ಮಂಗಳೂರು: ನವದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿ ಮಂಗಳವಾರ ಬೆಳಿಗ್ಗೆ ಮಂಗಳೂರಿಗೆ ಆಗಮಿಸಿದ ಅಕ್ಷರ ಭಗೀರಥ ಹರೇಕಳ ಹಾಜಬ್ಬ ಅವರನ್ನು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಆತ್ಮೀಯವಾಗಿ ಸ್ವಾಗತಿಸಿ, ಸನ್ಮಾನಿಸಿದರು.
ಮಂಗಳೂರು ವಿಮಾನ ನಿಲ್ದಾಣದಿಂದ ಸರ್ಕೀಟ್ ಹೌಸ್ ಗೆ ಆಗಮಿಸಿ ವಿಶ್ರಾಂತಿ ಪಡೆದ ಹಾಜಬ್ಬ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಸನ್ಮಾನ ಸ್ವೀಕರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹರೇಕಳ ಹಾಜಬ್ಬ, ಪದ್ಮಶ್ರೀ ಪ್ರಶಸ್ತಿ ಪಡೆದಿರುವುದು ನನ್ನ ಜೀವಮಾನದ ಮರೆಯಲಾಗದ ಘಟನೆ. ಬಡವನೊಬ್ಬನನ್ನು ಕರೆದು ರಾಷ್ಟಪತಿಗಳ ಕೈಯಿಂದ ಪ್ರಶಸ್ತಿ ದೇಶದ ನಾಲ್ಕನೇ ಅತ್ಯುನ್ನತ ಪ್ರಶಸ್ತಿ ನೀಡಿರುವುದು ನನ್ನ ಪುಣ್ಯ ಎಂದರು.
ರಾಷ್ಟ್ರಪತಿ ಹಾಗೂ ಪ್ರಧಾನಿ ಅವರನ್ನು ಹತ್ತಿರದಿಂದ ನೋಡುವ ಭಾಗ್ಯ ನನ್ನದಾಗಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕನ್ನಡದಲ್ಲಿ ಮಾತನಾಡಿಸಿದ್ದಾರೆ. ಹರೇಕಳದ ಶಾಲೆಗೆ ಒಂದು ಕೋಟಿ ರೂ. ಅನುದಾನ ಒದಗಿಸುವಂತೆ ವಿನಂತಿಸಿದ್ದೇನೆ ಎಂದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ಹಾಜಬ್ಬ ಅವರಿಗೆ ಪದ್ಮಶ್ರೀ ದೊರೆತಿರುವುದು ಜಿಲ್ಲೆಗೆ ಹೆಮ್ಮೆ. ಮುಂದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳ ನೇತೃತ್ವದಲ್ಲಿ ಹಾಜಬ್ಬ ಅವರಿಗೆ ಸನ್ಮಾನ ಏರ್ಪಡಿಸಲಾಗುವುದು ಎಂದರು.