News Karnataka Kannada
Friday, May 03 2024
ಕರಾವಳಿ

ಶಿಕಾರಿಗೆ ಕಾಡಿಗೆ ಹೋದವರು ಶವವಾದರು!

Photo Credit :

ಶಿಕಾರಿಗೆ ಕಾಡಿಗೆ ಹೋದವರು ಶವವಾದರು!

ಮೂಡುಬಿದಿರೆ: ಮೂರು ದಿನಗಳ ಹಿಂದೆ ಶಿಕಾರಿಗೆಂದು ಕಾಡಿಗೆ ಹೋದ ಯುವಕರಿಬ್ಬರ ಶವವು  ಕರಿಂಜೆಯ ಅರಂತ ಬಾಕ್ಯಾರು ಗದ್ದೆಯ ಬದಿಯಲ್ಲಿ ಗುರುವಾರ ಸಾಯಂಕಾಲ ಪತ್ತೆಯಾಗಿದೆ.

ಉದ್ಯಮಿ ಪ್ರಾಂತ್ಯ ಗ್ರಾಮದ ಪೇಪರ್ಮಿಲ್ಲ್ ನಿವಾಸಿ ಗ್ರೇಶನ್ (34) ಮತ್ತು ಕೃಷಿಕ ಕರಿಂಜೆ ಕಕ್ಕೆಬೆಟ್ಟು ನಿವಾಸಿ ಪ್ರವೀಣ್ ತೌರೋ (32) ಮೃತ ಪಟ್ಟ ದುರ್ದೈವಿಗಳು. ಸ್ನೇಹಿತರಾಗಿದ್ದ ಇವರಿಬ್ಬರು ಬೇಟೆಯಾಡುವ ಹವ್ಯಾಸವನ್ನು ಹೊಂದಿದ್ದರು. ಅದರಂತೆ ಮಂಗಳವಾರ ರಾತ್ರಿ ಮೆರೂನ್ ಬಣ್ಣದ ಬೊಲೇರೋ ವಾಹನದಲ್ಲಿ ಕರಿಂಜೆ ಗುತ್ತು ಶಾಲೆಯ ಬಳಿಯಿಂದ ಶಿಕಾರಿಗೆ ಹೊರಟು ವಾಹನವನ್ನು ಕುಕ್ಯಟ್ಟೆಗುತ್ತು ಯಶವಂತ ಶೆಟ್ಟಿ ಎಂಬವರ  ಮನೆಯಂಗಳದಲ್ಲಿ ಇಟ್ಟು ಹೋಗಿದ್ದು ನಂತರ ಹಿಂತಿರುಗಿ ಬಾರದೆ ನಾಪತ್ತೆಯಾಗಿದ್ದರು.

