News Karnataka Kannada
Friday, May 03 2024
ಮಂಗಳೂರು

ಬಂಟ್ವಾಳ: ಅಂಗನವಾಡಿಗಳ ಸ್ಥಿತಿಗತಿ ಅವಲೋಕಿಸಲು ಅಂಗನವಾಡಿಗಳಿಗೆ ತೆರಳಿದ ರಮಾನಾಥ ರೈ

Ramanath Rai visited anganwadis to take stock of the condition of anganwadis
Photo Credit : News Kannada

ಬಂಟ್ವಾಳ: ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಅಂಗನವಾಡಿಗಳ ಸ್ಥಿತಿಗತಿ ಅವಲೋಕಿಸಲು ಅಂಗನವಾಡಿಗಳಿಗೆ ತೆರಳಿ ಅಲ್ಲಿ ಮಕ್ಕಳಿಗೆ ನೀಡಲಾಗುವ ಅಕ್ಕಿಯಲ್ಲಿ ಹರಿದಾಡುವ ಜೀವಂತ ಹುಳಗಳನ್ನು ನಾನೇ ಕಣ್ಣಾರೆ ಕಂಡಿದ್ದೇನೆ, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸರಿಪಡಿಸುವಂತೆ ಮಾಡಲಾದ ಆಗ್ರಹಕ್ಕೆ ಪ್ರತಿಯಾಗಿ ಅಧಿಕಾರಿಗಳು ಯಾವುದೇ ಪರಿಶೀಲನೆ ನಡೆಸದೆ ತಕ್ಷಣ ಅಂತಹ ಯಾವುದೇ ಘಟನೆಗಳೇ ಆಗಿಲ್ಲ ಎಂಬಂತೆ ವರದಿ ನೀಡುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದ್ದಾರೆ.

ಬಿ ಸಿ ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳಿಗೆ ಪೌಷ್ಟಿಕಾಂಶ ಕೊಡಬೇಕಾದ ಕೇಂದ್ರಗಳು ರೋಗ ವಿತರಣಾ ಕೇಂದ್ರಗಳಾಗುತ್ತಿವೆ. ಇದು ಗಂಭೀರ ವಿಚಾರವಾಗಿದ್ದು, ಅಂಗನವಾಡಿಗಳ ಮೂಲಕ ಸರಕಾರ ಭವಿಷ್ಯದ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಪೌಷ್ಟಿಕ ಆಹಾರಗಳನ್ನು ಪೂರೈಸುವ ಜವಾಬ್ದಾರಿ ವಹಿಸಿಕೊಂಡಿದೆ. ಆದರೆ ಬಂಟ್ವಾಳ ಕ್ಷೇತ್ರದ ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೂರೈಕೆಯಾಗುವ ಪೌಷ್ಠಿಕ ಆಹಾರಗಳಲ್ಲಿ ಜೀವಂತ ಹುಳಗಳು ಹರಿದಾಡುತ್ತಿರುವುದನ್ನು ನಾನು ಪರಿಶೀಲನೆ ವೇಳೆ ಕಣ್ಣಾರೆ ಕಂಡುಕೊಂಡಿದ್ದೇನೆ.

ಅಕ್ಕಿಯಲ್ಲಿ ಹರಿದಾಡುವ ಹುಳಗಳನ್ನು ನೋಡುವ ದೌರ್ಭಾಗ್ಯ ಮಕ್ಕಳದ್ದಾಗಿದೆ. ಅಲ್ಲಿನ ಪರಿಸ್ಥಿತಿಯ ಬಗ್ಗೆ ಕಳಪೆ ಆಹಾರಗಳ ಬಗ್ಗೆ ಮೊಬೈಲ್ ಚಿತ್ರೀಕರಣದ ಮೂಲಕ ಚಿತ್ರೀಕರಿಸಿ ಈ ಬಗ್ಗೆ ಸ್ವತಃ ನಾನೇ ಆಹಾರ ಇಲಾಖೆಯ ಜಿಲ್ಲಾ ನಿರ್ದೇಶಕರ ಗಮನಕ್ಕೂ ತಂದಿದ್ದೇನೆ.ಮಾಧ್ಯಮಗಳ ಮಂದಿಯ ಗಮನಕ್ಕೂ ತಂದಿದ್ದೇನೆ. ಆದರೂ ಸ್ಥಳೀಯ ಮಟ್ಟದ ಅಧಿಕಾರಿಗಳು ಅಂತಹ ಪ್ರಕರಣಗಳು ಗಮನಕ್ಕೂ ಬಂದಿಲ್ಲ ಎಂದು ವರದಿ ನೀಡುವುದಾದರೆ ಇದಕ್ಕಿಂತ ದೊಡ್ಡ ನಾಚಿಕಗೇಡು ಇನ್ನೊಂದಿಲ್ಲ.ನಾನೇನು ಸುಳ್ಳು ಹೇಳುತ್ತೇನೋ ಅಥವಾ ಇನ್ನೆಲ್ಲಿಂದಲೋ ಹುಳಭರಿತ ಅಕ್ಕಿಯನ್ನು ಸಂಗ್ರಹಿಸಿ ತಂದು ಹಾಜರುಪಡಿಸಿದ್ದೇನೋ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವ್ಯವಸ್ಥೆಯ ಕುಂದು-ಕೊರತೆಗಳನ್ನು ಹೇಳುವಾಗ ಅದನ್ನು ಪರಿಶೀಲನೆ ನಡೆಸಿ ಸರಿಪಡಿಸಬೇಕಾದ ಇಲಾಖೆ, ಅಧಿಕಾರಿಗಳು ಜವಾಬ್ದಾರಿಯಿಂದ ಬೆನ್ನು ಜಾರಿಸಿ ನುಣುಚಿಕೊಳ್ಳುವುದು ಶೋಭೆಯಲ್ಲ. ಅಥವಾ ಇದಕ್ಕೆ ಸ್ಥಳೀಯ ಅಂಗನಾಡಿ ಕಾರ್ಯಕರ್ತೆಯರನ್ನು ದಬಾಯಿಸುವ ಮೂಲಕ ತಪ್ಪನ್ನು ಮುಚ್ಚಿ ಹಾಕುವ ಕೆಲಸವನ್ನೂ ಮಾಡಬಾರದು. ಅಂಗನವಾಡಿ ಪುಟಾಣಿಗಳಿಗೆ ಸಮರ್ಪಕವಾದ ಪೌಷ್ಠಿಕ ಆಹಾರ ಮುಂದಿನ ದಿನಗಳಲ್ಲಿ ಒದಗಿಸಿಕೊಡುವ ಜವಾಬ್ದಾರಿ ಇಲಾಖಾಧಿಕಾರಿಗಳು ಹಾಗೂ ಸರಕಾರದ್ದು. ಅದು ಆಗಬೇಕು ಎಂಬ ಒಳ್ಳೆಯ ಮನಸ್ಸಿನಿಂದ ಈ ಕೃತ್ಯಗಳನ್ನು ಬಯಲಿಗೆಳೆಯುವ ಕೆಲಸ ಮಾಡಿದ್ದೇನೆ ಹೊರತು ಇದರಲ್ಲಿ ಯಾವುದೇ ರಾಜಕೀಯ ಮಾಡಲು ಬಯಸುವುದಿಲ್ಲ ಎಂದ ರಮಾನಾಥ ರೈ ಈ ಬಗ್ಗೆ ಯಾವುದೇ ಅಂಗನಾಡಿ ಕಾರ್ಯಕರ್ತೆಯರ ಮೇಲೆ ಆರೋಪ ಹೊರಿಸುವುದಿಲ್ಲ.

ಅವರೆಲ್ಲರೂ ಹೊಟ್ಟೆಪಾಡಿಗಾಗಿ ಸಣ್ಣ ಸಂಬಳಕ್ಕೆ ದುಡಿಯುವವರು, ಅವರ ಹಿತ ಕಾಪಾಡುವುದೂ ಕೂಡಾ ಸರಕಾರದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಅಂಗನವಾಡಿಗಳ ಆಹಾರದಲ್ಲಿ ಹುಳ ಪ್ರಕರಣವನ್ನು ಅಂಗನಾಡಿ ಕಾರ್ಯಕರ್ತೆಯರ ತಲೆಗೆ ಕಟ್ಟಿ ಅವರ ಜೀವನದ ಜೊತೆ ಚೆಲ್ಲಾಟವಾಡುವ ಕೃತ್ಯವನ್ನು ಯಾರು ಕೂಡಾ ಮಾಡಬಾರದು. ಒಳ್ಳೆಯ ಮನಸ್ಸಿನಿಂದ ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಅಂಗನವಾಡಿ ಪುಟಾಣಿಗಳ ಹಿತ ಕಾಯುವಂತೆ ಆಗ್ರಹಿಸಿದರು.

ಈ ಸಂದರ್ಭ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು