News Karnataka Kannada
Friday, May 10 2024
ಕರಾವಳಿ

ಸುಳ್ಯ ಕೇಶವಕೃಪಾ ವೇದ ಶಿಬಿರದಲ್ಲಿ ಅಸೀಮಾ ವೇದ ಮಂತ್ರ ಪಠಣ!

Photo Credit :

ಸುಳ್ಯ ಕೇಶವಕೃಪಾ ವೇದ ಶಿಬಿರದಲ್ಲಿ ಅಸೀಮಾ ವೇದ ಮಂತ್ರ ಪಠಣ!

ಸುಳ್ಯ: ಶಿಕ್ಷಣದ ಎಲ್ಲಾ ವಿಭಾಗಗಳಲ್ಲಿಯೂ ಮೇಲುಗೈ ಸಾಧಿಸುವ ಮೂಲಕ ಹುಡುಗಿಯರು ಪಾರಮ್ಯ ಮೆರೆಯುವುದು ಇತ್ತೀಚಿನ ದಿನಗಳ ಟ್ರೆಂಡ್.  ಬಾಲಕರಿಗೆ ಮಾತ್ರ ಸೀಮಿತವಾಗಿದ್ದ ವೇದ ಮಂತ್ರಗಳನ್ನು ಸುಲಲಿತವಾಗಿ, ಸ್ಫುಟವಾಗಿ ಪಠಣ ಮಾಡುವ ಮೂಲಕ ಇಲ್ಲೊಬ್ಬ ಬಾಲಕಿ ಗಮನ ಸೆಳೆಯುತ್ತಾಳೆ ಎಂಬುದು ಇಂದಿನ ವಿಶೇಷತೆ.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಅಡೂರಿನ ಸತ್ಯನಾರಾಯಣ ಶರ್ಮ ಮತ್ತು ರಂಜಿನಿಕುಮಾರಿ ಶರ್ಮ ದಂಪತಿಗಳ ಪುತ್ರಿ  10 ವರ್ಷದ ಬಾಲಕಿ ಅಸೀಮಾ ಅಗ್ನಿಹೋತ್ರಿ ವೇದಾಧ್ಯನ ನಿರತಳಾದ ಬಾಲಕಿ. ಬಾಲಕಿಗೂ ವೇದ ಅಧ್ಯಯನವನ್ನು ನಡೆಸುವ ಮೂಲಕ ಸುಳ್ಯದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ  ವೇದ ಯೋಗ ಕಲಾ ಶಿಬಿರ ವಿಶೇಷ ಮೆರುಗನ್ನು ಪಡೆದಿದೆ. ಕಳೆದ 17 ವರ್ಷಗಳಿಂದ ನಡೆಯುತ್ತಿರುವ ಶಿಬಿರದಲ್ಲಿ ಇದೇ ಪ್ರಥಮ ಬಾರಿಗೆ ಬಾಲಕಿಯೋರ್ವಳು ವೇದ ಅಧ್ಯಯನ ನಿರತಳಾಗಿದ್ದಾಳೆ. ಆ ಮೂಲಕ ಹೆಣ್ಣು ಮಕ್ಕಳಿಗೂ ವೇದ-ಮಂತ್ರಗಳನ್ನು ಕಲಿಸಬೇಕೆಂಬ ಕೇಶವಕೃಪಾ ಪ್ರತಿಷ್ಠಾನದ ಅಧ್ಯಕ್ಷ ನಾಗರಾಜ್ ಭಟ್ ಅವರ ಆಶಯಕ್ಕೆ ಅಸೀಮಾ ಮೂಲಕ ಮುನ್ನುಡಿ ಬರೆಯಲಾಗಿದೆ. 100 ಮಕ್ಕಳಿಗೆ ಇಲ್ಲಿ ವೇದಾಧ್ಯಯನ ನಡೆಸಲಾಗುತ್ತಿದ್ದು ಹುಡುಗರಿಗಿಂತ ಏನೂ ಕಮ್ಮಿ ಇಲ್ಲ ಎಂಬಂತೆ  ಇತರ ವಠುಗಳಂತೆ ವೇದ ಮಂತ್ರಗಳನ್ನು ಸ್ಫುಟವಾಗಿ ಉಚ್ಚರಿಸುತ್ತಾಳೆ. ಹುಡುಗರಂತೆ ಇತರ ಎಲ್ಲಾ ಚಟುವಟಿಕೆಗಳಲ್ಲಿಯೂ ಸಕ್ರೀಯವಾಗಿ ಭಾಗವಹಿಸಿ ಸಂಭ್ರಮಿಸುತ್ತಾಳೆ ಅಸೀಮಾ.  ಕಾಸರಗೋಡು ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ನಾಲ್ಕನೇ ತರಗತಿಯಲ್ಲಿ ಕಲಿಯುವ ಅಸೀಮಾ ತನ್ನ ಅವಳಿ ಸಹೋದರ ಅದ್ವೈತ್ನ ಜೊತೆಯಲ್ಲಿ ಬೇಸಿಗೆ ರಜೆಯಲ್ಲಿ ವೇದ ಮಂತ್ರ ಅಧ್ಯಯನದಲ್ಲಿ ತೊಡಿಗಿದ್ದಾಳೆ. ವೇದ, ಯೋಗ, ಜಪ, ಧ್ಯಾನದ ಜೊತೆಗೆ ಕರಾಟೆ, ಸಂಗೀತ, ನೃತ್ಯ ಕಲಿಕೆಯಲ್ಲಿಯೂ ನಿಸ್ಸೀಮಳಾಗಿದ್ದಾಳೆ ಈ ಅಸೀಮಾ.

ಮಗನ ಜೊತೆಯಲ್ಲಿ ಮಗಳಿಗೂ ಉಪನಯನ ಮಾಡಿಸಿ ವೇದವನ್ನು ಕಲಿಸಬೇಕು ಎಂದು ಮೊದಲೇ ನಿರ್ಧರಿಸಿದ್ದೆ. ವೇದ ಎಂದರೆ ಜ್ಞಾನದ ಸಂಪತ್ತು. ವೇದವನ್ನು ಕಲಿಯುವ ಹಕ್ಕು ಎಲ್ಲರಿಗೂ ಸಮಾನಾಗಿ ಹಂಚಿಕೆಯಾಗಬೇಕು.  ವೇದ ಜ್ಞಾನವನ್ನು ಹುಡುಗಿಯರಿಗೆ ಕೊಟ್ಟರೆ ಹೆಚ್ಚು ಜ್ಞಾನ ಪ್ರಸಾರವಾಗಿ ಇಡೀ ಸಮಾಜಕ್ಕೆ ಸಂಸ್ಕಾರ ಕಲಿಸಿದಂತಾಗುತ್ತದೆ.  ಅದಕ್ಕಾಗಿಯೇ ನನ್ನ ಮಗಳಿಗೆ ಉಪನಯನ ಮಾಡಿಸಿ ವೇದಾಧ್ಯಯನ ನಡೆಸುತ್ತಿದ್ದೇನೆ ಎನ್ನುತ್ತಾರೆ ಅಸೀಮಾಳ ತಂದೆ ಸತ್ಯನಾರಾಯಣ ಶರ್ಮ. ಕೇಶವಕೃಪಾದಲ್ಲಿ ಮೂರು ವರ್ಷವೂ ವೇದಾಧ್ಯಯನ ಶಿಬಿರಕ್ಕೆ ಕಳುಹಿಸಿ ವೇದ ಕಲಿಸಲಾಗುವುದು. ಮಗಳಿಗೆ  ಕಲಿಯಲು ಆಸಕ್ತಿ ಇರುವಷ್ಟು ವೇದ, ಉಪನಿಷತ್ತು ಸೇರಿ ಎಲ್ಲಾ ಶಿಕ್ಷಣವನ್ನೂ ನೀಡಲಾಗುವುದು ಎನ್ನುತ್ತಾರವರು. ಮಗಳು ಆಸಕ್ತಿಯಿಂದಲೇ ವೇದಾಧ್ಯನ ನಡೆಸುತ್ತಾಳೆ, ಗಂಡು ಮಕ್ಕಳಿಗೆ ಸಿಗುವ ಅದೇ ರೀತಿಯ ಜ್ಞಾನವನ್ನು ಮಗಳಿಗೂ ನೀಡಬೇಕು ಎಂಬ  ಆಶಯದಿಂದ ಮಗಳನ್ನು ವೇದ ಶಿಬಿರಕ್ಕೆ ಸೇರಿಸಿದ್ದೇವೆ ಎನ್ನುತ್ತಾರೆ ಅಸೀಮಾಳ ತಾಯಿ ರಂಜಿನಿಕುಮಾರಿ.   

ಗುರುಕುಲ ಮಾದರಿಯ ವೇದ ಶಿಬಿರ:
ಸುಳ್ಯ ಹಳೆಗೇಟಿನ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಒಂದು ತಿಂಗಳ ಕಾಲ ವೇದ ಯೋಗ ಕಲಾ ಶಿಬಿರದಲ್ಲಿ ವಿದ್ಯಾರ್ಥಿಗಳು ಯೋಗಿಗಳಂತೆ ಬದುಕಿ ಗುರುಕುಲ ಮಾದರಿಯಲ್ಲಿ ವೇದಾಧ್ಯಯನ ನಡೆಸುತ್ತಾರೆ. ಆಧುನಿಕ ಯುಗದಲ್ಲೂ ಪ್ರಾಚೀನ ಕಾಲದ ಗುರುಕುಲ ಸಂಪ್ರದಾಯವನ್ನು ನೆನಪಿಸುವ ಈ ವೇದ ಶಿಬಿರ ಹದಿನೇಳನೇ ವರ್ಷ ನಡೆಯುತ್ತಿದೆ. ನಿತ್ಯ ನಿರಂತರ ಸಾಂಸ್ಕೃತಿಕ ಪ್ರವಾಹವನ್ನು ಹರಿಸಿ ಮಾನವೀಯ ಮೌಲ್ಯಗಳನ್ನು ಬಿತ್ತಿದ ವೇದ ಶಿಬಿರವು 17 ವರ್ಷಗಳಲ್ಲಿ ನೂರಾರು ವಿದ್ಯಾರ್ಥಿಗಳಿಗೆ  ವೇದೋಪನಿಷತ್ತಿನ ಅಂತರ ಗಂಗೆಯನ್ನು ಹರಿಸುತ್ತಿದೆ.

ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ನೇತೃತ್ವದಲ್ಲಿ ನಡೆಯುವ ಶಿಬಿರದಲ್ಲಿ ವೇದ ಮಂತ್ರಗಳ ಅನುರಣಗಳ ನಡುವೆ ಸಾವಿರಾರು ವರುಷಗಳ ಹಿಂದಿನ ಭಾರತದ ದರ್ಶನವನ್ನು ಮಾಡಿಕೊಳ್ಳುವ ಮಕ್ಕಳು ಆಧುನಿಕ ಬೇಸಿಗೆ ಶಿಬಿರಗಳ ಹಾಡು, ಕುಣಿತ, ಅಭಿನಯ,   ಜಾದುಗಳಲ್ಲಿಯೂ ಭಾಗವಹಿಸಿ ಸಂಭ್ರಮಿಸುತ್ತಾರೆ. ಯಕ್ಷಗಾನದ ಭೂಮಿಯಲ್ಲಿ ರಾಮಾಯಣ ಮಹಾಭಾರತವನ್ನು ನೆನಪಿಸಿಕೊಳ್ಳುತ್ತಾರೆ. ಯೋಗಾಸನ, ಪ್ರಾಣಾಯಾಮಗಳ ಮೂಲಕ ಜೀವನ ಪದ್ಧತಿಯ ಆರೋಗ್ಯಕರ ಪಯಣವನ್ನು ಕಲಿಯುತ್ತಾರೆ. ಆದರ್ಶ ಪುರುಷರ ಜೀವನವನ್ನೂ, ರಾಷ್ಟ್ರ ಭಕ್ತಿಯ  ಧ್ಯೇಯವನ್ನೂ ಮೈಗೂಡಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಹಳೆಯ ಕಾಲದ ಗುರುಕುಲ ಶಿಕ್ಷಣ ಪದ್ಧತಿಯ ಮೂಲಕ ವೇದ, ಯೋಗ, ಕಲೆಗಳನ್ನು  ಸಂಪೂರ್ಣ ಉಚಿತವಾಗಿ ಕಲಿಸಲಾಗುತ್ತದೆ.

ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಎಳೆಯ ಮಕ್ಕಳಿಗೆ ತಿಳಿಸಬೇಕೆಂದು 2000ನೇ ವರ್ಷದಲ್ಲಿ ನಾಗರಾಜ ಭಟ್ ವೇದ ಶಿಬಿರವನ್ನು ಆರಂಭಿಸಿದರು. 16 ಮಕ್ಕಳೊಂದಿಗೆ ಆರಂಭವಾದ ಶಿಬಿರಕ್ಕೆ ಇಂದು ವಿವಿಧ ರಾಜ್ಯಗಳಿಂದ  ವಿದ್ಯಾರ್ಥಿಗಳು ಆಗಮಿಸುತ್ತಾರೆ.  ಸಂಪೂರ್ಣ ಉಚಿತವಾಗಿ ನಡೆಯುವ ಶಿಬಿರದಲ್ಲಿ 100 ವಿದ್ಯಾರ್ಥಿಗಳಿಗೆ ವೇದ ಶಿಕ್ಷಣನ್ನು ನೀಡಲಾಗುತಿದೆ. ಶಿಬಿರಕ್ಕೆ ಸೇರಿದವರು ಮೂರು ವರ್ಷಗಳ ಕಾಲ ನಿರಂತರ ಶಿಬಿರದಲ್ಲಿ ಭಾಗವಹಿಸಿ ವೇದ ಅಧ್ಯಯನವನ್ನು ಪೂರ್ತಿಗೊಳಿಸಬೇಕು. ಪ್ರಥಮ ವರ್ಷಕ್ಕೆ 30 ವಿದ್ಯಾರ್ಥಿಗಳನ್ನಷ್ಟೇ ಸೇರ್ಪಡೆ ಮಾಡಲಾಗುತ್ತದೆ. ಬೇಡಿಕೆ ಹೆಚ್ಚಿದ ಕಾರಣ ಈಗ ಪ್ರವೇಶ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡುತ್ತೇವೆ ಎನ್ನುತ್ತಾರೆ ಪ್ರತಿಷ್ಠಾನದ ಅಧ್ಯಕ್ಷ ನಾಗರಾಜ ಭಟ್.  ವೇದ-ಯೋಗ ಹಾಗೂ ಕಲಾ ಶಿಕ್ಷಣದೊಂದಿಗೆ ಅಶನ, ವಸನ, ವಸತಿ, ಪಠ್ಯ ಪುಸ್ತಕಗಳೂ, ವ್ಯಾಸಪೀಠ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತದೆ. ನಾಗರಾಜ ಭಟ್ ತಮ್ಮ ಮನೆಯಲ್ಲಿಯೇ ವಿದ್ಯಾರ್ಥಿಗಳಿಗೆ ವಸತಿ ಮತ್ತಿತರ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸುತ್ತಾರೆ.

ಶಿಬಿರದಲ್ಲಿ ವೇದ ಪಾಠ ಮಾತ್ರವಲ್ಲದೆ ವೇದಾಂತರ್ಗತವಾದ ಜೀವನ ದರ್ಶನವನ್ನು ಜನಮಾನಸಕ್ಕೆ ಸಮರ್ಥವಾಗಿ ತಲುಪಿಸಲು ಮಾಧ್ಯಮವಾದ ಯೋಗಾಭ್ಯಾಸ, ಭಜನೆ, ಸಂಕೀರ್ತನೆಗಳು, ಹಾಡು-ಕುಣಿತ, ಮಕ್ಕಳಲ್ಲಿ ರಾಷ್ಟ್ರಪ್ರೇಮದ ಭಕ್ತಿ ತರಂಗವನ್ನು ಮೂಡಿಸುವ ಹಲವಾರು ವೈವಿಧ್ಯ ಕಾರ್ಯಕ್ರಮಗಳೊಂದಿಗೆ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಜಾದೂ, ಮಿಮಿಕ್ರಿ, ಮುಖವಾಡ ತಯಾರಿ, ಬೊಂಬೆ ತಯಾರಿ, ಮಾತುಗಾರಿಕೆ, ಜಾನಪದ ನೃತ್ಯಗಳು, ಹಾವುಗಳ ಮಾಹಿತಿ, ಯಕ್ಷಗಾನ, ರಂಗಪಾಠಗಳು, ರಂಗಗೀತೆ, ಚಿತ್ರಕಲೆ, ಪೊಲೀಸ್ ಮಾಹಿತಿ, ಆರೋಗ್ಯ ಮಾಹಿತಿ, ಅಗ್ನಿಶಾಮಕ ಪ್ರಾತ್ಯಕ್ಷಿಕೆ ಹೀಗೆ ಹಲವಾರು ವಿಷಯಗಳನ್ನು ಕಲಿಸಿಕೊಡಲಾಗುತ್ತಿದೆ. ವೇದ ಶಿಬಿರಗಳಲ್ಲಿ ಕಲಿತ ವೇದ ಮಂತ್ರಗಳು ಮರೆತು ಹೋಗಬಾರದು. ಅದು ಜೀವನದಲ್ಲಿ ಅಳವಡಿಕೆಯಾಗಬೇಕು ಎಂಬ ದೃಷ್ಠಿಯಿಂದ ವೇದ ಮಂತ್ರಗಳನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳಲು ವಿದ್ಯಾರ್ಥಿಗಳಿಗಾಗಿ ಸರಣಿ ಶಿವಪೂಜೆಯನ್ನು ಹಮ್ಮಿಕೊಳ್ಳಲಾಗುತ್ತಿದೆ.

ಸಮಾಜದ ಎಲ್ಲಾ ವರ್ಗದ ಜನರೂ ವೇದ ಶಿಕ್ಷಣವನ್ನು ಪಡೆಯಬೇಕು ಎಂಬ ದೃಷ್ಠಿಯಿಂದ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ಪ್ರತಿ ವರ್ಷ ವೇದ ಶಿಬಿರ ಆರಂಭವಾಗುವ ಮುನ್ನ ಒಂದು ವಾರಗಳ ಸಂಸ್ಕಾರವಾಹಿನಿ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರಲ್ಲಿ ಗಂಡು ಹೆಣ್ಣು ಎಂಬ ಭೇದ ಭಾವ ಇಲ್ಲದೆ ಎಲ್ಲರಿಗೂ ವೇದ ಮಂತ್ರ ಕಲಿಸಲಾಗುತಿದೆ.
‘ವೇದ ಶಿಕ್ಷಣದಿಂದ ಮಗುವು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಕಳೆದ 17 ವರ್ಷಗಳಿಂದ ನೂರಾರು ಮಂದಿಗೆ ವೇದ ಉಪನಿಷತ್ತಿನ ಜ್ಞಾನವನ್ನು ಧಾರೆ ಎರೆಯಲು ಸಾಧ್ಯವಾಗಿದೆ. ಈಗ ಹುಡುಗಿಯರಿಗೂ ವೇದ ಶಿಕ್ಷಣವನ್ನು ಕಲಿಸಬೇಕೆಂಬ ಕ್ರಾಂತಿಕಾರಕ ಯೋಚನೆಯನ್ನು ಮಾಡಿದ್ದೇವೆ. ಈ ವರ್ಷ ಒಬ್ಬಳು ಹುಡುಗಿ ಸೇರ್ಪಡೆಯಾಗಿದ್ದಾಳೆ. ಮುಂದಿನ ವರ್ಷ ಹೆಚ್ಚು ಮಂದಿ ಹುಡುಗಿಯರಿಗೆ ವೇದ ಕಲಿಸಬೇಕೆನ್ನುವ ಯೋಚನೆ ಇದೆ. ವೇದಗಳನ್ನು ಲಿಂಗ ಭೇದವಿಲ್ಲದೆ ಎಲ್ಲರೂ ಕಲಿತರೆ ವೇದಗಳ ಮಹತ್ವ ಎಲ್ಲರಿಗೂ ತಿಳಿಯುತ್ತದೆ ಮತ್ತು ಅದು ನಿರಂತರವಾಗಿ ಮುಂದುವರಿಯುತ್ತದೆ’. -ಪುರೋಹಿತ ನಾಗರಾಜ ಭಟ್, ಅಧ್ಯಕ್ಷರು. ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು