News Karnataka Kannada
Monday, May 06 2024
ಮಂಗಳೂರು

‘ಡಾ.ಹೇಮಾವತಿ ವೀ.ಹೆಗ್ಗಡೆ ಅವರಿಂದ ಅಭಿವೃದ್ಧಿ ಪರಿಕಲ್ಪನೆಗೆ ಅರ್ಥಪೂರ್ಣ ಆಯಾಮ’

Hemavathi Hegde
Photo Credit : News Kannada

ಉಜಿರೆ, ಮೇ.7: ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಮನ್ನಣೆಗೆ ಪಾತ್ರರಾದ ಮಾತೃಶ್ರೀ ಹೇಮಾವತಿ ವೀ.ಹೆಗ್ಗಡೆ ಅವರು ಗ್ರಾಮೀಣ ಭಾಗದಲ್ಲಿ ಮಹಿಳಾ ಸಬಲೀಕರಣದ ಸದಾಶಯದ ಪ್ರಯೋಗ ನಡೆಸಿ ಅಭಿವೃದ್ಧಿ ಪರಿಕಲ್ಪನೆಯನ್ನು ಅರ್ಥಪೂರ್ಣಗೊಳಿಸಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಅಭಿಪ್ರಾಯಪಟ್ಟರು.

ಹೇಮಾವತಿ ವೀ.ಹೆಗ್ಗಡೆ ಅವರಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ ಮನ್ನಣೆಯ ಹಿನ್ನೆಲೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯು ಆಯೋಜಿಸಿದ್ದ ಅಭಿವಂದನಾ ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಪ್ರಸ್ತುತಪಡಿಸಿ ಅವರು ಮಾತನಾಡಿದರು. ದಿಢೀರ್ ಬೆಳವಣಿಗೆಗೂ, ಕ್ರಮಾನುಗತ ವಿಕಾಸಕ್ಕೂ ವತ್ಯಾಸಗಳಿವೆ. ಕ್ಷಿಪ್ರಗತಿಯ ಬೆಳವಣಿಗೆಯ ಹಾದಿಗಿಂತ ಕ್ರಮಾನುಗುತ ವಿಕಾಸದ ಹಾದಿ ಅತ್ಯುತ್ತಮ. ಗ್ರಾಮೀಣ ಸ್ತರಗಳಿಂದ ಈ ವಿಕಾಸದ ಪ್ರಕ್ರಿಯೆ ಆರಂಭಗೊಂಡು ವಿವಿಧ ವಲಯಗಳನ್ನು ಪ್ರಬಲಗೊಳಿಸಬೇಕು. ಮಾತೃಶ್ರೀ ಹೇಮಾವತಿ ವೀ.ಹೆಗ್ಗಡೆ ಅವರು ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಚಟುವಟಿಕೆಗಳ ಮೂಲಕ ಈ ಬಗೆಯ ಕ್ರಮಾನುಗತ ವಿಕಾಸವನ್ನು ಸಾಧ್ಯವಾಗಿಸಿದ್ದಾರೆ. ಮುಖ್ಯವಾಗಿ ಗ್ರಾಮೀಣ ಮಹಿಳೆಯರ ಬದುಕಿನಲ್ಲಿ ಬಹುದೊಡ್ಡ ಬದಲಾವಣೆ ತರುವ ಮೂಲಕ ಅಭಿವೃದ್ಧಿಯ ಅರ್ಥವನ್ನು ಹೆಚ್ಚಿಸಿದ್ದಾರೆ ಎಂದು ಹೇಳಿದರು.

ಜ್ಞಾನ ಎಂಬುದು ಕೇವಲ ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಷ್ಟೇ ಇಲ್ಲ. ನಮ್ಮ ಗ್ರಾಮೀಣ ಭಾಗದ ದೇಶೀ ಪರಂಪರೆಯ ಒಳಗೇ ಜ್ಞಾನದ ಖಜಾನೆ ಇದೆ. ದೇಶೀ ಜ್ಞಾನವು ನಿಜದ ವಿಕಾಸಕ್ಕೆ ಬೇಕಾಗುವ ಹತ್ತುಹಲವು ಮಾರ್ಗಗಳನ್ನು ಹೊಳೆಸುವಷ್ಟು ಪ್ರಖರವಾಗಿದೆ. ಇಂಥ ಜ್ಞಾನವನ್ನು ಅನ್ವಯಿಸಿ ಮಹಿಳೆಯರ ಸಬಲೀಕರಣದ ತತ್ವವನ್ನು ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಮೂಲಕ ಅನುಷ್ಠಾನಗೊಳಿಸಿದ ಹೆಗ್ಗಳಿಕೆ ಹೇಮಾವತಿ ಹೆಗ್ಗಡೆ ಅವರದ್ದು ಎಂದರು.

ಪುರುಷರಿಗಿಂತ ಮಹಿಳೆಯರಿಗೆ ಮ್ಯಾನೇಜ್ಮೆಂಟ್ ಕೌಶಲ್ಯ ಸಿದ್ಧಿಸಿರುತ್ತದೆ. ಮ್ಯಾನೇಜ್ಮೆಂಟ್ ತರಗತಿಗಳಲ್ಲಿ ಬೋಧಿಸಲಾಗುವ ನಿರ್ವಹಣಾ ತತ್ವಗಳನ್ನು ಮಹಿಳೆಯರು ಚೆನ್ನಾಗಿ ಬಲ್ಲವರಾಗಿರುತ್ತಾರೆ. ಹೀಗಾಗಿಯೇ ಕುಟುಂಬ ನಿರ್ವಹಣೆಯಲ್ಲಿ ಅವರದು ಮಹತ್ವದ ಪಾತ್ರವಾಗಿರುತ್ತದೆ. ಈ ಪಾತ್ರವನ್ನು ದೃಷ್ಟಿಯಲ್ಲಿರಿಸಿಕೊಂಡೇ ಹೇಮಾವತಿ ಹೆಗ್ಗಡೆ ಅವರು ರೂಪಿಸಿದ ಮಹಿಳಾ ಸಬಲೀಕರಣದ ಕಾರ್ಯಕ್ರಮಗಳು ಯಶಸ್ಸು ಕಂಡಿವೆ ಎಂದು ಹೇಳಿದರು.

ಬರಹಗಾರರಾಗಿಯೂ ಹೇಮಾವತಿ ಹೆಗ್ಗಡೆ ಅವರು ಬಹುಮುಖ್ಯ ಕೊಡುಗೆಗಳನ್ನು ನೀಡಿದ್ದಾರೆ. ಅತ್ಯಂತ ಸರಳ ನಿರೂಪಣೆಯೊಂದಿಗೆ ಗಮನ ಸೆಳೆಯುವ ಗುಣ ಅವರ ಬರಹಗಳದ್ದು. ಅವರ ಅಂಕಣ ಬರಹಗಳು ಓದುಗರಲ್ಲಿ ಸ್ಫೂರ್ತಿ ತುಂಬುತ್ತವೆ. ಲೋಕವನ್ನು ಅವರು ಗ್ರಹಿಸುವ ರೀತಿ ವಿಭಿನ್ನವಾದದ್ದು. ವಿವಿಧ ಅನುಭವ ಪ್ರಸಂಗಗಳನ್ನು ಉಲ್ಲೇಖಿಸಿ ಮೌಲ್ಯಯುತ ಚಿಂತನೆಯನ್ನು ದಾಟಿಸುವ ಅವರ ಬರಹದ ಶೈಲಿ ವಿಶೇಷವಾದದ್ದು ಎಂದರು.

ಅವರ ಚಿಂತನೆ, ಸಾಹಿತ್ಯಕ ಆಲೋಚನೆಗಳು, ಸಮಾಜಪರ ನಿಲುವುಗಳು, ನಡೆಸಿದ ಗ್ರಾಮೀಣಾಭಿವೃದ್ಧಿ ಪ್ರಯೋಗಗಳನ್ನು ದಾಖಲಿಸುವ ಉದ್ದೇಶದೊಂದಿಗೆ ಸಮಗ್ರ ಸಂಪುಟ ಹೊರತರಬೇಕು. ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಸಬಲೀಕರಣಗೊಂಡ ಮಹಿಳೆಯರ ಅಭಿಪ್ರಾಯಗಳು ಈ ಸಂಪುಟದಲ್ಲಿ ಪ್ರಸ್ತಾಪವಾಗಬೇಕು ಎಂದು ಸಲಹೆ ನೀಡಿದರು.

ಅಭಿನಂದನೆ ಮತ್ತು ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಹೇಮಾವತಿ ವೀ.ಹೆಗ್ಗಡೆ ಅವರು ಪ್ರಯೋಗಗಳ ಜೊತೆಗಿನ ತಮ್ಮ ಯಶಸ್ವಿ ಯಾನದ ವಿವಿಧ ಮಜಲುಗಳನ್ನು ನೆನಪಿಸಿಕೊಂಡರು. ಮೂಲತಃ ಗ್ರಾಮೀಣ ಹಿನ್ನೆಲೆಯಿದ್ದ ಕಾರಣ ಹಳ್ಳಿಗಳಲ್ಲಿನ ಹೆಣ್ಣುಮಕ್ಕಳು ಅನುಭವಿಸುವ ಸಂಕಟಗಳನ್ನು ಹತ್ತಿರದಿಂದ ನೋಡಿದ್ದೆ. ಆ ಎಲ್ಲಾ ಸಂಕಟಗಳಿಂದ ಅವರನ್ನು ವಿಮುಕ್ತಗೊಳಿಸುವ ಮಾರ್ಗೋಪಾಯಗಳನ್ನು ಹೊಳೆಸಿಕೊಳ್ಳುವ ಪ್ರಯತ್ನದ ಭಾಗವಾಗಿಯೇ ಗ್ರಾಮೀಣಾಭಿವೃದ್ಧಿ ಯೋಜನೆಯ ಪರಿಕಲ್ಪನೆ ರೂಪುಗೊಂಡಿತು ಎಂದರು.

ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಿ.ಹರ್ಷೇಂದ್ರ ಕುಮಾರ್, ಶ್ರೀಮತಿ ಸುಪ್ರಿಯಾ ಹರ್ಷೇಂದ್ರಕುಮಾರ್, ಡಾ.ಬಿ.ಎ.ವಿವೇಕ ರೈ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಉಪಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಡಾ.ಶಲೀಪ್ ಎ.ಪಿ, ಪ್ರೊ.ಕೆ.ಪಿ.ನಂದಕುಮಾರಿ, ಡಾ.ರಜತಾ, ದಿವ್ಯಾ ಹಾಗೂ ಸ್ಮೃತಿ ಅವರು ಡಾ.ಹೇಮಾವತಿ ವೀ.ಹೆಗ್ಗಡೆ ಅವರನ್ನು ಸನ್ಮಾನಿಸಿದರು. ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಯ ಉಪಕಾರ್ಯದರ್ಶಿಗಳಾದ ಡಾ.ಸತೀಶ್ಚಂದ್ರ ಎಸ್. ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಡಾ.ಹೇಮಾವತಿ ವೀ.ಹೆಗ್ಗಡೆ ಅವರ ವ್ಯಕ್ತಿತ್ವದ ವಿಶೇಷತೆಯನ್ನು ಪರಿಚಯಿಸಿದರು. ಎಸ್.ಡಿ.ಎಂ ರೆಸಿಡೆನ್ಷಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೃಷ್ಣಮೂರ್ತಿ ಅವರು ಅಭಿನಂದನಾ ಪತ್ರವನ್ನು ಓದಿದರು. ಎಸ್.ಡಿ.ಎಂ ಕಾಲೇಜಿನ ಆಡಳಿತಾತ್ಮಕ ಕುಲಸಚಿವರಾದ ಡಾ.ಬಿ.ಪಿ.ಸಂಪತ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಡಾ.ಬಿ.ಎ.ಕುಮಾರ್ ಹೆಗ್ಡೆ ವಂದಿಸಿದರು.

ಅಭಿನಂದನಾ ಕಾರ್ಯಕ್ರಮದ ನೆನಪಿಗಾಗಿ ಡಾ.ಹೇಮಾವತಿ ವೀ.ಹೆಗ್ಗಡೆ ಅವರು ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿ ಶ್ರೀಗಂಧದ ಸಸಿ ನೆಟ್ಟರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು