News Karnataka Kannada
Sunday, May 05 2024
ಮಂಗಳೂರು

ಮುಂದುವರಿಯುತ್ತಿರುವ ಆನೆ ಕಾಟ

New Project 2021 09 30t173636.167
Photo Credit :

ಬೆಳ್ತಂಗಡಿ: ತಾಲೂಕಿನ ಮುಂಡಾಜೆ,ಕಲ್ಮಂಜ ಗ್ರಾಮಗಳ ಪರಿಸರದಲ್ಲಿ ಸುಮಾರು‌ ಹತ್ತು ದಿನಗಳಿಂದ ಆನೆ ದಾಳಿ‌ ಅವ್ಯಾಹತವಾಗಿ ನಡೆಯುತ್ತಿದ್ದು ಕೃಷಿಕರು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ.

ಇಲ್ಲಿನ‌ ಸುಮಾರು15 ಕಿಮೀ. ವ್ಯಾಪ್ತಿ ಪ್ರದೇಶದಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಬೆಳಿಗ್ಗೆ ತನಕ ತಿರುಗಾಟ ನಡೆಸಿ ದಾಂಧಲೆ ಎಬ್ಬಿಸಿರುವ ಕಾಡಾನೆಯ ಉಪಟಳದಿಂದ ಈ ಪ್ರದೇಶದ ಜನರಲ್ಲಿ ಭೀತಿಯ ವಾತಾವರಣ ಏರ್ಪಟ್ಟಿದೆ.

ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಕಲ್ಮಂಜ ಗ್ರಾಮದ ಸತ್ಯನಫಲಿಕೆಯ ಹರೀಶ್ ಕೊಳ್ತಿಗೆ ಅವರ ತೋಟದಲ್ಲಿ ಕಾಡಾನೆ ಬಾಳೆಗಿಡ,ಅಡಕೆ ಗಿಡಗಳಿಗೆ ಹಾನಿ ಉಂಟು ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಸ್ಥಳೀಯರ ಸಹಕಾರದಲ್ಲಿ ಕಾಡಾನೆಯನ್ನು ಓಡಿಸಲಾಯಿತು. ಇಲ್ಲಿಂದ ಕಾಡಾನೆ ಆನಂಗಳ್ಳಿ ಪರಿಸರದ ಸತೀಶ್ ಭಿಡೆ ಮತ್ತಿತರರ ಕೃಷಿ ತೋಟಗಳಿಗೆ ದಾಳಿ ನಡೆಸಿ ಕೃಷಿ ಹಾನಿ ಉಂಟು ಮಾಡಿತು. ಅಲ್ಲಿಂದ ಮೃತ್ಯುಂಜಯ ನದಿ ದಾಟಿ ಇದೇ ಗ್ರಾಮದ ಕುಡೆಂಚಿ ಪರಿಸರದ ಜಯಂತ ಪಟವರ್ಧನ್, ಸುಬ್ರಾಯ ಪಟವರ್ಧನ್, ಶಂಕರ ಪಟವರ್ಧನ್ ಮೊದಲಾದವರ ತೋಟಗಳಿಗೆ ದಾಳಿಯಿಟ್ಟಿದೆ. ಇದೇ ಪ್ರದೇಶದ ಇನ್ನೊಂದು ಭಾಗದಲ್ಲಿ ಹರಿಯುವ ನೇತ್ರಾವತಿ ನದಿ ತೀರದಲ್ಲಿರುವ ಸಂತೋಷ್ ಹೆಬ್ಬಾರ್ ಅವರ ತೋಟಕ್ಕೆ ಹಾನಿ ಉಂಟು ಮಾಡಿತು. ಎರಡು ನದಿಗಳು ಸೇರುವ ಪಜಿರಡ್ಕ ಪರಿಸರದಲ್ಲೂ ಕಾಡಾನೆ ತಿರುಗಾಟ ನಡೆಸಿದೆ. ಕಾಡಾನೆಯ ತಿರುಗಾಟದಿಂದ ನದಿ ತೀರಗಳಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿವೆ.

ಹೆದ್ದಾರಿಯಲ್ಲಿ ಆನೆ

ಗುರುವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಇಲ್ಲಿಂದ 10 ಕಿಮೀ ದೂರದ ಮುಂಡಾಜೆಯ ರಾಷ್ಟ್ರೀಯ ಹೆದ್ದಾರಿ ಸಮೀಪ ಇರುವ ಸುಜಿತ್ ಭಿಡೆ, ಅಶೋಕ್ ಮೆಹೆಂದಳೆ, ಅಭಿಷೇಕ್ ಮರಾಠೆಯವರ ಮನೆಗಳ ಪ್ರದೇಶದಿಂದ ಇಳಿದುಬಂದ ಕಾಡಾನೆ ಹೆದ್ದಾರಿಯಲ್ಲಿ ಸವಾರಿ ನಡೆಸಿ ಹಾಲ್ತೋಟದ ಕಡೆ ತೆರಳಿ,8 ಗಂಟೆ ಸುಮಾರಿಗೆ ಸಚಿನ್ ಭಿಡೆ,ಶಶಿಧರ ಖಾಡಿಲ್ಕರ್ ಅವರ ತೋಟಗಳಿಂದ ಸಂಚರಿಸಿ ಮೇಲ್ಭಾಗದ ಕಾಡಿನ ಕಡೆ ತೆರಳಿರುವ ಕುರಿತು ಸ್ಥಳೀಯರು ತಿಳಿಸಿದ್ದಾರೆ.

ಕಾಡಾನೆ ರಾಷ್ಟ್ರೀಯ ಹೆದ್ದಾರಿ ಕಡೆ ತೆರಳುವ ದೃಶ್ಯಗಳನ್ನು ಸಹನಾ ಭಿಡೆಯವರು ಚಿತ್ರೀಕರಿಸಿದ್ದು ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆನೆ ಅಟ್ಟಿಸುವ ಕಾರ್ಯಾಚರಣೆ

ಕಳೆದ 10 ದಿನಗಳಿಂದ ಮುಂಡಾಜೆ ಪರಿಸರದಲ್ಲಿ ಕಾಡಾನೆ ಸುತ್ತಾಟ ನಡೆಸುತ್ತಿದ್ದರು ಅರಣ್ಯ ಇಲಾಖೆ ಮೌನವಾಗಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ತಕ್ಷಣದಿಂದ ಸ್ಥಳೀಯರ ಸಹಕಾರದಲ್ಲಿ ಇಲಾಖೆಯ ವತಿಯಿಂದ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸುವ ಕುರಿತು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಇದಕ್ಕೆ ಬೇಕಾದ ವಾಹನ ಹಾಗೂ ಅಗತ್ಯ ಸಲಕರಣೆಗಳನ್ನು ನೀಡುವುದಾಗಿ ತಿಳಿಸಿದ್ದಾರೆ.

ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಸುಲಭಸಾಧ್ಯವಲ್ಲ. ಇದಕ್ಕೆ ಕೆಲವೊಂದು ಅಗತ್ಯ ಸಲಕರಣೆಗಳ ಅವಶ್ಯಕತೆ ಇದೆ. ಬಡಿಯಲು ಡೋಲು,ಗಂಟೆ, ಹೊಗೆ ಹಾಕಲು ಕಟ್ಟಿಗೆ, ಮೆಣಸಿನಕಾಯಿ, ದೊಂದಿಗಳನ್ನು ಬೆಳಗಲು ಬಟ್ಟೆ, ಡಿಸೇಲ್ ಇತ್ಯಾದಿಗಳ ಅಗತ್ಯವಿದೆ. ಆದರೆ ಇದು ಇಲಾಖೆಯಿಂದ ಪೂರೈಕೆಯಾಗಬಹುದೆ ಎಂಬುದು ತಿಳಿದುಬಂದಿಲ್ಲ. ಕಾರ್ಯಾಚರಣೆ ವೇಳೆ ರಕ್ಷಣೆಗೆ ಬಂದೂಕುಗಳ ಅವಶ್ಯಕತೆಯು ಇದೆ. ಇಲಾಖೆಯ ಬಳಿ ಬಂದೂಕುಗಳಿದ್ದರೂ ಅವುಗಳು ಯಾವ ಸ್ಥಿತಿಯಲ್ಲಿವೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ಕಾಡಿನ ಭಾಗದಲ್ಲಿ ಬೈನೆ,ಹಲಸು ಮೊದಲಾದ ಗಿಡಗಳನ್ನು ನೆಟ್ಟು ಬೆಳೆಸಿದರೆ ಆನೆಗಳಿಗೆ ಅಗತ್ಯ ಆಹಾರದ ಕೊರತೆ ಉಂಟಾಗದು. ಆದರೆ ಇದೀಗ ಇವುಗಳ ಕೊರತೆ ಇರುವುದರಿಂದ ಕಾಡಾನೆಗಳು ನಾಡಿಗೆ ಇಳಿಯುವಂತಾಗಿದೆ ಎಂದು ಹಿರಿಯ ಕೃಷಿಕರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು