News Karnataka Kannada
Saturday, April 20 2024
Cricket
ಮಂಗಳೂರು

ಬಂಟ್ವಾಳ: ಮಹಿಳೆಯರ ಸ್ವಉದ್ಯೋಗಕ್ಕೆ ನೆರವಾದ ಎರೆಹುಳು ಘಟಕ

Bantwal: Earthworm unit that helped women's self-employment
Photo Credit : News Kannada

ಬಂಟ್ವಾಳ: ಸ್ವ ಉದ್ಯೋಗ ಕೈಗೊಳ್ಳುವ ಮೂಲಕ ಮಹಿಳೆಯರು ತಮ್ಮ ಆರ್ಥಿಕ ಸ್ಥಿತಿ ಸುಧಾರಣೆ ಹಾಗೂ ಸಾಮಾಜಿಕ ಮನ್ನಣೆಯೊಂದಿಗೆ ಸ್ವಾವಲಂಬಿ ಜೀವನ ನಡೆಸಲು ಸಾಧ್ಯ ಎಂಬುದನ್ನು ಮಹಿಳೆಯರ ತಂಡವೊಂದು ಸಾಧಿಸಿ ತೋರಿಸಿದ್ದಾರೆ.

ಹೌದು… ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮ ಪಂಚಾಯತ್‌ನ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ ಹಾಗೂ ಸ್ತ್ರೀಶಕ್ತಿ ಸಂಘ ಮಹಿಳೆಯರ ತಂಡ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಿಕೊಡಲಾದ ಎರೆಹುಳು ಘಟಕದಿಂದ ಗೊಬ್ಬರ ಪಡೆದು ಮಾರಾಟ ಮಾಡಿ ಮೊದಲ ಬಾರಿಗೆ ಆದಾಯ ಪಡೆಯುವ ಮೂಲಕ ಜಿಲ್ಲೆಯಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.

ಪ್ಯಾಕೆಟ್ ಗೊಬ್ಬರ: 6 ತಿಂಗಳಿಂದ ಘಟಕ ಕಾರ್ಯನಿರ್ವಹಿಸುತ್ತಿದ್ದು, ಮೊದಲ ಬಾರಿಗೆ 154 ಕೆ.ಜಿ. ಗೊಬ್ಬರ ಸಂಗ್ರಹಿಸಲಾಗಿದೆ. ಗೊಬ್ಬರವನ್ನು ಪ್ಯಾಕೆಟ್ ಮಾದರಿಯಲ್ಲಿ ಸಿದ್ಧಪಡಿಸಿ ಸ್ಥಳೀಯ ಕೃಷಿಕರಿಗೆ, ಮನೆಯಲ್ಲಿ ಕೈ ತೋಟ ಮಾಡಿಕೊಂಡಿರುವವರಿಗೆ 1 ಕೆ.ಜಿ.ಗೆ 120ರೂ.ಗೆ ಒಂದೇ ದಿನದಲ್ಲಿ 60 ಕೆ.ಜಿ. ಈಗಾಗಲೇ ಮಾರಾಟ ಮಾಡಿರುತ್ತಾರೆ. ಇನ್ನುಳಿದ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದ್ದು, ಸುಮಾರು 19000 ರೂ.ವರೆಗೆ ಆದಾಯ ಬರುವ ನಿರೀಕ್ಷೆ ಇದೆ. ಈ ಮೂಲಕ ತಮ್ಮದೇ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಆದಾಯ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಿಲಪದವು ವಾರ್ಡಿನ ಸ್ತ್ರೀಶಕ್ತಿ ಸಂಘದ ಮಹಿಳೆಯರು ಹಲವು ವರ್ಷಗಳಿಂದ ಎನ್‌ಆರ್‌ಎಲ್‌ಎಂನ ಚಟುವಟಿಕೆಯಲ್ಲಿ ಸಕ್ರೀಯರಾಗಿದ್ದಾರೆ. ಹೀಗಿರುವಂತೆ ಉದ್ಯೋಗ ಖಾತರಿ ಯೋಜನೆಯಡಿ ಎರೆಹುಳು ಗೊಬ್ಬರ ಘಟಕದ ಕುರಿತು ಗ್ರಾಮ ಪಂಚಾಯತ್ ನಲ್ಲಿ ನಡೆದ ಮಾಹಿತಿ ಶಿಬಿರ, ಸ್ಥಳೀಯ ಜನಶಿಕ್ಷಣ ಟ್ರಸ್ಟ್ ನ ಸುಗ್ರಾಮದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಿಂದ ವಿಷಯ ತಿಳಿದು ಸ್ವ ಉದ್ಯೋಗದ ದೃಷ್ಟಿಯಿಂದ ಮಂಗಲಪದವು ಎಂಬಲ್ಲಿನ ಅಂಗನವಾಡಿಯಲ್ಲಿ ನಿರ್ಮಿಸಲಾದ ಎರೆಹುಳು ಗೊಬ್ಬರ ಘಟಕದ ನಿರ್ವಹಣೆ ಮಾಡುತ್ತಿದ್ದಾರೆ. ಇವರ ಕಾರ್ಯಕ್ಕೆ ತಾಲೂಕು ಪಂಚಾಯತ್‌, ವೀರಕಂಬ ಗ್ರಾಮ ಪಂಚಾಯತ್‌ ಆಡಳಿತ ಮಂಡಳಿ, ಸುಗ್ರಾಮ ಜಾಗೃತಿ ವೇದಿಕೆ, ಬಾಲ ವಿಕಾಸ ಸಮಿತಿ ಮಂಗಿಲಪದವು ಅಂಗನವಾಡಿ ಕೇಂದ್ರ, ಶಿಶು ಅಭಿವೃದ್ಧಿ ಯೋಜನೆ ಕಚೇರಿ ವಿಟ್ಲ ವಲಯ ಹಾಗೂ ವಿವಿಧ ಸಂಘ-ಸಂಸ್ಥೆಗಳು ಸಹಕಾರ ನೀಡಿವೆ.

ಮಹಿಳೆಯರಿಂದಲೇ ಜವಾಬ್ದಾರಿ ನಿರ್ವಹಣೆ: ಮಂಗಿಲಪದವು ಅಂಗನವಾಡಿ ಕೇಂದ್ರವನ್ನು ಮಾದರಿಯಾಗಿ ಮಾಡಬೇಕು ಎಂಬ ಉದ್ಧೇಶದಿಂದ ವೀರಕಂಬ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಂಗಿಲಪದವು ಅಂಗನವಾಡಿ ಕೇಂದ್ರದಲ್ಲಿ ಎರೆಹುಳು ತೊಟ್ಟಿ ನಿರ್ಮಿಸಲು ಸ್ತ್ರೀಶಕ್ತಿ ಸಂಜೀವಿನಿ, ಜಾಗೃತಿ ವೇದಿಕೆಯ ಸದಸ್ಯರು ಮೂಲಕ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದು, ನರೇಗಾ ಯೋಜನೆಯಡಿ ಎರೆಹುಳು ತೊಟ್ಟಿ ನಿರ್ಮಿಸಲಾಗಿದ್ದು, ಕೆಲವು ಸಮಯದವರೆಗೆ ಇದರ ನಿರ್ವಹಣೆಗೆ ಯಾರೂ ಮುಂದಾಗಿರಲಿಲ್ಲ. ಎನ್‌ಆರ್‌ಎಲ್‌ಎಂನ ಸ್ತ್ರೀಶಕ್ತಿ ಸಂಘದ ಸದಸ್ಯರು ನಿರ್ವಹಣೆ ಜವಾಬ್ದಾರಿ ಹೊತ್ತು ಮುನ್ನಡೆಸುತ್ತಿದ್ದಾರೆ. ಮಂಗಿಲಪದವು ವಾರ್ಡಿನ ಸರ್ಕಾರಿ ಶಾಲೆಯ ಬಿಸಿಯೂಟದ ತ್ಯಾಜ್ಯ, ಸ್ಥಳೀಯರ ತೋಟಗಳಿಂದ ಸಿಗುವ ಅಡಿಕೆ ಹಾಳೆ, ಬಾಳೆ, ಹಸಿರೆಲೆ, ತರಗೆಲೆ, ತರಕಾರಿ ತ್ಯಾಜ್ಯ, ಸುತ್ತಮುತ್ತಲಿನ ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯಗಳನ್ನು ತಂದು ಘಟಕ ತುಂಬಿಸಿ, 1 ಕೆ.ಜಿ.ಯಷ್ಟು ಎರೆಹುಳು ತಂದು ಹಾಕಿದ್ದಾರೆ. ಸ್ತ್ರೀಶಕ್ತಿ ಸಂಘದ ಮಹಿಳೆಯರೊಂದಿಗೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಎರೆಹುಳು ತೊಟ್ಟಿಯ ನಿರ್ವಹಣೆಗೆ ಸಾಥ್‌ ನೀಡಿರುತ್ತಾರೆ. ಆರಂಭದಲ್ಲಿ ಇದರ ಬಗ್ಗೆ ಮಾಹಿತಿ ಇಲ್ಲದೇ ಕಷ್ಟವಾದರೂ ಈಗ ಚಿಂತೆ ಇಲ್ಲದೇ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಎರೆಹುಳು ತೊಟ್ಟಿ ಕಾಮಗಾರಿಗೆ 16445 ರೂ. ಕೂಲಿ ಮೊತ್ತ ಪಾವತಿಯಾಗಿದ್ದು, 10450ರೂ. ಸಾಮಗ್ರಿ ಮೊತ್ತ ಪಾವತಿಯಾಗಿರುತ್ತದೆ. ಈ ಕಾಮಗಾರಿಯಿಂದ 55 ಮಾನವ ದಿನಗಳ ಸೃಜನೆ ಆಗಿದೆ.
ಅನಿಸಿಕೆ:
ಜಿಲ್ಲೆಯಲ್ಲೇ ಮೊದಲ ಬಾರಿಗೆ ವಿಶೇಷ ಕಾರ್ಯವನ್ನು ಗ್ರಾಮದ ಮಹಿಳೆಯರು ಮಾಡಿದ್ದು, ನರೇಗಾದಿಂದ ಎರೆಹುಳು ತೊಟ್ಟಿ ನಿರ್ಮಿಸಿ ಅದರ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಕ್ರಮ, ತರಬೇತಿ ಗ್ರಾಮ ಪಂಚಾಯತ್‌ನಿಂದ ಮಾಡಲಾಗಿತ್ತು. ಮಹಿಳೆಯರ ತಂಡವು ವಿಶೇಷ ಆಸಕ್ತಿ ವಹಿಸಿದ್ದರಿಂದ ಅದರ ಪ್ರತಿಫಲ ಕಾಣುವಂತಾಗಿದೆ.
-ದಿನೇಶ್‌, ಅಧ್ಯಕ್ಷ, ವೀರಕಂಬ ಗ್ರಾಪಂ

ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌, ಗ್ರಾಮ ಪಂಚಾಯತ್‌ ಆಡಳಿತ ಮಂಡಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿವಿಧ ಸಂಘ-ಸಂಸ್ಥೆಗಳು ಸಹಕಾರದೊಂದಿಗೆ ನರೇಗಾ ಯೋಜನೆಯಡಿ ಎರೆಹುಳು ತೊಟ್ಟಿ ನಿರ್ಮಿಸಲಾಗಿದ್ದು, ಘಟಕಕ್ಕೆ ಬೇಕಾದ ಛಾವಣಿ ನಿರ್ಮಾಣಕ್ಕೆ ವಾರ್ಡ್‌ ಸದಸ್ಯರು ಸಹಕಾರ ನೀಡಿರುತ್ತಾರೆ. ಸಂಜೀವಿನಿ ಒಕ್ಕೂಟದ ಮಹಿಳೆಯರು ಮುತುವರ್ಜಿ ವಹಿಸಿ ಇದರ ನಿರ್ವಹಣೆ ಮಾಡುವ ಮೂಲಕ ಆದಾಯ ಗಳಿಸಿದ್ದು, ಇದರಿಂದ ಇತರರಿಗೂ ಮಾದರಿಯಾಗಿದ್ದಾರೆ.
-ನಿಶಾಂತ್‌ ಬಿ.ಆರ್., ಪಿಡಿಒ, ವೀರಕಂಬ ಗ್ರಾಪಂ

ಗ್ರಾಮದ ಸ್ತ್ರೀ ಶಕ್ತಿ ಮಹಿಳೆಯರು ಒಟ್ಟು ಸೇರಿ ಈ ಕಾರ್ಯವನ್ನು ಮಾಡಿರುವುದು ಶ್ಲಾಘನೀಯ ಮುಂದೆಯೂ ಇಂತಹ ಕಾರ್ಯಗಳನ್ನು ಮಾಡಿ ಮಹಿಳೆಯರು ಆರ್ಥಿಕವಾಗಿ ಸದೃಢವಾದಾಗ ಸ್ತ್ರೀಶಕ್ತಿ ಸಮಾಜದ ಶಕ್ತಿ ಆಗಲು ಸಾಧ್ಯ ಇದು ಇತರರಿಗೂ ಮಾದರಿ. ಇವರಿಗೆ ಮುಂದಕ್ಕೂ ಗ್ರಾಮ ಪಂಚಾಯತ್ ಆಡಳಿತ ಸಂಪೂರ್ಣ ಸಹಕಾರವನ್ನು ನೀಡುತ್ತದೆ.
– ಶೀಲಾ ನಿರ್ಮಲ ವೇಗಸ್‌, ಉಪಾಧ್ಯಕ್ಷೆ ವೀರಕಂಬ ಗ್ರಾಪಂ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು