News Karnataka Kannada
Thursday, May 02 2024
ಮಂಗಳೂರು

ಎಂಆರ್‌ಪಿಎಲ್ ಸಂಸ್ಥೆಯಿಂದ ಕುಡುಂಬೂರು ನದಿ ಪುನಶ್ಚೇತನಕ್ಕೆ ಬೃಹತ್‌ ಯೋಜನೆ

MRPL to launch massive project to rejuvenate Kudumbur river
Photo Credit : News Kannada

ಮಂಗಳೂರು: ಪರಿಸರ ಸಂರಕ್ಷಣೆ ದಿಶೆಯಲ್ಲಿ ದಿಟ್ಟ ಹೆಜ್ಜೆ ಇರಿಸಿರುವ ಮಂಗಳೂರು ರಿಫೈನರಿ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್(ಎಂಆರ್‌ಪಿಎಲ್) ಕಂಪನಿಯು ಗುರುಪುರ ನದಿಯ ಕುಡುಂಬೂರು ಉಪನದಿ ಪುನಶ್ಚೇತನಕ್ಕೆ ಬೃಹತ್ ಯೋಜನೆ ಹಾಕಿಕೊಂಡಿದೆ.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸುಮಾರು ೧೯.೮೦ ಕೋಟಿ ರು.ಗಳ ಉಪನದಿ ಪುನಶ್ಚೇತನ ಯೋಜನೆಗೆ ಕರ್ನಾಟಕ ಅರಣ್ಯ ಇಲಾಖೆ ಜತೆ ಎಂಆರ್‌ಪಿಎಲ್ ಬುಧವಾರ ಒಪ್ಪಂದ ಮಾಡಿಕೊಂಡಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಎಂಆರ್‌ಪಿಎಲ್ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಸಂಜಯ ವರ್ಮ, ಕೈಗಾರಿಕೆ, ಗೃಹ ಹಾಗೂ ಇತರೆ ತಾಜ್ಯಗಳಿಂದ ಈ ಉಪನದಿ ಮಲೀನವಾಗಿದೆ. ಇಲ್ಲಿ ಅರಣ್ಯವೂ ನಾಶವಾಗಿದ್ದು, ಅದನ್ನು ಪುನಶ್ಚೇತನಗೊಳಿಸಲು ಸಾಮಾಜಿಕ ಬದ್ಧತೆಯಡಿ ಎಂಆರ್‌ಪಿಎಲ್ ಉದ್ದೇಶಿಸಿದೆ.

ಈ ಹಿನ್ನೆ ಲೆಯಲ್ಲಿ ಅರಣ್ಯ ಇಲಾಖೆಯ ಮಾರ್ಗದರ್ಶನದಲ್ಲಿ ಪರಿಸರ, ನದಿ ಕಿನಾರೆ ಸ್ವಚ್ಛಗೊಳಿಸಿ ಮ್ಯಾನ್‌ಗ್ರೋವ್ ಅರಣ್ಯ ಬೆಳೆಸಲು ತೀರ್ಮಾನಿಸಲಾಗಿದೆ. ಲವಣಯುಕ್ತ ನೀರಿನಲ್ಲಿ ಇದು ಬೆಳೆಯುತ್ತಿದ್ದು, ಸುನಾಮಿ ಮುಂತಾದ ಪ್ರಾಕೃತಿಕ ವಿಕೋಪಗಳನ್ನು ಸಮರ್ಥವಾಗಿ ತಡೆಯುವಲ್ಲಿ ಇದರ ಪಾತ್ರ ಪ್ರಮುಖವಾದ್ದು. ಸೀಡ್ ಹಂತದಲ್ಲೇ ಇದು ನೀರಿನ ಹರಿವಿಲ್ಲದೆ ಇಲ್ಲಿನ ಪರಿಸರದಲ್ಲಿಉತ್ತಮವಾಗಿ ಬೆಳೆಯಬಲ್ಲದು. ನದಿ ಸವಕಳಿ ತಡೆಗೂ ಇದು ಉಪಯುಕ್ತ ಎಂದರು.

ಈ ಉಪನದಿಯ ಡ್ರೆಜ್ಜಿಂಗ್‌ ನಡೆಸಲಾಗಿದ್ದು, ಇದರಿಂದ ನದಿ ನೀರಿನಲ್ಲಿ ಅಲೆಗಳ ಉಬ್ಬರ ಇಳಿತದ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ. ಯೋಜನೆಯ ಆರಂಭಿಕ ವೆಚ್ಚ ೧೬.೮೦ ಕೋಟಿ ರೂ. ಆಗಿದ್ದು, ಇತರೆ ವೆಚ್ಚಗಳು ಸೇರಿ ಒಟ್ಟು ೧೯.೮೦ ಕೋಟಿ ರೂ. ಆಗಲಿದೆ. ಸುಮಾರು ೧೭೧ ಎಕರೆ ಪ್ರದೇಶದಲ್ಲಿ ಈ ಯೋಜನೆ ವಿಸ್ತಾರಗೊಳ್ಳಲಿದೆ. ಮ್ಯಾನ್‌ಗ್ರೋವ್‌ ಮತ್ತು ಮಿಯಾವಕಿ ಅರಣ್ಯ ಬೆಳೆಸುವ ಯೋಜನೆ ಇದರಲ್ಲಿ ಸೇರಿದೆ. ಇದರಿಂದ ಪರಿಸರ ಸಹ್ಯ ವಾತಾವರಣ ನಿರ್ಮಾಣವಾಗಲಿದ್ದು, ಪರಿಸರ ಮಾಲಿನ್ಯವೂ ದೂರವಾಗಲಿದೆ ಎಂದರು.

ನಾಲ್ಕು ವರ್ಷಗಳ ಕಾಲ ಪೋಷಣೆ ಬಳಿಕ ಮೂರು ವರ್ಷ ನಿರ್ವಹಣೆಯ ಜವಾಬ್ದಾರಿ ಇರುತ್ತದೆ ಎಂದರು. ಜೋಕಟ್ಟೆಯಲ್ಲಿ ೨೭ ಎಕರೆ ಜಾಗವಿದ್ದು, ಅದನ್ನು ಗ್ರೀನ್ ಬೆಲ್ಟ್ ಆಗಿ ಪರಿವರ್ತಿಸುವ ಉದ್ದೇಶ ಇದೆ. ಜಿಲ್ಲಾಡಳಿತದ ಸಹಕಾರದಲ್ಲಿ ಈ ಯೋಜನೆ ಕಾರ್ಯಗತಗೊಳಿಸಲಾಗುವುದು ಎಂದರು. ಎಂಆರ್‌ಪಿಎಲ್ ನಾಲ್ಕನೇ ಹಂತದ ಯೋಜನೆಯಲ್ಲಿ ೮೦೦ ಎಕರೆ ಭೂಮಿಯನ್ನು ಹೊಂದಿದೆ. ಇಲ್ಲಿ ಭೂಸ್ವಾಧೀನಕ್ಕೆ ಕೆಲವೊಂದು ಕಡೆಗಳಲ್ಲಿ ಅಡೆತಡೆಗಳಿದ್ದು, ಪರಿಸರ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು. ಯೋಜನಾ ನಿರ್ದೇಶಕ ಬಿ.ಎಚ್.ವಿ.ಪ್ರಸಾದ್, ರಿಫೈನರಿ ನಿರ್ದೇಶಕ ಎಸ್.ಪಿ.ಕಾಮತ್, ಮಾನವ ಸಂಪನ್ಮೂಲ ಅಧಿಕಾರಿ ಕೃಷ್ಣ ಹೆಗಡೆ, ಪರಿಸರ ಅಧಿಕಾರಿ ಸುದರ್ಶನ್, ಸಾರ್ವಜನಿಕ ಸಂಪರ್ಕ ಅಧಿಕಾರಿ ರುಡಾಲ್‌ಫ್‌ ನರೋನಾ ಇದ್ದರು.

ಎಂಆರ್‌ಪಿಎಲ್‌ನಲ್ಲಿ ಶೇ.೬೬ ಕನ್ನಡಿಗ ಉದ್ಯೋಗಿಗಳು:

ಎಂಆರ್‌ಪಿಎಲ್‌ನಲ್ಲಿ ಈಗಾಗಲೇ ಶೇ.೬೬ರಷ್ಟು ಕನ್ನಡಿಗರೇ ಅಧಿಕಾರಿ, ಸಿಬ್ಬಂದಿ, ಇದ್ದಾರೆ. ಅಧಿಕಾರಿ ಹಾಗೂ ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ಇದು ಕೇಂದ್ರ ನಿಯಮಾವಳಿಗೆ ಒಳಪಡುತ್ತದೆ. ಹಾಗಿದ್ದೂ ನೇಮಕಾತಿ ನಿಯಮದ ಇತಿಮಿತಿಯಲ್ಲಿ ಸ್ಥಳೀಯರಿಗೆ, ಕನ್ನಡಿಗರಿಗೆ ಆದ್ಯತೆ ನೀಡಲಾಗುತ್ತದೆ. ಈ ಬಾರಿ ಎನ್‌ಐಟಿಕೆ ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ತೆರಳಿ ಕ್ಯಾಾಂಪಸ್ ಇಂಟರ್‌ವ್ಯೂ ನಡೆಸುವ ಉಪಕ್ರಮಕ್ಕೆ ಮುಂದಾಗಿದೆ ಎಂದು ಪ್ರಭಾರ ಎಂಡಿ ಸಂಜಯ ವರ್ಮ ತಿಳಿಸಿದರು. ಪ್ರಸಕ್ತ ೫೦ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.

ಈ ಬಾರಿ ಅನುಭವಿಗಳ ನೇಮಕಕ್ಕೆ ಆದ್ಯತೆ ನೀಡಲಾಗುತ್ತಿದೆ. ಇದರಲ್ಲಿ ಕನ್ನಡಿಗರಿಗೆ ಉತ್ತಮ ಅವಕಾಶ ಸಿಗುವ ನಿರೀಕ್ಷೆಇದೆ. ಸಾಮಾನ್ಯವಾಗಿ ನೇಮಕಾತಿಗಳಲ್ಲಿ ನುರಿತ, ಅನುಭವಿ ಹಾಗೂ ಸಾಮರ್ಥ್ಯ ಇರುವವರನ್ನೇ ಆಯ್ಕೆ ಮಾಡುತ್ತಿದ್ದು ಇದರಲ್ಲಿ ಕನ್ನಡಿಗರೂ ಸಿಂಹಪಾಲು ಪಡೆಯುತ್ತಿದ್ದಾರೆ ಎಂದರು.

ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕಾದರೆ ನೇಮಕಾತಿ ಪ್ರಕ್ರಿಯೆಗಳಿಗೆ ತಿದ್ದುಪಡಿ ಆಗಬೇಕು. ಈ ಬಗ್ಗೆ ಸರ್ಕಾರ ಮಾರ್ಗದರ್ಶನ ಅಥವಾ ಆದೇಶ ನೀಡಿದರೆ ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು