News Karnataka Kannada
Saturday, May 11 2024
ಕರಾವಳಿ

15 ವರ್ಷಗಳಿಂದ ಮನೆಯೊಳಗಿದ್ದ ಯುವತಿಗೆ ಜಿ.ಪಂ ಸದಸ್ಯೆಯಿಂದ ಮುಕ್ತಿ

Photo Credit :

 15 ವರ್ಷಗಳಿಂದ ಮನೆಯೊಳಗಿದ್ದ ಯುವತಿಗೆ ಜಿ.ಪಂ ಸದಸ್ಯೆಯಿಂದ ಮುಕ್ತಿ

ಮಂಗಳೂರು: ಅದು ಅಜ್ಜಿ, ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳ ಪುಟ್ಟ ಸಂಸಾರ.   ಇಬ್ಬರು ಹೆಣ್ಮಕ್ಕಳು ಮಂಗಳೂರಿನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳು. ಅದೊಂದು ಶಾಲಾ ಪ್ರವಾಸದ ಸಂದರ್ಭ  ಕುಟುಂಬದ ಕಿರಿಯ ಜೀವ ಪಿಲಿಕುಳ ದೋಣಿ ದುರಂತದಲ್ಲಿ ಬಲಿಯಾದರೆ, ಇದ್ದ ಆಕೆಯ  ಸಹೋದರಿ ತಂಗಿಯ ಸಾವಿನಿಂದ ನೊಂದು 15 ವರ್ಷಗಳಿಂದ ಮಾನಸಿಕ ಅಸ್ವಸ್ಥಳಾಗಿ ಮನೆಯ ಕೋಣೆ ಸೇರಿದ್ದಳು. ಇಂದು ಸೋಮೇಶ್ವರ ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ  ಮತ್ತು ಬಿಜೆಪಿ ಕಾರ್ಯಕರ್ತರ ತಂಡ 29 ರ ಹರೆಯದ ಯುವತಿಯನ್ನು ಕೋಣೆಯಿಂದ ಬಿಡುಗಡೆಗೊಳಿಸಿ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದಾರೆ.

ಕೂಳೂರಿನ ಗೋಪಾಲ್ ಮತ್ತು ಸ್ವರ್ಣಲತಾ  ದಂಪತಿಗೆ ಬೀನಾ ಮತ್ತು ಅನುಷಾ ಇಬ್ಬರು ಹೆಣ್ಮಕ್ಕಳಿದ್ದರು.  ಕ್ರಮೇಣ ಸ್ವರ್ಣಲತಾ ಅವರು  ಸೋಮೇಶ್ವರ ರೈಲ್ವೇ ಗೇಟ್ ಬಳಿಯ ತಾಯಿ ಜಲಜಾಕ್ಷಿ ಅವರ ಮನೆಯನ್ನೇ ಮಕ್ಕಳ ಸಮೇತ ಸೇರಿದ್ದರು. ಅಲ್ಲಿಂದಲೇ  ಬೀನಾ ಮತ್ತು ಅನುಷಾ ಮಂಗಳೂರಿನ ಸೈಂಟ್ ಆ್ಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದರು. ಅಂದು 2000 ಇಸವಿಯ  ಜ.21, ರಂದು ಶಾಲೆಯ 247  ವಿದ್ಯಾರ್ಥಿಗಳು  ಪಿಲಿಕುಳ ನಿಸರ್ಗಧಾಮಕ್ಕೆ ಶಾಲೆ ವತಿಯಿಂದ ಪ್ರವಾಸ ಹೊರಟಿದ್ದರು. ಅಲ್ಲಿ 23 ವಿದ್ಯಾರ್ಥಿಗಳನ್ನು ಒಂದೇ ದೋಣಿಯಲ್ಲಿ ವಿಹಾರ ಕೊಂಡೊಯ್ಯುವ ಸಂದರ್ಭ  ಕೆರೆಯ ನಡುಭಾಗದಲ್ಲಿ  ದೋಣಿ ಮಗುಚಿಬಿದ್ದು ದೋಣಿಯ ನಿರ್ವಾಹಕರು ಸೇರಿದಂತೆ 23 ವಿದ್ಯಾರ್ಥಿಗಳು ನೀರಲ್ಲಿ ಮುಳುಗಿದ್ದರು. ಅದರಲ್ಲಿ 18 ಮಂದಿಯನ್ನು  ರಕ್ಷಿಸಲಾದರೆ, ಅಶ್ವಿನಿ, ಸುಷ್ಮಾ ನಯನಾ, ಅನುಷಾ.ಕೆ, ರೋವಿನಾ ವಾಝ್ ಮತ್ತು  ಪ್ರಜ್ಞಾ  ಕೆರೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಇದು ಇಬ್ಬರು ಒಬ್ಬರನ್ನೊಬ್ಬರು ತುಂಬಾ ಹಚ್ಚಿಕೊಂಡು ಬಾಳುತ್ತಿದ್ದ ಬೀನಾ ಮನಸ್ಸಿಗೆ ಆಘಾತವನ್ನು ಉಂಟು ಮಾಡಿತ್ತು.   

ತಂಗಿ ಸಾವಿನಿಂದ ನೊಂದ ಬೀನಾ ಮನೆಮಂದಿಯಲ್ಲಿ, ಶಾಲೆಯಲ್ಲಿ ಮಾತನಾಡುವುದನ್ನೇ ಕಡಿಮೆ ಮಾಡಿದ್ದಳು.  ಒಂದು ವರ್ಷ ಆಗುತ್ತಿದ್ದಂತೆ ಅಂದು ಎಸ್ ಎಸ್ ಎಲ್ ಸಿ ಓದುತ್ತಿದ್ದ ಬೀನಾ ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡಿದ್ದಳು. ಮನೆಯಲ್ಲಿ  ಕೈಗೆ ಸಿಕ್ಕ ವಸ್ತುಗಳನ್ನು ಎಸೆಯುತ್ತಾ ಅಜ್ಜಿ ಮತ್ತು ತಾಯಿಗೂ ಹಲ್ಲೆ ನಡೆಸುತ್ತಾ ದಿನ ದೂಡುತ್ತಿದ್ದಳು.  ಇಬ್ಬರು ಆಕೆಯನ್ನು ಸಮಾಧಾನಿಸಿದರೂ ಕೇಳದ ಸ್ಥಿತಿಯಲ್ಲಿದ್ದ ಸಂದರ್ಭ ಬೀನಾ ಳನ್ನು ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ  ಚಿಕಿತ್ಸೆಯನ್ನು ಪಡೆದರೂ ಗುಣಮುಖವಾಗದೇ ಇದ್ದಾಗ, ಆಸ್ಪತ್ರೆಯಲ್ಲಿ ನಿಲ್ಲಲು ಯಾರೂ ಇರದ ಸಂದರ್ಭ ಮತ್ತೆ ಮನೆಗೆ ಕರೆದುಕೊಂಡು ಬರಬೇಕಾಯಿತು.  ಆದರೆ ಬೀನಾಳ ಸ್ಥಿತಿ ಇನ್ನಷ್ಟು ಹದಗೆಡುತ್ತಾ, ಮನೆಯಲ್ಲಿ  ಯಾರನ್ನು ಕಂಡರೂ ಹಲ್ಲೆಗೆ ಮುಂದಾಗುತ್ತಿದ್ದಂತೆ ದೇರಳಕಟ್ಟೆಯ  ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಅಲ್ಲಿಯೂ ಸರಿಹೋಗದ ಹಿನ್ನೆಲೆಯಲ್ಲಿ ಮತ್ತೆ ಮನೆಯಲ್ಲಿ ತಂದು ಇರಿಸಲಾಯಿತು. ಆದರೆ ಮನೆಯಲ್ಲಿ ವಿಪರೀತ  ತೊಂದರೆಯನ್ನು ಮಾಡುತ್ತಾ ಸಾಗಿದಾಗ ನಿಯಂತ್ರಣಕ್ಕೆ ತರಲು ಸಾಧ್ಯವಾಗದ ವೃದ್ಧ ಅಜ್ಜಿ ಮತ್ತು ತಾಯಿ ಕೋಣೆಯಲ್ಲಿ ಕೂಡಿ ಹಾಕಿದ್ದರು.  ಬಳಿಕ ಅಲ್ಲಿಯೇ ಆಹಾರವನ್ನು ಪೂರೈಸುವುದರ ಜತೆಗೆ ಸಲಹುತ್ತಾ ಬಂದಿದ್ದರು.

ಚುನಾವಣಾ ಪ್ರಚಾರದ ವೇಳೆ ಬೆಳಕಿಗೆ
ಈ ಬಾರಿಯ ಜಿಲ್ಲಾ ಪಂಚಾಯಿತಿ ಚುನಾವಣೆ  ಹಿನ್ನೆಲೆಯಲ್ಲಿ ಬಿಜೆಪಿಯ  ಸೋಮೇಶ್ವರ ಕ್ಷೇತ್ರದ ಅಭ್ಯರ್ಥಿ ಧನಲಕ್ಷ್ಮೀ ಹಾಗೂ ಸ್ಥಳೀಯ ಬಿಜೆಪಿ ಕಾರ್ಯಕರ್ತರ ತಂಡ  ಜಲಜಾಕ್ಷಿ ಅವರ ಮನೆಗೆ ಮತಯಾಚನೆಗೆ ತೆರಳಿತ್ತು. ಈ ವೇಳೆ ಬೀನಾ ಸ್ಥಿತಿಯನ್ನು ಗಮನಿಸಿದ ಧನಲಕ್ಷ್ಮೀ ಚುನಾವಣೆ ಮುಗಿದ ಬಳಿಕ ಆಕೆಯನ್ನು ಸಂಬಂಧಪಟ್ಟ ಪುನರ್ವಸತಿ ಕೇಂದ್ರಕ್ಕೆ ದಾಖಲಿಸುವ ಭರವಸೆಯನ್ನು ನೀಡಿದ್ದರು. ಅದರಂತೆ ಸೋಮವಾರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮನೆಗೆ ಭೇಟಿ ನೀಡಿ 29ರ ಹರೆಯದ  ಬೀನಾಳನ್ನು ಸಮಾಧಾನಿಸಿ ಸೋಮೇಶ್ವರ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್ ಅವರ ಕಾರಿನಲ್ಲಿ ಕೊಂಡೊಯ್ದು ನೆಹರುನಗರದ ಪಶ್ಚಿಮ್ ರಿಹಾಬ್ ಪುನರ್ವಸತಿ  ಕೇಂದ್ರಕ್ಕೆ ದಾಖಲಿಸಿದ್ದಾರೆ.

ಸಮಾಜದ ನೆರವಿಲ್ಲ: ಕುಟುಂಬ ಮೊಗವೀರ ಸಮಾಜಕ್ಕೆ ಸೇರಿದ್ದರೂ ಈವರೆಗೆ ಯಾವುದೇ ಸಂಘದವರಾಗಲಿ ಸಹಾಯಕ್ಕೆ ಮುಂದಾಗಿಲ್ಲ. ಇಬ್ಬರು ತಾಯಿ ಮತ್ತು ಮಗಳು ಇಬ್ಬರು  ಅಸೌಖ್ಯದಿಂದ ಮಗಳನ್ನು ಸಲಹಲು ಸಾಧ್ಯವಿರದ ಸ್ಥಿತಿಯಲ್ಲಿದ್ದಾರೆ. ಅಲ್ಲದೆ ಆರ್ಥಿಕವಾಗಿಯೂ ಕಂಗೆಟ್ಟಿದ್ದಾರೆ. ಕೂಡಲೇ ಸಮಾಜದ ಮತ್ತು ಕುಟುಂಬದ ಮಂದಿ  ಹದಿಹರೆಯದ ಯುವತಿಯ ಬಾಳನ್ನು ಬೆಳಗಿಸುವ ಪ್ರಯತ್ನಕ್ಕೆ ಮುಂದಾಗಬೇಕು ಅನ್ನುವ ಅಭಿಪ್ರಾಯ ಸ್ಥಳೀಯರದ್ದಾಗಿದೆ.

ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ,  ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಸೋಮೇಶ್ವರ  ಗ್ರಾ. ಪಂ.ಅಧ್ಯಕ್ಷ ರಾಜೇಶ್ ಉಚ್ಚಿಲ್, ತಾ.ಪಂ ಸದಸ್ಯ ರವಿಶಂಕರ್ ಮೊದಲಾದವರು ಉಪಸ್ಥಿತರಿದ್ದರು.     

ಮಾನಸಿಕ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಕ್ಕಿದಾಗ ಅವರು ಗುಣಮುಖರಾಗುತ್ತಾರೆ. ಜನಪ್ರತಿನಿಧಿಗಳು ಮನಸ್ಸು ಮಾಡಿ ಕರೆತಂದಿರುವುದು ಸಂತಸವಾಗಿದೆ. ಸಮಸ್ಯೆಗೆ ಸ್ಪಂಧಿಸುವ ಮೂಲಕ ಭರವಸೆ ಈಡೇರಿಸಿದ್ದಾರೆ. ಮಾನಸಿಕ ರೋಗಿಗಳು ಮಾತ್ರವಲ್ಲ ಇತರ ರೋಗಿಗಳಿಗೂ ಸಹಾಯವಾಗಿ ಸೆಂಟರ್ ನಿಂತಿದೆ.  

ಚುನಾವಣೆ ಪ್ರಚಾರಕ್ಕೆ ಬಂದಾಗ  ಯುವತಿಯ ಸ್ಥಿತಿಯನ್ನು ನೋಡಿ ಕಣ್ಣು ತುಂಬಿ ಬಂತು.  ಅಲ್ಲದೆ ಮನೆಯಲ್ಲಿದ್ದ ಇಬ್ಬರೂ ಅಸಹಾಯಕರಾಗಿ, ಯುವತಿಯನ್ನು ಸಲಹಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದರು. ಸಾಮಾಜಿಕ ಕಾರ್ಯಕರ್ತೆಯಾಗಿದ್ದರಿಂದ  ಪುನರ್ವಸತಿ ಕೇಂದ್ರದವರ ಪರಿಚಯವಿದ್ದರಿಂದ ಅವರಲ್ಲಿ   ಮಾತುಕತೆ ನಡೆಸಿದ್ದೆನು. ಅವರು ಒಪ್ಪಿದ್ದರಿಂದ  ಬೀನಾಳನ್ನು ಕೋಣೆಯಿಂದ ಮುಕ್ತಿ ದೊರಕಿಸುವಲ್ಲಿ ಸಾಧ್ಯವಾಯಿತು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು