ಪುತ್ತೂರು: ಪುತ್ತೂರಿನ ಭಜರಂಗದಳ ಕಾರ್ಯಕರ್ತರ ವಿರುದ್ದ ಗಡೀಪಾರು ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಸುಳ್ಳು ಪ್ರಕರಣ ದಾಖಲಿಸಿ ಅಪರಾಧಿ ಅಲ್ಲದಿದ್ದರೂ ಗಡೀಪಾರು ಮಾಡುತ್ತಿದ್ದಾರೆ. ಪುತ್ತೂರಿನಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಆರೋಪ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಕೇಸ್ ಇದ್ದವನಿಗೂ ಗಡಿಪಾರು ನೊಟೀಸ್ ಆಗಿದೆ. ಇಂಥ ದ್ವೇಷದ ರಾಜಕಾರಣ ಸರಿಯಲ್ಲ, ಈ ವಿಚಾರದಲ್ಲಿ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡಿದ್ದೇನೆ ಎಂದರು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಪುತ್ತೂರಿನಲ್ಲೇ ಎರಡು ಹತ್ಯೆ ಪ್ರಕರಣ ನಡೆದಿದೆ. ಉಡುಪಿಯಲ್ಲಿ ಒಂದೇ ಮನೆಯಲ್ಲಿ ನಾಲ್ವರ ಹತ್ಯೆ ಆಗಿದೆ. ಆದರೆ ದುರದೃಷ್ಟವಶಾತ್ ಗುಪ್ತಚರ ಇಲಾಖೆಯ ಕೈ ಕಟ್ಟಲಾಗಿದೆ. ಇದರಿಂದ ಗೂಂಡಾಗಳಿಗೆ ಲಾಭವಾಗುತ್ತಿದೆ ಎಂದರು.