News Karnataka Kannada
Monday, April 29 2024
ಮಂಗಳೂರು

ಬೆಳ್ತಂಗಡಿ : ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ

Untitled 167
Photo Credit : News Kannada

ಬೆಳ್ತಂಗಡಿ: ಇಲ್ಲಿನ ಪ.ಪಂ ಸಾಮಾನ್ಯ ಸಭೆಯು ಪ.ಪಂ ಅಧ್ಯಕ್ಷೆ ರಜನಿ ಕುಡ್ವ ಅಧ್ಯಕ್ಷತೆಯಲ್ಲಿ ಪ.ಪಂ ಸಭಾಭವನದಲ್ಲಿ ಗುರುವಾರ ನಡೆಯಿತು.

ರಾಜ್ಯದಲ್ಲೇ ಇಲ್ಲದ ಮೂಡ ನಿಯಮ ಬೆಳ್ತಂಗಡಿ ನಗರಕ್ಕೆ ಮಾತ್ರವಿದ್ದು ಇದರಿಂದ ಜನರು ಬೇಸತ್ತು ಹೋಗಿದ್ದಾರೆ. ಅಧಿಕಾರಿಗಳ ಕಾನೂನು ಕ್ರಮಗಳ ಬಗ್ಗೆ ಸದಸ್ಯ ಜಗದೀಶ್ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ನಿವಾಸಿ ಉದಯ್ ಹೆಗ್ಡೆ ಎಂಬವರು ಭೂಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದು ಇದಕ್ಕೆ ಮೂಡ ಅಧಿಕಾರಿಗಳು ಸ್ಥಳದಲ್ಲಿ ಕಟ್ಟಡ ಇದೆ ಎಂದು ಹಿಂಬರಹ ನೀಡಿದ್ದು ಇದಕ್ಕೆ ಮುಖ್ಯಾಧಿಕಾರಿಗಳು ಸಹಿ ಮಾಡಿದ್ದಾರೆ ಈ ರೀತಿಯ ಸುಳ್ಳು ವರದಿ ವಿರುದ್ಧ ಜಗದೀಶ್ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿ ಕಟ್ಟಡ ಇದೆ ಎಂದು ಸಾಬೀತುಪಡಿಸಿದರೆ ಸದಸ್ಯತ್ವ ಸ್ಥಾನಕ್ಕೆ ಇಂದೇ ರಾಜಿನಾಮೆ ನಿಡುವುದಾಗಿ ಜಗದೀಶ್ ಸವಾಲೆಸೆದರು.‌ಮತ್ತು ಈ ಬಗ್ಗೆ ಕ್ಷಮೆಯಾಚಿಸಲು ಒತ್ತಾಯಿಸಿದರು.

ಮುಖ್ಯಾಧಿಕಾರಿ ಸುಧಾಕರ್ ಕ್ಷಮೆಯಾಚಿಸಿದರೆ ಮೂಡ ಅಧಿಕಾರಿ ಮೋಕ್ಷಾ ಎಲ್ಲವೂ ಸರಿಮಾಡಲು ನಾವೇನು ದೇವರಲ್ಲ ಎಂದು ಹಾರಿಕೆಯ ಉತ್ತರ ನೀಡಿದಾಗ ಜಗದೀಶ್ ಮತ್ತೆ ಆಕ್ರೋಶಿತರಾಗಿ ಕ್ಷಮೆ ಯಾಚಿಸಲು ಒತ್ತಾಯಿಸಿದರು. ಈ ಬಗ್ಗೆ ಮಾತಿನ ಚಕಮಕಿ ನಡೆಯಿತು. ಬಳಿಕ ಮುಖ್ಯಾಧಿಕಾರಿ ಸುಧಾಕರ್ ಉತ್ತರಿಸಿ ಕಟ್ಟಡ ಇಲ್ಲದೆ ಕಟ್ಟಡ ಇದೆ ಎಂದು ವರದಿ ನೀಡಿದ್ದು ತಪ್ಪು ಈ ಬಗ್ಗೆ ಸ್ಥಳ ಪರಿಶೀಲಿಸಿ ಕುಟುಂಬಕ್ಕೆ ನ್ಯಾಯ ಒದಗಿಸುವ ಭರವಸೆ ನೀಡಿದರು.

ಮೂಡುಬಿದಿರೆ ಪುರಸಭೆಯಲ್ಲಿ ತಹಶಿಲ್ದಾರರೇ ಭೂಪರಿವರ್ತನೆ ಮಾಡುತ್ತಿದ್ದು ಅಲ್ಲಿ ಮೂಡ ಅನ್ವಯವಾಗುವುದಿಲ್ಲ. ಬಂಟ್ವಾಳ, ಪುತ್ತೂರಿನಲ್ಲೂ ಈ ರೀತಿಯ ನಿಯಮವಿಲ್ಲ. ಬೆಳ್ತಂಗಡಿಯ ನಗರದ ಜನರಿಗೆ ಮೂಡ ನಿಯಮ ಅನ್ಯಾಯ ಮಾಡುತ್ತಿದೆ ಇದನ್ನು ಸಡಿಲಿಸಲು ಸಂಬಂದಪಟ್ಟ ಸಚಿವರಲ್ಲಿ ಒತ್ತಾಯಿಸಬೇಕು ಮತ್ತು ಪತ್ರ ಬರೆಯಬೇಕು ಎಂದು ನಿರ್ಣಯಿಸಲಾಯಿತು.

ನಗರದಲ್ಲಿ ಹಲವಾರು ಕಾಮಗಾರಿಗಳಿಗೆ ಟೆಂಡರ್ ಕರೆದು ಕಾಮಗಾರಿ ಪಡೆದ ಗುತ್ತಿಗೆದಾರರು ಕಾಮಗಾರಿ ಪ್ರಾರಂಭಿಸದಿರುವ ಬಗ್ಗೆ ಸದಸ್ಯರು ಆಕ್ರೋಷ ವ್ಯಕ್ತಪಡಿಸಿದರು. ಇದು ನಗರದ ಅಭಿವೃದ್ಧಿಗೆ ಹಿನ್ನಡೆ ಗುತ್ತಿಗೆ ಪಡೆದು ಕಾಮಗಾರಿ ಪ್ರಾರಂಬಭಿಸದ ಗುತ್ತಿಗೆದಾರರಿಗೆ ನೋಟೀಸ್ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಕೆರಳಕೋಡಿ ಎಂಬಲ್ಲಿ ಮಾನವತ್ಯಾಜ್ಯ ಸಂಗ್ರಹಣಾ ಘಟಕ ನಿರ್ಮಾಣ ಮಾಡಲು ಮೀಸಲಿಟ್ಟ ಜಾಗದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಿಸಲು ಚಿಂತಿಸಲಾಗಿದೆ ಇದರಿಂದ ಜನಸಾಮಾನ್ಯರಿಗೆ ಕಡಿಮೆ ವೆಚ್ಚದಲ್ಲಿ ಕಾರ್ಯಕ್ರಮ ನಡೆಸಲು ಸಹಕಾರಿಯಾಗಲಿದೆ. ಪಂಚಾಯತ್‌ಗೂ ಆದಾಯ ಬರಲಿದೆ ಎಂದು ಉಪಾಧ್ಯಕ್ಷ ಜಯಾನಂದ್ ತಿಳಿಸಿದರು. ಇದರ ಬಳಿ ಸ್ಮಶಾನ ಇರುವುದರಿಂದ ಸಮುದಾಯ ಭವನ ಸಾಧ್ಯವೇ ಎಂದು ನಾಮನಿರ್ದೇಶಿತ ಸದಸ್ಯ ಕೇಶವ್ ತಿಳಿಸಿದರು. ಇದಕ್ಕೆ ಜಯಾನಂದ್ ಉತ್ತರಿಸಿ ಅದು ದೂರದಲ್ಲಿರುವುದರಿಂದ ನಿರ್ಮಿಸಬಹುದು ಎಂದು ಉತ್ತರಿಸಿದರು. ಮತ್ತೆ ಮಧ್ಯಪ್ರವೇಶಿಸಿದ ಸದಸ್ಯ ಜಗದೀಶ್ ಸುಧೆಮುಗೇರುವಿನಲ್ಲಿ ಕೂಲಿ ಕಾರ್ಮಿಕರಿರುವ ಪ್ರದಶವಾಗಿದ್ದು ಇಲ್ಲಿ ಸಮುದಾಯ ಅಗತ್ಯವಾಗಿದೆ ಅಧ್ಯಕ್ಷರು ನಿರ್ಮಿಸಿ ಕೊಡುವ ಭರವಸೆಯನ್ನು ನೀಡಿದ್ದಾರೆ ಎಂದಾಗ ಮುಂದಿನ ದಿನಗಳಲ್ಲಿ ಸಭಾಭವನ ನಿರ್ಮಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಅಧ್ಯಕ್ಷೆ ರಜನಿ ಕುಡ್ವ ತಿಳಿಸಿದರು.

ನ.ಪಂ ಸಾಮಾನ್ಯ ಸಭೆಗೆ ಪೋಲೀಸ್ ಇಲಾಖೆ, ಅರಣ್ಯ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ಬರಬೇಕು ರಾತ್ರಿ ಹೊತ್ತು ಅನುಮಾನಾಸ್ಪದವಾಗಿ ತಿರುಗಾಡುವವರ ವಿರುದ್ಧ ಪೋಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಮತ್ತು ಮಳೆಗಾಲ ಪ್ರಾರಂಭವಾಗುವ ಮೊದಲು ನಗರದಲ್ಲಿರುವ ಅಪಾಯಕಾರಿ ಮರದ ಗೆಲ್ಲುಗಳನ್ನು ತರವುಗೊಳಿಸಲು ಅರಣ್ಯ ಇಲಾಖೆಗೆ ತಿಳಿಸಬೇಕು ಎಂದು ಉಪಾಧ್ಯಕ್ಷ ಜಯಾನಂದ್ ಒತ್ತಾಯಿಸಿದರು. ಈ ಬಗ್ಗೆ ಮುಂದಿನ ಸಭೆಗೆ ಬರಲು ನೋಟೀಸ್ ನೀಡುವುದಾಗಿ ಮುಖ್ಯಾಧಿಕಾರಿಗಳು ತಿಳಿಸಿದರು.

ನಗರ ವ್ಯಾಪ್ತಿಯಲ್ಲಿ ಹೆಚ್ಚು ಮನೆಗಳು ನಿರ್ಮಾಣವಾದರೆ ಪಂಚಾಯತ್‌ಗೆ ಆದಾಯ ಹೆಚ್ಚುತ್ತದೆ ಕೆಲವೊಂದು ಕುಟುಂಬಗಳು ಮನೆಯಲ್ಲಿ ಹೆಚ್ಚು ಮಂದಿ ಇದ್ದಾಗ ಮನೆಯ ಪಕ್ಕದಲ್ಲೇ ಬೇರೆ ಮನೆ ಮಾಡಿ ಇರುತ್ತಾರೆ. ಇವರಿಗೆ ಸೌಲಭ್ಯ ಸಿಗಲು ದೃಢಪತ್ರ ಅಗತ್ಯವಾಗಿದೆ. ಇದಕ್ಕೆ ನ.ಪಂ. ಅಡ್ಡಿಪಡಿಸಬಾರದು ಇದಕ್ಕೆ ಇವರಿಗೆ ದೃಢಪತ್ರ ನೀಡಬೇಕು ಎಂದು ಜಗದೀಶ್ ಒತ್ತಾಯಿಸಿದರು. ಈ ಬಗ್ಗೆ ಮನವಿ ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸುಧಾಕರ್ ತಿಳಿಸಿದರು.

ನಗರ ವ್ಯಾಪ್ತಿಯ ಸಮುದಾಯ ಆಸ್ಪತ್ರೆಯ ಆವರಣ, ಶವಗಾರದ ಬಳಿ, ಸಿಬ್ಬಂದಿಗಳ ವಸತಿ ಗೃಹದ ಬಳಿ ಗಿಡಗಂಟೆಗಳು ತುಂಬಿದ್ದು ಇದರಿಂದ ನಗರ ಸೌಮದರ್ಯಕ್ಕೆ ಅಡ್ಡಿಯಾಗುತ್ತಿದೆ ಇದನ್ನು ಪಂಚಾಯತ್ ವತಿಯಿಂದ ತೆರವುಗೊಳಿಸಬೇಕೆಂದು ಜಗದೀಶ್ ಒತ್ತಾಯಸಿದರು. ಇದಕ್ಕೆ ಇಂಜಿನಿಯರ್ ಮಹಾವೀರ ಉತ್ತರಿಸಿ ಅದಕ್ಕೆ ಸಂಬಂಧಪಟ್ಟ ಇಲಾಖೆಯವರೇ ಅದನ್ನು ತೆರವುಗೊಳಿಸಬೇಕು ಎಂದಾಗ ಜಗದೀಶ್ ಪಂ. ವತಿಯಿಂದಲೇ ತೆರವುಗೊಳಿಸಬೇಕೆಂದು ಪಟ್ಟು ಹಿಡಿದರು. ಇದಕ್ಕೆ ಮುಖ್ಯಾಧಿಕಾರಿ ಒಪ್ಪಿಗೆ ಸೂಚಿಸಿ ಎರಡು ದಿನದೊಳಗೆ ಸ್ವಚ್ಚಗೊಳಿಸುವ ಭರವಸೆ ನೀಡಿದರು.

ಇತ್ತೀಚೆಗೆ ನ.ಪಂ ನ ಕೂಲಿ ಕಾರ್ಮಿಕ ಅಸಹಜವಾಗಿ ಸಾವನ್ನಪ್ಪಿದ್ದು ಕಳೆದ ಆರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಇದೀಗ ಆತನ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಈ ಕುಟುಂಬಕ್ಕೆ ಪಂಚಾಯತ್‌ನಿಂದ ಪರಿಹಾರ ನೀಡಬೇಕೆಂದು ಜಗದೀಶ್ ಒತ್ತಾಯಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅನುಮತಿ ಕೇಳಲಾಗಿದ್ದು ಅನುಮತಿ ಕೊಟ್ಟರೆ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ನೀಡಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು.

ಸಂತೆಮಾರುಕಟ್ಟೆಯೊಳಗೆ ಸ್ಟಾಲ್‌ಗಳಿಂದ ಪಂಚಾಯತ್‌ಗೆ ಆದಾಯ ಬರುತ್ತಿದೆ. ಇಲ್ಲಿ ಬಿಸಿಲು, ಮಳೆಯ ನಡುವಿನಲ್ಲಿ ವ್ಯಾಪಾರ ಮಾಡಬೇಕಿದ್ದು ವ್ಯಾಪಾರಿಗಳಿಗೂ ತೊಂದರೆ ಗ್ರಾಹಕರಿಗೂ ತೊಂದರೆ ಅದಕ್ಕಾಗಿ ಮೇಲ್ಚಾವಣಿ ನಿರ್ಮಿಸಬೇಕೆಂದು ಜಗದೀಶ್ ಒತ್ತಾಯಿಸಿದರು. ಇದಕ್ಕೆ ಉಪಾಧ್ಯಕ್ಷ ಜಯಾನಂದ್ ಉತ್ತರಿಸಿ ಈಗಾಗಲೇ ಶಾಸಕರಲ್ಲಿ ಪ್ರಸ್ತಾಪ ಮಾಡಲಾಗಿದೆ ಇದಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನಕ್ಕಾಗಿ ಪತ್ರ ಬರೆಯಲು ಶಾಸಕರು ತಿಳಿಸಿದ್ದು ತಕ್ಷಣ ಪತ್ರ ಬರೆಯಬೇಕು ಎಂದು ಜಯಾನಂದ್ ತಿಳಿಸಿದರು.

ನ.ಪಂ ಕಛೇರಿಗೆ ತುರ್ತಾಗಿ ಸಿ.ಸಿ ಕ್ಯಾಮರಾ ಅಳವಡಿಸಬೇಕು, ನಗರದಲ್ಲಿ ಅನಧಿಕೃತ ಬ್ಯಾನರ್‌ಗಳ ಹಾವಳಿ ಹೆಚ್ಚಾಗುತ್ತಿದ್ದು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು, ಘನತ್ಯಾಜ್ಯ ಘಟಕ ವಿಲೇವಾರಿ ಸಮರ್ಪಕವಾಗಲು ಪುತ್ತೂರು ಘನ ತ್ಯಾಜ್ಯ ಘಟಕದಂತೆ ನಿರ್ಮಿಸಬೇಕು ಅಲ್ಲಿನ ಘಟಕವನ್ನು ವೀಕ್ಷಿಸಬೇಕು, ಮಳೆಗಾಲಕ್ಕೂ ಮುನ್ನ ಚರಂಡಿ ದುರಸ್ಥಿಗೊಳಿಸಬೇಕು, ನಗರದಲ್ಲಿ ನಿರಂತರ ವಿದ್ತುತ್ ಇರುವಂತೆ ಮೆಸ್ಕಾಂ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ಇದೇ ಸಂದರ್ಭದಲ್ಲಿ ನಾಮನಿರ್ದೇಶಕರಾಗಿ ಆಯ್ಕೆಗೊಂಡ ಯಶೋಧರ ಪ್ರಕಾಶ್, ಕೇಶವ, ಲಲಿತಾ ಇವರನ್ನು ಸ್ವಾಗತಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಜಯಾನಂದ, ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ ನಾಯ್ಕ್, ಮುಖ್ಯಾಧಿಕಾರಿ ಸುಧಾಕರ್, ಇಂಜಿನಿಯರ್ ಮಹಾವೀರ ಅರಿಗ, ಮತ್ತು ಸದಸ್ಯರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು