News Karnataka Kannada
Saturday, May 04 2024
ಮಂಗಳೂರು

ನೇತ್ರಾವತಿ ನದಿಯುದ್ದಕ್ಕೂ 40 ಜಾಗೃತಿ ಸೂಚನಾ ಫಲಕಗಳ ಸ್ಥಾಪನೆ

Banar
Photo Credit : News Kannada

ಮಂಗಳೂರು, ಜೂ.8: ಎಪಿಡಿ ಪ್ರತಿಷ್ಠಾನ ಮತ್ತು ಹಸಿರು ದಳವು ಜೂನ್ 8 ರಂದು ವಿಶ್ವ ಸಾಗರ ದಿನಾಚರಣೆಯ ಅಂಗವಾಗಿ ಉಳ್ಳಾಲಕ್ಕೆ ಹೋಗುವ ಮಾರ್ಗದಲ್ಲಿ ನೇತ್ರಾವತಿ ಸೇತುವೆಯ ಮೇಲೆ ‘ಪುನರುಜ್ಜೀವನ – ಸಾಗರಕ್ಕಾಗಿ ಸಾಮೂಹಿಕ ಕ್ರಿಯೆ’ ಎಂಬ ಶೀರ್ಷಿಕೆಯಡಿ ವಿಶಿಷ್ಟ ಯೋಜನೆಯೊಂದಿಗೆ ಆಚರಿಸಿತು. ಯೋಜನೆಯ ಭಾಗವಾಗಿ, ನೇತ್ರಾವತಿ ಸೇತುವೆಯ ಉದ್ದಕ್ಕೂ 40 ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದು, ತ್ಯಾಜ್ಯದಿಂದ ನದಿಯನ್ನು ಕಲುಷಿತಗೊಳಿಸುವುದರ ವಿರುದ್ಧ ಜನಜಾಗೃತಿ ಮೂಡಿಸಲಾಗಿದೆ.

ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಜಾಗೃತಿ ಫಲಕಗಳನ್ನು ಅನಾವರಣಗೊಳಿಸಿ ಎಪಿಡಿ ಪ್ರತಿಷ್ಠಾನ ಮತ್ತು ಹಸಿರು ದಳದ ಪ್ರಯತ್ನವನ್ನು ಅಭಿನಂದಿಸಿದರು. “ಕಳೆದ ವರ್ಷದಲ್ಲಿ ಎಪಿಡಿ ಪ್ರತಿಷ್ಠಾನ ಮತ್ತು ಹಸಿರು ದಳವು ಈ ಪ್ರದೇಶವನ್ನು ಸ್ವಚ್ಛಗೊಳಿಸಿದೆ ಮತ್ತು ತ್ಯಾಜ್ಯವನ್ನು ಸಾಗರಕ್ಕೆ ಸೇರುವುದನ್ನು ನಿಲ್ಲಿಸಿದೆ. ನದಿಯನ್ನು ಸ್ವಚ್ಛವಾಗಿಡಲು ಶ್ರಮಿಸಿದ ಎರಡು ಸಂಸ್ಥೆಗಳು, ವಿದ್ಯಾರ್ಥಿಗಳು, ಸ್ವಯಂಸೇವಕರು ಮತ್ತು ಇತರರೆಲ್ಲರ ಪ್ರಯತ್ನವನ್ನು ನಾನು ಪ್ರಶಂಸಿಸುತ್ತೇನೆ,” ಎಂದು ಅವರು ಹೇಳಿದರು. ನದಿ ಸ್ವಚ್ಛತೆ ಕಾಪಾಡುವಂತೆ ನಾಗರಿಕರಲ್ಲಿ ಮನವಿ ಮಾಡಿದ ಅವರು, ನಿಯಮ ಉಲ್ಲಂಘಿಸುವವರಿಗೆ ರೂ. 10,000/- ದಂಡ ವಿಧಿಸಲಾಗುವುದು. ಆತ್ಮಹತ್ಯೆ ತಡೆಯಲು ಸೇತುವೆಗೆ ಬೇಲಿ ಹಾಕುವುದು ಮತ್ತು ಸಿಸಿಟಿವಿ ಅಳವಡಿಸಿರುವುದು ನದಿಯ ಮಾಲಿನ್ಯವನ್ನು ಕಡಿಮೆ ಮಾಡಲು ಕೂಡ ಸಹಾಯ ಮಾಡಿದೆ ಎಂದು ಅವರು ಹೇಳಿದರು. ಶೀಘ್ರದಲ್ಲೇ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದರು.

ವಲಯ ಆಯುಕ್ತ ಶಬರಿನಾಥ ರೈ, ಪರಿಸರ ಎಂಜಿನಿಯರ್ ದೀಪ್ತಿ, ಸ್ಥಳೀಯ ವಾರ್ಡ್ ಕಾರ್ಪೊರೇಟರ್ ವೀಣಾ ಮಂಗಳಾ, ಪರಿಸರ ಹೋರಾಟಗಾರ ಜೀತ್ ಮಿಲನ್, ಜಮಾತೆ ಇಸ್ಲಾಮಿ ಹಿಂದ್ ನ ಕರೀಂ, ಪರಿಸರವಾದಿ ರಿಯಾಝ್, ನದಿ ಪರಿಸರ ಸಂರಕ್ಷಣಾ ಸಮಿತಿಯ ಉಮ್ಮರ್ ಕುಂಞ ಆಲೇಕಾರ, ರೋಶನಿ ಹಳೆವಿದ್ಯಾರ್ಥಿ ಸಂಘದ ಕಿಶೋರ್ ಅತ್ತಾವರ, ಆರೋಗ್ಯಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು, ಸ್ಕೂಲ್ ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯ ಮತ್ತು ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ಮತ್ತಿತರು ಉಪಸ್ಥಿತರಿದ್ದರು.

2021 ರಲ್ಲಿ ಎಪಿಡಿ ಪ್ರತಿಷ್ಠಾನ ಮತ್ತು ಹಸಿರು ದಳವು ಮಂಗಳೂರು ಮಹಾನಗರಪಾಲಿಕೆ ಮತ್ತು ಮಂಗಳೂರು ನಗರ ಪೊಲೀಸರ ಸಹಯೋಗದಲ್ಲಿ ನೇತ್ರಾವತಿ ನದಿಯ ದಡದಿಂದ ತ್ಯಾಜ್ಯವನ್ನು ಸ್ವಚ್ಛಗೊಳಿಸಲು ‘ನಮ್ಮ ನೇತ್ರಾವತಿ, ನಮ್ಮ ಜವಾಬ್ದಾರಿ’ ಎಂಬ ಅಭಿಯಾನದಲ್ಲಿ ಹಲವಾರು ತಿಂಗಳುಗಳ ಕಾಲ ನಡೆಸಿತ್ತು. ಈ ಅಭಿಯಾನದ ಫಲವಾಗಿ ನದಿಯ ದಡದಿಂದ ಸುಮಾರು 33 ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.

ಈ ಅಭಿಯಾನದಲ್ಲಿ ಭಾಗವಹಿಸಿದ ಎಲ್ಲ ಸ್ವಯಂಸೇವಕರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ನಾಗರಾಜ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ರೂಪಕಲಾ ಸ್ವಾಗತಿಸಿ, ಗೀತಾ ಸೂರ್ಯ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು