News Karnataka Kannada
Tuesday, April 30 2024
ಮಂಗಳೂರು

ಉಜಿರೆ: ಮುಂದಿನ ವರ್ಷದಿಂದ ಚಲನಚಿತ್ರೋತ್ಸವವನ್ನು ಆಯೋಜಿಸಲು ಪಿ. ಶೇಷಾದ್ರಿ ಸಲಹೆ

To organise a film festival from next year. Seshadri's advice
Photo Credit : By Author

ಉಜಿರೆ: ಸಾಹಿತ್ಯವು ನಮ್ಮನ್ನು ಆಕರ್ಷಿಸಿ ಮನಕ್ಕೆ ಆನಂದದ ಅನುಭೂತಿ ನೀಡುವುದರೊಂದಿಗೆ ಮೌಲ್ಯವರ್ಧನೆ ಮಾಡಿ, ಜ್ಞಾನಕ್ಷಿತಿಜವನ್ನು ವಿಸ್ತರಿಸುತ್ತದೆ ಎಂದು ರಾಷ್ಟç ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಹೇಳಿದರು.

ಅವರು ಬುಧವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸಾಹಿತ್ಯ ಸಮ್ಮೇಳನದ ೯೦ನೇ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು. ಒಳ್ಳೆಯ ಪ್ರೇಕ್ಷಕರಿದ್ದಾಗ ಉತ್ತಮ ಸಿನೆಮಾ ನಿರ್ಮಾಣವಾಗುತ್ತದೆ. ಒಳ್ಳೆಯ ಓದುಗರಿದ್ದಲ್ಲಿ ಉತ್ತಮ ಸಾಹಿತ್ಯ ಕೃತಿಗಳು ಮೂಡಿಬರುತ್ತವೆ. ಇದರಿಂದಾಗಿ ಕನ್ನಡ ಚಲನಚಿತ್ರ ರಂಗದ ಘನತೆ, ಗೌರವವೂ ಹೆಚ್ಚಾಗುತ್ತದೆ. ಕನ್ನಡದಲ್ಲಿರುವ ಸಾಕಷ್ಟು ಕಥೆ, ಕಾದಂಬರಿಗಳು ಉತ್ತಮ ನಿರ್ದೇಶಕರ ಹೃದಯವನ್ನು ತಟ್ಟುತ್ತವೆ. ಆಗ ಉತ್ತಮ ಸಿನೆಮಾಗಳು ಮೂಡಿಬರಲು ಸಾಧ್ಯವಾಗುತ್ತದೆ. ಸಾಹಿತ್ಯದಲ್ಲಿ ಜಾತಿ ಮುಖ್ಯ ಅಲ್ಲ, ನೀತಿ ಮುಖ್ಯವಾಗಿದೆ.

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಿತ್ಯವೂ ನಡೆಯುವ ಅನ್ನದಾನ, ವಿದ್ಯಾದಾನ, ಔಷಧದಾನ ಮತ್ತು ಅಭಯದಾನ – ಎಂಬ ಚತುರ್ವಿಧ ದಾನಗಳನ್ನೂ ತಾನು ಪಡೆದು ಧನ್ಯನಾಗಿದ್ದೇನೆ ಎಂದು ಅವರು ಕೃತಜ್ಞತೆಯಿಂದ ಸ್ಮರಿಸಿದರು. ಧರ್ಮಸ್ಥಳದಲ್ಲಿ ಪ್ರತಿ ವರ್ಷ ಲಕ್ಷದೀಪೋತ್ಸವ ಸಂದರ್ಭದಲ್ಲಿ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನ ಏರ್ಪಡಿಸುವಂತೆ ಮುಂದಿನ ವರ್ಷದಿಂದ ಚಲನಚಿತ್ರೋತ್ಸವವನ್ನೂ ಆಯೋಜಿಸಬೇಕು ಎಂದು ಅವರು ಹೆಗ್ಗಡೆಯವರಲ್ಲಿ ವಿನಂತಿಸಿದರು.

ಜಾತಿ-ಮತ, ಬೇಧ ಹೆಚ್ಚುತ್ತಿರುವ ಇಂದು ಧರ್ಮಸ್ಥಳದಲ್ಲಿ ಪ್ರತಿವರ್ಷ ನಡೆಯುವ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನ ಅತ್ಯಂತ ಪ್ರಸ್ತುತವಾಗಿದ್ದು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಪೂರಕ ಹಾಗೂ ಪ್ರೇರಕವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ ಮೈಸೂರಿನ ಖ್ಯಾತ ವಿದ್ವಾಂಸ ಡಾ. ಎಚ್.ವಿ. ನಾಗರಾಜ್ ರಾವ್ ಮಾತನಾಡಿ, ಮನಸ್ಸನ್ನು ಅರಳಿಸುವುದರೊಂದಿಗೆ ಕುತೂಹಲವನ್ನು ಕೆರಳಿಸುವುದೇ ಸಾಹಿತ್ಯದ ಉದ್ದೇಶವಾಗಿದೆ. ಸಾಹಿತ್ಯ ಬದುಕಿನ ಅವಿಭಾಜ್ಯ ಅಂಗವಾಗಿದ್ದು ಅದನ್ನು ಜೀವನದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ.

ಸಾಹಿತ್ಯಕ್ಕೆ ಮಿತಿ ಇಲ್ಲ. ಬೇರೆ ಬೇರೆ ಭಾಷೆಗಳಲ್ಲಿ ರಚನೆಯಾದ ಸಾಹಿತ್ಯ ಕೃತಿಗಳನ್ನು ಎಣಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಪತಂಜಲಿ ವ್ಯಾಕರಣ ಗ್ರಂಥ ರಚಿಸಿದ್ದಾರೆ. ಪ್ರಾಕೃತ ಭಾಷೆಯಲ್ಲಿ ಶ್ರೇಷ್ಠ ಸಾಹಿತ್ಯ ಕೃತಿಗಳು ಮತ್ತು ಶಾಸನಗಳು ರಚನೆಯಾಗಿವೆ. ಪಂಪನ ಆದಿಪುರಾಣದ ನೀಲಾಂಜನೆಯ ನೃತ್ಯದ ಸೊಗಡನ್ನು ಓದಿಯೇ ಆಸ್ವಾದಿಸಬೇಕು, ಆನಂದಿಸಬೇಕು. ಕನ್ನಡಕ್ಕೆ ಹಲವು ಜ್ಞಾನಪೀಠ ಪ್ರಶಸ್ತಿಗಳು ಬಂದರೂ ನೋಬೆಲ್ ಪ್ರಶಸ್ತಿ ದಕ್ಕಿಲ್ಲ. ಏಕೆಂದರೆ ಅದರ ಸಮಿತಿಯವರಿಗೆ ಕನ್ನಡ ಗೊತ್ತಿಲ್ಲ!

ಸಾಹಿತ್ಯ ಕೇವಲ ಪುರುಷರ ಸೊತ್ತಲ್ಲ ಸಾಕಷ್ಟು ಮಹಿಳೆಯರು ಕೂಡಾ ಇಂದು ಸಾಹಿತ್ಯ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ ಎಂದು ಅವರು ಸಂತಸ ವ್ತಕ್ತಪಡಿಸಿದರು. ಸಾಹಿತ್ಯ, ಕಲೆ, ಸಂಗೀತ ಮೊದಲಾದ ಹವ್ಯಾಸಗಳಿಲ್ಲದ ಮನುಷ್ಯ ಕೋಡು ಮತ್ತು ಬಾಲವಿಲ್ಲದ ಪ್ರಾಣಿಗೆ ಸಮಾನ. ಆದುದರಿಂದ
ನಾವು ಸಾಹಿತ್ಯ, ಕಲೆ, ಸಂಗೀತ, ನೃತ್ಯ ಮೊದಲಾದ ಹವ್ಯಾಸಗಳನ್ನು ಬೆಳೆಸಿಕೊಂಡು ನಮ್ಮ ಜೀವನ ಪಾವನಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಬೆಂಗಳೂರಿನ ಹಿರಿಯ ಸಮಾಜ ಸೇವಕ ಹಾಗೂ ಉದ್ಯಮಿ ಅನಂತರಾಮಯ್ಯ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ
ಹೆಗ್ಗಡೆಯವರನ್ನು ಬಹುಮುಖಿ ಸಮಾಜ ಸೇವೆಗಾಗಿ ಗೌರವಿಸಿ ಅಭಿನಂದಿಸಿದರು

ಬೆಂಗಳೂರಿನ ಸತ್ಯೇಶ್ ಎನ್. ಬೆಳ್ಳೂರ್ “ಸಾಹಿತ್ಯದಿಂದ ವ್ಯಕ್ತಿತ್ವ ನಿರ್ಮಾಣ”ದ ಬಗ್ಯೆ, ಪ್ರಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಐನಕೈ “ಸಾಹಿತ್ಯ ಮತ್ತು ಮಾಧ್ಯಮ”ದ ಬಗ್ಯೆ ಹಾಗೂ ತುಮಕೂರಿನ ಲೇಖಕಿ ಡಾ. ಗೀತಾವಸಂತ “ಸಾಹಿತ್ಯ ಹಾಗೂ ಸಾಮರಸ್ಯ”ದ ಬಗ್ಯೆ ಉಪನ್ಯಾಸ ನೀಡಿದರು. ಶುದ್ಧ ಕನ್ನಡ ಬಳಕೆ ಮೂಲಕ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ರಕ್ಷಣೆಯಾಗಬೇಕು: ಡಾ. ಡಿ. ವೀರೇಂದ್ರ ಹೆಗ್ಗಡೆ.  ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಕನ್ನಡ ಸಾಹಿತ್ಯದಲ್ಲಿ ನಮ್ಮ ನಾಡಿನ ಕಲೆ, ಸಂಸ್ಕೃತಿ, ಬದುಕು- ಹೀಗೆ ಒಟ್ಟಾರೆ ಕನ್ನಡ ಸಾಂಸ್ಕೃತಿಕ ಜಗತ್ತೇ ಅಡಕವಾಗಿದೆ. ವೈವಿಧ್ಯಮಯವಾಗಿ ಬೆಳೆದು ಬಂದ ಕನ್ನಡ ಸಾಹಿತ್ಯದ ಅಧ್ಯಯನವು ನಮ್ಮ ಬದುಕಿಗೆ ಸಂಸ್ಕಾರವನ್ನು ನೀಡಿ ಉತ್ತಮ ಸಂಸ್ಕೃತಿಯನ್ನು ಬೆಳೆಸುತ್ತದೆ ಎಂದು ಹೇಳಿದರು.

ಸುಮಾರು ೨೦೦೦ ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯವು ಆದಿಕವಿ ಪಂಪನಿಂದ ಹಿಡಿದು ಕುವೆಂಪು, ಬೇಂದ್ರೆ, ಮೊದಲಾದವರ ಮೂಲಕ ಇಂದಿನ ಯುವ ತಲೆಮಾರಿನ ವರೆಗೂ ವಿಶಿಷ್ಠ ಪರಂಪರೆಯನ್ನೇ ನಿರ್ಮಿಸಿದೆ. ಇಂದು ಸಾಹಿತ್ಯದ ಪರಿಭಾಷೆ ಬದಲಾಗಿದೆ. ಮುದ್ರಿತ  ಪುಸ್ತಕಗಳ ಬದಲು ಇಂದು ಡಿಜಿಟಲ್ ಮಾಧ್ಯಮ, ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್‌ಗಳ ಮೂಲಕವೂ ಸಾಹಿತ್ಯದ ರಚನೆ ಹಾಗೂ ಅಧ್ಯಯನ ಸಾಧ್ಯವಾಗುತ್ತಿದೆ. ಎಲ್ಲಾ ಕಡೆಯೂ ಶುದ್ಧ ಕನ್ನಡ ಭಾಷೆ ಬಳಸಬೇಕು ಎಂದು ಅವರು ಸಲಹೆ ನೀಡಿದರು.

ಟಿ.ವಿ. ಸಿನೆಮಾ ಹಾಗೂ ಎಲ್ಲಾ ಮಾಧ್ಯಮಗಳಲ್ಲಿಯೂ ಶುದ್ಧಭಾಷೆ ಬಳಸುವ ಮೂಲಕ ನಮ್ಮ ನಾಡಿನ ಮೂಲ ಸೊಗಡನ್ನು ಉಳಿಸಿ ಬೆಳೆಸಬಹುದು ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು. ಆದುನಿಕ ತಂತ್ರಜ್ಞಾನದ ಮೂಲಕ, ಸಾಮಾಜಿಕ ಜಾಲತಾಣಗಳ ಮೂಲಕ ಇ-ಬುಕ್‌ಗಳು ಇಂದು ಜನಪ್ರಿಯವಾಗಿತ್ತಿವೆ. ದಿನಪತ್ರಿಕೆಗಳು, ವಾರಪತ್ರಿಕೆಗಳು, ಕಥೆ-ಕಾದಂಬರಿಗಳು, ಅಂತರ್ಜಾಲಗಳಲ್ಲಿ ಕೂಡಾ ಶುದ್ಧ ಕನ್ನಡ ಭಾಷೆಯನ್ನು ಬಳಸಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು. ಡಾ. ಎಚ್.ವಿ. ನಾಗರಾಜರಾವ್ “ಧರ್ಮದರ್ಶನ” ಗ್ರಂಥವನ್ನು ಬಿಡುಗಡೆಗೊಳಿಸಿದರು. ಡಾ. ದಿವಾ ಕೊಕ್ಕಡ ಧನ್ಯವಾದವಿತ್ತರು. ಡಾ. ಬಿ.ಪಿ. ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಗೌರಿಮಾರು ಕಟ್ಟೆ ಉತ್ಸವ ನಡೆಯಿತು. ಜಾನಪದ ಕಲಾವಿದರಿಂದ ಕಲಾ ಸೇವೆ (ಬಾಕ್ಸ್ ಐಟಮ್) ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಬುಧವಾರ ಆಹೋರಾತ್ರಿ ನಾಡಿನೆಲ್ಲೆಡೆಯಿಂದ ಬಂದ ಜಾನಪದ ಕಲಾವಿದರು ಕಲಾ ಸೇವೆ ಮಾಡಿ ಧನ್ಯತೆಯನ್ನು ಹೊಂದಿದರು.

ವಾಲಗ ತಂಡದವರು : ೩೯೩, ನಾಗಸ್ವರ : ೧೬೦೦ ತಂಡ, ಬ್ಯಾಂಡ್‌ಸೆಟ್: ೭೦, ಶಂಖ : ೧೩೧, ಡೊಳ್ಳುಕುಣಿತ : ೮೫, ಕರಡಿ ಮೇಳ : ೧೯೧, ವೀರಗಾಸೆ : ೮೬ ಅಲ್ಲದೆ ಭಕ್ತರು ಬುಧವಾರ ಒಂದು ಲಕ್ಷ ನೀರಿನ ಬಾಟ್ಲಿ ಕೊಡುಗೆಯಾಗಿ ನೀಡಿದ್ದಾರೆ. ಆರು ಲೋಡು ಅಕ್ಕಿ, ಹಾಗೂ ೨೦ ಜನರ ತಂಡ ಎರಡೂವರೆ ಲಕ್ಷ ಜನರಿಗೆ ಅನ್ನದಾನ ನೀಡಿದ್ದಾರೆ. ಲಾಡು, ಮೈಸೂರುಪಾಕ್ ಮೊದಲಾದ ಸಿಹಿತಿಂಡಿಗಳನ್ನೂ ವಿತರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು