News Karnataka Kannada
Monday, April 29 2024
ಮಂಗಳೂರು

ಉಜಿರೆ: ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ಪರಂಪರಾ ದಿನ ಆಚರಣೆ

Ujire: Parampara Day celebrated at Excel PU College
Photo Credit : News Kannada

ಉಜಿರೆ: ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆ ಹಾಗೂ ಆಧುನಿಕ ಕಾಲದ ವೇಗೋತ್ಕರ್ಷದಿಂದಾಗಿ ಸಾಕಷ್ಟು ಮಾನಸಿಕ ಪರಿವರ್ತನೆಯಾಗಿದ್ದು ನಮ್ಮ ಭಾವನೆಗಳು ಹಾಗೂ ಚಿಂತನಾ ಲಹರಿ ವಿಚಲಿತವಾಗಿದೆ. ಇಂದು ಗೂಗಲ್ ಗುರುವಾಗಿದ್ದು ಬ್ರೈನ್ ಮೆಮೊರಿ ಚಿಪ್ ಮೆಮೊರಿಯಾಗಿದೆ. ಬರೆಯುವ ಶಿಕ್ಷಣಕ್ಕಿಂತ ಬದುಕಿನ ಶಿಕ್ಷಣ ಮುಖ್ಯವಾಗಿದ್ದು ವಿದ್ಯೆಯೊಂದಿಗೆ ವಿನಯ, ಸೌಜನ್ಯ, ದಯೆ, ಅನುಕಂಪ, ಸೇವಾಕಳಕಳಿ, ಪರೋಪಕಾರ ಮೊದಲಾದ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಮಂಗಳೂರಿನ ಆದಿಚುಂಚನಗಿರಿ ಶಾಖಾ ಮಠದ ಡಾ. ಧರ್ಮಪಾಲನಥ ಸ್ವಾಮೀಜಿ ಹೇಳಿದರು.

ಅವರು ಶುಕ್ರವಾರ ಗುರುವಾಯನಕೆರೆಯಲ್ಲಿ ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ಎಕ್ಸೆಲ್ ಪರ್ಬದ ಅಂಗವಾಗಿ ಪರಂಪರಾ ದಿನ ಆಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ನಮ್ಮ ಸನಾತನ ಧರ್ಮದ ಮರ್ಮವನ್ನರಿತು, ಸಂಪ್ರದಾಯಗಳು ಹಾಗೂ ಹಬ್ಬಹರಿದಿನಗಳ ಆಚರಣೆಯ ಹಿಂದೆ ಇರುವ ನೀತಿ, ನಿಯಮಗಳು, ಸಂಸ್ಕಾರವನ್ನು ತಿಳಿದುಕೊಂಡು ಮಾನವೀಯತೆಯೊಂದಿಗೆ ಮಾನವ ಧರ್ಮವನ್ನು ಪಾಲಿಸಬೇಕು. ವಿದ್ಯೆಯ ಜೊತೆ ವಿನಯ, ಶ್ರದ್ಧೆ, ಭಕ್ತಿ ಮತ್ತು ಗುರು-ಹಿರಿಯರಲ್ಲಿ ಗೌರವ ಭಾವನೆ ಇದ್ದಾಗ ಮಾತ್ರ ವಿದ್ಯಾವಂತರು ಬುದ್ಧಿವಂತರೂ, ಹೃದಯ ಶ್ರೀಮಂತಿಕೆಯುಳ್ಳವರೂ ಆಗಿ ಸಾರ್ಥಕ ಜೀವನ ನಡೆಸಬಹುದು. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪಡೆದ ಜ್ಞಾನದ ಬೆಳಕನ್ನು ಬಿತ್ತರಿಸಿ, ವಿಸ್ತರಿಸಿ ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಂಡು ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರಾಗಬೇಕು ಎಂದು ಸ್ವಾಮಿಜಿ ಸಲಹೆ ನೀಡಿದರು.

ಪರಂಪರಾ ದಿನಾಚರಣೆಯನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನೂ ಮೈಗೂಡಿಸಿಕೊಳ್ಳಬೇಕು. ಸಾವಿರಾರು ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಮ್ಮ ಸನಾತನ ಸಂಸ್ಕೃತಿಯ ವಿಸ್ಮೃತಿ ಸಲ್ಲದು. ಕೀಳರಿಮೆ ಹೊಂದಬಾರದು. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದ ಭಾರತ “ವಿಶ್ವಗುರು”ವಿನ ಸ್ಥಾನ ಹೊಂದುವ ಅರ್ಹತೆಯನ್ನು ಪಡೆದಿದೆ ಎಂದು ಹೇಳಿದರು.

ಸ್ವಾಮೀಜಿಗಳು ಮತ್ತು ಗುರುಪೀಠಗಳು ತ್ಯಾಗದ ಸಂಕೇತವಾಗಿದ್ದು ಸಮಾಜಕ್ಕೆ ನಿರಂತರ ಮಾರ್ಗದರ್ಶನ ನೀಡಿ ಸನ್ಮಾರ್ಗದಲ್ಲಿ ಸಾಗಲು ನಿರಂತರ ಪ್ರೋತ್ಸಾಹ ನೀಡುತ್ತಾರೆ ಎಂದರು.

ಪ್ರತಾಪಸಿಂಹ ನಾಯಕ್‌ರ ೬೩ನೆ ಜನ್ಮದಿನವನ್ನು ಸಮಾರಂಭದಲ್ಲಿ ಸರಳವಾಗಿ ಆಚರಿಸಲಾಯಿತು. ವಿದ್ಯಾರ್ಥಿನಿಯರು ಆರತಿ ಬೆಳಗಿ ತಿಲಕವಿಟ್ಟು ಜನ್ಮದಿನದ ಶುಭಾಶಯ ಸಲ್ಲಿಸಿದರೆ ವೇದಿಕೆಯಲ್ಲಿರುವ ಗಣ್ಯರು ಶುಭ ಕೋರಿ ಹರಸಿದರು.

ಸಂಸ್ಥೆಯ ಅಧ್ಯಕ್ಷ ಸಮಂತ್ ಕುಮಾರ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಬೇಕಾದ ಮಾಹಿತಿ ಹಾಗೂ ತರಬೇತಿ ನೀಡಿ ಅವರ ಉನ್ನತ ಶಿಕ್ಷಣಕ್ಕೆ ಅವಕಾಶ ನೀಡಲಾಗುತ್ತದೆ. ಧರ್ಮ, ಸಂಸ್ಕೃತಿ ಹಾಗೂ ಸಂಪ್ರದಾಯಗಳ ಬಗ್ಯೆ ಮಾಹಿತಿ, ಮಾರ್ಗದರ್ಶನ ನೀಡುವುದೇ ಪರಂಪರಾದಿನ ಆಚರಣೆಯ ಉದ್ದೇಶವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ಅಳದಂಗಡಿ ಅಜಿಲ ಸೀಮೆಯ ಅರಸರಾದ ಡಾ. ಪದ್ಮಪ್ರಸಾದ ಅಜಿಲ ಮಾತನಾಡಿ, ಶಿಕ್ಷಣದೊಂದಿಗೆ ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು. ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ರ್ಯ ಎಂಬ ತ್ರೈರತ್ನ ಧರ್ಮಗಳ ಪಾಲನೆಯಿಂದ ಜೀವನ ಪಾವನವಾಗುತ್ತದೆ. ವಿದ್ಯಾರ್ಥಿಗಳು ಪಾಠದ ಜೊತೆಗೆ ದಿನದ ಸ್ವಲ್ಪ ಸಮಯವನ್ನು ಕ್ರೀಡೆಗಳಿಗೂ ಮೀಸಲಿಡಬೇಕು ಎಂದು ಅವರು ಸಲಹೆ ನೀಡಿದರು.

ಆಡಳಿತ ಮಂಡಳಿ ಕಾರ್ಯದರ್ಶಿ ಅಭಿರಾಮ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ ಸ್ವಾಗತಿಸಿದರು. ದರ್ಶನ ರಾವ್ ಧನ್ಯವಾದವಿತ್ತರು. ವಿಕಾಸ್ ಕಾರ್ಯಕ್ರಮ ನಿರ್ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು