News Karnataka Kannada
Wednesday, May 08 2024
ಮಂಗಳೂರು

ವಲಸೆ ಕೇಂದ್ರದ ಪ್ರಾದೇಶಿಕ ಕಚೇರಿ ಉದ್ಘಾಟನೆ ನೆರವೇರಿಸಿದ ಡಾ.ಸಿ.ಎನ್ . ಅಶ್ವತ್ಥನಾರಾಯಣ

Mangalore
Photo Credit : News Kannada

ಮಂಗಳೂರು: ಯುವಜನರಿಗೆ ಉಜ್ವಲ ಉದ್ಯೋಗಾವಕಾಶಗಳನ್ನು ದೊರಕಿಸಿ ಕೊಡಲಿರುವ `ಅಂತಾರಾಷ್ಟ್ರೀಯ ವಲಸೆ ಕೇಂದ್ರ’ದ ಮಂಗಳೂರು ಪ್ರಾದೇಶಿಕ ಕಚೇರಿಯನ್ನು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಗುರುವಾರ ವರ್ಚುಯಲ್ ರೂಪದಲ್ಲಿ ಉದ್ಘಾಟಿಸಿದರು.

ಇಲ್ಲಿನ ಕೊಟ್ಟಾರ ಚೌಕಿಯಲ್ಲಿರುವ ಎ.ಜೆ.ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ಅವರು ಇದೇ ಸಂದರ್ಭದಲ್ಲಿ, `ಮೇಕ್ ಇಂಡಿಯಾ ಕೇಪಬಲ್’ ಕಾರ್ಯಕ್ರಮದಡಿ ಇಂಗ್ಲಿಷ್ ಲ್ಯಾಬ್ ಕೇಂದ್ರವನ್ನೂ ಲೋಕಾರ್ಪಣೆ ಮಾಡಿದರು. ಈ ಕೇಂದ್ರದಲ್ಲಿ ಪ್ರತೀ 3 ತಿಂಗಳಿಗೊಮ್ಮೆ ತಲಾ 300 ಜನರಿಗೆ ಉದ್ಯೋಗಕ್ಕೆ ಅಗತ್ಯವಾಗಿರುವ ಇಂಗ್ಲಿಷ್ ಭಾಷಾ ಕೌಶಲ್ಯವನ್ನು ಕಲಿಸಿ ಕೊಡಲಾಗುವುದು ಎಂದು ಅವರು ಹೇಳಿದರು.

ಮೇಳದಲ್ಲಿ ಮಾತನಾಡಿದ ಅವರು, `ಅಮೃತ ಕೌಶಲ್ಯ ತರಬೇತಿ’ ಯೋಜನೆಯಡಿ ಈ ವರ್ಷ 36 ಸಾವಿರಕ್ಕೂ ಹೆಚ್ಚು ಯುವಜನರಿಗೆ ಉಚಿತವಾಗಿ ಕೌಶಲ್ಯಗಳನ್ನು ಕಲಿಸಿ, ಎಲ್ಲರಿಗೂ ಉದ್ಯೋಗ ಸಿಗುವಂತೆ ಮಾಡಲಾಗುವುದು. ಸರಕಾರವು ರೂಪಿಸಿರುವ `ಸರ್ವರಿಗೂ ಉದ್ಯೋಗ’ ಸಮಗ್ರ ಯೋಜನೆಯಡಿ ನಡೆಯುತ್ತಿರುವ ಮೂರನೇ ಉದ್ಯೋಗ ಮೇಳ ಇದಾಗಿದೆ’ ಎಂದರು.

ಈ ಯೋಜನೆಯಡಿ ಈಗಾಗಲೇ ಬೆಳಗಾವಿ ಮತ್ತು ಕಲಬುರಗಿಗಳಲ್ಲಿ ಇಂತಹ ಮೇಳಗಳನ್ನು ನಡೆದಿರುವುದನ್ನು ಇಲ್ಲಿ ನೆನೆಯಬಹುದು. ಇಲ್ಲಿನ ಉದ್ಯೋಗ ಮೇಳದಲ್ಲಿ ಅಗತ್ಯ ವಿದ್ಯಾಭ್ಯಾಸ ಇದ್ದೂ ಅವಕಾಶ ಪಡೆಯದೆ ಹೋಗುವವರಲ್ಲಿ ಇರುವ ಕೊರತೆ ಏನೆಂಬುದನ್ನು ತಕ್ಷಣವೇ ತಿಳಿದುಕೊಳ್ಳಲಾಗುವುದು. ಇಂಥವರಿಗೆಲ್ಲ ಸರಕಾರದ ವತಿಯಿಂದಲೇ ಅಗತ್ಯ ಕೌಶಲ್ಯಗಳನ್ನು ಕಲಿಸಲಾಗುವುದು ಎಂದು ಅವರು ನುಡಿದರು.

ಇಂತಹ ಮೇಳಗಳ ಮೂಲಕ ಈಗಾಗಲೇ 10 ಸಾವಿರಕ್ಕೂ ಹೆಚ್ಚು ಯುವಜನರಿಗೆ ಉದ್ಯೋಗಗಳನ್ನು ದೊರಕಿಸಿ ಕೊಡಲಾಗಿದೆ. ಯುವಜನರಿಗೆ ಉದ್ಯೋಗಾವಕಾಶಗಳಿಗೆ ಸಂಬಂಧಪಟ್ಟ ಎಲ್ಲ ಮಾಹಿತಿಗಳೂ ಸುಲಭವಾಗಿ ಸಿಗಬೇಕೆನ್ನುವ ಸದುದ್ದೇಶದಿಂದಲೇ ರಾಮನಗರದಲ್ಲಿ `ಸ್ಕಿಲ್ ಹಬ್’ ಪ್ರಾರಂಭಿಸಲಾಗುತ್ತಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಮೂಲಕ ಕೌಶಲ್ಯ ತರಬೇತಿ ಮತ್ತು ಉಮದ್ಯಮಶೀಲತೆಗೆ ಸಂಬಂಧಿಸಿದ ಮಾರ್ಗದರ್ಶನ ಹಾಗೂ ಸಾಫ್ಟ್ ಸ್ಕಿಲ್ಸ್ ಗಳನ್ನು ಕೂಡ ಒದಗಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ನಿರುದ್ಯೋಗ ನಿವಾರಣೆಯನ್ನು ಸರಕಾರವು ಸಮರೋಪಾದಿಯಲ್ಲಿ ಕೈಗೆತ್ತಿಕೊಂಡಿದೆ. ಈ ನಿಟ್ಟಿನಲ್ಲಿ 150 ಸರಕಾರಿ ಐಟಿಐಗಳ ಉನ್ನತೀಕರಣ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 9 ತಿಂಗಳ ಕಡ್ಡಾಯ ಇಂಟರ್ನ್ ಶಿಪ್ ಮುಂತಾದ ಸುಧಾರಣೆಗಳನ್ನು ಮಾಡಲಾಗಿದೆ ಎಂದು ಅಶ್ವತ್ಥನಾರಾಯಣ ನುಡಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರಾಂತಿಕಾರಕ ಸುಧಾರಣೆಗಳನ್ನು ತರಲಾಗುತ್ತಿದೆ. ಕಲಿಕೆಯ ಹಂತದಲ್ಲೇ ಪ್ರತಿಯೊಬ್ಬರನ್ನೂ ಆಧುನಿಕ ಉದ್ಯೋಗಗಳಿಗೆ ಅರ್ಹರನ್ನಾಗಿ ಮಾಡುವ ಗುರಿಯೊಂದಿಗೆ ಸಮಕಾಲೀನ ಪಠ್ಯಕ್ರಮವನ್ನು ರೂಪಿಸಲಾಗಿದೆ. ಉನ್ನತ ಶಿಕ್ಷಣದಲ್ಲಿ ಈಗ ತಂತ್ರಜ್ಞಾನವನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲಾಗಿದ್ದು, ಗುಣಮಟ್ಟದ ಶಿಕ್ಷಣವೊಂದೇ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಡಾ.ಭರತ್ ಶೆಟ್ಟಿ, ಅತ್ಯುತ್ತಮ ಶೈಕ್ಷಣಿಕ ಸಂಸ್ಕೃತಿ ಮತ್ತು ಸಂಪರ್ಕ ವ್ಯವಸ್ಥೆ ಹೊಂದಿರುವ ಮಂಗಳೂರಿನಲ್ಲಿ ಸುಸಜ್ಜಿತ ಐಟಿ ಪಾರ್ಕ್ ಸ್ಥಾಪನೆ ಅಗತ್ಯವಿದ್ದು, ಇದಕ್ಕೆ ಬೇಕಾಗಿರುವ ಭೂಮಿ ಮತ್ತಿತರ ಸೌಲಭ್ಯಗಳನ್ನು ಕೊಡಲಾಗುವುದು ಎಂದು ಹೇಳಿದರು.

ವೇದಿಕೆಯಲ್ಲಿ ಸಂಸದ ನಳಿನಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್, ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ, ಸಂಜೀವ್ ಗುಪ್ತ, ಸಂದೀಪ್ ಮೈನಿ, ಸುಧಾಕರ ಗುಡಿಪಾಟಿ ಮುಂತಾದವರಿದ್ದರು.

ಕ್ಯಾಪ್ಶನ್ ಮಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಗುರುವಾರ ಉದ್ಘಾಟಿಸಿದರು. ಜೊತೆಯಲ್ಲಿ ಸಂಸದ ನಳಿನಕುಮಾರ್ ಕಟೀಲು, ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಮುಂತಾದವರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು