News Karnataka Kannada
Tuesday, April 30 2024
ಮಂಗಳೂರು

ಧರ್ಮಸ್ಥಳ: ಭಕ್ತಿ, ಸಾಹಿತ್ಯ, ಸಂಗೀತ, ಕಲೆಗಳೆಂಬ ದೀಪಗಳ ಸಾಗರ, ಧರ್ಮಸ್ಥಳ ಲಕ್ಷದೀಪೋತ್ಸವ

An ocean of lights of bhakti, literature, music, arts, Dharmasthala Lakshdeepotsava
Photo Credit : By Author

ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳವೆಂದರೆ ಏನೋ ಒಂದು ವಿಶೇಷ ಆಕರ್ಷಣೆ. ಅಲ್ಲಿನ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿ, ಧರ್ಮಾಧಿಕಾರಿ ಡಾ| ವಿರೇಂದ್ರ ಹೆಗ್ಗಡೆಯವರು, ಅವರ ಬೀಡು ಮನೆ, ಗೊಮ್ಮಟ ಬೆಟ್ಟ, ವಸ್ತು ಸಂಗ್ರಾಹಲಯ, ಕಾರ್ ಮ್ಯೂಸಿಯಂ, ಅಚ್ಚುಕಟ್ಟಿನ ವ್ಯವಸ್ಥೆ, ಸ್ವಚ್ಛತೆ ನಾಡಿನಾದ್ಯಂತ ಪ್ರಸಿದ್ಧ. ಧರ್ಮಸ್ಥಳದ ಕ್ಷೇತ್ರ ಮಹಾತ್ಮೆ ಕರ್ನಾಟಕ, ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಜನಜನಿತ. ಇಂತಹ ಸರ್ವಜನಮಾನ್ಯತೆ ಪಡೆದಿರುವ ಕ್ಷೇತ್ರದಲ್ಲಿ ಕಾರ್ತಿಕ ಮಾಸದ ಕೃಷ್ಣಪಕ್ಷದ ಏಕಾದಶಿಯಿಂದ ಆರಂಭಗೊಂಡು ಅಮಾವಾಸ್ಯೆಯ ತನಕ ನಡೆಯುವ
ಲಕ್ಷದೀಪೋತ್ಸವಕ್ಕೆ ಅಪೂರ್ವ ಕಳೆ ಇದೆ.

ಧರ್ಮಸ್ಥಳದ ದೀಪ ಅಂದರೆ ಅದೊಂದು ಸಂಭ್ರಮ, ಪುಳಕ. ಇಲ್ಲಿನ ವೈಭವದ ದೀಪೊತ್ಸವಕ್ಕೆ ಹೋಗುವುದು ಮತ್ತು ಭಾಗವಹಿಸುವುದೆಂದರೆ ಅದೊಂದು ಅವರ್ಣನೀಯ ಅನುಭವ. ಸನಾತನದ ಪದ್ಧತಿಯಲ್ಲಿ ದೇವಾಲಯಗಳಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ದೀಪಾರಾಧನೆಗೆ ಅದರದ್ದೇ ಆದ ಮಹತ್ವವಿದೆ. ದಕ್ಷಿಣಾಯನ ಎಂಬುದು ದೇವತೆಗಳಿಗೆ ರಾತ್ರಿಯ ವೇಳೆ ಎಂಬ ನಂಬಿಕೆ ಎಲ್ಲರದ್ದು. ದರಿದ್ರ ಲಕ್ಷ್ಮಿಯು ಕತ್ತಲೆಯ ಸಂದರ್ಭ ಮನೆಗಳಿಗೆ ಪ್ರವೇಶಿಸಲು ಹಾತರೊಯುತ್ತಿರುತ್ತಾಳೆ. ಈ ಸಂದರ್ಭದಲ್ಲಿ ದೇವಾಲಯಗಳಲ್ಲಿ ಅಥವಾ ಮನೆಯಲ್ಲಿ ನಡೆಯುವ ದೀಪಾರಾಧನೆಯಿಂದ, ಅಲ್ಲಿನ ದೀಪಗಳ ಪ್ರಜ್ವಲತೆಯಿಂದಾಗಿ ದರಿದ್ರ ಲಕ್ಷ್ಮಿ ಮನೆಯೊಳಗೆ ಅಥವಾ ದೇವಾಲಯಕ್ಕೆ ಪ್ರವೇಶಿಸುವುದಿಲ್ಲ ಎಂಬ ನಂಬಿಕೆ ಇದೆ. ಹೀಗಾಗಿ ಕಾರ್ತಿಕ ಮಾಸದ ದೀಪೊತ್ಸವ ಅತ್ಯಂತ ಮಹತ್ವ ಪಡೆದಿದೆ.

ಇದೀಗ ಬೆಳಕಿನ ಹಬ್ಬಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಅದ್ಭುತವಾಗಿ, ಆಕರ್ಷಕವಾಗಿ ಸಿಂಗಾರಗೊಂಡು ಸಜ್ಜಾಗಿದೆ. ಕೊರೋನಾದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಸಾಂಕೇತವಾಗಿ ಆಚರಣೆ ನಡೆದಿತ್ತು. ಆದರೆ ಈ ಬಾರಿ ಅಂದರೆ ಇಂದಿನಿಂದ ಐದುದಿನಗಳ ಕಾಲ ನಡೆಯುವ ಪರ್ವವು ಭಕ್ತಬಂಧುಗಳನ್ನು ಪುಳಕಿತಗೊಳಿಸಿ, ಹೃನ್ಮನಗಳಿಗೆ ತಂಪೆರೆಯಲಿದೆ.

ಧರ್ಮಸ್ಥಳದ ದೀಪಾರಾಧನೆ ಬೇರೆ ಕಡೆ ನಡೆಯುವಂತೆ ದೇವರ ಉತ್ಸವ, ದೀಪಪ್ರಜ್ವಲನೆಗೇ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ಅದು ದೇವರ ಉತ್ಸವ, ಪೂಜೆ, ಮಂಗಳಾರತಿಯ ಜೊತೆಗೆ ಜ್ಞಾನಾರಾಧನೆಗೂ ತೆರೆದುಕೊಂಡಿದೆ. ಏಕಾದಶಿಯಂದು ಶ್ರೀ ಮಂಜುನಾಥ ಸ್ವಾಮಿಯು ಹೊಸಕಟ್ಟೆಗೆ ಬಂದರೆ, ದ್ವಾದಶಿಯಂದು ಕೆರೆಕಟ್ಟೆಗೆ, ತ್ರಯೋದಶಿಯಂದು ಲಲಿತೋದ್ಯಾನಕ್ಕೆ, ಚತುರ್ದಶಿಯಂದು ಕಂಚಿಮಾರು ಕಟ್ಟೆಗೆ, ಅಮಾವಾಸ್ಯೆಯಂದು ಗೌರಿಮಾರು ಕಟ್ಟೆಗೆ ಬಂದು ವಿರಾಜಮಾನನಾಗುತ್ತಾನೆ. ಪ್ರತಿ ದಿನ ಸ್ವಾಮಿಯು ಗರ್ಭಗುಡಿಯಿಂದ ಹೊರಗೆ ಬರುವ ವೇಳೆ ಮೆರವಣಿಗೆ ಇರುತ್ತದೆ.  ಜನ ಸಂದಣಿಯ ನಡುವೆ ರಾಜ ಮರ್ಯಾದೆಯ ಬಿರುದು ಬಾವಲಿಗಳೊಂದಿಗೆ ಮೆರವಣಿಗೆ ನಡೆಯುತ್ತದೆ. ಪ್ರತಿಯೊಂದು ದಿನದ ಉತ್ಸವದ ವೇಳೆ ಸ್ವಾಮಿಯ ಮುಂದೆ ವಿದ್ವಾಂಸರಿಂದ ನಾಲ್ಕು ವೇದಗಳ ಪಾರಾಯಣ, ಅಷ್ಟಾವಧಾನ ಸೇವೆಯು ನಡೆಯುತ್ತದೆ. ಭಕ್ತರು ಅದನ್ನು ನೋಡಿ ಧನ್ಯರಾಗುತ್ತಾರೆ. ಸುತ್ತಲಿನ ವಾತಾವರಣ ಪವಿತ್ರವಾಗುತ್ತದೆ. ಇದರಿಂದ ಸ್ವಾಮಿಯ ಸಾನಿಧ್ಯವೂ ವೃದ್ಧಿಯಾಗುತ್ತದೆ.

ಇದು ಮಾತ್ರವಲ್ಲದೆ, ಇತ್ತ ಧರ್ಮಜಾಗೃತಿ ಉಂಟು ಮಾಡುವ, ಸಾಹಿತ್ಯ ಪ್ರೇಮವನ್ನು ಪ್ರೇರೇಪಿಸುವ ಕಾರ್ಯವೂ ನಡೆಯುತ್ತದೆ. 1933 ರಿಂದ ಇದುವರೆಗೆ, ಅಂದರೆ 90 ವರ್ಷಗಳ ಕಾಲ ನಿರಂತರವಾಗಿ ಸರ್ವಧರ್ಮ ಸಮ್ಮೇಳನ ಹಾಗು 1937 ರಿಂದ ಸಾಹಿತ್ಯ ಸಮ್ಮೇಳನಗಳು ನಡೆದುಕೊಂಡು ಬಂದಿವೆ. ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರು ಧರ್ಮಾಧಿಕಾರಿಗಳಾಗಿದ್ದ ಕಾಲದಲ್ಲಿ ಆರಂಭವಾದ ಸಾಹಿತ್ಯಕ ಕಾರ್ಯವನ್ನು ಅನಂತರದ ಧರ್ಮಾಧಿಕಾರಿಗಳಾಗಿದ್ದ ರತ್ನವರ್ಮ ಹೆಗ್ಗಡೆಯವರು ಅನೂಚಾನವಾಗಿ ಮುಂದುವರೆಸಿಕೊಂಡು ಬಂದಿದ್ದರು. ಅವರ ಬಳಿಕ ಪಟ್ಟಕ್ಕೆ ಬಂದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಮ್ಮೇಳನಗಳಿಗೆ ಹೊಸ ಹೊಳಪನ್ನು ನೀಡಿದ್ದಾರೆ.

ಸಮ್ಮೇಳನಗಳ ಸ್ವಾಗತ ಸಮಿತಿ ಅಧ್ಯಕ್ಷರಾಗಿ ವೀರೇಂದ್ರ ಹೆಗ್ಗಡೆಯವರು ಇದ್ದು ಅವರು ಸಮ್ಮೇಳನದಲ್ಲಿ ಮಾಡುವ ಸ್ವಾಗತ ಭಾಷಣವು ಒಂದು ಪರಂಪರೆಯಾಗಿ ಮುಂದುವರಿದಿದೆ. ಎರಡು ಸಮ್ಮೇಳನಗಳಲ್ಲಿ ಅವರು ಬೇರೆ ಭಾಷಣ ಮಾಡುವುದಿಲ್ಲ. ಬಂದ ಉದ್ಘಾಟಕರಿಗೆ, ಸಮ್ಮೇಳನಾಧ್ಯಕ್ಷರಿಗೆ, ಉಪನ್ಯಾಸಕರಿಗೆ ವೇದಿಕೆ ಮೀಸಲಾಗಿರುತ್ತದೆ. ವಿಶೇಷವೆಂದರೆ ಉದ್ಘಾಟನಾ ಭಾಷಣದ ನಂತರ ಅಧ್ಯಕ್ಷರ ಭಾಷಣ ಇದ್ದು ಬಳಿಕ ಉಪನ್ಯಾಸ ಇರುತ್ತದೆ. ಸರ್ವಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮದ, ಕ್ರೈಸ್ತ, ಮುಸ್ಲಿಂ, ಬೌದ್ಧ, ಜೈನ, ಇನ್ನಿತರ ಮತಾವಲಂಬಿಗಳ ಸಾಧಕರನ್ನು ಮೆರವಣಿಗೆಯಲ್ಲಿ ಬರಮಾಡಿಕೊಂಡು ಅವರಿಂದ ಮೌಲ್ಯಗಳ ಉದ್ಭೋಧನೆಗಳನ್ನು ಶ್ರೋತೃಗಳಿಗೆ ಉಣಬಡಿಲಾಗುತ್ತದೆ. ಹಾಗೆಯೇ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕದ ಅನ್ಯಾನ್ಯ ಶ್ರೇಷ್ಠ ಸಾಹಿತಿಗಳಿಗೆ ಅವಕಾಶ ನೀಡಲಾಗುತ್ತದೆ. ಧರ್ಮ ಮರ್ಮವನ್ನು ಅರಿಯಲು ಹಾಗು ಸಾಹಿತ್ಯದ ಪರಿಮಳವನ್ನು ಹೀರಲು ಈ ಎರಡೂ ಸಮ್ಮೇಳನಗಳು ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿವೆ.

1975 ರಿಂದ ಲಲಿತಾಕಲಾ ಗೋಷ್ಠಿಗೆ ಅವಕಾಶ ಕಲ್ಪಿಸಲಾಗಿದೆ. ದೀಪೋತ್ಸವಕ್ಕೆ ಬಂದವರಿಗೆ ಧಾರ್ಮಿಕತೆಯ ಪ್ರೇರಣೆಗೆ ಸರ್ವಧರ್ಮ ಸಮ್ಮೇಳನವಿದ್ದರೆ ಇನ್ನೊಂದೆಡೆ ಸಾಹಿತ್ಯದ ಒಲವಿಗೆ ಸಾಹಿತ್ಯಸಮ್ಮೇಳನ ಇದೆ. ಹಾಗೆಯೇ ಮಗದೊಂದೆಡೆ ಸಂಗೀತ ಕಲೆಯ ಅಸಕ್ತಿಗೆ ಲಲಿತಕಲಾ ಗೋಷ್ಠಿಯೆಂಬ ವೇದಿಕೆ ಇದೆ. ಇಲ್ಲಿ ನಾಟ್ಯ, ಸಂಗೀತ, ನಾಟಕ, ಮನರಂಜನೆಯ ಲೋಕವೇ ಸೃಷ್ಟಿಯಾಗುತ್ತದೆ. ವಸ್ತು ಪ್ರದರ್ಶನ ಮಂಟಪದಲ್ಲಿ ಹಾಗೂ ಅಮೃತವರ್ಷಿಣಿ ಸಭಾಭವನದಲ್ಲಿ ಈ ಎಲ್ಲಾ ಚಟುವಟೆಕೆಗಳು ನಡೆಸಲು ಆಸ್ಪದ ಮಾಡಿಕೊಡಲಾಗಿದೆ. ವರ್ಷದಿಂದ ವರ್ಷಕ್ಕೆ ಸಂಗೀತ, ನಾಟ್ಯ ಸಾಧಕರು ತಮ್ಮ ಪ್ರತಿಭೆಯನ್ನು ಪ್ರೇಕ್ಷಕರ ಮುಂದಿಡುತ್ತಾರೆ.

ಇದು ದೀಪೋತ್ಸವಕ್ಕೆ ಆಗಮಿಸಿದ ಜನ ಸಮುದಾಯದ ಹೃದಯದಲ್ಲಿ ನೆನಪಿನ ಪರ್ವವಾಗಿ ಉಳಿಯುವಂತೆ ಮಾಡುತ್ತದೆ. ದೀಪೋತ್ಸವದ ಕೊನೆಯ ದಿನ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆಯೆಂಬ ವಿಶಿಷ್ಠ ಆರಾಧನೆಯನ್ನು ಜೈನಮತಾವಲಂಬಿಗಳು ಅತ್ಯಂತ ಶ್ರದ್ಧಾ, ಭಕ್ತಿಗಳಿಂದ ನಡೆಸುತ್ತಾರೆ. ಜೈನ ಸಂಪ್ರದಾಯದ ಪ್ರಕಾರ ಬಸದಿಗಳೆ ಸಮವಸರಣದ ಪ್ರತೀಕವಾಗಿವೆ. ಇದರ ಮಹತ್ವನ್ನು ಮನಸ್ಸಿಗೆ ನಾಟುವಂತೆ ಪ್ರಸ್ತುತಪಡಿಸುವುದೇ ಕ್ಷೇತ್ರದ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ನಡೆಯುವ ಸಮವಸರಣ ಪೂಜೆಯ ಉದ್ದೇಶ. ಹೆಗ್ಗಡೆ ಕುಟುಂಬದವರೆಲ್ಲರೂ ಈ ಪೂಜೆಯಲ್ಲಿ ಭಾಗವಹಿಸುತ್ತಾರೆ. ಆತ್ಮ ಕಲ್ಯಾಣದೊಂದಿಗೆ ಲೋಕ ಕಲ್ಯಾಣಕ್ಕೂ ಸಮವಸರಣ ಪೂಜೆಯು ಸಹಾಯಕವಾಗುತ್ತದೆ.

ನಾಡಿನ ಲಕ್ಷ ಲಕ್ಷ ಭಕ್ತಬಂಧುಗಳನ್ನು ಆಕರ್ಷಿಸುವ ಧರ್ಮಸ್ಥಳದ ಲಕ್ಷದೀಪೋತ್ಸವ, ಬೆಳ್ಳಿ ರಥೋತ್ಸವ ಇತ್ಯಾದಿಗಳು ಈ ಬಾರಿ ನ. 19 ರಿಂದ ನ. 24 ರವರೆಗೆ ನಡೆಯುತ್ತವೆ. ನೇತ್ರಾವತಿ ನದಿಯಲ್ಲಿ ಮಿಂದು ಮಂಜುನಾಥ ಜಪದೊಂದಿಗೆ ಸ್ವಾಮಿಯ ದರ್ಶನ ಮಾಡಿ, ಅನ್ನ ದಾಸೋಹದಲ್ಲಿ ಪಾಲ್ಗೊಂಡು, ಧಾರ್ಮಿಕ, ಸಾಹಿತ್ಯಕ ಸಮಾರಾಧನೆಯಲ್ಲಿ ತೊಡಗಿಕೊಳ್ಳಲು ಇದೊಂದು ಸದಾವಕಾಶವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು