News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಎಲ್ಲಾ ಸಮಾಜಗಳಿಗೂ ಸೂಕ್ತ ಸ್ಥಾನಮಾನ ನೀಡುವುದು ರಾಜಕೀಯ ಪಕ್ಷಗಳ ಜವಾಬ್ದಾರಿ

It is the responsibility of political parties to give due status to all societies.
Photo Credit : News Kannada

ಮಂಗಳೂರು: ಸಮಾಜದ ಎಲ್ಲಾ ವರ್ಗಗಳು ಸಮೃದ್ಧವಾಗಿ ಬೆಳೆದು ನಿಂತಾಗ ಮಾತ್ರ ನಾಡಿನ ಏಳಿಗೆ ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲಾ ಸಮಾಜಗಳಿಗೂ ಸೂಕ್ತ ಸ್ಥಾನಮಾನ ನೀಡುವುದು ರಾಜಕೀಯ ಪಕ್ಷಗಳ ಜವಾಬ್ದಾರಿ ಎಂದು ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಬಾರಿ ಎರಡೂ ಪಕ್ಷಗಳನ್ನು ತುಲನೆ ಮಾಡಿ ನೋಡಿದಾಗ ಪ್ರಮುಖವಾಗಿ ಬಿಲ್ಲವ ನಾಯಕ ಪದ್ಮರಾಜ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದಕ್ಕೆ ನಮ್ಮ ಸಮಾಜಕ್ಕೆ ಬೇಸರವಿದೆ. ಇದೇ ವೇಳೆ ಬಿಜೆಪಿಯಲ್ಲಿ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಎರಡರಲ್ಲಿ ಬಿಲ್ಲವ ಸಮುದಾಯಕ್ಕೆ ಟಿಕೆಟ್ ನೀಡಿ ಸ್ಪರ್ಧೆಗೆ ಅವಕಾಶ ನೀಡಿರುವುದು ಶ್ಲಾಘನೀಯ. ಶ್ರಮಜೀವಿಗಳು, ಕಷ್ಟಸಹಿಷ್ಣುಗಳು ಆಗಿರುವ ಬಿಲ್ಲವ ಸಮಾಜದ ತ್ಯಾಗ, ಸೇವೆಯನ್ನು ಗುರುತಿಸಿ ಭಾರತೀಯ ಜನತಾ ಪಾರ್ಟಿ ಕರಾವಳಿಯಲ್ಲಿ ಯೋಗ್ಯ ಸ್ಥಾನಮಾನವನ್ನು ನೀಡಿರುವುದು ಸ್ವಾಗತಾರ್ಹವಾಗಿದೆ.

ಕೋಟಾ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್ ಕಾರ್ಕಳ ಅವರು ರಾಜ್ಯದ ಪ್ರಮುಖ ಖಾತೆಗಳಾದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳಂತಹ ಪ್ರಮುಖ ಖಾತೆಗಳನ್ನು ನಿಭಾಯಿಸಿ ರಾಜ್ಯಕ್ಕೆ ಮತ್ತು ಸಮುದಾಯಕ್ಕೂ ಕೀರ್ತಿ ತಂದಿದ್ದಾರೆ. ಸಚಿವ ಸ್ಥಾನಗಳು ಮಾತ್ರವಲ್ಲ ರಾಜ್ಯದ ನಿಗಮದ ವಿಚಾರದಲ್ಲಿ ಪ್ರಮುಖವಾಗಿರುವ ಮಂಗಳೂರು ನಗರಾಭಿವೃದ್ಧಿ ಇಲಾಖೆಯ ಚೇರ್ ಮೆನ್, ಕಿಯೋನಿಕ್ಸ್ ಅಧ್ಯಕ್ಷ ಸ್ಥಾನವನ್ನು ಕೂಡ ಬಿಲ್ಲವ ಸಮುದಾಯಕ್ಕೆ ನೀಡಿ ಸೂಕ್ತ ಸ್ಥಾನಮಾನ ನೀಡಲಾಗಿದೆ. ಅದೇ ರೀತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಕೂಡ ಬಿಲ್ಲವ ಸಮುದಾಯಕ್ಕೆ ನೀಡಿ ನಾಯಕತ್ವ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ ಜಿಲ್ಲೆಯಲ್ಲಿ ನಾರಾಯಣ ಗುರು ವಸತಿ ಶಾಲೆ ಸ್ಥಾಪಿಸಿ ಹಿಂದುಳಿದ ವರ್ಗಗಳ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಸರಕಾರದಿಂದ ಹಿಂದುಳಿದ ವರ್ಗಗಳ ಮಕ್ಕಳಿಗೆ ಹಾಸ್ಟೆಲ್ ನಿರ್ಮಾಣ ಮಾಡಿರುವುದು ಅಭಿನಂದನೀಯ ಕಾರ್ಯವಾಗಿದೆ.

ಶಾಸಕರಾಗಿರುವ ವೇದವ್ಯಾಸ ಕಾಮತ್ ಅವರು ಕಂಕನಾಡಿ ಗರೋಡಿಯ 150 ನೇ ವರ್ಷಾಚರಣೆಯ ಸಮಿತಿಯ ಗೌರವಾಧ್ಯಕ್ಷರಾಗಿ ಕಾರ್ಯಕ್ರಮದ ಯಶಸ್ಸಿಗೆ ಹಗಲಿರುಳು ಶ್ರಮಿಸುತ್ತಾ ಭಕ್ತರೊಂದಿಗೆ, ಜನಸಾಮಾನ್ಯರೊಂದಿಗೆ ಬೆರೆತು ಸೇವೆ ಸಲ್ಲಿಸಿದ್ದಾರೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಕೋಟ್ಯಾಂತರ ರೂಪಾಯಿ ಅನುದಾನವನ್ನು ವಿವಿಧ ಬಿಲ್ಲವ ಸೇವಾ ಸಂಘಗಳಿಗೆ ಒದಗಿಸಿ ಸೇವಾ ಸಂಘಗಳಿಗೆ ನೂತನ ಕಟ್ಟಡ ಸಹಿತ ವಿವಿಧ ಮೂಲಭೂತ ವ್ಯವಸ್ಥೆಯನ್ನು ಶಾಸಕ ವೇದವ್ಯಾಸ ಕಾಮತ್ ಅವರು ತಮ್ಮ ಶಾಸಕ ನಿಧಿ ಹಾಗೂ ಸಂಸದರ ನಿಧಿಯಿಂದ ಒದಗಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಕರ್ನಾಟಕ ರಾಜ್ಯ ಸರಕಾರ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಅದಕ್ಕೆ ಅನುದಾನ ನೀಡಿ ಮುಂದಿನ ಅವಧಿಯಲ್ಲಿ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಈ ನಿಗಮ ಕಾರ್ಯತತ್ಪರವಾಗುವಂತೆ ಅಣಿಗೊಳಿಸಿದೆ.

ಮಂಗಳೂರಿನ ಲೇಡಿಹಿಲ್ ಪ್ರದೇಶದಲ್ಲಿರುವ ಪ್ರಮುಖ ವೃತ್ತವನ್ನು ಸುಂದರೀಕರಣಗೊಳಿಸಿ ಅಲ್ಲಿ ಶತಮಾನದ ಮಹಾನ್ ಸಂತ, ಪ್ರಾತ:ಸ್ಮರಣೀಯರಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಯನ್ನು ಸ್ಥಾಪಿಸಿ ವೃತ್ತಕ್ಕೆ ಅವರ ಹೆಸರು ಇಟ್ಟು ಮುಂದಿನ ಪೀಳಿಗೆಯ ಮನಸ್ಸಿನಲ್ಲಿ ಪೂಜ್ಯರು ಚಿರಸ್ಥಾಯಿಯಾಗಿರುವಂತೆ ಮಾಡುವಲ್ಲಿ ರಾಜ್ಯ ಸರಕಾರ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್ ಹಾಗೂ ಪಾಲಿಕೆ ಆಡಳಿತದ ಕೊಡುಗೆಯನ್ನು ಮರೆಯುವಂತಿಲ್ಲ.

ನವರಾತ್ರಿಯ ಸಮಯದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ಮಂಗಳೂರು ದಸರಾ, ಮಂಗಳಾದೇವಿ ದೇವಸ್ಥಾನ ಸಹಿತ ವಿಶೇಷ ಆಚರಣೆಗಳನ್ನು ಇನ್ನಷ್ಟು ವೈಭವೀಕರಿಸುವ ನಿಟ್ಟಿನಲ್ಲಿ ಪ್ರಮುಖ ರಸ್ತೆಗಳನ್ನು ವಿದ್ಯುತ್ ದೀಪಾಲಂಕಾರಗೊಳಿಸಿ ದೇವಸ್ಥಾನಗಳ ಆರ್ಥಿಕ ವೆಚ್ಚವನ್ನು ಪಾಲಿಕೆ ವಹಿಸಿಕೊಂಡಿರುವುದರ ಹಿಂದೆ ಶಾಸಕ ವೇದವ್ಯಾಸ ಕಾಮತ್ ಅವರ ವಿಶೇಷ ಮುತುವರ್ಜಿ ಇದೆ.

ಮಂಗಳೂರು ನಗರ ದಕ್ಷಿಣದಲ್ಲಿ ಉರ್ವಾ ಮಾರುಕಟ್ಟೆ ಬಳಿ ಇರುವ ಅಶ್ವಥಕಟ್ಟೆಯನ್ನು ಜೀರ್ಣೋದ್ಧಾರಗೊಳಿಸಿ ಅಲ್ಲಿ ನೂತನ ಗುಡಿ ನಿರ್ಮಿಸಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ಸ್ಥಾಪಿಸಿ ಭಕ್ತರ ಬಹುಕಾಲದ ಬೇಡಿಕೆಯನ್ನು ಈಡೇರಿಸುವಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರ ಧಾರ್ಮಿಕ ಶ್ರದ್ಧೆಯೂ ಮುಖ್ಯವಾಗಿದೆ. ಮುಂದಿನ ಅವಧಿಯಲ್ಲಿ ಪಂಪ್ ವೆಲ್ ನಿಂದ ಗರೋಡಿ ತನಕದ ಮುಖ್ಯ ರಸ್ತೆಯನ್ನು ಕೋಟಿ ಚೆನ್ನಯ್ಯ ರಸ್ತೆ ಮಾಡುವ ಪ್ರಸ್ತಾಪ ಸಹಿತ ಅನೇಕ ಸಮಾಜಮುಖಿ ಕಾರ್ಯಗಳು ನಡೆಯಲಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಉಂಟು ಮಾಡುವ ಪ್ರಯತ್ನವನ್ನು ಮಾಡಬೇಕಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಕೇರಳದ ಶಿವಗಿರಿ ಮಠದ ಮೂಲಕ ನಮ್ಮ ಸಮಾಜದ ಏಳಿಗೆಗಾಗಿ ಕೇಂದ್ರ ಸರಕಾರ ನೀಡಿರುವ 70 ಕೋಟಿ ರೂ ಅನುದಾನ ಈವರೆಗೆ ಬಂದಿರುವ ಅನುದಾನಗಳಲ್ಲೇ ಅತ್ಯಂತ ಹೆಚ್ಚಿನದ್ದು. ಇದನ್ನು ನಮ್ಮ ಸಮಾಜ ಕೃತಜ್ಞತೆಯಿಂದ ಸ್ಮರಿಸುತ್ತದೆ.

ಸುದ್ದಿಗೋಷ್ಠಿಯಲ್ಲಿ ಬಿಲ್ಲವ ಮುಖಂಡರಾದ ಬಾಲಕೃಷ್ಣ ಕರ್ಕೇರ, ಜಯಕುಮಾರ್ ಪೂಜಾರಿ, ಮುಂತಾದವರು ಉಪಸ್ಥಿತರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು