ಮಂಗಳೂರು: ನಿವಿಯಸ್ ಮಂಗಳೂರು ಮ್ಯಾರಥಾನ್ ಇದರ ಪದಕಗಳು ಮತ್ತು ಟಿ- ಶರ್ಟ್ ಬಿಡುಗಡೆ ಸಮಾರಂಭ ಅ.27 ಗುರುವಾರ ಮಂಗಳೂರಿನಲ್ಲಿ ನಡೆಯಿತು.
ಮಂಗಳೂರು ರನ್ನರ್ ಕ್ಲಬ್ ಮತ್ತು ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ನವೆಂಬರ್ 6 ರಂದು ಮಂಗಳೂರಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಪದಕಗಳು ಹಾಗೂ ಟೀ ಶರ್ಟ್ ಗಳನ್ನು ಕೆನರಾ ಪ್ರೌಢಶಾಲೆಯ ಸುಧೀಂದ್ರ ಸಭಾಂಗಣದಲ್ಲಿ ಸಂಸದರಾದ ನಳಿನ್ ಕುಮಾರ್, ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಗಣ್ಯರು ಅನಾವರಣಗೊಳಿಸಿದರು.
ಜನರ ಆರೋಗ್ಯದ ದೃಷ್ಟಿಯಿಂದ ಜಾಗೃತಿ ಮೂಡಿಸುವ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಮ್ಯಾರಥಾನ್ ಯಶಸ್ವಿಯಾಗುವುದು ಖಂಡಿತ ಎಂದು ಅತಿಥಿಗಳು ಶುಭ ಹಾರೈಸಿದರು.
ಕೆಐಓಸಿಎಲ್ ನ ಮುರುಗೇಶ್, ನಿವಿಯಸ್ ಮಂಗಳೂರು ಮ್ಯಾರಥಾನ್ ರೇಸ್ ಡೈರೆಕ್ಟರ್ ಅಭಿಲಾಷ್ ಡೊಮಿನಿಕ್, ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಕಾರ್ಯದರ್ಶಿ ರಂಗನಾಥ ಭಟ್ ಹಾಗೂ ಗಣ್ಯರು ಉಪಸ್ಥಿತರಿದ್ದರು.