News Karnataka Kannada
Sunday, April 28 2024
ಮಂಗಳೂರು

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಬುಧವಾರ ವಿಶೇಷ ಸಂಭ್ರಮ, ಊರಿನ ಜನರಿಂದ ಹೆಗ್ಗಡೆ ದಂಪತಿಗೆ ಅಭಿನಂದನೆ

Special celebrations were held at Kshetra Dharmasthala on Wednesday, people of the village felicitated heggade couple
Photo Credit : By Author

ಬೆಳ್ತಂಗಡಿ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ ವಿಶೇಷ ಸಂಭ್ರಮ – ಸಡಗರ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವೀ. ಹೆಗ್ಗಡೆ ದಂಪತಿಯ ವೈವಾಹಿಕ ಜೀವನದ ಸುವರ್ಣ ಸಂಭ್ರಮ, ಹೆಗ್ಗಡೆಯವರು 75ನೇ ಸಂವತ್ಸರಕ್ಕೆ ಪಾದಾರ್ಪಣೆಗೊಂಡ ಸಂಭ್ರಮ, ಹೆಗ್ಗಡೆಯವರನ್ನು ಪ್ರಧಾನಿಯವರು ರಾಜ್ಯಸಭಾ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿರುವ ಸಂಭ್ರಮ ಮತ್ತು ಹೇಮಾವತಿ ವೀ. ಹೆಗ್ಗಡೆಯವರಿಗೆ ಮಂಗಳೂರು ವಿಶ್ವವಿದ್ಯಾನಿಲ ಗೌರವ ಡಾಕ್ಟರೇಟ್ ನೀಡಿರುವ ಸಂಭ್ರಮ – ಈ ಎಲ್ಲಾ ಸಂಭ್ರಮಗಳ ಸಂಗಮವನ್ನು ದೇವಳದ ಸಿಬ್ಬಂದಿ ವರ್ಗ ಮತ್ತು ಊರಿನ ಸಮಸ್ತ ನಾಗರಿಕರು ಆಯೋಜಿಸಿ ಹೆಗ್ಗಡೆ ದಂಪತಿಗೆ ಶ್ರದ್ಧಾ – ಭಕ್ತಿಯಿಂದ ಗೌರವಪೂರ್ವಕ ಅಭಿನಂದನೆ ಅರ್ಪಿಸಿದರು.

ಹೆಗ್ಗಡೆಯವರ ನಿವಾಸ ಬೀಡಿನಿಂದ ಭವ್ಯ ಮೆರವಣಿಗೆ ಬಳಿಕ ಅಮೃತವರ್ಷಿಣಿ ಸಭಾ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಧರ್ಮಸ್ಥಳದ ವತಿಯಿಂದ ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧಿದಾನದ ಜೊತೆಗೆ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಕ್ಕೆ ಪ್ರತಿವರ್ಷ 4 ಕೋಟಿ ರೂ. ನೆರವು ನೀಡಲಾಗುತ್ತದೆ ಎಂದು ಹೇಳಿದರು.
ತಮಗೆ ಸಿಗುವ 6 ಕೋಟಿ ರೂ. ಸಂಸದರ ನಿಧಿಯನ್ನು ಬೀದರ್ ಜಿಲ್ಲೆ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಹಾಲು ಉತ್ಪಾದನಾ ಸಹಕಾರಿ ಸಂಘಗಳ ಪ್ರಗತಿಗೆ ವಿನಿಯೋಗಿಸಲಾಗುವುದು ಎಂದು ತಿಳಿಸಿದರು.

ಪತ್ನಿ ಹೇಮಾವತಿ ವೀ. ಹೆಗ್ಗಡೆ, ಸಹೋದರರ ಹಾಗೂ ಕುಟುಂಬ ಸದಸ್ಯರ ಸಕ್ರಿಯ ಸಹಕಾರ ಮತ್ತು ನೌಕರರ ಪ್ರಾಮಾಣಿಕ ಹಾಗೂ ನಿಷ್ಠೆಯ ಸೇವೆಯಿಂದ ತನ್ನ ಎಲ್ಲಾ ಕಾರ್ಯಗಳು ಸುಗಮವಾಗುತ್ತವೆ. ಭಕ್ತರು ಪ್ರೀತಿ-ವಿಶ್ವಾಸದಿಂದ ಧರ್ಮಸ್ಥಳವನ್ನು ತಮ್ಮದೇ ಕ್ಷೇತ್ರ ಎಂಬ ಭಾವನೆಯಿಂದ ಶ್ರದ್ಧಾ – ಭಕ್ತಿಯಿಂದ ಗೌರವಿಸುತ್ತಾರೆ. ಧರ್ಮಸ್ಥಳದ ಸಾನ್ನಿಧ್ಯದ ಕಾರ್ಣಿಕ ಮತ್ತು ದೇವರ ಅನುಗ್ರಹದಿಂದ ಸೇವಾ ಕಾರ್ಯಗಳ ವ್ಯಾಪ್ತಿ ಹೆಚ್ಚಾಗುತ್ತಿದೆ. ಪ್ರೀತಿಯ ಹಿಂದಿರುವ ಭಾವನೆಗಳು ಮುಖ್ಯವಾಗಿವೆ. ಪ್ರೀತಿ ಮತ್ತು ವಿಶ್ವಾಸ ಹಂಚಿದಷ್ಟು ಜಾಸ್ತಿಯಾಗುತ್ತದೆ ಎಂದು ಹೆಗ್ಗಡೆಯವರು ಸಂತಸ ವ್ಯಕ್ತಪಡಿಸಿದರು.

ಚಲನಚಿತ್ರ ನಟ ರಮೇಶ್ ಅರವಿಂದ್ ಮಾತನಾಡಿ ಮನೆಯಲ್ಲಿ ಮನದಲ್ಲಿ ನೆಮ್ಮದಿ ಮತ್ತು ಶಾಂತಿ ಇದ್ದರೆ ಜೀವನದಲ್ಲಿ ಸುಖ-ಶಾಂತಿ ಮತ್ತು ನೆಮ್ಮದಿ ಇರುತ್ತದೆ. ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಮಹಿಳೆಯ ಪಾತ್ರ ಅದ್ಭುತವಾಗಿದೆ ಎಂದು ಅವರು ಹೇಳಿದರು.

ನಮ್ಮ ಯೋಚನೆಗಳೇ ಸ್ವರ್ಗ ಹಾಗೂ ನರಕವಾಗಿರುತ್ತವೆ. ಎಲ್ಲರ ಹೃದಯವೂ ಧರ್ಮಸ್ಥಳವಾದಾಗ ಸುಖ-ಶಾಂತಿ, ನೆಮ್ಮದಿಯ ಜೀವನ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ದಾಂಪತ್ಯ ಜೀವನದಲ್ಲಿ ಸತಿ-ಪತಿ ಪರಸ್ಪರ ಅರ್ಥೈಸಿಕೊಂಡು ಧನಾತ್ಮಕ ಚಿಂತನೆಯೊಂದಿಗೆ ಸಾರ್ಥಕ ಜೀವನ ನಡೆಸಬೇಕು. ಕುಟುಂಬದ ಎಲ್ಲಾ ಸದಸ್ಯರಿಗೆ ಗಮನ ಕೊಡಬೇಕು. ಇದೇ ಸುಖೀ ದಾಂಪತ್ಯ ಜೀವನದ ಒಳಗುಟ್ಟು ಎಂದು ಅವರು ಹೇಳಿದರು. ದೈಹಿಕ ವ್ಯಾಯಾಮ, ಅರ್ಥಪೂರ್ಣ ಕೆಲಸ, ಹಿತವಾದ ಸಂಬಂಧ, ಸಮಾಜ ಸೇವೆ ಮತ್ತು ಚೆನ್ನಾಗಿ ನಿದ್ರೆ ಮಾಡಿದರೆ ಅರೋಗ್ಯ ಪೂರ್ಣ ಜೀವನ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಅಪ್ರತಿಮ ಸಾಧಕರಾದ ವೀರೇಂದ್ರ ಹೆಗ್ಗಡೆಯವರ ಸಮಚಿತ್ತ, ನಿರ್ಲಿಪ್ತ ಮನೋಭಾವ, ಶಾಂತಾ ಸ್ವಭಾವ, ಆದರ್ಶ ಹಾಗೂ ಅನುಕರಣೀಯವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು.

ಅಭಿನಂದನೆಗೆ ಕೃತಜ್ಞತೆ ಸಲ್ಲಿಸಿದ ಹೇಮಾವತಿ ವೀ. ಹೆಗ್ಗಡೆಯವರು ತಮ್ಮ ಪತಿ ದೇವರು ಕೊಟ್ಟ ಅವಕಾಶ ಸದುಪಯೋಗ ಮಾಡಿ ಜನ ಸಂಪರ್ಕ, ಅನುಭವ ಮತ್ತು ಸ್ವಂತ ಚಿಂತನ – ಮಂಥನದಿಂದ ಅನುಕರಣೀಯ ಹಾಗೂ ಮಾದರಿ ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ. ನಿಷ್ಠಾವಂತ ಮತ್ತು ಪ್ರಾಮಾಣಿಕ ಸಿಬ್ಬಂದಿಯಿಂದ ಎಲ್ಲಾ ಸೇವೆಗಳು ಯಶಸ್ವಿಯಾಗುತ್ತಿವೆ. ಸೇವಾ ಕಾರ್ಯಗಳ ವ್ಯಾಪ್ತಿಯಿಂದಾಗಿ ತನ್ನ ಬದುಕಿಗೆ ಕಾಮನ ಬಿಲ್ಲಿನ ಬಣ್ಣ ಬಂದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ಧರ್ಮಸ್ಥಳದಲ್ಲಿ ಯಾವುದೇ ಯೋಜನೆಯನ್ನು ಸ್ಫರ್ಧೆಗಾಗಿ ಅಥವಾ ಹೋಲಿಕೆಗಾಗಿ ಆರಂಭಿಸಿಲ್ಲ. ಸಾಮಾನ್ಯವಾಗಿ ಅಭಾವ, ಪ್ರಭಾವ ಮತ್ತು ಪ್ರೀತಿ-ವಿಶ್ವಾಸದಿಂದ ಜನರು ಧರ್ಮಸ್ಥಳಕ್ಕೆ ಬರುತ್ತಾರೆ. ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳಾ ಸಬಲೀಕರಣಕ್ಕೆ ನಿರಂತರ ಮಾಹಿತಿ, ಪ್ರೇರಣೆ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ಸಿರಿ ಗ್ರಾಮೋದ್ಯೋಗ ಸಂಸ್ಥೆ ಮತ್ತು 5276 ಜ್ಞಾನ ವಿಕಾಸ ಕೇಂದ್ರಗಳ ಮೂಲಕ ಮಹಿಳೆಯರಿಗೆ ಸ್ವಾವಲಂಬಿ ಜೀವನಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಹೇಳಿದರು.

ಬೀಡನಲ್ಲಿ ಅತ್ತೆಯವರ ಮಾರ್ಗದರ್ಶನ ಭಾವಂದಿರು ಮತ್ತು ನಾದಿನಿಯರ ಆತ್ಮೀಯತೆ ತನಗೆ ಹೆಚ್ಚಿನ ಉತ್ಸಾಹ ಮತ್ತು ಲವಲವಿಕೆ ನೀಡಿದೆ ಎಂದು ಅವರು ಸಂತಸ ಮತ್ತು ಧ್ನಯತೆ ವ್ಯಕ್ತಪಡಿಸಿದರು.

ಅರ್ಚನಾ ರಮೇಶ್ ಅರವಿಂದ್, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ. ನಿರಂಜನ ಕುಮಾರ್, ಪದ್ಮಲತಾ ನಿರಂಜನ್ ಕುಮಾರ್, ಶ್ರದ್ಧಾ ಅಮಿತ್ ಹಾಗೂ ಶಾಸಕ ಹರೀಶ್ ಪೂಂಜ ಉಪಸ್ಥಿತರಿದ್ದರು.
ಡಾ. ಎಲ್.ಎಚ್. ಮಂಜುನಾಥ್ ಸ್ವಾಗತಿಸಿದರು. ಆನಂದ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು