News Karnataka Kannada
Monday, April 29 2024
ಮಂಗಳೂರು

ಧರ್ಮಸ್ಥಳ: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಎರಡು ಕೃತಿಗಳ ಲೋಕಾರ್ಪಣೆ ಸಮಾರಂಭ

Hemavathi
Photo Credit : News Kannada

ಬೆಳ್ತಂಗಡಿ : ನಾಡಿನ ಖ್ಯಾತ ಅಂಕಣಕಾರರೇ ನನ್ನ ಬರವಣಿಗೆಗೆ ಸ್ಪೂರ್ತಿ. ಭಾಷೆ, ಸಾಹಿತ್ಯ,ಸಂಸ್ಕೃತಿಯನ್ನು ಅಂತರಂಗದಲ್ಲಿ ಬೆಳೆಸುವ ಅಗತ್ಯವಿದೆ ಎಂದು ಹೇಮಾವತಿ ವೀ. ಹೆಗ್ಗಡೆ ಹೇಳಿದರು.

ಧರ್ಮಸ್ಥಳದಲ್ಲಿ ಮಂಗಳವಾರ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಅವರ ಗೆಳತಿ ಹಾಗೂ ಮಗಳಿಗೊಂದು ಪತ್ರ ಎಂಬ ಎರಡು ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಹಿತ್ಯವು ಘಟದೀಪದಂತೆ ಒಳಗೆ ಬೆಳಕನ್ನು ಕೊಡುತ್ತದೆ, ಆದರೆ ಹೊರಗೆ ಕಾಣಿಸುವುದಿಲ್ಲ. ಸಾಹಿತ್ಯವೂ ಹಾಗೆ ಅಂತರಂಗದಲ್ಲಿ ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಪ್ರೇರಕವಾಗಿದೆ. ಅಂಕಣ ಬರಹಗಳು ತನ್ನ ಮೇಲೆ ಗಾಢ ಪ್ರಭಾವ ಬೀರಿವೆ. ತನ್ನ ಕೃತಿಗಳಲ್ಲಿ ಪ್ರೌಢ ಪಾಂಡಿತ್ಯವಿಲ್ಲ. ಕಥೆ, ಘಟನೆಗಳು, ಹಾಗೂ ಅನುಭವದ ಹಿನ್ನೆಲೆಯಲ್ಲಿ ಸರಳವಾಗಿ ಲೇಖನಗಳು ಉತ್ತಮ ಮಾರ್ಗದರ್ಶನ ನೀಡುತ್ತವೆ ಎಂದು ಹೇಳಿದರು.

ಯಾವಾಗಲೂ ಲೇಖಕರು, ನಾವು ಯಾಕಾಗಿ ಬರೆಯುತ್ತೇವೆ? ಯಾರಿಗಾಗಿ ಬರೆಯುತ್ತೇವೆ? ಎಂಬುದನ್ನು ತಿಳಿದುಕೊಂಡು ಬರೆಯಬೇಕು ಎಂದು ಹೇಳಿದರು.

ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸಿರಿ ಗ್ರಾಮೋದ್ಯೋಗ ಸಂಸ್ಥೆಯಿಂದ ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಅವರ ಆಚಾರ-ವಿಚಾರ, ಆದಾಯ, ನಡೆ-ನುಡಿ, ಜೀವನಶೈಲಿ, ನಾಯಕತ್ವ ಸುಧಾರಣೆಯಾಗಿದೆ. ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯ ೨೫,೦೦೦ ಕಾರ್ಯಕರ್ತರಲ್ಲಿ ೧೯೦೦೦ ಮಹಿಳೆಯರೇ ಇದ್ದಾರೆ

ಗ್ರಾಮಾಭಿವೃದ್ಧಿ ಯೋಜನೆಯ ೪೭೦೦ ಜ್ಞಾನವಿಕಾಸ ಕೇಂದ್ರಗಳಲ್ಲಿ ೨೨೦೦ ಗ್ರಂಥಾಲಯಗಳನ್ನು ಪ್ರಾರಂಭಿಸಿ ಮಹಿಳೆಯರಲ್ಲಿ ಓದುವ ಹವ್ಯಾಸ ಬೆಳೆಸಲಾಗುತ್ತಿದೆ. ಎಲ್ಲರೂ ಕನ್ನಡ ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಮಂಜುವಾಣಿಯಲ್ಲಿ ಪ್ರಕಟವಾಗುವ ಮಗಳಿಗೊಂದು ಪತ್ರ ಮತ್ತು ನಿರಂತರದಲ್ಲಿ ಪ್ರಕಟವಾಗುವ ಗೆಳತಿ ಅಂಕಣವನ್ನು ಎಲ್ಲರೂ ಆಸಕ್ತಿಯಿಂದ ಓದುತ್ತಾರೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ತನ್ನ ಲೇಖನಗಳ ಮೊದಲ ಓದುಗರು ಡಿ. ವೀರೇಂದ್ರ ಹೆಗ್ಗಡೆಯವರು ಎಂದು ಹೇಳಿ ಸಕಾಲಿಕ ಮಾರ್ಗದರ್ಶನ ನೀಡುತ್ತಾರೆ ಎಂದರು. ಮಹಿಳೆಯರ ಪ್ರಗತಿ ಅಂದರೆ ಹರ್ಡಲ್ಸ್ ಓಟದ ಹಾಗೆ. ಮನೆಯಲ್ಲಿ, ಸಮಾಜದಲ್ಲಿ ಅನೇಕ ಅಡೆ-ತಡೆಗಳನ್ನು ಎದುರಿಸಿ ಮುಂದೆ ಸಾಗಬೇಕಾಗುತ್ತದೆ ಎಂದು ಹೇಳಿದರು.

ಪರಿವರ್ತನೆಯ ಪ್ರವರ್ತಕರು ಎಂಬ ಬಿರುದನ್ನು ನೀಡಿ ಹೇಮಾವತಿ ಹೆಗ್ಗಡೆಯವರನ್ನು ಗೌರವಿಸಲಾಯಿತು. ಹೇಮಾವತಿ ವೀ. ಹೆಗ್ಗಡೆಯವರು ಬರೆದ ಲೇಖನಗಳ ಕೃತಿಗಳನ್ನು ಲೋಕಾರ್ಪಣೆ ಮಾಡಿದ ಹಿರಿಯ ಪತ್ರಕರ್ತೆ ಡಾ. ಸಂಧ್ಯಾ ಪೈ ಮಾತನಾಡಿ, ಗಂಭೀರ ಸಾಹಿತ್ಯವಿಲ್ಲದೆ ಸರಳ ಶೈಲಿಯಲ್ಲಿ ಬರೆದ ಲೇಖನಗಳು ಸುಲಭಗ್ರಾಹ್ಯವಾಗಿವೆ. ಓದುಗರ ಮನಸ್ಸನ್ನು ಮುಟ್ಟುತ್ತವೆ. ಕುಟುಂಬ ನಿರ್ವಹಣೆ, ಮಕ್ಕಳ ಪಾಲನೆ-ಪೋಷಣೆ, ಪರಿಸರ ಸಂರಕ್ಷಣೆ, ಉಳಿತಾಯ, ಸ್ವಚ್ಛತೆ, ಆರೋಗ್ಯ ರಕ್ಷಣೆ ಇತ್ಯಾದಿ ವಿಷಯಗಳ ಬರೆದ ಲೇಖನಗಳು ಹೃದಯ ಸ್ಪರ್ಶಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಹೇಮಾವತಿ ಹೆಗ್ಗಡೆಯವರು ಸದಾ ಅಧ್ಯಯನ ಶೀಲರಾಗಿದ್ದು, ಸಾಹಿತ್ಯದ ಓದು, ಬರವಣಿಗೆ ಅವರ ಹವ್ಯಾಸವಾಗಿದೆ. ಸಂದರ್ಭೋಚಿತವಾಗಿ ಲೇಖನ, ಕಥೆ, ಕವನಗಳನ್ನು ಅರ್ಥಗರ್ಭಿತವಾಗಿ ರಚಿಸುತ್ತಾರೆ. ನಾಟಕ, ಯಕ್ಷಗಾನ, ನೃತ್ಯ ಮೊದಲದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೊಸ ಪರಿಕಲ್ಪನೆಯೊಂದಿಗೆ, ಮಾರ್ಗದರ್ಶನ, ಪ್ರೇರಣೆ ನೀಡುತ್ತಾರೆ ಎಂದು ಶ್ಲಾಘಿಸಿದರು.

ಮಹಿಳಾ ಸಬಲೀಕರಣಕ್ಕೆ ಅವರ ಕೊಡುಗೆ ಅಪಾರವಾಗಿದೆ. ಇಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡಾ ೭೦ ರಷ್ಟು ವಿದ್ಯಾರ್ಥಿನಿಯರು ಹಾಗೂ ಶೇ.೩೦ ವಿದ್ಯಾರ್ಥಿಗಳು ಇದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯಲ್ಲಿಯೂ ಶೇ.೮೦ ರಷ್ಟು ಮಹಿಳಾ ಉದ್ಯೋಗಿಗಳು ಹಾಗೂ ಶೇ ೨೦ರಷ್ಟು ಪುರುಷ ನೌಕರರು ಇದ್ದಾರೆ ಎಂದು ಹೇಳಿದರು. ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರಲ್ಲಿ ಧೈರ್ಯ, ಆತ್ಮವಿಶ್ವಾಸ ಹೆಚ್ಚಾಗಿ ಎಲ್ಲರೂ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಹೆಗ್ಗಡೆಯವರು ಶ್ಲಾಘಿಸಿದರು.

ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಸ್ವಾಗತಿಸಿದರು. ಯೋಜನಾಧಿಕಾರಿ ಚೇತನಾ ಧನ್ಯವಾದವಿತ್ತರು. ನಿರ್ದೇಶಕಿ ಮಮತಾ ಹರೀಶ್ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ಸಮಾರಂಭದಲ್ಲಿ ಅವರವರ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜ್ಯದ ಎಲ್ಲಾ ಜಿಲ್ಲೆಯ 250 ಕ್ಕೂ ಹೆಚ್ಚು ಆಯ್ದ ಮಹಿಳೆಯರು ಉಪಸ್ಥಿತರಿದ್ದು ಮಹೋತ್ಸವ ಸಭಾಭವನ ಕಿಕ್ಕಿರಿದು ತುಂಬಿತ್ತು.

ಇಂದು ವಿವಿಧ ಕ್ಷೇತ್ರಗಳಲ್ಲಿ ಶೇ. 70 ಕ್ಕೂ ಅಧಿಕ ಮಹಿಳೆಯರಿದ್ದು, 10 ವರ್ಷಗಳ ಬಳಿಕ‌ ಪುರುಷರಿಗಾಗಿ ಮೀಸಲಾತಿ ನೀಡುವ ದಿನಗಳೂ ಬರಬಹುದು – ಡಾ.ಹೆಗ್ಗಡೆ

ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಪ್ರೊ.ಎಸ್. ಪ್ರಭಾಕರ್, ಶ್ರದ್ದಾ ಅಮಿತ್, ಡಿ. ಶ್ರೇಯಸ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದು ಹೇಮಾವತೀ ವೀ.ಹೆಗ್ಗಡೆ ಅವರನ್ನು ಸಮ್ಮಾನಿಸಿದರು.

ವಿಚಾರಗೋಷ್ಠಿಗಳು: ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರ ನಿಲುವುಗಳು ವಿಚಾರಗೋಷ್ಠಿ ನಡೆಯಿತು. ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಕುರಿತು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಶುಭಾ ಮರವಂತೆ, ಸಾಹಿತಿ ರಾಜಶ್ರೀ ಹಂಪನಾ ಬೆಂಗಳೂರು, ಕನ್ಯಾಕುಮಾರಿ ಯುವತಿ ಮಂಡಲ ಕಾರ್ಯಕರ್ತೆ ಭವಾನಿ ವಿ. ರಾವ್ ವಿಚಾರ ಮಂಡಿಸಿದರು.

ಮಹಿಳಾ ಸಬಲೀಕರಣ ಕುರಿತು ಉಜಿರೆ ಎಸ್ ಡಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಶಲೀಪ್ ಎ.ಪಿ., ಶ್ರೀ ಧ. ಗ್ರಾ.ಯೋಜನೆಯ ನಿರ್ದೇಶಕಿ ಗೀತಾ, ಚಿತ್ರದುರ್ಗ ಸ್ವಸಹಾಯ ಸಂಘದ ಸದಸ್ಯೆ ದೀಪಿಕಾ ಬಾಬು ಮಂಡನೆ ಮಾಡಿದರು. ಶಿವರಂಗ ಕಲಾ ಬಳಗದಿಂದ ಪುಕ್ಕಟೆ ಸಲಹೆ ನಾಟಕ ಪ್ರದರ್ಶನಗೊಂಡಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು