ಮಂಗಳೂರು: ನನ್ನ ಶಾಸಕತ್ವದ ಅವಧಿಯಲ್ಲಿ ಬಂಟ್ವಾಳದಲ್ಲಿ ಶಾಂತಿ ನೆಲೆಯಾಗಿತ್ತು. ಬಂಟ್ವಾಳದಲ್ಲಿ ನಡೆದ ಕೋಮು ಆಧರಿತ ಹತ್ಯೆಗಳಿಗೆ ಬಿಜೆಪಿ, ಎಸ್ಡಿಪಿಐ ಕಾರಣ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು. ಪ್ರಜಾಧ್ವನಿ ಯಾತ್ರೆ ಅಂಗವಾಗಿ ಬಡಕಬೈಲು ಜಂಕ್ಷನ್ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.
ಬಂಟ್ವಾಳ ಕ್ಷೇತ್ರದಲ್ಲಿ 5 ಸಾವಿರ ಕೋಟಿ ರೂ. ಗಳ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಅದರ ಲೆಕ್ಕ ಕೇಳುತ್ತಾರೆ. ಆದರೆ ಅವರು ಮೊದಲು 2 ಸಾವಿರ ಕೋಟಿ ರೂ. ಲೆಕ್ಕ ನೀಡಲಿ ಎಂದು ಸವಾಲು ಎಸೆದರು.
ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಮೂಲಕ ಪ್ರತಿ ಮನೆಗೆ ಕಾಂಗ್ರೆಸ್ 55 ಸಾವಿರ ರೂ. ನೆರವು ನೀಡಲಿದೆ ಎಂದು ಭರವಸೆ ನೀಡಿದರು. ಎಡ್ತೂರು ರಾಜೀವ ಶೆಟ್ಟಿ, ಪಿಯೂಸ್ ಎಲ್. ರೊಡ್ರಿಗಸ್, ಕೆಪಿಸಿಸಿ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಬೇಬಿ ಕುಂದರ್ ಮೊದಲಾದವರಿದ್ದರು.