News Karnataka Kannada
Thursday, May 09 2024
ಮಂಗಳೂರು

ಮಂಗಳೂರು: ಈ ವರ್ಷ ಇಡೀ ವಿಶ್ವಕ್ಕೆ ಆರ್ಥಿಕ ಸಂಕಷ್ಟ ಕಾಡಲಿದೆ- ಡಾ.ಎಂ.ವೀರಪ್ಪ ಮೊಯ್ಲಿ

Cong
Photo Credit : News Kannada

ಮಂಗಳೂರು: ದೇಶ ಮತ್ತು ರಾಜ್ಯದಲ್ಲಿ ಅಧಿಕಾರ ಪಡೆಯುವ ಏಕೈಕ ಉದ್ದೇಶದಿಂದ ಬಿಜೆಪಿ ವಾಮಮಾರ್ಗ ಹಿಡಿಯುತ್ತಿದೆ. ಇದು ದೇಶದ ಸಮಷ್ಠಿ ಹಿತಕ್ಕೆ ಮಾರಕವಾಗಿರುವುದರಿಂದ ಕಾಂಗ್ರೆಸಿಗರು ಎಂದೂ ಅವರ ಕ್ರಿಯೆಗೆ ಪ್ರತಿಕ್ರಿಯೆ ಕೊಡಲು ಹೋಗಬಾರದು ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಕಿವಿಮಾತು ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಈ ವರ್ಷ ಇಡೀ ವಿಶ್ವಕ್ಕೆ ಆರ್ಥಿಕ ಸಂಕಷ್ಟ ಕಾಡಲಿದೆ. ಭಾರತ ಆ ಬಿರುಗಾಳಿಯಲ್ಲಿ ಕೊಚ್ಚಿ ಹೋಗಬಾರದು. ಅದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಆದರೆ ಕೇಂದ್ರ, ರಾಜ್ಯ ಸರಕಾರ ರಾಜಕೀಯ ಲೆಕ್ಕಾಚಾರದಲ್ಲಿ ದಿನದೂಡುತ್ತಿದ್ದು, ಎಲ್ಲೆಡೆ ವ್ಯಾಕುಲತೆ ಹರಡುತ್ತಿದೆ. ಇದರಿಂದ ದೇಶ ಅಸ್ಥಿರಗೊಳ್ಳುವ ಅಪಾಯವಿದೆ. ಕಾಂಗ್ರೆಸ್‌ ಅವರ ಪ್ರಚೋದನೆಗೆ ಒಳಗಾಗಬಾರದು ಎಂದು ತಿಳಿಸಿದರು.

ಬಿಜೆಪಿಗೆ ಸಂವಿಧಾನದ ಆಶಯದ ಅಗತ್ಯವಿಲ್ಲ. ರಾಷ್ಟ್ರವನ್ನು ಗಲಭೆಗೆ ತಳ್ಳುವ ಪ್ರಯತ್ನ ನಡೆಯುತ್ತಿದೆ. ವಿಶ್ವದ ಸಂತೋಷದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 146ರಲ್ಲಿ 140ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಹೀಗಿರುವಾಗ ಭಾರತವನ್ನು ರಾಷ್ಟ್ರೀಯ ವಾಹಿನಿಗೆ ತರುವ ಅಗತ್ಯವಿದೆ. ನಾವು ಕೂಡ ಕದಡಿದ ನೀರಿನಲ್ಲಿ ಮೀನು ಹಿಡಿಯುವ ಪ್ರಯತ್ನ ಮಾಡಬಾರದು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಒಂದೇ ನಾಣ್ಯದ ಎರಡು ಮುಖಗಳು ಎಂಬ ಅಮಿತ್‌ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಮುಖವೇ ಇಲ್ಲ. ಗುಜರಾತ್‌ನಲ್ಲಿ ಎರಡು ವರ್ಷ ಗಡಿಪಾರಾಗಿದ್ದ ವ್ಯಕ್ತಿ ದೇಶಕ್ಕೆ ಹಿತವಚನ ಹೇಳುವುದು ಹಾಸ್ಯಾಸ್ಪದ. ಕಪ್ಪು ಹಣದಿಂದ ಅವರ ಮುಖ ಮುಚ್ಚಿ ಹೋಗಿದೆ. ಹಣ ಸುರಿದು ವಿವಿಧ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಪಕ್ಷಾಂತರ ವಿರೋಧಿ ಕಾಯಿದೆಯನ್ನೇ ಕಾಲಕಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್‌ ಗಾಂಧಿಯವರು ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಭಾರತ್‌ ಜೋಡೊ ಯಾತ್ರೆ ನಡೆಸುತ್ತಿಲ್ಲ. ಈಗಿನ ಪರಿಸ್ಥಿತಿ ಮುಂದುವರಿದರೆ ಭಾರತದಲ್ಲಿ ದೊಂಬಿ, ಕ್ರಾಂತಿಯಾಗುವ ಆತಂಕವಿದೆ. ಈ ಹಿನ್ನೆಲೆಯಲ್ಲಿ ಭಾರತದ ಏಕತೆ, ಸಂವಿಧಾನದ ರಕ್ಷಣೆಗಾಗಿ ಭಾರತ್‌ ಜೋಡೊ ಯಾತ್ರೆ ನಡೆಸುತ್ತಿದ್ದಾರೆ. ಇದರಲ್ಲಿ ಪಕ್ಷಕ್ಕಿಂತ ದೇಶದ ಹಿತ ಅಡಗಿದೆ ಎಂದರು.

ಗುಜರಾತಿನ ಅಮುಲ್‌ನೊಂದಿಗೆ ಕೆಎಂಎಫ್ ನಂದಿನಿಯನ್ನು ವಿಲೀನಗೊಳಿಸುವ ಕೇಂದ್ರ ಸಚಿವ ಅಮಿತ್‌ ಶಾ ಹೇಳಿಕೆ ಅವಿವೇಕತನದ್ದು. ರಾಜ್ಯಗಳ ಹಾಲು ಒಕ್ಕೂಟ ಭದ್ರಗೊಳಿಸುವುದು ಕುರಿಯನ್‌ ಅವರ ಆಶಯವಾಗಿತ್ತು. ನೆಹರೂ ಕೂಡ ಸಹಕಾರಿ ಕ್ಷೇತ್ರದ ವಿಕೇಂದ್ರೀಕರಣದ ಬುನಾದಿ ಹಾಕಿಕೊಟ್ಟಿದ್ದರು. ಸಂವಿಧಾನವನ್ನೇ ಓದದ ಅಮಿತ್‌ ಶಾಗೆ ವಿಕೇಂದ್ರೀಕರಣ ಬೇಕಿಲ್ಲ. ಅವರ ಕೇಂದ್ರೀಕರಣವು ಸಂವಿಧಾನದ ಆಶಯಕ್ಕೆ ಮಾರಕ ಎಂದು ಎಂ.ವೀರಪ್ಪ ಮೊಯ್ಲಿ ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಕಾರ್ಕಳದಿಂದ ನಾನೂ, ನನ್ನ ಮಗ ಹರ್ಷ ಮೊಯ್ಲಿಯೂ ಸ್ಪರ್ಧಿಸುವುದಿಲ್ಲ. ಪಕ್ಷದ ಕಾರ್ಯಕರ್ತರಿಗೆ ಸೀಟ್‌ ನೀಡಲಾಗುತ್ತದೆ. ಈ ಚುನಾವಣೆಯಲ್ಲಿ ಹರ್ಷ ಮೊಯ್ಲಿ ಯಾವ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ ಎಂದು ವೀರಪ್ಪ ಮೊಯ್ಲಿ ಹೇಳಿದರು.

ಕಾಂಗ್ರೆಸ್‌ ಮುಖಂಡರಾದ ಹರೀಶ್‌ ಕುಮಾರ್‌, ಐವನ್‌ ಡಿಸೋಜ, ಶಕುಂತಳಾ ಶೆಟ್ಟಿ, ಭರತ್‌ ಮುಂಡೋಡಿ, ಶಾಲೆಟ್‌ ಪಿಂಟೊ, ಶಶಿಧರ ಹೆಗ್ಡೆ, ಅಬ್ದುಲ್‌ ಸಲೀಂ, ಕೆ. ಭಾಸ್ಕರ, ನೀರಜ್‌ಪಾಲ್‌, ಶುಭೋದಯ ಆಳ್ವ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು