ಮಂಗಳೂರು, ಮೇ 28: ಹೆಸರಾಂತ ಕೊಂಕಣಿ ಸಾಹಿತಿ, ಹಾಸ್ಯ ಸಾಹಿತ್ಯ ಬರಹಗಾರ ‘ಸಿಜಿಎಸ್ ತಾಕೋಡ್’ಎಂದೇ ಜನಪ್ರಿಯರಾಗಿದ್ದ ಸಿರಿಲ್ ಜಿ ಸಿಕ್ವೇರ(71) ಅಲ್ಪ ಕಾಲದ ಅನಾರೋಗ್ಯದಿಂದ ಶನಿವಾರ ಬೆಳಗ್ಗೆ ನಿಧನರಾದರು.
ದ.ಕ. ಜಿಲ್ಲೆಯ ತಾಕೋಡ್ನಲ್ಲಿ ಜನಿಸಿದ ಸಿರಿಲ್ ತಮ್ಮ ಆರಂಭಿಕ ಶಿಕ್ಷಣವನ್ನು ತಾಕೋಡ್, ಮೂಡುಬಿದಿರೆ ಮತ್ತು ಬೆಂಗಳೂರಿನಲ್ಲಿ ಮಾಡಿದರು. ಅವರು 12ನೇ ವಯಸ್ಸಿನಲ್ಲಿ ಕೊಂಕಣಿಯಲ್ಲಿ ಬರೆಯಲು ಪ್ರಾರಂಭಿಸಿದರು. ಅವರು ರಾಕ್ಣೋ ವಾರಪತ್ರಿಕೆಯ ಉಪ ಸಂಪಾದಕರಾಗಿದ್ದರು. ನಂತರ ‘ಕಾಣಿಕ’ ಮತ್ತು ‘ಉಮಾಳೊ’ಕೊಂಕಣಿ ನಿಯತಕಾಲಿಕೆಗಳ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸಿಜೆಎಸ್ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಬರೆದಿದ್ದರೂ, ಅವರ ಹಾಸ್ಯಮಯ ಬರಹಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದರು.
ಸಿಜಿಎಸ್ ಕೊಂಕಣಿ ಬಾಷಾ ಮಂಡಲ್, ಗೋವಾ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ, ಸಂದೇಶ, ದಾಯ್ಜಿ ದುಬೈ ಮತ್ತು ಕೊಂಕಣಿ ಕುಟುಮ್ ಬಹರೈನ್ ಪ್ರಶಸ್ತಿಗಳಿಗೆ ಭಾಜನರಾಗಿದ್ದು, ಮತ್ತು ಕೊಂಕಣಿ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಮಕ್ಕಳ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.