ಮಂಗಳೂರು: ಮಾನಸಿಕ ಅಸ್ವಸ್ಥ ತಾಯಿ ತನ್ನ ಮಗುವನ್ನು ಟಬ್ ನಲ್ಲಿ ಮುಳುಗಿಸಿ ಕೊಲೆ ಮಾಡಿ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡ ಭಯಾನಕ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.
ಖತಿಜಾತುಲ್ ಕುಬ್ರ ಎಂಬುವರ ಪುತ್ರಿ ಫಾತಿಮಾ ರುಕಿಯಾ (23) ಎಂಬುವರನ್ನು ಒಂದೂವರೆ ವರ್ಷದ ಹಿಂದೆ ಮುಹಮ್ಮದ್ ಉನೈಸ್ ಎಂಬವರಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು.
ಆಕೆ ಕಳೆದ ಜುಲೈ 7ರಂದು ಗಂಡುಮಗುವಿಗೆ ಜನ್ಮ ನೀಡಿದ್ದರು. ಆದರೆ ಫಾತಿಮಾ ರುಕಿಯಾ ಹೆರಿಗೆಯಾದ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಆಗಾಗ್ಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದರು. ಬಳಿಕ ಮಂಗಳೂರಿನ ಮಾನಸಿಕ ವೈದ್ಯರೊಬ್ಬರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಈ ಮಧ್ಯೆ ಡಿ.2ರಂದು ಮಧ್ಯಾಹ್ನ 11 ರಿಂದ 1.30ರ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಫಾತಿಮಾ ರುಕಿಯಾ ತಾನು ವಾಸವಾಗಿದ್ದ ಮಂಗಳೂರು ನಗರದ ಗುಜ್ಜರಕೆರೆಯ ಅಪಾರ್ಟ್ಮೆಂಟ್ನಲ್ಲಿ ಪ್ಲಾಸ್ಟಿಕ್ ಟಬ್ ನಲ್ಲಿ ನೀರು ತುಂಬಿಸಿ ನಾಲ್ಕುವರೆ ತಿಂಗಳ ಮಗುವನ್ನು ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ಬಳಿಕ ತಾನೂ ಕೂಡ ಬೆಡ್ ರೂಮಿನ ಕಿಟಕಿಯ ಕಬ್ಬಿಣದ ಸರಳಿಗೆ ಸೀರೆಯಿಂದ ಕಟ್ಟಿ ಮತ್ತೊಂದು ತುದಿಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.