ಕೂಳೂರು: ಕೂಳೂರು ನದಿ ಸೇತುವೆ ಕಾಮಗಾರಿ ಪ್ರಾರಂಭವಾಗಿ ಮೂರು ವರ್ಷ ಕಳೆದಿದೆ ಹಳೆ ಸೇತುವೆ ಅಸಮರ್ಥ ಎಂದು ಹೆದ್ದಾರಿ ಪ್ರಾಧಿಕಾರದ ತಜ್ಞರು ವರದಿ ನೀಡಿ ನಾಲ್ಕು ವರ್ಷ ದಾಟಿದೆ. ಮಳೆಗಾಲ ಸಮೀಪಿಸುತ್ತಿದ್ದು ನದಿ ಸೇತುವೆ ಕಾಮಗಾರಿಗೆ ಹಾಕಿರುವ ಭಾರೀ ಮಣ್ಣಿನ ಪ್ರಮಾಣದಿಂದ ಕೂಳೂರು ನದಿ ಪಾತ್ರದ ಪ್ರದೇಶಕ್ಕೆ ಮಳೆ ನೀರು ನಗ್ಗುವ ಅಪಾಯ ಒಂದೆಡೆಯಾದರೆ, ಹಳೆ ಸೇತುವೆ ಕುಸಿಯುವ ಭೀತಿ ಇನ್ನೊಂದೆಡೆ. ಆದುದರಿಂದ ಕಾಮಗಾರಿಯನ್ನು ಶೀಘ್ರವಾಗಿ ನಡೆಸಬೇಕು ಎಂದು ಒತ್ತಾಯಿಸಿ ಇಂದು ಸಿಪಿಐಎಂ ಪಂಜಿಮೊಗರು ವಲಯ ಸಮಿತಿ ಕೂಳೂರು ಸೇತುವೆ ಬಳಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಕೂಳೂರು ಸೇತುವೆ ಕಾಮಗಾರಿ ಮೂರು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದೆ ಇದು ಮತ್ತೊಂದು ಪಂಪ್ವೆಲ್ ಆಗದಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿವೈಎಫ್ಐ ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ ಮಾತನಾಡಿ ಕೂಳೂರು ಸೇತುವೆ ಕಾಮಗಾರಿ ಬಗ್ಗೆ ಸ್ಥಳೀಯ ಶಾಸಕ ಭರತ್ ಶೆಟ್ಟಿಗಾಗಲಿ, ಸಂಸದರಿಗಾಗಲೇ ಆಸಕ್ತಿ ಇಲ್ಲದಂತೆ ಇದೆ. ಈ ಕಾಮಗಾರಿಯ ಕಮಿಷನ್ ವಿಚಾರವಾಗಿ ಕಾಮಗಾರಿ ನಿಂತಿರಬಹುದೇ ಎಂದು ಸಾರ್ವಜನಿಕ ವಲಯದಲ್ಲಿ ಸುದ್ದಿ ಇದೆ ಕೋಟಿ ಕೋಟಿ ಕಾಮಗಾರಿ ಬಗ್ಗೆ ಬ್ಯಾನರ್ ಹಾಕುವ ಶಾಸಕರ ಕಾಮಗಾರಿ ಎಲ್ಲಿ ನಡೆಯುತ್ತಿದೆ ಎಂದು ತಿಳಿಯುತ್ತಿಲ್ಲ ಮಾತೆತ್ತಿದ್ದರೆ ಗುರುಪುರ ಸೇತುವೆ ಬಗ್ಗೆ ಮಾತನಾಡುವ ಇವರಿಗೆ ಅಪಾಯದ ಅಂಚಿನಲ್ಲಿರುವ ಕೂಳೂರು ಸೇತುವೆ ಬಗ್ಗೆ ಆಸಕ್ತಿ ಇಲ್ಲದಿರುವುದು ವಿಪರ್ಯಾಸ ಆಗಿದೆ ಎಂದರು. ಉಡುಪಿ, ಮಂಗಳೂರು ಸಂಪರ್ಕದ ಅತೀ ವಾಹನ ದಟ್ಟನೆ ಇರುವ ಕೂಳೂರು ಸೇತುವೆ ಕುಸಿದರೆ ಉಂಟಾಗುವ ಅಪಾಯದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಡಿವೈಎಫ್ಐ ಜಿಲ್ಲಾ ಅಧ್ಯಕ್ಷರಾದ ಬಿ.ಕೆ ಇಮ್ತಿಯಾಝ್ ಮಾತನಾಡಿ ಸ್ಥಳೀಯ ಶಾಸಕರಿಗೆ ಕಾಮಗಾರಿ ನಡೆಸುವ ಆಸಕ್ತಿ ಇಲ್ಲ.. ಸುರತ್ಕಲ್ ಟೋಲ್ ಬಂದ್ ಮಾಡಿ ನೂರು ದಿನಗಳು ಕಳೆದರೂ ಕೂಡ ಅಲ್ಲಿ ಟೋಲ್ ಗೂಡುಗಳು ಅಸ್ಥಿಪಂಜರದ ರೀತಿ ಉಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಿಪಿಐಎಂ ಪಂಜಿಮೊಗರು ಮುಖಂಡರಾದ ಅನಿಲ್, ಪ್ರಮೀಳಾ, ಸೌಮ್ಯ, ಬಾವು, ಶೆರೀಫ್, ಬಶೀರ್, ಸಂತೋಷ್,ಕಸ್ತೂರಿ, ಫಾತಿಮಾ ಖಲೀಲ್ , ಡಿವೈಎಫ್ಐ ನ ಶ್ರೀನಾಥ್ ಕುಲಾಲ್, ಮಕ್ಸೂದ್ ಕಾನ, ದಲಿತ ಸಂಘಟನೆಯ ಕೃಷ್ಣ ತಣ್ಣೀರುಬಾವಿ ಸಾಮಾಜಿಕ ಮುಂದಾಳುಗಳಾದ ಕನಕದಾಸ್, ಹನೀಫ್ ಕೂಳೂರು ಮತ್ತಿತರರು ಭಾಗವಹಿಸಿದ್ದರು.