ಅವರಿಬ್ಬರು ಎಲ್ಲಿಗೆ ಯಾವ ಕಡೆಗೆ ಹೋಗುತ್ತೇವೆಂಬ ಮಾಹಿತಿಯನ್ನು ಮನೆಯಲ್ಲಿ ಹೇಳದೆ ಹೋಗಿರುವುದರಿಂದ ಗ್ರೇಶನ್ ಮನೆಯವರು ತಮ್ಮ ಸಂಬಂಧಿಕರ ಮನೆಗಳಿಗೆ ನಿನ್ನೆಯಿಂದಲೇ ಪೋನ್ ಕರೆಯ ಮೂಲಕ ಹುಡುಕಾಟದಲ್ಲಿದ್ದರು. ಆದರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿರಲಿಲ್ಲ. ಗುರುವಾರ ಬೆಳಗ್ಗೆ ಯಶವಂತ ಶೆಟ್ಟಿ ಅವರು ತನ್ನ ಆಟೋದಲ್ಲಿ ಮೂಡುಬಿದಿರೆ ಕಡೆಗೆ ಹೋಗುತ್ತಿದ್ದಾಗ ಗ್ರೇಶನ್ ಅವರ ಪತ್ನಿಯು ಆಟೋದಲ್ಲಿ ಬಂದರೆನ್ನಲಾಗಿದೆ. ಆಗ ಯಶವಂತ ಅವರು ಗ್ರೇಶನ್ ಎಲ್ಲಿ ಎಂದು ವಿಚಾರಿಸಿದ್ದು ಆಗ ತನಗೆ ಗೊತ್ತಿಲ್ಲ ಯಾಕೆ? ಎಂದು ಮರು ಪ್ರಶ್ನಿಸಿದಾಗ ಬೊಲೇರೋ ವಾಹನವನ್ನು ತಮ್ಮ ಅಂಗಳದಲ್ಲಿ ಇಟ್ಟು ಹೋಗಿದ್ದು ಅದನ್ನು ತೆಗೆದುಕೊಂಡು ಹೋಗುವಂತೆ ಹೇಳಿದಾಗಲೇ ಪತ್ನಿಗೆ ವಾಹನ ಇರುವ ಬಗ್ಗೆ ಮಾಹಿತಿ ದೊರಕಿದ್ದು ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸುಮಾರು 150 ಮಂದಿಯಿಂದ ಹುಡುಕಾಟ:
ಈ ಸುದ್ದಿಯು ತಕ್ಷಣ ಸ್ಥಳೀಯರಿಗೆ ದೊರಕಿದ್ದು ಬೆಳಗ್ಗೆಯಿಂದಲೇ ಸುಮಾರು 150 ಯುವಕರು ಅರಣ್ಯ ಪ್ರದೇಶದಲ್ಲಿ ಮಧ್ಯಾಹ್ನದ ವರೆಗೆ ಹುಡುಕಾಟವನ್ನು ನಡೆಸಿದ್ದರು. ಆದರೆ ಯಾವುದೇ ಮಾಹಿತಿ ಲಭಿಸದೆ ಇದ್ದುದರಿಂದ ಮಧ್ಯಾಹ್ನದ ನಂತರ ಮಿಜಾರಿನಲ್ಲಿನ ಶಿಕಾರಿ ಪರಿಣತರ 20 ಜನರಿರುವ ತಂಡವನ್ನು ಕರೆಸಿದ್ದು ಅವರು ಹುಡುಕಾಟ ನಡೆಸಿದ್ದಾಗ ಗದ್ದೆಯ ಬದಿಯಲ್ಲಿ ಒಬ್ಬರ ಹಿಂದೆ ಇನ್ನೊಬ್ಬರಂತೆ ಬಿದ್ದಿದ್ದ ಇಬ್ಬರ ಶವವು ಪತ್ತೆಯಾಗಿದ್ದು ಪಕ್ಕದಲ್ಲಿ ಟಾರ್ಚ್ ಲೈಟ್, ನೀರಿನ ಬಾಟಲಿ ಮತ್ತು ಕೋವಿ ಪತ್ತೆಯಾಗಿದೆ.

ಇವರಿಬ್ಬರೂ ಸೋಮವಾರ ರಾತ್ರಿಯೂ ಶಿಕಾರಿಗೆ ಹೋಗಿ ಕಾಡು ಪ್ರಾಣಿಗಳನ್ನು ಹಿಡಿದುಕೊಂಡು ಬಂದಿದ್ದರು. ನಂತರ ಮಂಗಳವಾರದಂದು ಇವರಿಬ್ಬರು ಜತೆಯಾಗಿ ಶಿಕಾರಿಗೆ ಹೋಗಿದ್ದರು. ಗ್ರೇಶನ್ ಅವರು ವಿವಾಹಿತನಾಗಿದ್ದು ಪತ್ನಿ ಮತ್ತು ಮಗುವಿದೆ. ಪ್ರವೀಣ್ ತೌರೋ ಅವರು ಅವಿವಾಹಿತನಾಗಿದ್ದು ತಂದೆ ತಾಯಿಯನ್ನು ಕಳೆದುಕೊಂಡಿದ್ದರು.    

ವಿದ್ಯುತ್ ತಂತಿ ತಗುಲಿ ಸಾವು?
ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಕೆಲವು ಕಡೆ ವಿದ್ಯುತ್ ತಂತಿಗಳನ್ನು ಅಳವಡಿಸಲಾಗುತ್ತದೆ. ಪ್ರಾಣಿಗಳ ಭೇಟೆಗೆ ಹೊರಟ ಈ ಇಬ್ಬರು ಆ ತಂತಿಯನ್ನು ಸ್ಪರ್ಶಿಸಿ ಸಾವನ್ನಪ್ಪಿರಲೂ ಬಹುದು. ಆದರೆ ಘಟನಾ ಸ್ಥಳದಲ್ಲಿ  ಈ ಬಗ್ಗೆ ಯಾವುದೇ ಕುರುಹುಗಳು ಪತ್ತೆಯಾಗದೇ ಇರುವುದು ಹಲವು ಊಹಾಪೋವಗಳಿಗೆ ಅವಕಾಶ ಮಾಡಿಕೊಟ್ಟಿದೆ. ಆದರೆ ಪೊಲೀಸ್ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯ ನಂತರವೇ ಒಬ್ಬರ ಸಾವಿಗೆ ನೈಜ್ಯ ಕಾರಣ ಯಾವುದು ಎನ್ನುವುದು ತಿಳಿದುಬರಬೇಕಿದೆ. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
183

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು