ಬೆಳ್ತಂಗಡಿ: ಧರ್ಮಸ್ಥಳ ಸಮೀಪದ ಮಲ್ಲರ್ಮಡಿ ಎಂಬಲ್ಲಿ ಶುಕ್ರವಾರದಂದು ಜಮೀನೊಂದರಲ್ಲಿ ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ತಗುಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಮಲ್ಲಾರ್ಮಡಿ ನಿವಾಸಿ ಬಾಲಕೃಷ್ಣ ಶೆಟ್ಟಿ (49) ಎಂದು ಗುರುತಿಸಲಾಗಿದೆ. ಈತ ಸ್ಥಳೀಯ ನಿವಾಸಿ ಬೊಮ್ಮಣ್ಣ ಗೌಡ ಎಂಬುವರ ಜಮೀನಿನಲ್ಲಿ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಏಣಿ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿದ್ದು ಬಾಲಕೃಷ್ಣ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಮೆಸ್ಕಾಂ ಎಇಇ ಕ್ಲೆಮೆಂಟ್ ಬೆಂಜಮಿನ್ ಬ್ರಾಗ್ಸ್, ಎಇ ಸುಹಾಸ್, ಮೇಲ್ವಿಚಾರಕ ಅಶೋಕ್ ಭೇಟಿ ನೀಡಿದ್ದರು. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.