News Karnataka Kannada
Sunday, May 19 2024
ಮಂಗಳೂರು

ಮಂಗಳೂರು: ‘ರಾಜ್ಯ ಮಟ್ಟದ ಸಂದೇಶ ಪ್ರಶಸ್ತಿ 2023’ ಪ್ರಕಟ

Sandesha Awards 2023
Photo Credit : News Kannada

ಮಂಗಳೂರು: ಸಂದೇಶ ಪ್ರತಿಷ್ಠಾನದ ಕುರಿತು ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ಮಂಗಳೂರು 1989 ರಲ್ಲಿ ಪ್ರಾರಂಭವಾಯಿತು ಮತ್ತು 1991 ರಲ್ಲಿ ದತ್ತಿ ಸಂಸ್ಥೆಯಾಗಿ ನೋಂದಾಯಿಸಲ್ಪಟ್ಟಿದೆ. ಇದು ಮೌಲ್ಯಾಧಾರಿತ ಸಮಾಜವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಮತ್ತು ಕಲೆ, ಸಂಸ್ಕೃತಿ, ಶಿಕ್ಷಣವನ್ನು ಪ್ರೋತ್ಸಾಹಿಸುವ ಮತ್ತು ಬೆಂಬಲಿಸುವ ಮೂಲಕ ಸಾಮರಸ್ಯವನ್ನು ಬೆಳೆಸಲು ಪ್ರಯತ್ನಿಸುತ್ತದೆ. ಜಾನಪದ ಸಂಬಂಧಿತ ಚಟುವಟಿಕೆಗಳು, ಸಂಗೀತ, ನೃತ್ಯ, ಕಲೆ ಮತ್ತು ಚಿತ್ರಕಲೆಯಲ್ಲಿ ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಶಿಕ್ಷಣ ಸಂಸ್ಥೆಯಾಗಿದೆ. ಇದು ಪತ್ರಿಕೋದ್ಯಮ, ಮಾಧ್ಯಮ ಶಿಕ್ಷಣ, ಸಾರ್ವಜನಿಕ ಭಾಷಣ ಮತ್ತು ಇತರ ರೀತಿಯ ಕೋರ್ಸ್‌ಗಳನ್ನು ಸಹ ನಡೆಸುತ್ತದೆ. ನಾಟಕ, ಕವನ, ಮಾಧ್ಯಮ ಮತ್ತು ಇತರ ಸಂಬಂಧಿತ ವಿಷಯಗಳ ಕುರಿತು ಕಾರ್ಯಾಗಾರಗಳನ್ನು ಆಯೋಜಿಸುತ್ತದೆ. ಇದು ಎಲ್ಲಾ ವರ್ಗದ ಜನರನ್ನು ಒಟ್ಟುಗೂಡಿಸುತ್ತದೆ.

ಸಂದೇಶ ಪ್ರಶಸ್ತಿ: ‘ಸಂದೇಶ ಪ್ರಶಸ್ತಿ’ ಕಾರ್ಯಕ್ರಮವು ಸಂದೇಶ ಪ್ರತಿಷ್ಠಾನದ ಪ್ರಮುಖ ವಾರ್ಷಿಕ ವೈಶಿಷ್ಟ್ಯವಾಗಿದೆ. ಸಾಹಿತ್ಯ, ಪತ್ರಿಕೋದ್ಯಮ, ಕಲೆ, ಶಿಕ್ಷಣ, ಸಂಗೀತ, ಮಾಧ್ಯಮ ಮತ್ತು ಸಮಾಜ ಸೇವೆ ಇತ್ಯಾದಿಗಳ ಮೂಲಕ ವಿವಿಧ ವ್ಯಕ್ತಿಗಳು ನೀಡಿದ ಮಹೋನ್ನತ ಮತ್ತು ಮೌಲ್ಯಾಧಾರಿತ ಕೊಡುಗೆಗಳನ್ನು ಪ್ರಶಂಸಿಸುವುದು ಮತ್ತು ಗುರುತಿಸುವುದು ಉದ್ದೇಶವಾಗಿದೆ.

ಸಂದೇಶ ಪ್ರಶಸ್ತಿಗಳು 2023: ಈ ವರ್ಷದ ಪ್ರಶಸ್ತಿ ಕಾರ್ಯಕ್ರಮವು ಮಂಗಳವಾರ, ಫೆಬ್ರವರಿ 7, 2023 ರಂದು ಸಂಜೆ 5.30 ಕ್ಕೆ ಸಂದೇಶ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಸಂದೇಶ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ| ವಂ| ಹೆನ್ರಿ ಡಿ’ಸೋಜ ಇವರು, ಮೂಡಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಎಮ್ ಮೋಹನ್ ಆಳ್ವ, ಮುಖ್ಯ ಅತಿಥಿಗಳಾಗಿರುತ್ತಾರೆ. ಇತರ ಅತಿಥಿಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ| ವಂ| ಪೀಟರ್ ಪಾವ್ಲ್ ಸಲ್ಡಾನ್ಹ, ಉಡುಪಿ ಧರ್ಮಾಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ| ವಂ| ಜೆರಾಲ್ಡ್ ಐಸಾಕ್ ಲೋಬೊ, ಸಂದೇಶ ಪ್ರತಿಷ್ಠಾನದ ನಿರ್ದೇಶಕರಾದ ವಂ| ಫಾ| ಸುದೀಪ್ ಪೌಲ್, ಸಂದೇಶ ಪ್ರತಿಷ್ಠಾನದ ವಿಶ್ವಸ್ಥರಾದ ಶ್ರೀ ರೊಯ್ ಕ್ಯಾಸ್ತಲಿನೊ ಹಾಗೂ ವಂ| ಫಾ| ಐವನ್ ಪಿಂಟೊ, ಸಂದೇಶ ಪ್ರಶಸ್ತಿ ಅಯ್ಕೆ ಸಮಿತಿಯ ಅಧ್ಯಕ್ಷರಾದ ಡಾ| ವಲೇರಿಯನ್ ರೋಡ್ರಿಗಸ್ ಇವರುಗಳು ಭಾಗವಹಿಸಲಿದ್ದಾರೆ.

ಸಂದೇಶ ಪ್ರಶಸ್ತಿಗಳು 2023ರ ಪುರಸ್ಕೃತರು
1. ಸಂದೇಶ ಸಾಹಿತ್ಯ ಪ್ರಶಸ್ತಿ – ಕನ್ನಡ – ರಾಘವೇಂದ್ರ ಪಾಟಿಲ್
2. ಸಂದೇಶ ಸಾಹಿತ್ಯ ಪ್ರಶಸ್ತಿ – ಕೊಂಕಣಿ – ಆಂಡ್ರ್ಯೂ ಎಲ್ ಡಿಕುನ್ಹಾ
3. ಸಂದೇಶ ಸಾಹಿತ್ಯ ಪ್ರಶಸ್ತಿ – ತುಳು – ಚಿನ್ನಪ್ಪ ಗೌಡ
4. ಸಂದೇಶ ಮಾಧ್ಯಮ ಪಶಸ್ತಿ – ಪತ್ರಿಕೋದ್ಯಮ – ಶಿವಾಜಿ ಗಣೇಶನ್
5. ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ – ಜೋಯ್ಸ್ ಒಝಾರಿಯೋ
6. ಸಂದೇಶ ಕಲಾ ಪ್ರಶಸ್ತಿ – ಡಾ. ಎಮ್ ಎಸ್ ಮೂರ್ತಿ
7. ಸಂದೇಶ ಶಿಕ್ಷಣ ಪ್ರಶಸ್ತಿ – ಕೋಟಿ ಗಾನಹಳ್ಳಿ ರಾಮಯ್ಯ
8. ಸಂದೇಶ ವಿಶೇಷ ಪ್ರಶಸ್ತಿ – ಪ್ರೇರಣಾ ರಿಸೋರ್ಸ್ ಸೆಂಟರ್
9. ಸಂದೇಶ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ – ಸಬೀಹಾ ಭೂಮಿಗೌಡ

ಪ್ರಶಸ್ತಿ ಪುರಸ್ಕೃತರ ಬಗ್ಗೆ ಸಂಕ್ಷಿಪ್ತ ಟಿಪ್ಪಣಿ :

ರಾಘವೇಂದ್ರ ಪಾಟಿಲ್ : ಬೆಳಗಾವಿ ಜಿಲ್ಲೆಯ ಬೆಟಗೇರಿಯಲ್ಲಿ ೧೯೫೧ರಲ್ಲಿ ಜನಿಸಿದ ರಾಘವೇಂದ್ರ ಪಾಟೀಲರು ವೃತ್ತಿಯಲ್ಲಿ ಅಧ್ಯಾಪಕರು, ಪ್ರಾಚಾರ್ಯರು. ಅವರ ಪ್ರವೃತ್ತಿಯ ನೆಲೆ ಅಗಾಧವಾದುದು. ಸಣ್ಣ ಕತೆಗಳು ಅವರ ಆಡುಂಬೊಲ. ಕಾದಂಬರಿಗಳು ಅವರ ಕೃಷಿ ಕ್ಷೇತ್ರ. ಒಡಪುಗಳು, ಪ್ರತಿಮೆಗಳು, ದೇಸಗತಿ, ಮಾಯಿಯಮುಖಗಳು, ಎಷ್ಟು ಕಾಡುತಾವ ಕಬ್ಬಕ್ಕೀ ಮೊದಲಾದ ಸಣ್ಣ ಕಥಾ ಸಂಕಲನಗಳು. ಬಾಳವ್ವನ ಕನಸುಗಳು, ತೇರು, ಅಮೃತವಾಹಿನಿ, ಗೈರಸಮಜೂತಿ ಮೊದಲಾದ ಕಾದಂಬರಿಗಳು, ವಾಗ್ವಾದ, ಆನಂದ ಕಂದ, ಮಧ್ಯಸ್ಥ ಮೊದಲಾದ ವಿಮರ್ಶಾ ಸಂಕಲನಗಳು. ಅಜ್ಞಾತ ಮುಂಬೈ ಅವರ ಪ್ರವಾಸ ಕಥನ. ಹತ್ತಾರು ಸಂಪಾದಿತ ಕೃತಿಗಳು. ಅವರು ಬಳಸುವ ಗಂಡು ಭಾಷೆ, ಗ್ರಾಮ್ಯ ಭಾಷೆ –ಎಲ್ಲವೂ ಸುಂದರ. ಅವರ ಹೆಚ್ಚಿನ ಕೃತಿಗಳು ಒಂದಲ್ಲಾ ಒಂದು ಬಗೆಯ ಪುರಸ್ಕಾರ, ಪ್ರಶಸ್ತಿಗೆ ಭಾಜನವಾಗಿದೆಎಂಬುದು ಅವರ ಸಾಹಿತ್ಯ ಕೃಷಿಯ ಗಟ್ಟಿ ತನಕ್ಕೆ ಸಾಕ್ಷಿಯಾಗಿದೆ. ಅವುಗಳಲ್ಲಿ ಅತಿ ಹೆಚ್ಚು ಪ್ರಶಸ್ತಿಗೆ ಭಾಜನವಾದದ್ದು ಅವರ ಮಾಯಿಯ ಮುಖಗಳು ಕಥಾ ಸಂಕಲನ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಚದುರಂಗ ಪ್ರಶಸ್ತಿ, ಡಾ.ಬಸು ಪಟ್ಟೇದ್‌ ಪ್ರಶಸ್ತಿ, ವಿಶ್ವನಾಥ ವಾರಂಬಳ್ಳಿ ಪ್ರಶಸ್ತಿ –ಮುಂತಾದ ಹಲವು ಪ್ರಶಸ್ತಿಗಳು. ಅಂತೆಯೇ ಅವರ ದೇಸಗತಿ ಕಥಾ ಸಂಕಲನ ಕೂಡ. ಅವುಗಳಿಗೆಲ್ಲ ಕಲಶವಿಟ್ಟಂತೆ ರಾಘವೇಂದ್ರ ಪಾಟೀಲರ ʻತೇರುʼ ಕಾದಂಬರಿಗೆ ೨೦೦೩ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅತ್ಯುತ್ತಮ ಕಾದಂಬರಿ ಪ್ರಶಸ್ತಿಯೂ ೨೦೦೫ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಅತ್ಯುತ್ತಮ ಕನ್ನಡ ಕಾದಂಬರಿ ಪ್ರಶಸ್ತಿಯೂ ಸಂದಿರುತ್ತದೆ. ಮೈಸೂರು ಹಾಗೂ ಧಾರವಾಡದ ವಿಶ್ವವಿದ್ಯಾನಿಲಯಗಳಲ್ಲಿ ʻತೇರುʼ ಪಠ್ಯಪುಸ್ತಕವಾಗಿಯೂ ಯುವಜನತೆಯ ಗಮನಸೆಳೆದಿತ್ತು. ʻಸಾಹಿತ್ಯ ಸಂವಾದʼ ಎಂಬ ತ್ರೈಮಾಸಿಕ ಪತ್ರಿಕೆಯನ್ನೂ ʻಸಮಾಹಿತʼ ಎಂಬ ದ್ವೈಮಾಸಿಕ ಪತ್ರಿಕೆಯನ್ನೂ ಶ್ರೀಯುತರು ಬಹುಕಾಲ ಸಂಪಾದಕರಾಗಿ ಮುನ್ನಡೆಸಿದ್ದರು. ಆ ಎರಡು ಪತ್ರಿಕೆಗಳೂ ಸಾಹಿತ್ಯ ಸಂವಾದವನ್ನು ಉಚ್ಛಸ್ತರದಲ್ಲಿ ನಡೆಸಿ ಮಾನ್ಯತೆ ಪಡೆದಿದೆ ಎಂಬುದು ವಿಶೇಷ. ಅವರು ಯಾವುದೇ ಪ್ರವೃತ್ತಿಯನ್ನು ಕೈಗೆತ್ತಿಕೊಂಡರೂ ಅದಕ್ಕೊಂದು ಸಾಹಿತ್ಯ ಸಿಂಚನವಿರುತ್ತದೆ. ಬೆಳಗಾವಿಯಲ್ಲಿರುವ ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷತೆ, ಧಾರವಾಡದಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಂಭ್ರಮಸಮಿತಿಯ ಅಧ್ಯಕ್ಷತೆ, ಮಲ್ಲಾಡಿಯ ಅನಾಥ ಸೇವಾಶ್ರಮದ ವಿಶ್ವಸ್ಥರು, ಧಾರವಾಡದ ಗಿರಡ್ಡಿ ಗೋವಿಂದರಾಜ ಫೌಂಡೇಶನ್ನಿನ ವಿಶ್ವಸ್ಥರು, ಆನಂದ ಕಂದ ಗ್ರಂಥಮಾಲೆಯ ಸ್ಥಾಪಕ ಸಂಪಾದಕರು- ಹೀಗೆ ಹತ್ತಾರು ಸಂಘ ಸಂಸ್ಥೆಗಳಲ್ಲಿ ಸಾಹಿತ್ಯ ಸೇವೆ ಗೈದ, ಗೈಯುತ್ತಿರುವ ಪ್ರಮುಖ ವ್ಯಕ್ತಿತ್ವ ಪ್ರೊ. ರಾಘವೇಂದ್ರ ಪಾಟೀಲ ಅವರದು.

ಆಂಡ್ರ್ಯೂ ಎಲ್ ಡಿಕುನ್ಹಾ : 40 ವರ್ಷಗಳಿಂದ ಕೊಂಕಣಿ ಸಾಹಿತ್ಯದಲ್ಲಿ ಸಕ್ರಿಯರಾಗಿರುವ ಆಂಡ್ರ್ಯೂ ಎಲ್ ಡಿಕುನ್ಹಾ ಅವರು ಸೃಜನಶೀಲ ಸಮಕಾಲೀನ ಕೊಂಕಣಿ ಕವಿಯಾಗಿ ಖ್ಯಾತರಾಗಿದ್ದಾರೆ. ಇವರ 600 ಕ್ಕೂ ಹೆಚ್ಚಿನ ಕವಿತೆಗಳು, ಮೂರು ಕವನ ಸಂಕಲನಗಳು, 30 ಸಣ್ಣ ಕತೆಗಳು, 50 ಲೇಖನಗಳು, ಮಕ್ಕಳಿಗಾಗಿ ಮತ್ತು ಕವನಪ್ರಿಯರಿಗಾಗಿ ಅಂಕಣ ಬರಹಗಳು, ಸಮಕಾಲೀನ ಸಾಮಾಜಿಕ ವಿಚಾರಗಳ ಕುರಿತು ಕೊಂಕಣಿಯ ವಿವಿಧ ನಿಯತಕಾಲಿಕಗಳಲ್ಲಿ ಹಾಗೂ ಅಂತರ್ಜಾಲ ತಾಣಗಳಲ್ಲಿ ಪ್ರಕಟಗೊಂಡಿವೆ. ಹಲವಾರು ಕೊಂಕಣಿ ಸಾಹಿತ್ಯ ಸ್ಪರ್ಧೆಗಳ ತೀರ್ಪುಗಾರರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇವರ ಕವನ ಸಂಕಲನಗಳಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುಸ್ತಕ ಪುರಸ್ಕಾರ, ಅಖಿಲ ಭಾರತ ಕೊಂಕಣಿ ಲೇಖಕರ ಸಂಘಟನೆಯ ಪ್ರಶಸ್ತಿ, ವಿಮಲಾ ವಿ ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ, ಡಾ.ಟಿಎಂಎ ಪೈ ಕೊಂಕಣಿ ಸಾಹಿತ್ಯ ಪುರಸ್ಕಾರಗಳು ಲಭಿಸಿವೆ.

ಚಿನ್ನಪ್ಪ ಗೌಡ : ಡಾ. ಕೆ. ಚಿನ್ನಪ್ಪ ಗೌಡರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಕೂಡೂರಿನಲ್ಲಿ ಜನಿಸಿದರು (1955). ವಿಟ್ಲದಲ್ಲಿ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಶಿಕ್ಷಣ, ಮದರಾಸು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ(1978) ಮಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡರು (1988). ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ವೃತ್ತಿಜೀವನ ಆರಂಭಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ 28 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಡಾಕ್ಟರ್ ಗೌಡರು ಅದೇ ವಿವಿಯಲ್ಲಿ ಕುಲ ಸಚಿವರಾಗಿ (2009- 2012) ಕರ್ನಾಟಕ ಜಾನಪದ ವಿವಿಯ ಕುಲಪತಿಯಾಗಿ (2015-2017) ಕಾರ್ಯನಿರ್ವಹಿಸಿದ್ದಾರೆ. ಮಂಗಳೂರು ವಿವಿಯ ಪ್ರಸಾರಾಂಗ, ವಿದ್ಯಾರ್ಥಿ ಕ್ಷೇಮ ಪಾಲನ ನಿರ್ದೇಶನಾಲಯ ಶ್ರೀ ಡಿ.ಎಂ. ತುಳುಪೀಠ, ಕನಕದಾಸ ಅಧ್ಯಯನ ಪೀಠ ಯಕ್ಷಗಾನ ಅಧ್ಯಯನ ಕೇಂದ್ರ ಇವುಗಳ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕನ್ನಡ ಮತ್ತು ಇಂಗ್ಲೀಷ್ ನಲ್ಲಿ 17 ಪುಸ್ತಕಗಳು ಮತ್ತು 75ಕ್ಕಿಂತ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಕನ್ನಡ ಮತ್ತು ತುಳು ಸಾಹಿತ್ಯ ಸಂಶೋಧನೆ ಯಕ್ಷಗಾನ ಅಭಿನಂದನಾ ಸಂಪುಟಗಳು ಪಠ್ಯಪುಸ್ತಕಗಳು ಪ್ರಚಾರೋಪನ್ಯಾಸ ಮಾಲಿಕೆ ಸೇರಿದಂತೆ 75 ಕೃತಿಗಳನ್ನು ಸಂಪಾದಿಸಿದ್ದಾರೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಹಲವು ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ. ಫಿನ್ಲೆಂಡ್ನ ತುರ್ಕು ವಿಶ್ವವಿದ್ಯಾಲಯ, ಜಪಾನಿನ ವಸೇದ ವಿಶ್ವವಿದ್ಯಾಲಯ, ಜರ್ಮನಿಯ ಟ್ಯೂಬಿಂಗೆನ್ ವಿಶ್ವವಿದ್ಯಾಲಯ ಮತ್ತು ಜೂಲಿಯಸ್ ಮ್ಯಾಕ್ಸ್ ಮಿಲಿಯನ್ ವಿಶ್ವವಿದ್ಯಾಲಯ, ವೂತ್ಸ್ ಬುರ್ಗ್ ಇವುಗಳಲ್ಲಿ ಶೈಕ್ಷಣಿಕ ವಿನಿಮಯ ಯೋಜನೆ DAAD ಫೆಲೊ ಮತ್ತು ಹಿರಿಯ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಶಿವಾಜಿ ಗಣೇಶನ್ : ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ೧೯೫೪ರಲ್ಲಿ ಜನಿಸಿದ ಶಿವಾಜಿ ಗಣೇಶನ್‌ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಶಿಕ್ಷಣ ಪಡೆದವರು. ವಿದ್ಯಾರ್ಥಿದೆಸೆಯಲ್ಲೇ ಮೈಸೂರಿನ ಆಂದೋಲನ, ಪಂಚಮ ಮೊದಲಾದ ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದು, ೧೯೭೮ರಲ್ಲಿ ಪ್ರಜಾವಾಣಿ ಹಾಗೂ ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯ ಉಪ ಸಂಪಾದಕ ಹಾಗೂ ವರದಿಗಾರರಾಗಿ ಸೇರಿಕೊಂಡರು. ಹುಬ್ಬಳ್ಳಿ, ಧಾರವಾಡ, ತುಮಕೂರು, ನವ ದೆಹಲಿ ಮೊದಲಾದೆಡೆ ವರದಿಗಾರರಾಗಿ ಸೇವೆಗೈದ ಶಿವಾಜಿ ಗಣೇಶನ್‌ ಅವರು ೧೯೯೦ರಿಂದ ಹತ್ತು ವರ್ಷಗಳ ಕಾಲ ಪ್ರಜಾವಾಣಿಯ ಬೆಂಗಳೂರಿನ ಪ್ರಧಾನ ಕಛೇರಿಯಲ್ಲಿ ಹಿರಿಯ ವರದಿಗಾರರಾಗಿ ದುಡಿಮೆಗೈದು ಅಲ್ಲೇ ನಿವೃತ್ತರಾದರು. ನಿವೃತ್ತಿಯ ಬಳಿಕ ಕಳೆದ ಹತ್ತು ವರ್ಷಗಳಿಂದ ತುಮಕೂರಿನಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸಮುದಾಯ ಬಾನುಲಿ ಕೇಂದ್ರ ʻರೇಡಿಯೋ ಸಿದ್ಧಾರ್ಥ ೯೦.೮ ʼಕೇಂದ್ರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ೧೯೯೪ರಿಂದ ದೆಹಲಿಯಲ್ಲಿ ವರದಿಗಾರರಾಗಿದ್ದ ಆರುವರ್ಷಗಳಲ್ಲಿ ಪಿ.ವಿ. ನರಸಿಂಹರಾವ್‌, ಹೆಚ್.ಡಿ. ದೇವೇ ಗೌಡ, ಅಟಲ್‌ ಬಿಹಾರಿ ವಾಜಪೇಯಿ ಮೊದಲಾದ ರಾಜಕೀಯ ಮುತ್ಸದ್ಧಿಗಳ ಆಡಳಿತ ವೈಖರಿಯನ್ನು ಹತ್ತಿರದಿಂದ ಕಂಡುಂಡು ವರದಿಗೈದಿದ್ದಾರೆ. ಆ ಕಾಲ ಘಟ್ಟದಲ್ಲಿ ಅವರು ʻದೆಹಲಿ ದಿನಚರಿʼ ಎಂಬ ಅಂಕಣವನ್ನೂ ಬರೆಯುತ್ತಿದ್ದರು. ಪ್ರಜಾವಾಣಿ ಪತ್ರಿಕೆಯಲ್ಲಿ ರಾಜಕೀಯ ವಿಶ್ಲೇಷಣೆಗಳು, ಪ್ರಸ್ತುತ ವಿದ್ಯಮಾನಗಳು, ಸಾಮಾಜಿಕ ಸಮಸ್ಯೆಗಳು ಇತ್ಯಾದಿಗಳ ಕುರಿತ ವರದಿಯ ಜೊತೆಗೆ ಲೇಖನಗಳನ್ನೂ ಅಂಕಣಗಳನ್ನೂ ಬರೆದು ಶ್ರೀಯುತರು ಪ್ರಸಿದ್ಧರಾಗಿದ್ದಾರೆ. ಅವರು ಪ್ರಜಾವಾಣಿಯಲ್ಲಿ ಬರೆಯುತ್ತಿದ್ದ ಲೇಖನಗಳು ಎಸ್.‌ ಗಣೇಶನ್‌ ಎಂಬ ಹೆಸರಿನಲ್ಲಿ ಪ್ರಕಟಗೊಳ್ಳುತ್ತಿದ್ದವು.

ಜೋಯ್ಸ್ ಒಝಾರಿಯೋ: ಕೊಂಕಣಿಯ ಮಧುರ ಕಂಠದ ಗಾಯಕಿಯಾಗಿ ಖ್ಯಾತರಾಗಿರುವ ಜೋಯ್ಸ್ ಒಝಾರಿಯೋ ಅವರು ಸುಮಾರು 60 ವರ್ಷಗಳಿಂದ ಸುಗಮ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. 1986 ರಲ್ಲಿ ಪ್ರಾರಂಭಗೊಂಡ ಮಾಂಡ್ ಸೊಭಾಣ್ ಸಂಸ್ಥೆಯ ಪ್ರಧಾನ ಗಾಯಕಿಯಾಗಿ ಸಾರ್ವಜನಿಕ ರಸಮಂಜರಿ ಕಾರ್ಯಕ್ರಮಗಳಲ್ಲಿ ಹಾಗೂ ಧ್ವನಿಮುದ್ರಣಗಳಲ್ಲಿ ನಿರಂತರವಾಗಿ ಹಾಡುತ್ತಿದ್ದಾರೆ. ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಜೋಯ್ಸ್ ಒಝೇರಿಯೋ ಅವರು ನೀಡಿರುವ ಅನುಪಮ ಕೊಡುಗೆಯನ್ನು ಪರಿಗಣಿಸಿ 3 ನೇ ಗ್ಲೋಬಲ್ ಮ್ಯೂಸಿಕ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕೊಂಕ್ಣಿ ಆಬೊಲೆಂ ಬಿರುದನ್ನಿತ್ತು ಗೌರವಿಸಲಾಗಿದೆ. ಎಪ್ಪತ್ತರ ವಯಸ್ಸಿನಲ್ಲಿಯೂ ತಮ್ಮ ಕಂಠ ಮಾಧುರ್ಯವನ್ನು ಉಳಿಸಿಕೊಂಡಿರುವ ಜೋಯ್ಸ್ ಒಝೇರಿಯೋ ಅವರು ಈಗಲೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮತ್ತು ಧ್ವನಿಮುದ್ರಣಗಳಲ್ಲಿ ಸಕ್ರಿಯರಾಗಿದ್ದಾರೆ.

ಡಾ. ಎಮ್ ಎಸ್ ಮೂರ್ತಿ : ಡಾ. ಎಂ. ಎಸ್‌. ಮೂರ್ತಿಯವರು ೧೯೬೦ರಲ್ಲಿ ಬೆಂಗಳೂರಲ್ಲಿ ಜನಿಸಿದರು. ನಾಲ್ಕುದಶಕಗಳಿಂದ ಚಿತ್ರಕಲೆಯನ್ನು ಬದುಕಿನ ಮಾರ್ಗವಾಗಿ ಕಂಡುಕೊಂಡ ಡಾ. ಮೂರ್ತಿಯವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳೆದುನಿಂತ ಕಲಾವಿದ. ತಮ್ಮಬದುಕಿನ ದೊಡ್ಡ ಶಕ್ತಿ ಎಂದು ಅವರು ನಂಬಿದ್ದ ಸರಳತೆ, ಸೌಜನ್ಯ, ಸಂಯಮ ಹಾಗೂ ಪ್ರೀತಿಯ ಮೊತ್ತವನ್ನು ಸೆರೆಹಿಡಿದದ್ದು ಬುದ್ಧನ ಬೆಳಕು, ಆತನ ನಿಶ್ಶಬ್ದ ಹಾಗೂ ಆತನ ಭಿಕ್ಷಾಪಾತ್ರೆಗಳ ಮೂಲಕ. ಆ ಅಸಮ ಸಾಹಸವನ್ನು ಡಾಮೂರ್ತಿಯವರು ಬಹುಕಾಲ ನಡೆಸಿದ್ದರು. ಅವರʻಬುದ್ಧನೆಂಬ ಬೆಳಕು ʼಕಲಾಕೃತಿಗೆ ಇರಾನ್‌ ದೇಶದ ಅಕಾಡಮಿ ಆಫ್ ಆರ್ಟ್ ಸಂಸ್ಥೆಯು ʻಅಂತಾರಾಷ್ಟ್ರೀಯ ಬೈನಾಲೆʼ ಪ್ರಶಸ್ತಿನೀಡಿತ್ತು. ʻಮಕ್ಕಳ ಮನಸ್ಸಿನ ಚಿತ್ರಗಳುʼ ಎಂಬ ಅವರ ಮಹಾಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾಲಯವು ಡಾಕ್ಟರೇಟ್‌ ನೀಡಿಗೌರವಿಸಿತು. ಚಿತ್ರಗಳ ಮೂಲಕವೇ ʻದೃಶ್ಯʼ ಎಂಬ ಕಲಾಲೋಕದ ಮೊದಲ ಕಾದಂಬರಿಯೊಂದನ್ನು ಅವರು ರಚಿಸಿದ್ದು, ಅದು ಕರ್ನಾಟಕ ಪುಸ್ತಕ ಪ್ರಾಧಿಕಾರದ ಪ್ರಶಸ್ತಿಗೂ ಭಾಜನವಾಗಿದೆ. ಇವರ ಕಲಾಕೃತಿಗಳು ದೆಹಲಿಯ ಪ್ರತಿಷ್ಠಿತ ʼರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿʼ, ಕೊಲ್ಕೊತ್ತಾದ ʼಆರ್ಟ್‌ ಎಕರ್‌ʼ ಸಂಗ್ರಹಾಲಯ ಹಾಗೂ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಗ್ರಹಾಲಯಗಳ ಶಾಶ್ವತ ಸಂಗ್ರಹದಲ್ಲಿ ಸೇರಿಕೊಂಡಿವೆ. ಬರಹಗಾರರಾಗಿಯೂ ಡಾ. ಎಂ. ಎಸ್ ಮೂರ್ತಿಯವರು ಸ್ಥಾಪನೆಯಾಗಿದ್ದಾರೆ. ಅವರ ʻಯಶೋಧರೆ ಮಲಗಿರಲಿಲ್ಲʼ ನಾಟಕವು ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ಬಾನುಲಿ ರಾಷ್ಟ್ರೀಯ ಪ್ರಶಸ್ತಿಗೂ ಭಾಜನವಾಗಿದೆ. ʻದೇಸಿನಗುʼ ಎಂಬ ಪ್ರಬಂಧ ಸಂಕಲನಕ್ಕೆ ಕರ್ನಾಟಕ ಸಾಹಿತ್ಯಅಕಾಡೆಮಿ ಪ್ರಶಸ್ತಿಲಭಿಸಿದೆ. ʻಬೌಲ್‌ʼಎಂಬ ಬುದ್ಧನ ನೆರಳಲ್ಲಿ ರಚಿಸಿದ ಕಾದಂಬರಿ ಇತ್ತೀಚೆಗಷ್ಟೆ ಬಿಡುಗಡೆ ಕಂಡಿದೆ. ಡಾ. ಎಂ.ಎಸ್.ಮೂರ್ತಿಯವರು ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ʻವರ್ಣ ಶಿಲ್ಪಿ ವೆಂಕಟಪ್ಪ ಪ್ರಶಸ್ತಿʼ, ʻಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿʼ, ʻಮೈಸೂರು ದಸರಾ ಕಲಾ ಪ್ರಶಸ್ತಿʼ ಮುಂತಾದ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ. ಅನೇಕ ಅಂತಾರಾಷ್ಟ್ರೀಯ ಚಿತ್ರಕಲಾ ಪ್ರದರ್ಶನಗಳನ್ನು, ನೂರಾರು ಕಲಾ ಶಿಬಿರಗಳನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ನಡೆಸಿಕೊಟ್ಟಿದ್ದಾರೆ.

ಕೋಟಿ ಗಾನಹಳ್ಳಿ ರಾಮಯ್ಯ: ಕೋಟಿಗನಹಳ್ಳಿ ರಾಮಯ್ಯ ಹಾಸನದ ಕೋಟಿಗನಹಳ್ಳಿಯಲ್ಲಿ 1955ರಲ್ಲಿ ಜನಿಸಿದರು. ಹಲವಾರು ಕ್ಷೇತ್ರಗಳಲ್ಲಿ ಅವರ ಸೇವೆಯು ಗಣನೀಯವಾದದ್ದು. ಆದರೆ ಇವತ್ತು ನಾವು ಆದಿಮ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಹಾಗೂ ಅದರ ಮುಖಾಂತರ ಮಕ್ಕಳ ನಾಟಕ ಶಾಲೆ ಚಲನಚಿತ್ರ ಶಿಕ್ಷಣ ಹಾಗೂ ಸಾಮಾಜಿಕ ಕಳವಳಿ ಹಾಗೂ ಅವುಗಳ ಅಡಿಪಾಯವಾದ ಅವರ ಶಿಕ್ಷಣ ದರ್ಶನವನ್ನು ಗುರುತಿಸಿ ಅವರನ್ನು ಸನ್ಮಾನಿಸುತ್ತೇವೆ. ನಮ್ಮ ಪ್ರಚಲಿತ ಶಿಕ್ಷಣ ಪದ್ಧತಿಯು ಮಕ್ಕಳನ್ನು ವಿಶೇಷವಾಗಿ ತಳ ಸಮುದಾಯ ಗಳಿಗೆ ಸೇರಿದವರನ್ನು ಅವರ ವಿಶಿಷ್ಟವಾದ ಸಾಂಸ್ಕೃತಿಕ ನೆಲೆಗಳಿಂದ ಮತ್ತು ಅದಕ್ಕೆ ಸಂಬಂಧಪಟ್ಟ ಸಂವೇದನೆಗಳಿಂದ ಬೇರ್ಪಡಿಸುತ್ತದೆ ಮತ್ತು ಅವರನ್ನು ಪ್ರಭಾವಿ ಶಕ್ತಿಗಳ ಕಟಪುತ್ತಳಿಯಾಗಿ ಮಾರ್ಪಾಡಿಸುತ್ತದೆ ಎಂದು ಅವರು ತೀಕ್ಷ್ಣವಾಗಿ ವಾದಿಸಿದ್ದಾರೆ ರಾಗಿ, ಬಿದಿರು ಮುಂತಾದ ಸಾಂಕೇತಿಕ ಸಂಪನ್ಮೂಲಗಳನ್ನು ಹಾಗೂ ಸ್ಮತಿಯನ್ನು ಬಳಸಿ ಚಿಗುರಿಸಿ ಕಳೆದ ಮೂರು ದಶಕಗಳಲ್ಲಿ ಮಕ್ಕಳ ಸಹಜ ಪ್ರವೃತ್ತಿಗೆ ಅನುಗುಣವಾದ ಹಾಗೂ ಜನಸಾಮಾನ್ಯರ ಬಾಳಿ ಬದುಕುವ ತಿಳುವಳಿಕೆಯನ್ನು ಪ್ರಚೋದಿಸಿ 12 ನಾಟಕಗಳನ್ನು ಅವರು ಪ್ರದರ್ಶಿಸಿದ್ದಾರೆ. ಬಯಲು ಮುಂತಾದ ನಾಟಕ ವೇದಿಕೆಗಳಿಗೆ ಅವರೊಂದು ಪ್ರೇರಣೆಯಾಗಿದ್ದಾರೆ. ಕಾಗೆ ಕಣ್ಣು, ಇರುವೆ ಬಾಲ, ನಾಯಿ ತಿಪ್ಪ, ರತ್ನ ಪಕ್ಷಿ, ಹಕ್ಕಿ ಹಾಡು, ಒಗ್ಗಟಿನ ರಾಣಿ ಇತ್ಯಾದಿ ಅವರ ಪ್ರಮುಖ ನಾಟಕಗಳು.

ಪ್ರೇರಣ ರಿಸೋರ್ಸ್ ಸೆಂಟರ್: ಬೆಂಗಳೂರಿನಲ್ಲಿ ನೆಲೆಸಿರುವ ಪ್ರೇರಣಾ ರಿಸೋರ್ಸ್‌ ಸೆಂಟರ್‌ ಬಹುಮುಖ್ಯವಾಗಿ ದೃಷ್ಟಿಹೀನ, ಅಂಗವಿಕಲ ಹಾಗೂ ಅನಾಥ ಹೆಣ್ಣು ಮಕ್ಕಳ ಬದುಕಿನ ಕರಾಳ ಮುಖವನ್ನರಿತು ಅವರಿಗೆ ಕೈಲಾದ ಸಾಂತ್ವನ ನೀಡುವುದಕ್ಕಾಗಿ ಹುಟ್ಟಿಕೊಂಡ ಸಂಸ್ಥೆ. ಎಂ. ಆರ್‌. ಪ್ರಶಾಂತ ೧೯೯೪ ರಲ್ಲಿ ಈ ಸಂಸ್ಥೆಯನ್ನು ಹನ್ನೆರಡು ಅಂಧ ಮಕ್ಕಳ ಹಾಸ್ಟೆಲ್‌ ಒಂದನ್ನು ರಚಿಸುವ ಮೂಲಕ ಸ್ಥಾಪಿಸಿದರು ಅವರು. ಅವರಿಗೆ ಮನೆಯನ್ನು ಸಂಭಾಳಿಸುವ ತರಬೇತಿ, ಮನೋವಿಕಾಸದ ತರಬೇತಿ, ನಗರ ಸಂಚಾರ ತರಬೇತಿ, ಗುಡಿ ಕೈಗಾರಿಕೆಯ ತರಬೇತಿ – ಈ ಎಲ್ಲವನ್ನು ಕಲಿಸತೊಡಗಿದರು. ಒಟ್ಟಾರೆಯಾಗಿ ಎಲ್ಲರಂತೆ ಬದುಕು ನಿಭಾಯಿಸುವಲ್ಲಿ ಬೇಕಾಗುವ ಆತ್ಮಸ್ಥೈರ್ಯ ಇತ್ಯಾದಿಗಳ ಅರಿವನ್ನು ಕೊಟ್ಟರು. ದುರಿತದ ಬದುಕನ್ನು ಸಂತಸ ಭರಿತವನ್ನಾಗಿಸಲು ದುಡಿಮೆಗೈದರು. ಪ್ರಶಾಂತ ಅವರ ದಣಿವಿರದ ದುಡಿಮೆಯನ್ನು ಕಂಡು ಭಾರತ ಸರ್ಕಾರವು ೨೦೦೧ರಲ್ಲಿ ಪ್ರಶಸ್ತಿಯಿತ್ತು ಗೌರವಿಸಿತು. ಕರ್ನಾಟಕ ಸರಕಾರವು ಪ್ರಶಾಂತ ಅವರನ್ನು ರಾಜ್ಯೋತ್ಸವ ಪ್ರಶಸ್ತಿಯಿತ್ತು ಗೌರವಿಸಿತು. ಕಿತ್ತೂರು ರಾಣಿಚೆನ್ನಮ್ಮ ಪ್ರಶಸ್ತಿಯೇ ಮೊದಲಾದ ಹಲವಾರು ಪ್ರಶಸ್ತಿಗಳು ಪ್ರೇರಣಾ ರಿಸೋರ್ಸ್‌ ಸೆಂಟರನ್ನು ಅರಸಿ ಬಂದವು. ಪ್ರಶಾಂತ ಅವರ ಪುತ್ರಿ ಮೇಘನಾ ಜೋಯಿಸ್‌ ಅವರು ತನ್ನ ವಿದೇಶೀ ಕಂಪೆನಿಯ ಹುದ್ದೆಯನ್ನು ತ್ಯಜಿಸಿ ಪೂರ್ಣಾವಧಿ ಪ್ರೇರಣಾದ ಕಾಯಕದಲ್ಲಿ ತೊಡಗಿದ್ದೊಂದು ಮಹತ್ವ ದಹೆಜ್ಜೆ. ಪ್ರಸ್ತುತ ಪ್ರೇರಣಾ ಸಂಸ್ಥೆಯು ತನ್ನದೇ ಆದ ಸ್ವತಂತ್ರ ಕಟ್ಟಡವನ್ನು ಹೊಂದಿಕೊಂಡಿದೆ. ಊಟ, ವಸತಿ ಎಲ್ಲವನ್ನೂ ಉಚಿತವಾಗಿ ಆಶ್ರಿತರಿಗೆ ಕೊಡುತ್ತಿದೆ. ಖಿನ್ನತೆ ನಿಭಾಯಿಸಲು ಇನ್ನೂರರಷ್ಟು ಅಂಧಮಕ್ಕಳಿಗೆ ಕೌನ್ಸಿಲಿಂಗ್‌ ವ್ಯವಸ್ಥೆಮಾಡಲಾಗಿದೆ. ಆರುನೂರ ಐವತ್ತು ಅಂಧಯುವತಿಯರಿಗೆ ಬೆಂಗಳೂರಿನ ವಿವಿಧ ಗಾರ್ಮೆಂಟ್‌ ಫ್ಯಾಕ್ಟರಿಗಳಲ್ಲಿ ಉದ್ಯೋಗ ಕೊಡಿಸಿರುವುದು ಸಣ್ಣ ಮಾತೇನಲ್ಲ. ಅಂಧ ಪುರುಷ, ಅಂಧ ಸ್ತ್ರೀಯರ ನಡುವೆ ಎಂಟು ವಿವಾಹಗಳನ್ನು ಪ್ರೇರಣಾ ಆಶ್ರಯದಲ್ಲಿ ನೆರವೇರಿಸಲಾಗಿದೆ. ಸೆಂಟರಿನ ಒಳಗಣ ಆಶ್ರಿತರ ಸಂಖ್ಯೆ ಇನ್ನೂರ ಇಪ್ಪತ್ತನ್ನು ದಾಟಿದೆ. ಅನೇಕ ಸ್ವಯಂ ಸೇವಕರು ತಾವಾಗಿಬಂದು ಪ್ರೇರಣಾಕ್ಕಾಗಿ ಉಚಿತ ಸೇವೆಯನ್ನೂಆರ್ಥಿಕ ಸಹಾಯವನ್ನೂ ನೀಡುತ್ತಿದ್ದಾರೆ. ತಾಯಿಯ ಜವಾಬ್ದಾರಿಯನ್ನು ಸಮರ್ಥವಾಗಿ ಕೈಗೆತ್ತಿಕೊಂಡಿರುವ ಮೇಘನಾ ಜೋಯಿಸ್‌ ಅವರಿಗೆ ಕೇಂದ್ರ ಸರಕಾರ ೨೦೧೫ರಲ್ಲಿ ವಿಶೇಷ ಪ್ರಶಸ್ತಿಯಿತ್ತು ಗೌರವಿಸಿದೆ.

ಸಬೀಹಾ ಭೂಮಿಗೌಡ : ಡಾ. ಸಬೀಹಾ ಭೂಮಿಗೌಡ ಕನ್ನಡದ ಪ್ರಾಧ್ಯಾಪಕಿಯಾಗಿ, ಮಂಗಳೂರು ನಿಲಯದ ಶಿವರಾಮ ಕಾರಂತ ಅಧ್ಯಯನ ಪೀಠದ ಎಸ್ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥೆಯಾಗಿ, ಮಡಿಕೇರಿಯ ಚಿಕ್ಕ ಅಳುವಾರದ ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿಯಾಗಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ತನ್ನ ವೃತ್ತಿಯ ಶಿಖರವನ್ನು ತಲುಪಿದ ಡಾ. ಸಬೀಹ ಅವರಲ್ಲಿ ಇವೆಲ್ಲವನ್ನೂ ಸಮರ್ಥವಾಗಿ ನಿರ್ವಹಿಸಲು ನಿರ್ದಿಷ್ಟವಾದ ಯೋಚನೆ, ಯೋಜನೆ, ಅವುಗಳ ಅನುಷ್ಠಾನ ಶಿಸ್ತುಗಳೊಂದಿಗೆ, ದಕ್ಷತೆ, ಹೋರಾಟದ ಮನೋಭಾವಗಳು ಅವರನ್ನು ಶಿಕ್ಷಣ ತಜ್ಞೆಯನ್ನಾಗಿ ರೂಪಿಸಿದೆ. ಸಾಹಿತಿಯಾಗಿ ವಿಮರ್ಶಾಕಿಯಾಗಿ, ಸಂಶೋಧಕಿಯಾಗಿ, ಸಂಶೋಧನಾ ಮಾರ್ಗದರ್ಶಿಯಾಗಿ ವಿವಿಧ ನೆಲೆಗಳಲ್ಲಿ ತಾನು ಬೆಳೆಯುವುದರೊಂದಿಗೆ ಇತರರನ್ನು ಬೆಳೆಸಿದ ಗಮನಾರ್ಹವಾದುದು. ಕರಾವಳಿ ಲೇಖಕಿಯರ ವಾಚಕಿಯರ ಸಂಘ, ಜಿಲ್ಲಾ ಮಟ್ಟದ, ರಾಜ್ಯಮಟ್ಟದ ಕರಾವಳಿ ಲೇಖಕಿಯರ ವಾಚಕಿಯರ ಸಂಘ ದೌರ್ಜನ್ಯ ವಿರೋಧಿ ವೇದಿಕೆಗಳ ಹಿನ್ನೆಲೆಯಲ್ಲಿ ಅವರ ರಚನಾತ್ಮಕ ಯೋಜನೆಗಳು ಮಹಿಳೆಯರಿಗೆ ಮಾದರಿಯಾದದು. ಹೀಗೆ ತನ್ನ ಜ್ಞಾನವನ್ನು ಸಾಂಪ್ರದಾಯಿಕ ಶಿಕ್ಷಣದ ಚೌಕಟ್ಟಿನಿಂದ ವಿಸ್ತಾರವಾದ ಜನರಿಗೆ ಪಸರಿಸಿದ ಕೀರ್ತಿ ಡಾ. ಸಬೀಹ ಭೂಮಿ ಗೌಡರವರದ್ದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು