News Karnataka Kannada
Thursday, May 02 2024
ಮಂಗಳೂರು

ಬಂಟ್ವಾಳ: ಬಡವರನ್ನು ಸತಾಯಿಸಲು ಮುಂದಾದರೆ ನಾನು ಸುಮ್ಮನೇ ಇರುವುದಿಲ್ಲ – ಅಶೋಕ್ ರೈ

I will not be silent if I try to harass the poor: Ashok Rai
Photo Credit : News Kannada

ಬಂಟ್ವಾಳ: ಕಚೇರಿಗೆ ವಿವಿಧ ಕೆಲಸಗಳಿಗಾಗಿ ಬರುವ ಬಡವರನ್ನು ಯಾವುದೇ ಕಾರಣಕ್ಕೂ ಸತಾಯಿಸಲು ಹೋಗಬೇಡಿ. ಬಡವರು ಹೆಚ್ಚಾಗಿ ಇಲಾಖೆಯ ಅಥವಾ ತಾವು ಮಾಡಿಸಿಕೊಳ್ಳಲು ಬಂದ ಕೆಲಸದ ಬಗ್ಗೆ ಅರಿವು ಇಲ್ಲದವರು, ವಿದ್ಯೆ ಇಲ್ಲದವರೂ ಇದ್ದಾರೆ ಅಂತವರ ಕೆಲಸವನ್ನು ಎಷ್ಟು ಬೇಗ ಆಗುತ್ತದೋ ಅಷ್ಟು ಬೇಗ ಮಾಡಿಕೊಡಬೇಕು. ಬಡವರನ್ನು ಸತಾಯಿಸಲು ಮುಂದಾದರೆ ನಾನು ಸುಮ್ಮನೇ ಇರುವುದಿಲ್ಲ ಮತ್ತು ಆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

ಅವರು ಜೂ. ೩ ರಂದು ವಿಟ್ಲ ಪಟ್ಟಣ ಪಂಚಾಯತ್‌ನಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಕಚೇರಿ ವ್ಯವಹಾರಗಳ ಬಗ್ಗೆ ಸಿಬಂದಿಗಳ ಜೊತೆ ಚರ್ಚೆ ನಡೆಸಿದರು.

ಅಧಿಕಾರಿಗಳ ಬಗ್ಗೆ ಅಪಾರ ಗೌರವ ಇದೆ, ಅಧಿಕಾರಿಗಳಿಲ್ಲದೇ ಇದ್ದರೆ ಯಾವ ಕೆಲಸವೂ ಆಗಲು ಸಾಧ್ಯವಿಲ್ಲ. ಸರಕಾರಿ ಕಚೇರಿಯ ಎಲ್ಲಾ ವ್ಯವಹಾರಗಳು ನನಗೆ ಗೊತ್ತಿದೆ. ಅಭಿವೃದ್ದಿ ಗೆ ನನ್ನ ಸಂಪೂರ್ಣ ಸಹಕಾರ ಇದ್ದೇ ಇದೆ, ಅಭಿವೃದ್ದಿಗೆ ಏನು ಬೇಕು ಅದನ್ನು ನನ್ನಲ್ಲಿ ಹೇಳಿ ಮಾಡಿಸಿಕೊಡುತ್ತೇನೆ, ಭೃಷ್ಟಾಚಾರ ಮಾಡಬೇಡಿ , ಬಡವರಿಗೆ ಕಿಂಚಿತ್ತೂ ತೊಂದರೆ ಕಡಬೇಡಿ ಎಂದು ಹೇಳಿದರು.

೧೬೫ ಕುಟುಂಬಕ್ಕೆ ಅನುದಾನವೇ ಬಂದಿಲ್ಲ: ವಿವಿಧ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಈ ಪೈಕಿ ೧೬೫ ಮನೆಗಳಿಗೆ ಯೋಜನೆಯ ಕಂತು ಬರಲು ಬಾಕಿ ಇದೆ, ಈ ಪೈಕಿ ೧೦೫ ಮನೆಗಳಿಗೆ ನಯಾ ಪೈಸೆ ಕಂತು ಬಂದಿಲ್ಲ. ಸರಕಾರದ ಸಹಾಯವನ್ನು ನಂಬಿ ಮನೆ ಕಟ್ಟಲು ಬಡವರು ಆಸೆಪಟ್ಟಿದ್ದರು ಆದರೆ ಅವರ ಆಸೆಗೆ ತಣ್ಣೀರೆರಚಲಾಗಿದೆ ಯಾಕೆ ಹೀಗಾಗಿದೆ ಎಂದು ಶಾಸಕರು ಅಧಿಕಾರಿಯ ಬಳಿ ಪ್ರಶ್ನಿಸಿದರು.

ಕಂತು ಬಾರದೆ ಇರುವ ಎಲ್ಲಾ ಮನೆಗಳಿಗೂ ಶೀಘ್ರದಲ್ಲೇ ಹಣ ಮಂಜೂರು ಮಾಡಿಸಬೇಕು. ನಾಳೆಯೇ ಸಂಬಂಧಪಟ್ಟ ಇಲಾಖೆಗೆ ಪತ್ರ ಕಳುಹಿಸಿ ನಾನು ಸಚಿವರ ಜೊತೆ ಮಾತನಾಡಿ ತಕ್ಷಣವೇ ಎಲ್ಲಾ ಕಂತುಗಳ ಪಾವತಿಗೆ ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದ ಶಾಸಕರು ಈ ರೀತಿಯ ದೋಷಗಳು ಆದರೆ ಅದನ್ನು ತಕ್ಷಣವೇ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಬಡವರಿಗೆ ನೆರವಾಗಬೇಕು ಎಂದು ಸೂಚನೆ ನೀಡಿದರು.

ಕಾಮಗಾರಿ ಬದಲಾಯಿಸಿ: ದೊಡ್ಡ ಕಾಮಗಾರಿಗೆ ಕನಿಷ್ಠ ಅನುದಾನವನ್ನು ಮೀಸಲಿಡಲಾಗಿದೆ. ಈ ಅನುದಾನದಿಂದ ಉದ್ದೇಶಿತ ಕಾಮಗಾರಿ ನಡೆಸಲು ಸಾಧ್ಯವಿಲ್ಲ ಈ ಕಾರಣಕ್ಕೆ ಆ ಅನುದಾನವನ್ನು ಬದಲಾಯಿಸುವಂತೆ ಶಾಸಕರು ತಿಳಿಸಿದರು. ಒಂದು ಕಾಮಗಾರಿಗೆ ಎಷ್ಟು ಅನುದಾನ ಬೇಕೋ ಅಷ್ಟೇ ಅನುದಾನವನ್ನು ಮೀಸಲಿಡಬೇಕು. ಒಟ್ರಾಶಿ ಅನುದಾನ ಇಡುವಂತಾಗಬಾರದು ಎಂದು ಹೇಳಿದ ಶಾಸಕರು ಕೆಲವು ಕಾಮಗಾರಿಗಳನ್ನು ಬದಲಾಯಿಸುವಂತೆ ಸೂಚನೆ ನೀಡಿದರು.

ವಿಟ್ಲ ಪುತ್ತೂರು ರಸ್ತೆಯಲ್ಲಿ ಕಮಾನು ನಿರ್ಮಾಣ ಮಾಡುವುದಕ್ಕೆ ಅನುದಾನ ಇಡಲಾಗಿದೆ ಎಂದು ಅದಿಕಾರಿಗಳು ತಿಳಿಸಿದಾಗ ಕಮಾನು ಬೇಡ ರಸ್ತೆ ಅಗಲೀಕರಣ ಆಗುವ ವೇಳೆ ಕಮಾನು ಒಡೆದು ಹಾಕುತ್ತಾರೆ ಆ ಅನುದಾನವನ್ನು ಬೇರೆ ಕೆಲಸಗಳಿಗೆ ಬಳಕೆ ಮಾಡಿ ಎಂದು ಸೂಚನೆ ನೀಡಿದರು.

ಮಳೆಗಾಲ ಮುಗಿದ ಬಳಿಕ ಕಣಿ ಮಾಡ್ತೀರಾ?: ಒಕ್ಕೆತ್ತೂರಿನಲ್ಲಿ ಲೋಕೋಪಯೋಗಿ ಇಲಾಖೆಯವರು ರಸ್ತೆ ಬದಿ ಚರಂಡಿ ಮಾಡಬೇಕಿತ್ತು ಆದರೆ ಅವರು ಆ ಕೆಲಸವನ್ನು ಮಾಡದೆ ನಮ್ಮ ತಲೆಗೆ ಕಟ್ಟಿ ಬಿಡ್ತಾರೆ. ಜನ ನಮ್ಮನ್ನು ದೂರುತ್ತಾರೆ ಎಂದು ಮುಖ್ಯಾಧಿಕಾರಿ ಶಾಸಕರ ಗಮನಕ್ಕೆ ತಂದರು. ತಕ್ಷಣವೇ ಲೋಕೋಪಯೋಗಿ ಇಲಾಖೆ ಇಂಜನಿಯರ್‌ಗೆ ಕರೆ ಮಾಡಿದ ಸಾಸಕರು ಒಕ್ಕೆತ್ತೂರಿನಲ್ಲಿ ಚರಂಡಿ ವ್ಯವಸ್ಥೆಯನ್ನು ಮಾಡುವಂತೆ ಸೂಚಿಸಿದರು.

ಮಳೆಗಾಲ ಮುಗಿದ ಬಳಿಕ ಚರಂಡಿ ಮಾಡುವುದಲ್ಲ ಈಗಲೇ ಮಾಡಬೇಕು. ನಿಮ್ಮ ಇಲಾಖೆಯಲ್ಲಿ ತಿಳಿದವರೇ ಇರುವುದು , ಎಲ್ಲವೂ ಗೊತ್ತಿರುವವರೇ ಇರುವುದು ಆದರೂ ನೀವು ಯಾಕೆ ಸಾರ್ವಜನಿಕರು ನಿಮ್ಮ ಬಗ್ಗೆ ಮಾತನಾಡಿಕೊಳ್ಳುವ ಹಾಗೆ ಮಾಡುತ್ತೀರಿ? ಎಲ್ಲೆಲ್ಲಿ ನೀವು ಚರಂಡಿ ಮಾಡಬೇಕೋ ಅಲ್ಲೆಲ್ಲಾ ನೀವೇ ಅದನ್ನು ಮಾಡಬೇಕು ಎಂದು ಸೂಚನೆಯನ್ನು ನೀಡಿದರು.

ಬಹುಗ್ರಾಮ ಕುಡಿಯುವ ನೀರಿಗೆ ವಿಟ್ಲವನ್ನು ಸೇರಿಸುತ್ತೇನೆ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನಮ್ಮನ್ನು ಸೇರಿಸುವುದು ಬೇಡ ಎಂದು ಹೇಳಿದ್ದೀರಂತೆ ಯಾಕೆ ಎಂದು ಶಾಸಕರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ನಮಗೆ ಶಂಬೂರಿನಿಂದ ಕುಡಿಯುವ ನೀರಿನ ಯೋಜನೆ ಮಾಡಲು ನಾವು ಈಗಾಗಲೇ ೨೫ ಲಕ್ಷ ರೂ ಹಣ ಪಾವತಿ ಮಾಡಿದ್ದೇವೆ. ಅವರು ನೀರಿನ ಟ್ಯಾಂಕ್ ನಿರ್ಮಾಣ ಮಾಡಿದ್ದಾರೆ, ಜಾಗವನ್ನು ಗುರಿತಿಸಿದ್ದಾರೆ ಇದಕ್ಕಾಗಿ ಬಹುಗ್ರಾಮ ಬೇಡ ಎಂದು ಹೇಳಿರುವುದಾಗಿ ಅಧಿಕಾರಿ ತಿಳಿಸಿದರು. ಈ ಬಗ್ಗೆ ಶಂಬೂರು ಯೋಜನೆಯ ಅಧಿಕಾರಿಯ ಜೊತೆ ಮಾತನಾಡಿದ ಶಾಸಕರು ವಿಟ್ಲದ ನೀರಿನ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮಾತನಾಡಿದ ಶಾಸಕರು ವಿಟ್ಲವನ್ನು ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಸೇರಿಸಿಕೊಳ್ಳುವುದಾಗಿ ಅಧಿಕಾರಿಗೆ ತಿಳಿಸಿದರು.

ಟ್ಯಾಂಕ್ ಮೂಲಕ ನೀರು ವಿತರಣೆ: ವಿಟ್ಲದ ಕೆಲವು ಕಾಲನಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಪಿಕಪ್ ವಾಹನದಲ್ಲಿ ಟ್ಯಾಂಕ್ ಮೂಲಕ ನೀರು ವತರಣೆ ಮಾಡುತ್ತಿದ್ದೇವೆ ಎಂದು ಶಾಸಕರಿಗೆ ತಿಳಿಸಿದರು. ಪಂಚಾಯತ್ ವ್ಯಾಪ್ತಿಯಲ್ಲಿ ಎಲ್ಲಿಯೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. ಹಳೆಯ ಬೋರ್‍ವೆಲ್‌ಗಳ ದುರಸ್ಥಿ ಮಾಡುವುದು ಬೇಡ, ಹೊಸ ಬೋರ್‌ವೆಲ್ ತೆಗೆದು ನೀರಿನ ವ್ಯವಸ್ಥೆ ಮಾಡಬೇಕು. ನೀರಿಲ್ಲ ಎಂದು ಎಲ್ಲಿಂದಲೂ ದೂರುಗಳು ಬಾರದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಸಿಬಂದಿಗಳ ಕೊರತೆ ಇದೆ: ಪಟ್ಟಣ ಪಂಚಾಯತ್‌ನಲ್ಲಿ ಸಿಬಂದಿಗಳ ಕೊರತೆ ಇದೆ , ೪೦ ಮಂದಿ ಸಿಬಂದಿಗಳು ಬೇಕಾಗಿದೆ. ಈಗ ಹತ್ತು ಮಂದಿ ಮಾತ್ರ ಇದೆ ಕೆಲಸ ಮಾಡಲು ತುಂಬಾ ಕಷ್ಟವಾಗುತ್ತಿದೆ ಎಂದು ಮುಖ್ಯಾಧಿಕಾರಿ ಗೋಪಾಲ್ ನಾಯ್ಕ್ ಶಾಸಕರಲ್ಲಿ ತಿಳಿಸಿದರು. ಸಿಬಂದಿಗಳನ್ನು ತಾತ್ಕಾಲಿಕ ನೆಲೆಯಲ್ಲಿ ನೇಮಕಾತಿ ಮಾಡಿಕೊಳ್ಳುವುದಿಲ್ಲ ಯಾಕೆ ಈ ಬಗ್ಗೆ ಜಿಲ್ಲಾದಿಕಾರಿಗಳ ಜೊತೆ ಮಾತನಾಡಿ ಎಂದು ಅಧಿಕಾರಿಗೆ ತಿಳಿಸಿದರು.

ಅಭಿನಂದನೆ: ವಿಟ್ಲ ಪಟ್ಟಣ ಪಂಚಾಯತ್‌ಗೆ ಮೊದಲ ಬಾರಿಗೆ ಅಗಮಿಸಿದ ಶಾಸಕ ಅಶೋಕ್ ರೈ ಯವರನ್ನು ಮುಖ್ಯಾಧಿಕಾರಿ ಗೋಪಾಲ್ ನಾಯ್ಕ ಸಿಬಂದಿಗಳ ಪರವಾಗಿ ಹೂಗುಚ್ಚ ಹಾಗೂ ಶಾಲು ಹೊದಿಸಿ ಸನ್ಮಾನಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು