News Karnataka Kannada
Saturday, April 27 2024
ಮಂಗಳೂರು

ರಾಜ್ಯದ ಆರ್ಥಿಕ ಪರಿಸ್ಥಿತಿ ನಿಭಾಯಿಸುವಲ್ಲಿ ಸೋತು ಸುಣ್ಣವಾದ ಅಸಮರ್ಥ ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ಸೋತಿದ್ದಾರೆ ಮತ್ತು ಅದನ್ನು ಮರೆಮಾಚಲು ಕೇಂದ್ರ ಸರಕಾರವನ್ನು ದೂರುವ ನಾಟಕ ಆಡುತ್ತಿದ್ದಾರೆ.
Photo Credit : NewsKarnataka

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ಸೋತಿದ್ದಾರೆ ಮತ್ತು ಅದನ್ನು ಮರೆಮಾಚಲು ಕೇಂದ್ರ ಸರಕಾರವನ್ನು ದೂರುವ ನಾಟಕ ಆಡುತ್ತಿದ್ದಾರೆ.

ತನ್ನ ತಪ್ಪು ಮುಚ್ಚಿಕೊಳ್ಳಲು ಎನ್‌ಡಿಆರ್‌ಎಫ್ಗಾಗಿ ಆರ್ಟಿಕಲ್ 32ರ ಅಡಿಯಲ್ಲಿ ಸುಪ್ರೀಂ ಕೋರ್ಟಿಗೆ ಹೋಗುವ ನಾಟಕವನ್ನು ಅವರು ಆರಂಭಿಸಿದ್ದಾರೆ. ಚುನಾವಣಾ ನೀತಿಸಂಹಿತೆ ಬಂದ ಬಳಿಕ ಈ ಯತ್ನ ನಡೆದಿದೆ. ಇಲ್ಲಿವರೆಗೆ ಅವರು ನಿದ್ರೆ ಮಾಡುತ್ತಿದ್ದರೇ? ಇದು ಕೇಂದ್ರ ಸರಕಾರದ ಮೇಲೆ ಆರೋಪ ಮಾಡುವ ಅವರ ನಾಟಕದ ಮುಂದುವರಿದ ಭಾಗ ಇದಾಗಿದೆ.

ಈ ನಾಟಕದ ಮೂಲಕ ಜನರ ಗಮನ ಬೇರೆಡೆ ಸೆಳೆದು ಚುನಾವಣೆ ಮುಗಿಸಿಕೊಂಡು ಬಿಡಬೇಕೆಂಬ ಚಿಂತನೆಯನ್ನು ಮಾಡಿದ್ದರೆ ಅದು ಅವರ ಭ್ರಮೆಯಷ್ಟೇ. ರಾಜ್ಯದ ಜನತೆಗೆ ಕುಡಿಯುವ ನೀರು ಕೊಡಲು ಸಿದ್ದರಾಮಯ್ಯರಿಗೆ ಆಗುತ್ತಿಲ್ಲ. ಬರದಿಂದ ತತ್ತರಿಸಿರುವ ರಾಜ್ಯದ ಜನರಿಗೆ ಪರಿಹಾರ ನೀಡಲು ಆಗುತ್ತಿಲ್ಲ.

ಈ ಸರಕಾರ ಕಳೆದ ವರ್ಷದ ಬಜೆಟ್ ನಲ್ಲಿ ಮಾಡಿದ ಘೋಷಣೆಯ ಗುರಿಯನ್ನು ಯಾವುದೇ ಇಲಾಖೆಯಲ್ಲಿ 40% ರಷ್ಟು ಕೂಡಾ ತಲುಪಲು ಸಾಧ್ಯ ಆಗಲಿಲ್ಲ: ಕೃಷಿಕರಿಗೆ ಸಹಕಾರಿ ಬ್ಯಾಂಕ್ ನಲ್ಲಿ ಶೂನ್ಯ ಬಡ್ಡಿ ದರದಲ್ಲಿ 3ಲಕ್ಷ ದಿಂದ 5ಲಕ್ಷಕ್ಕೆ ಏರಿಕೆಯ ಅನುಷ್ಠಾನ ಮಾಡಲಿಲ್ಲ. ಹಾಲು ಉತ್ಪಾದಕರಿಗೆ ನೀಡಬೇಕಿದ್ದ 1200 ಕೋಟಿ ರೂ. ಹಾಲಿನ ಪ್ರೋತ್ಸಾಹಧನವನ್ನು ಇಲ್ಲಿನವರೆಗೆ ನೀಡಿಲ್ಲ. ರೈತರಿಗೆ ಅನ್ಯಾಯ ಮಾಡಿದ್ದಾರೆ.

ಪ್ರಧಾನಿಯವರು ಈ ರಾಜ್ಯ ದಿವಾಳಿಯಾಗಿದೆ ಎಂದಿದ್ದರು; ಅದನ್ನು ಇದೀಗ ಸ್ವತಃ ರಾಜ್ಯ ಸರಕಾರವೇ ಸಾಬೀತುಪಡಿಸಿದೆ. ಇಷ್ಟು ದೊಡ್ಡ ಜಲಕ್ಷಾಮ ಪರಿಹಾರಕ್ಕೆ ಈ ಸರಕಾರ ಕ್ರಮ ತೆಗೆದುಕೊಂಡಿಲ್ಲ. ಮನೆ ಮುಂದೆ ಗಿಡಗಳಿಗೆ ನೀರು ಹಾಕಬೇಡಿ, ಕಾರು ತೊಳೀಬೇಡಿ ಎನ್ನುವ ಸುತ್ತೋಲೆ ಇವರದು. ಇನ್ನು ಸ್ವಲ್ಪ ದಿನ ಕಳೆದರೆ ಇನ್ನೇನು ಮಾಡಬೇಡಿ ಎನ್ನುತ್ತಾರೋ ಗೊತ್ತಿಲ್ಲ.

ಸಿದ್ದರಾಮಯ್ಯನವರು ಆರ್ಥಿಕ ನಿರ್ವಹಣೆಯಲ್ಲಿ ಸೋತಿರುವುದು ಎದ್ದು ಕಾಣುತ್ತದೆ. ಮೊದಲ ಬಾರಿಗೆ ಕರ್ನಾಟಕವು ಜಿಡಿಪಿ ಬೆಳವಣಿಗೆಯಲ್ಲಿ ಭಾರತದ ಸರಾಸರಿಗಿಂತ ಕೆಳಮಟ್ಟಕ್ಕೆ ಕುಸಿದಿದೆ. ಯಾವಾಗಲೂ ಕೂಡ ದೇಶದ ಜಿಡಿಪಿಗಿಂತ ನಮ್ಮ ಜಿಎಸ್‌ಡಿಪಿ ಹೆಚ್ಚಿರುತ್ತಿತ್ತು. 21-22ರಲ್ಲಿ ದೇಶದ ಜಿಡಿಪಿ 9.1 ಇದ್ದಾಗ ಕರ್ನಾಟಕದ್ದು 9.8 ಶೇ ಇತ್ತು. 22-23ರಲ್ಲಿ ದೇಶದ ಜಿಡಿಪಿ 7.2 ಶೇ ಇದ್ದಾಗ ಕರ್ನಾಟಕದ್ದು ಶೇ 8.1 ಇತ್ತು, 23-24ರಲ್ಲಿ ಭಾರತದ ಜಿಡಿಪಿ 7.3 ಇದ್ದು, ಕರ್ನಾಟಕದ್ದು 6.6 ಶೇಕಡಾಕ್ಕೆ ಇಳಿದಿದೆ. ಇದಕ್ಕೆ ಕೇಂದ್ರ ಸರಕಾರದ ಮೇಲೆ ಆರೋಪ ಮಾಡಲು ಸಾಧ್ಯವೇ?

ಸಿದ್ದರಾಮಯ್ಯನವರು ರಾಜ್ಯದ ಮಧ್ಯಂತರ ಆರ್ಥಿಕ ಯೋಜನೆಯ ವರದಿಯಲ್ಲಿ ಸಮರ್ಪಕ ಅಂಕಿಅಂಶ ನೀಡುತ್ತಾರೆ. ಬೀದಿಗೆ ಬಂದು ಮಾತನಾಡುವಾಗ ಕೇಂದ್ರ ಸರಕಾರದ ವಿರುದ್ಧ ನಾಲಿಗೆ ಹರಿಬಿಡುತ್ತಾರೆ. ಈ ಯೋಜನೆಯ ಪುಸ್ತಿಕೆಯ ಕಂಡಿಕೆ 28ರಲ್ಲಿ 2021-22ಕ್ಕೆ ಹೋಲಿಸಿದರೆ 22-23ರಲ್ಲಿ ಕೇಂದ್ರ ಸರಕಾರದ ಒಟ್ಟು ತೆರಿಗೆ ಸ್ವೀಕೃತಿಯು ಶೇ 12.6ರಷ್ಟು ಹೆಚ್ಚಳವಾಗಿದೆ ಎಂದಿದ್ದಾರೆ. ಇದನ್ನು ಫೆಬ್ರವರಿ 2024ರಲ್ಲಿ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. 22-23ರಲ್ಲಿ ಕೇಂದ್ರ ಸರಕಾರದ ಪುರಸ್ಕೃತ

ಯೋಜನೆಗಳಿಗೆ ರಾಜ್ಯ ಸಂಚಿತ ನಿಧಿಗೆ ಕೇಂದ್ರ ಸರಕಾರದಿಂದ 16,579 ಕೋಟಿ ಸಹಾಯಧನ ಸ್ವೀಕೃತವಾಗಿದೆ. ಅಲ್ಲದೆ ಕೇಂದ್ರ ಪುರಸ್ಕೃತ ಯೋಜನೆಗಳಿಗೆ 6,739 ಕೋಟಿ ರೂ.ಗಳನ್ನು ಕೇಂದ್ರ ಸರಕಾರವು ಇಲಾಖೆಗಳ ಎಸ್‌ಎನ್‌ ಖಾತೆಗಳಿಗೆ ನೇರವಾಗಿ ಬಿಡುಗಡೆ ಮಾಡಿದೆ. ಕೇಂದ್ರ ಸರಕಾರವು ವಿವಿಧ ಬಂಡವಾಳ ಯೋಜನೆಗಳಿಗೆ 3,399 ಕೋಟಿ ರೂ.ಗಳ ಬಡ್ಡಿರಹಿತ ಸಾಲವನ್ನು ರಾಜ್ಯಕ್ಕೆ ನೀಡಿದೆ. ಅಲ್ಲದೆ, 22-23ರ ಆಯವ್ಯಯದಲ್ಲಿ ಅಂದಾಜಿಸಿದ ಜಿಎಸ್‌ಟಿ ಪರಿಹಾರ 5 ಸಾವಿರ ಕೋಟಿಗೆ ಎದುರಾಗಿ ಕೇಂದ್ರ ಸರಕಾರದಿಂದ 20,288 ಕೋಟಿ ರೂ.ಗಳು ಸ್ವೀಕೃತವಾದ ಕಾರಣ ರಾಜ್ಯದ ರಾಜಸ್ವ ಸ್ವೀಕೃತಿಯು ಹೆಚ್ಚಳವಾಗಿದೆ ಎಂದು ಅಧಿಕೃತವಾಗಿ ದಾಖಲೆಗಳಲ್ಲಿ ಅವರೇ ಬರೆದುಕೊಂಡಿದ್ದಾರೆ.

2004 ರಿಂದ 14ರವರೆಗೆ ಆಗಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ತೆರಿಗೆ ಹಂಚಿಕೆಯಲ್ಲಿ 81,000 ಕೋಟಿ ನೀಡಿದರೆ ಬಳಿಕದ 10 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ 2.36 ಲಕ್ಷ ಕೋಟಿ ತೆರಿಗೆ ನೀಡಿದೆ ಅಂದರೆ ಶೇಕಡ 246 ಅಧಿಕವಾಗಿದೆ. 2004- 14ರಲ್ಲಿ ಕೇಂದ್ರ ನೀಡಿದ ಅನುದಾನ 60 ಸಾವಿರ ಕೋಟಿ ಆದರೆ ಪ್ರಸ್ತುತ 2.36 ಲಕ್ಷ ಕೋಟಿ ಅನುದಾನವನ್ನು ನೀಡಿದ್ದು

243 ಶೇಕಡ ಅಧಿಕ ನೀಡಲಾಗಿದೆ. ಸಿದ್ದರಾಮಯ್ಯನವರು ಬೀದಿಯಲ್ಲಿ ಭಾಷಣ ಮಾಡುವಾಗ ಕೇಂದ್ರ ಸರಕಾರ ಕೊಟ್ಟಿಲ್ಲ; ಕೇಂದ್ರ ಸರಕಾರ ಕೊಟ್ಟಿಲ್ಲ ಅನ್ನುವ ಆರೋಪ ಮಾಡುತ್ತಾರೆ. ತನ್ನ ಸರಕಾರದ ಆರ್ಥಿಕ ಅಸಹಾಯಕತೆಯನ್ನು ಕೇಂದ್ರವನ್ನು ದೂರುವ ಮೂಲಕ ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಮತ್ತು ಮಾತೆತ್ತಿದರೆ ಚರ್ಚೆಗೆ ಸಿದ್ದ ಅಂತ ಉತ್ತರನ ಪೌರುಷ ಮೆರೆಸುತ್ತಾರೆ ಎಂದು ಪ್ರತಾಪಸಿಂಹ ನಾಯಕ್ ಶಾಸಕರು, ಕರ್ನಾಟಕ ವಿಧಾನ ಪರಿಷತ್ ಮಂಗಳೂರು ನಲ್ಲಿ ಹೇಳಿಕೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು