅಥವಾ ಕಟ್ಟಡ, ಪುತ್ಥಳಿಗಳಿರಲಿಲ್ಲ. ಈ ನಿಟ್ಟಿನಲ್ಲಿ ಈ ಕಾರ್ಯಇದು ಇತಿಹಾಸವನ್ನು ಶಾಶ್ವತವಾಗಿಸುವಲ್ಲಿ ಕೈಗೊಂಡ ನವೀನ ಪ್ರಯತ್ನವಾಗಿದೆ.

ಅದೊಂದು ಬಂಡೆಯ ಪ್ರದೇಶ. ಅಲ್ಲಿ ಥೀಮ್ ಪಾರ್ಕ್ ಮಾಡಬಹುದು ಎನ್ನುವುದು ಕನವರಿಕೆಯಾಗಿತ್ತು. ಆದರೆ ಆ ಬಂಡೆ ಏರಿದರೆ ಇಡೀಯ ಕಾರ್ಕಳ ಕಾಣಿಸುತ್ತದೆ. ಇದನ್ನು ಪ್ರವಾಸಿ ತಾಣವಾಗಿ ಮಾಡಬೇಕು ಎನ್ನುವ ಅಭಿಲಾಷೆಯೊಂದಿಗೆ ಕಾರ್ಕಳದ ಶಾಸಕ, ಪ್ರವಾಸೋದ್ಯಮ ಸಚಿವ ಸುನಿಲ್ ಕುಮಾರ್ ಅವರು ಎರಡು ವರ್ಷದ ಹಿಂದೆ ಈ ಯೋಜನೆ ಕಾರ್ಯಾರಂಭಿಸಿದ್ದರು. ರಾಜ್ಯ ಹೆದ್ದಾರಿಗೆ ತಾಗಿಕೊಂಡಿರುವ ಈ ಬಂಡೆ ಪ್ರದೇಶದಲ್ಲಿ ವಿಶಾಲವಾದ ಥೀಮ್ ಪಾರ್ಕ್ ನಿರ್ಮಾಣವಾಗಿದೆ. ೩೬೦ ಡಿಗ್ರಿ ಕಾಣುವಂತಹ ಪ್ರದೇಶ ಇದಾಗಿದೆ. ಪ್ರವಾಸಿಗರಿಗೆ ಮನೋಹರವಾಗಿ ಕಾಣುವ ಈ ಪ್ರದೇಶ ಥೀಮ್ ಪಾರ್ಕ್‌ಗೆ ಸೂಕ್ತವಾಗಿದೆ.

ಈ ಥೀಮ್ ಪಾರ್ಕಿನಲ್ಲಿ ಸುಮಾರು ಒಂದು ಸಾವಿರ ಜನ ಕುಳಿತುಕೊಳ್ಳುವಂತಹ ಬಯಲು ರಂಗ ಮಂದಿರವಿದೆ. ತುಳುನಾಡಿನ ಇತಿಹಾಸವನ್ನು ತಿಳಿಸುವಂತಹ ಚಿತ್ರ ಗ್ಯಾಲರಿ. ಏಕಕಾಲಕ್ಕೆ ನೂರು ಜನ ಕುಳಿತುಕೊಳ್ಳವ ಚಿತ್ರಮಂದಿರ ಥೀಮ್ ಪಾರ್ಕಿನಲ್ಲಿದೆ. ಇದು ಧಾರ್ಮಿಕ ಥೀಮ್‌ನ ಒಳಗೊಂಡಿರುವ ಪಾರ್ಕ್ (ಉದ್ಯಾನವನ)ವಾಗಿದ್ದು ಮೋಜು, ಮಸ್ತಿ ಮಾಡುವಂತಹ ತಾಣವಲ್ಲ, ತುಳುನಾಡಿನ ಸಂಸ್ಕೃತಿಯನ್ನು ತಿಳಿಸುವ ತಾಣವಾಗಿದೆ. ಪರಶುರಾಮನ ಕಥೆಯನ್ನು ಸಾರುವ ನೆಲೆಯಾಗಿದೆ.

ಪರಶುರಾಮನ ಕಥೆ
ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಭಗವಾನ್ ವಿಷ್ಣುವು ಪರಶುರಾಮನಾಗಿ ತನ್ನ ೬ ನೇ ಅವತಾರವನ್ನು ತೆಗೆದುಕೊಂಡನು ಎಂದು ಹೇಳಲಾಗುತ್ತದೆ. ಜಮದಗ್ನಿ ಮತ್ತು ರೇಣುಕಾ ಋಷಿಗಳ ಐವರು ಪುತ್ರರಲ್ಲಿ ಪರಶುರಾಮ ನಾಲ್ಕನೆಯವನು. ಪರಶುರಾಮ ಶಿವನ ಮಹಾ ಭಕ್ತ.

ಗ್ರಂಥಗಳ ಪ್ರಕಾರ, ಭಗವಾನ್ ವಿಷ್ಣುವು ಭೂಮಿಯ ಮೇಲೆ ರಾಜ ಮಾಡಿದ ಅನ್ಯಾಯ, ಅನೀತಿ ಮತ್ತು ಪಾಪ ಕಾರ್ಯಗಳನ್ನು ನಾಶಮಾಡಲು ಪರಶುರಾಮನಾಗಿ ಅವತರಿಸಿದನು. ಹಿಂದೂ ನಂಬಿಕೆಗಳ ಪ್ರಕಾರ, ಪರಶುರಾಮನು ಏಳು ಚಿರಂಜೀವಿ ಪುರುಷರಲ್ಲಿ ಒಬ್ಬನಾಗಿದ್ದಾನೆ ಇಂದಿಗೂ ಭೂಮಿಯ ಮೇಲೆ ಇದ್ದಾನೆ ಎನ್ನುವ ನಂಬಿಕೆಯಿದೆ.

ಪರಶುರಾಮನ ಜನ್ಮನಾಮ ರಾಮ. ಅವನು ತನ್ನ ಕಠಿಣ ತಪಸ್ಸಿನಿಂದ ಶಿವನನ್ನು ಮೆಚ್ಚಿಸಿದನು. ಅದರ ನಂತರ ಶಿವನು ಅವನಿಗೆ ಅನೇಕ ಆಯುಧಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ಕೊಟ್ಟನು. ಅದರಲ್ಲಿ ಪರಶು ಕೂಡ ಮುಖ್ಯವಾದುದು. ಅವನು ಪರಶುವನ್ನು ತನ್ನ ಬಳಿ ಹೊಂದಿರುವುದರಿಂದ ಆತನನ್ನು ಪರಶುರಾಮ ಎಂದು ಕರೆಯಲಾಯಿತು. ಪರಶುರಾಮನ ಹೊರತಾಗಿ, ಅವನನ್ನು ರಾಮಭದ್ರ, ಭಾರ್ಗವ, ಭೃಗುವಂಶಿ ಮುಂತಾದ ಇತರ ಹೆಸರುಗಳಿಂದ ಕರೆಯಲಾಗುತ್ತದೆ.

ನಂಬಿಕೆಗಳ ಪ್ರಕಾರ, ಒಮ್ಮೆ ಪರಶುರಾಮನ ತಾಯಿಯಾದ ರೇಣುಕಾ ಅಪರಾಧ ಮಾಡಿದ್ದಳು. ಆಗ ಪರಶುರಾಮನ ತಂದೆ ಕೋಪಗೊಂಡು ತನ್ನ ಎಲ್ಲಾ ಮಕ್ಕಳಿಗೆ ತಾಯಿಯನ್ನು ಕೊಲ್ಲುವಂತೆ ಆದೇಶಿಸಿದನು. ಪರಶುರಾಮನ ಎಲ್ಲಾ ಸಹೋದರರು ನಿರಾಕರಿಸಿದರು, ಆದರೆ ಪರಶುರಾಮನು ತನ್ನ ತಂದೆಯ ಆಜ್ಞೆಯನ್ನು ಪಾಲಿಸಿದನು ಮತ್ತು ತಾಯಿಯನ್ನು ಕೊಂದನು. ಇದರಿಂದ ಸಂತಸಗೊಂಡ ಆತನ ತಂದೆ ಮೂರು ವರಗಳನ್ನು ಕೇಳುವಂತೆ ಕೇಳಿಕೊಂಡರು. ಪರಶುರಾಮನು ಮೂರು ವರಗಳನ್ನು ಕೇಳಿದನು, ಮೊದಲನೆಯದು ತನ್ನ ತಾಯಿಯನ್ನು ಪುನರುಜ್ಜೀವನಗೊಳಿಸಲು, ಎರಡನೆಯದು ಅಣ್ಣಂದಿರನ್ನು ಗುಣಪಡಿಸಲು ಮತ್ತು ಮೂರನೆಯದು ಜೀವನದಲ್ಲಿ ಎಂದಿಗೂ ಸೋಲಬಾರದೆಂದು ಆಶೀರ್ವಾದವನ್ನು ಪಡೆಯಲು ಬಳಸಿದನು. ಅಷ್ಟಲ್ಲದೆ ತಾಯಿಯನ್ನು ಕೊಂದ ಪ್ರಾಯಶ್ಚಿತ್ತವಾಗಿ ಎಡಕೈಯಲ್ಲಿ ಕೊಡಲಿ ಎಸೆದು ತುಳುನಾಡನ್ನು ಸೃಷ್ಟಿಸಿ ದಾನ ಮಾಡಿದನು ಎನ್ನುವ ಐತಿಹ್ಯವೂ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು