News Karnataka Kannada
Saturday, April 27 2024
ಮಂಗಳೂರು

ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಇಂದು ೭೩ ನೇ ಜನ್ಮದಿನದ ಸಂಭ್ರಮ

Dr.d.veerendrra Award 17082021
Photo Credit :
ಬೆಳ್ತಂಗಡಿ: ೮೦೦ ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆ ಇರುವ ಶ್ರೀಕ್ಷೇತ್ರ ಧರ್ಮಸ್ಥಳದ ೨೧ ನೇ ಧರ್ಮಾಧಿಕಾರಿಯಾಗಿರುವ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಇಂದು ೭೩ ನೇ ಜನ್ಮದಿನದ ಸಂಭ್ರಮ. ಭಕ್ತರನ್ನು ಅತಿಥಿಗಳಂತೆ ಕಂಡು ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುವ  ಕ್ಷೇತ್ರದ ಮೂಲಕರ್ತವ್ಯವನ್ನು ಅನೂಚಾನವಾಗಿ ನಡೆಸಿಕೊಂಡು ಬರುತ್ತಿರುವ ಹೆಗ್ಗಡೆಯವರ ಸಾಧನೆಗಳು ಇಂದು ವಿಶ್ವಮಾನ್ಯ. ಕಳೆದ ೫೪ ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಚತುರ್ದಾನ ಪರಂಪರೆಗೆ ನವ ಭಾಷ್ಯವನ್ನು ಬರೆದು ಜನಮಾನಸದಲ್ಲಿ ಅಚ್ಚಳಿಯದಂತೆ ಇದ್ದಾರೆ. ಸಮಾಜಕ್ಕೆ ಅವರು ನೀಡಿರುವ ಕೊಡುಗೆ ಬೆಲೆ ಕಟ್ಟಲಾಗದಂಥದ್ದು. ಚತುರ್ದಾನ ಪರಂಪರೆಯ ಜೀವಂತಿಕೆಗೆ ಹೆಗ್ಗಡೆಯವರು ನೀಡುತ್ತಿರುವ ಕೊಡುಗೆ ಅಗಣಿತ ಅಮೂಲ್ಯವೇ ಹೌದು.
ಹೆಗ್ಗಡೆಯವರ ದೂರದೃಷ್ಟಿತ್ವದ, ಸಾಮಾಜಿಕ ಕಳಕಳಿಯ, ಶೈಕ್ಷಣಿಕ ಉನ್ನತಿಗಾಗಿ ಮಾಡಿರುವ ಪ್ರಮುಖ ಸಾಧನೆಗಳನ್ನು ಮೆಲುಕು ಹಾಕುವುದು ಇಂದಿನ ಅಗತ್ಯವಾಗಿದೆ. ಹೆಗ್ಗಡೆಯವರ ನೇತೃತ್ವದ ಮಂಜುನಾಥೇಶ್ವರ ಎಜ್ಯುಕೇಶನ್‌ ಸೊಸೈಟಿ ಮತ್ತು ಟ್ರಸ್ಟ್‌ ಸಂಸ್ಥೆಗಳ ಮೂಲಕ ರಾಜ್ಯದ ವಿವಿಧ ಭಾಗಗಳಲ್ಲಿ ೫೬ ವಿದ್ಯಾಸಂಸ್ಥೆಗಳು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು ಎಸ್.ಡಿ.ಎಂ. ಇಂದು ಬ್ರ್ಯಾಂಡ್‌ ನೇಮ್‌ ಆಗಿದೆ. ಪೂರ್ವ ಪ್ರಾಥಮಿಕದಿಂದ ಹಿಡಿದು ಸ್ನಾತಕೋತ್ತರದವರೆಗಿನ ಸಂಸ್ಥೆಗಳಲ್ಲಿ ಪ್ರಸ್ತುತ ಸುಮಾರು ೨೮ ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸುಮಾರು ೭ ಸಾವಿರದ ಐನೂರು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದಲ್ಲಿ ಜನತಾ ಶಿಕ್ಷಣ ಸಮಿತಿ,  ೩೨ ವರ್ಷಗಳ ಇತಿಹಾಸವಿರುವ ಧರ್ಮಸ್ಥಳದ ಮಾಹಿತಿ ತಂತ್ರಜ್ಞಾನ ವಿಭಾಗ ಕಾರ್ಯನಿರತವಾಗಿದೆ. ೧೯೮೨ರಲ್ಲಿ ಪ್ರಾರಂಭವಾದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧ ಯೋಜನೆಯಲ್ಲಿ ಇದೀಗ ೫,೫೪,೨೩೬ ಸ್ವ-ಸಹಾಯ ಸಂಘಗಳು ಚಾಲ್ತಿಯಲ್ಲಿದ್ದು ೪೫,೦೪,೩೧೬ ಕುಟುಂಬಗಳು ಯೋಜನೆಗಳ ಕಾರ್ಯಕ್ರಮಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ರಾಜ್ಯದಲ್ಲಿನ ೨೪೬ ದೇವಸ್ಥಾನಗಳ ಜೀರ್ಣೋದ್ಧಾರವನ್ನು ಸರಕಾರದ ಸಹಭಾಗಿತ್ವದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‌ ಮಾಡಿದೆ. ಇದಕ್ಕಾಗಿ ೧೩,೯೨,೭೨,೦೦೦ ಅನುದಾನ ವಿನಿಯೋಗವಾಗಿದೆ. ಆರೋಗ್ಯದಾನದ ಉಪಕ್ರಮವಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ  ಮೆಡಿಕಲ್‌ ಟ್ರಸ್ಟ್‌ ಕಾರ್ಯಾಚರಿಸುತ್ತಿದೆ. ಉದ್ಯಮಶೀಲತೆಯ ಉತ್ತೇಜನಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆ(ರುಡ್‌ಸೆಟಿ) ರಾಜ್ಯದಲ್ಲಿ ೭ ಶಾಖೆಗಳು ಸಹಿತ ದೇಶಾದ್ಯಂತ ೧೭ ರಾಜ್ಯಗಳಲ್ಲಿ ೨೭ ಶಾಖೆಗಳನ್ನು ಹೊಂದಿ ೫,೦೬,೬೮೪ ಯುವಕ/ಯುವತಿಯರಿಗೆ ತರಬೇತಿಯನ್ನು ಕೊಟ್ಟು ಅವರಲ್ಲಿ ೩,೭೩,೧೦೦ ಅಭ್ಯರ್ಥಿಗಳು ಸ್ವಂತ ಉದ್ಯೋಗ ಪ್ರಾರಂಭಿಸುವುದರ ಮೂಲಕ ಶೇ. ೭೪ರಷ್ಟು ಅಭ್ಯರ್ಥಿಗಳು ಯಶಸ್ವಿಯಾಗಿ ಸ್ವಾವಲಂಬಿಗಳಾಗಿದ್ದಾರೆ. ಸುಂದರ, ಸ್ವಸ್ಥ, ಸದೃಢ ಸಮಾಜ ನಿರ್ಮಾಣಕ್ಕಾಗಿ ಶಾಂತಿವನ ಟ್ರಸ್ಟ್‌ ಕಾರ್ಯನಿರ್ವಹಿಸುತ್ತಿದೆ. ಮಂಜೂಷಾ ವಸ್ತು ಸಂಗ್ರಹಾಲಯ, ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನ ಅಧ್ಯಯನ ಶೀಲರನ್ನು ಸದಾ ಆಕರ್ಷಿಸುತ್ತಿವೆ. ೨೦೦ ವರ್ಷಗಳ ಇತಿಹಾಸವಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಇಂದಿಗೂ ಕಲಾಪೋಷಣೆಗೆ ಒತ್ತು ನೀಡುತ್ತಾ ಬರುತ್ತಿದೆ.
ಈ ರೀತಿ ಇನ್ನೂ ಹಲವಾರು ವಿಭಿನ್ನ ಸಮಾಜಮುಖೀ ನೆಲೆಗಳಲ್ಲಿ  ಹೆಗ್ಗಡೆಯವರ ವ್ಯಕ್ತಿತ್ವ ವ್ಯಕ್ತವಾಗಿದೆ. ಧರ್ಮಾಧಿಕಾರಿಯೆಂದರೆ ಅವರು ಸಾರ್ವಜನಿಕರಿಗೆ ಮೀಸಲು. ಈ ತತ್ವವನ್ನು ಹೆಗ್ಗಡೆಯವರು ಮೂರು ನೆಲೆಯಲ್ಲಿ ಪಾಲಿಸಿಕೊಂಡು ಬಂದಿರುವುದು ಗಮನಾರ್ಹ. ಹೆಗ್ಗಡೆಯವರ ಧನಾತ್ಮಕ ಚಿಂತನೆಯ ಪರಿ ಅತ್ಯದ್ಬುತ. ಅವರ ವ್ರತನಿಯಮ, ಧರ್ಮನೇಮ, ಕಾಯಕನಿಷ್ಠೆ, ಸಮಯ ಪ್ರಜ್ಞೆ, ಜೀವನ ಸಂಸ್ಕಾರ ಯಾರನ್ನಾದರೂ ಸರಿ ಪ್ರಭಾವಿಸುತ್ತದೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು