News Karnataka Kannada
Monday, April 29 2024
ಮಂಗಳೂರು

‘ಜ್ಞಾನವಿಕಾಸ’ಕ್ಕೆ ವೇದಿಕೆಯಾದ ಕನ್ನಡ ಸಾಹಿತ್ಯ ಸಮ್ಮೇಳನ

Kannada Sahitya Sammelana to be held as platform for 'Jnana Vikasa'
Photo Credit : News Kannada

ಬೆಳ್ತಂಗಡಿ: ಉಜಿರೆಯಲ್ಲಿ ಮೂರು ದಿನಗಳ ಕಾಲ ನಡೆದ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಅಭಿಮಾನಿಗಳ ಗಮನ ಸೆಳೆದದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಮಹಿಳಾ ಸ್ವ-ಸಹಾಯ ಸಂಘದ ಜ್ಞಾನವಿಕಾಸ ಮಾಹಿತಿ ಕೇಂದ್ರ.

ಜ್ಞಾನವಿಕಾಸ ಯೋಜನೆಯ ಕಾರ್ಯರೂಪಗಳನ್ನು ಮರದ ರೂಪದಲ್ಲಿ ವಿನ್ಯಾಸಗೊಳಿಸಿ ಇದರ ಕಾರ್ಯಚಟುವಟಿಕೆಗಳನ್ನು ರೆಂಬೆಕೊಂಬೆಗಳ ರೂಪದಲ್ಲಿ ಚಿತ್ರಿಸಲಾಗಿತ್ತು. ಜೊತೆಗೆ ‘ವಾತ್ಸಲ್ಯ’ ಕಾರ್ಯಕ್ರಮದ ಮೂಲಕ ನಿರ್ಗತಿಕರಿಗೆ ಕಟ್ಟಿಸಿಕೊಡುವ ಮನೆಯ ಒಂದು ಮಾದರಿಯನ್ನು ಹಾಗೂ ಹೇಮಾವತಿ ಅಮ್ಮನವರ‘ಗೆಳತಿ’, ‘ಮಗಳಿಗೊಂದು ಪತ್ರ’ ಪುಸ್ತಕಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

ಜ್ಞಾನವಿಕಾಸ: ‘ಜ್ಞಾನವಿಕಾಸ’ವು ಸ್ತ್ರೀಯರ ಕಾರ್ಯಕ್ರಮವೆಂದೇ ಪ್ರಸಿದ್ಧಿ ಪಡೆದಿದೆ. ಬಡಮಹಿಳೆಯರನ್ನು ಒಳಗೊಂಡು ಅವರ ವಿಕಾಸದ ಜೊತೆಗೆ ಅವರ ಜ್ಞಾನವಿಕಾಸಕ್ಕೂ ಹಾದಿಯನ್ನು ಹಾಕಿಕೊಟ್ಟಿದೆ. ಈ ಯೋಜನೆ 1993 ರಲ್ಲಿ ಡಾ. ಹೇಮಾವತಿ ವೀ. ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಯಿತು. ರಾಜ್ಯಾದ್ಯಂತ 5,718 ಜ್ಞಾನವಿಕಾಸ ಕೇಂದ್ರಗಳಿದ್ದು, ಇದರಲ್ಲಿ 2,72,000 ಮಂದಿ ಮಹಿಳೆಯರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಒಂದು ತಾಲ್ಲೂಕಿನಲ್ಲಿ 125 ಸಂಘಗಳನ್ನು ಆಯ್ದು ಅದನ್ನು 25 ಕೇಂದ್ರಗಳಾಗಿ ರಚಿಸಿ, ಒಂದು ಕೇಂದ್ರಕ್ಕೆ 5 ಸಂಘಗಳಾಗಿ ವಿಭಜಿಸಲಾಗುತ್ತದೆ.

ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ. ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ, ಮಾಡುತ್ತಿದ್ದಾರೆ. ಅವರಿಗೂ ಈ ಸಮಾಜದಲ್ಲಿ ಎಲ್ಲವೂ ಸಮಾನವಾಗಿ ನೀಡಬೇಕು ಎಂಬುದು ಜ್ಞಾನವಿಕಾಸದ ಮೊದಲ ಗುರಿ.

ಹೆಣ್ಣು ಅಡುಗೆಮನೆಗೆ ಸೀಮಿತವಾಗಿರದೆ ಅವಳಿಗೂ ಜ್ಞಾನದ ಅರಿವು ನೀಡುವ ಉದ್ದೇಶದಿಂದ ಹೆಣ್ಣು ಅಬಲೆಯಾಗಿರದೆ, ಸಬಲೆಯಾಗಬೇಕೆಂದು ಆಲೋಚಿಸಿದ ಡಾ| ಹೇಮಾವತಿ ಹೆಗ್ಗಡೆ ಅವರು ಮಹಿಳಾ ಸಬಲೀಕರಣಕ್ಕಾಗಿ ಈ ಕಾರ್ಯಕ್ರಮವನ್ನು ಆರಂಭಿಸಿದರು.

ಮಹಿಳೆಯರ ಆರೋಗ್ಯ-ನೈರ್ಮಲ್ಯ: ಆರೋಗ್ಯ-ನೈರ್ಮಲ್ಯ, ಕೌಟುಂಬಿಕ ಸಾಮರಸ್ಯ, ಸ್ವ-ಉದ್ಯೋಗ, ಕಾನೂನು, ಜ್ವಲಂತ ಸಂಗತಿಗಳ ಬಗ್ಗೆ ಮಾಹಿತಿ, ಪೌಷ್ಟಿಕ ಆಹಾರ ಮಾಹಿತಿ, ಕೌಶಲ್ಯ ತರಬೇತಿ ವಿಷಯಗಳಿಗೆ ಸಂಬಂಧಿಸಿದಂತೆ, ಸಂಪನ್ಮೂಲ ವ್ಯಕ್ತಿಗಳಿಂದ ಮಹಿಳೆಯರಿಗೆ ತಿಂಗಳಿಗೊಮ್ಮೆ ಜ್ಞಾನವನ್ನು ನೀಡಲಾಗುತ್ತದೆ. ಜೊತೆಗೆ ಈ ಎಲ್ಲದರಲ್ಲೂ ಅವರ ಪಾಲ್ಗೊಳ್ಳುವಿಕೆಯನ್ನು ಈ ಕಾರ್ಯಕ್ರಮ ಉತ್ತೇಜಿಸುತ್ತದೆ.

ಆಧುನಿಕತೆಯ ಜೊತೆಗೆ ಮಹಿಳೆಯರ ಜ್ಞಾನವಿಕಾಸ: ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ; ಸಾಮಾಜಿಕ ಜಾಲತಾಣಗಳ ದುರ್ಬಳಕೆಯಿಂದ ಆಗುವ ಪರಿಣಾಮಗಳ ಬಗ್ಗೆ ಜಾಗೃತಿ; ಮಕ್ಕಳಿಗೆ ಬೇಕಾಗುವ ಪೌಷ್ಟಿಕ ಆಹಾರಗಳ ಮಾಹಿತಿ; ಮತ್ತು ಕರಕುಶಲ ವಸ್ತುಗಳ ತಯಾರಿಕೆಗೆ ತರಬೇತಿ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿಯನ್ನು ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ. ಇದರ ಜೊತೆಗೆ ಅಳಿವಿನಂಚಿನಲ್ಲಿರುವ ಜನಪದ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಇದರಲ್ಲಿ ಮಹಿಳೆಯರು ವಯಸ್ಸಿನ ಮಿತಿಯಿಲ್ಲದೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ. ನಗರಗಳಲ್ಲಿ ಮಹಿಳೆಯರು ಕಾಲಕಳೆಯಲು ‘ಗೆಟ್-ಟುಗೆದರ್’ಗಳಿರುವಂತೆ ನಮ್ಮ ಗ್ರಾಮೀಣ ಭಾಗದ ಮಹಿಳೆಯರು ಮನೋರಂಜನೆಗಾಗಿ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

ನಿರ್ಗತಿಕರಿಗೆ ದಾರಿದೀಪ ಜ್ಞಾನವಿಕಾಸ: ಪ್ರತಿಯೊಂದು ತಾಲ್ಲೂಕಿನಲ್ಲಿರುವ ನಿರ್ಗತಿಕರು, ಮಕ್ಕಳಿದ್ದೂ ಅನಾಥರಾಗಿರುವ ವೃದ್ಧೆಯರಿಗೆ ನೆಲೆ ನೀಡುವ ನಿಟ್ಟಿನಲ್ಲಿ ‘ವಾತ್ಸಲ್ಯ’ ಯೋಜನೆಯ ಮೂಲಕ ಅಚ್ಚುಕಟ್ಟಾದ ಮನೆಯನ್ನು ನಿರ್ಮಿಸಿ, ಅದರ ಜೊತೆಗೆ ದಿನಬಳಕೆಗೆ ಬೇಕಾದ ಸಾಮಗ್ರಿಗಳನ್ನು ತಿಂಗಳಿಗೊಮ್ಮೆ ನೀಡಲಾಗುತ್ತದೆ.

ಜ್ಞಾನವಿಕಾಸ ಗ್ರಂಥಾಲಯ: ರಾಜ್ಯಾದ್ಯಂತ ಗ್ರಾಮೀಣ ಮಹಿಳೆಯರಿಗಾಗಿ ಕಾರ್ಯನಿರ್ವಹಿಸುವ 2,121 ಗ್ರಂಥಾಲಯಗಳಲ್ಲಿ ಪ್ರತಿಯೊಂದು ಕೇಂದ್ರಕ್ಕೂ ಒಂದು ಗ್ರಂಥಾಲಯವಿದ್ದು, ತಲಾ ನೂರೈವತ್ತು ಪುಸ್ತಕಗಳನ್ನು ಹೊಂದಿದೆ. ಈ ಗ್ರಂಥಾಲಯದಲ್ಲಿರುವ ಮಹಿಳಾ ಸಾಧಕಿಯರ ಪುಸ್ತಕಗಳು ತಮಗೆ ಪ್ರೇರಣೆಯಾಗಿವೆ ಎಂದು ಮಹಿಳೆಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಹಿತಿ ಕೇಂದ್ರದಲ್ಲಿ ಜ್ಞಾನವಿಕಾಸ ಯೋಜನಾಧಿಕಾರಿ ಸಂಗೀತ ಎಸ್. ಹಾಗೂ ಸಮನ್ವಯಾಧಿಕಾರಿಗಳಾದ ನಳಿನಿ (ಬೆಳ್ತಂಗಡಿ) ಮತ್ತು ಹರಿಣಿ (ಗುರುವಾಯನಕೆರೆ) ಮಾಹಿತಿ ನೀಡಿದರು.

25ನೆಯ ವರ್ಷದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮಹಿಳೆಯೇ ಸಮ್ಮೇಳನಾಧ್ಯಕ್ಷೆಯಾಗಿರುವ (ಹೇಮಾವತಿ ವೀ. ಹೆಗ್ಗಡೆ) ಸುಸಂದರ್ಭದಲ್ಲಿ ಅವರೇ ಸ್ಥಾಪಿಸಿದ – ಸ್ತ್ರೀ ಸಶಕ್ತೀಕರಣದ ಮಾಧ್ಯಮವಾದ ಜ್ಞಾನವಿಕಾಸ ಯೋಜನೆಯ ಬಗ್ಗೆ ಮಾಹಿತಿ ಕೇಂದ್ರದ ಉಪಸ್ಥಿತಿಯು ಸಮ್ಮೇಳನಕ್ಕೆ ವಿಶೇಷ ಕಳೆಯನ್ನು ನೀಡಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು