News Karnataka Kannada
Monday, May 06 2024
ಕರಾವಳಿ

ತೆಂಕಿಲ ದರ್ಖಾಸು ಎಂಬಲ್ಲಿ ಗುಡ್ಡ ಬಿರುಕು: ಜನರ ಸ್ಥಳಾಂತರ

Photo Credit :

ತೆಂಕಿಲ ದರ್ಖಾಸು ಎಂಬಲ್ಲಿ ಗುಡ್ಡ ಬಿರುಕು: ಜನರ ಸ್ಥಳಾಂತರ

ಪುತ್ತೂರು: ತೆಂಕಿಲ ದರ್ಖಾಸು ಎಂಬಲ್ಲಿ ಗೇರು ಅಭಿವೃದ್ಧಿ ನಿಗಮದ ಗೇರು ತೋಟವಿರುವ ಸರಕಾರಿ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಭೂಕಂಪನ ಸಾಧ್ಯತೆ ಕುರಿತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿರುವುದರಿಂದ ಮಡಿಕೇರಿಯ ಜೋಡುಪಾಲ ಮಾದರಿಯ ದುರಂತ ಸಂಭವಿಸಬಹುದೇ ಎಂದು ಸ್ಥಳೀಯರು ಆತಂಕಗೊಂಡಿದ್ದಾರೆ.

ಈ ಮಧ್ಯೆ ಬಿರುಕು ಬಿಟ್ಟ ಗುಡ್ಡೆಯ ಆಸುಪಾಸಿನಲ್ಲಿರುವ ಮನೆಗಳ ನಿವಾಸಿಗಳನ್ನು ಸಹಾಯಕ ಆಯುಕ್ತರ ಸೂಚನೆಯಂತೆ ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರಿಸಲಾಗಿದೆ.ಕೆಲವರು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದರೆ ಉಳಿದವರಿಗೆ ನಗರಸಭಾ ಸಮುದಾಯ ಭವನದಲ್ಲಿ ಆಶ್ರಯ ಕಲ್ಪಿಸಲಾಗಿದೆ.

ನಗರದ ಹೊರವಲಯದ ತೆಂಕಿಲದ ದರ್ಖಾಸು ಎಂಬಲ್ಲಿರುವ ಗುಡ್ಡದಲ್ಲಿ ಬಿರುಕು ಕಾಣಿಸಿಕೊಂಡಿರುವುದು ಆ.11ರಂದು ಸ್ಥಳೀಯರ ಗಮನಕ್ಕೆ ಬಂದಿತ್ತು.ಗುಡ್ಡದ ತಪ್ಪಲು ಪ್ರದೇಶದ ಮಧ್ಯಭಾಗದಲ್ಲಿ ಸುಮಾರು 200 ಮೀಟರ್ ಉದ್ದದವರೆಗೆ ಭೂಮಿ ಬಿರುಕು ಬಿಟ್ಟಿರುವುದು ಕಂಡುಬಂದಿದೆ.ಅಲ್ಲದೆ ಗುಡ್ಡದ ಮೇಲಿನ ಭಾಗದಲ್ಲಿಯೂ ಅಡ್ಡ ಮತ್ತು ನೇರವಾಗಿ ಬಿರುಕು ಬಿಟ್ಟಿರುವುದು ಭೂವಿಜ್ಞಾನ ಇಲಾಖಾಧಿಕಾರಿಗಳ ಪರಿಶೀಲನೆಯ ವೇಳೆ ಕಂಡು ಬಂದಿದೆ.ಭೂವಿಜ್ಞಾನ ಇಲಾಖೆಯ ಪ್ರಭಾರ ಉಪನಿರ್ದೇಶಕಿ ಪದ್ಮಶ್ರೀ, ಅಂತರ್ಜಲ ಪರಿಶೋಧಕಿ ವಸುಧಾರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಿರುಕು ಬಿಟ್ಟಲ್ಲಿ ಬರುತ್ತಿದೆ ಮಣ್ಣು ಮಿಶ್ರಿತ ನೀರು: ಬಿರುಕು ಬಿಟ್ಟ ಗುಡ್ಡದಲ್ಲಿರುವ ಮೊಗೇರ್ಕಳ ಗರಡಿಯ ಬಳಿ ಮಣ್ಣಿನ ಅಡಿಭಾಗದಿಂದ ಮಣ್ಣುಮಿಶ್ರಿತ ನೀರು ಮೇಲೆ ಬಂದು ಹರಿದು ಹೋಗುತ್ತಿದೆ.ಗುಡ್ಡದ ಮೇಲಿಂದಲೂ ನೀರು ಹರಿದು ಬರುತ್ತಿದೆ.

 

ಜೋಡುಪಾಲ ಮಾದರಿ ದುರಂತ ಭೀತಿ: ಮಳೆಯ ನೀರು ಬಿರುಕು ಬಿಟ್ಟ ಜಾಗದ ಮುಖಾಂತರ ಇಂಗಿ ಒತ್ತಡ ಅಧಿಕವಾಗಿ ಮತ್ತೊಂದು ಮಡಿಕೇರಿಯ ಜೋಡುಪಾಲ ದುರಂತವನ್ನು ನೆನಪಿಸುವಂತಿರುವುದರಿಂದ ಈ ಭಾಗದ ಜನತೆಯಲ್ಲಿ ಭೀತಿ ಸೃಷ್ಠಿಸಿದ್ದು ಮುಂದೇನು ಮಾಡುವುದು ಎಂದು ಸ್ಥಳೀಯರು ಆತಂಕದಲ್ಲಿದ್ದಾರೆ.

ಮುಂಜಾಗ್ರತಾ ಕ್ರಮಕ್ಕೆ ಶಾಸಕರು ಸೂಚಿಸಿದ್ದರು: ಈ ಭಾಗದಲ್ಲಿ ರವಿ ಮತ್ತು ಹರೀಶ್ ಎಂಬವರಿಗೆ ಸೇರಿದ, ನಿರ್ಮಾಣ ಹಂತದಲ್ಲಿರುವ ಮನೆಯ ಮೇಲೆ ಗುಡ್ಡ ಜರಿದು ಬಿದ್ದು, ಅಪಾರ ನಷ್ಟ ಸಂಭವಿಸಿತ್ತು. ಈ ಹಿನ್ನಲೆಯಲ್ಲಿ ಆ.11ರಂದು ಸಂಜೆ ಶಾಸಕ ಸಂಜೀವ ಮಠಂದೂರು ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಮನೆ ಹಾಗೂ ಬಿರುಕು ಬಿಟ್ಟ ಸ್ಥಳ ವೀಕ್ಷಣೆ ನಡೆಸಿದ್ದರು.ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಭೂವಿಜ್ಞಾನ ಇಲಾಖೆಯವರು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಶಾಸಕರು ಸೂಚಿಸಿದ್ದರು.ಈ ಕುರಿತು ಸಹಾಯಕ ಆಯುಕ್ತರ ಗಮನಕ್ಕೂ ತಂದಿದ್ದರು.ಸಹಾಯಕ ಆಯುಕ್ತರು ಅಂತರ್ಜಲ ಪರಿಶೋಧಕರಿಗೆ ಮತ್ತು ಭೂವಿಜ್ಞಾನ ಇಲಾಖಾ„ಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ಆದೇಶಿಸಿದ್ದರು.

ಆತಂಕದ ಬದುಕು: ಇದೇ ಗುಡ್ಡದ ತಪ್ಪಲಿನ ಮಧ್ಯಭಾಗದಲ್ಲಿರುವ ನಿರ್ಮಾಣ ಹಂತದ ಮನೆಯ ಮೇಲೆ ಆ.10ರ ಮಧ್ಯರಾತ್ರಿ ವೇಳೆ ಗುಡ್ಡ ಜರಿದು ಬಿದ್ದು ಹಾನಿಯಾಗಿತ್ತು.ಅಲ್ಲಿದ್ದ ರಾಮ ಎಂಬವರ ಮನೆಯವರನ್ನು ಸ್ಥಳಾಂತರ ಮಾಡುವಂತೆ ಶಾಸಕರು ಸೂಚಿಸಿದ್ದರು.ಇದೇ ಭಾಗದಲ್ಲಿರುವ ಮೊಗೇರ್ಕಳ ಗರಡಿ ಅಲ್ಲದೆ ಸೇಸಪ್ಪ ಗೌಡ, ಗಿರಿಜಾ, ಕಮಲ, ಮಹಾಲಿಂಗ, ಗುರುವ, ಆನಂದ, ಗಂಗಾಧರ,ಬೇಬಿ,ಸುಶೀಲ,ಸತೀಶ್ ಎಂಬವರ ಮನೆಗಳು ಅಪಾಯದ ವಲಯದಲ್ಲಿವೆ.ಅಲ್ಲದೆ ಗುಡ್ಡದ ತಪ್ಪಲಿನ ಕೆಳಭಾಗದಲ್ಲಿ ಆಸುಪಾಸು ಸುಮಾರು 25ಕ್ಕೂ ಅಧಿಕ ಮನೆಗಳಿವೆ. ಭೂಕಂಪನ,ಅಪಾಯದ ಸೂಚನೆಯಿಂದಾಗಿ ಇಲ್ಲಿನ ಮನೆಮಂದಿ ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ.ಪುತ್ತೂರು ತಹಶೀಲ್ದಾರ್ ಅನಂತ ಶಂಕರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎ.ಸಿ. ಭೇಟಿ-ಸ್ಥಳೀಯರ ಸ್ಥಳಾಂತರ: ನಿರ್ಮಾಣ ಹಂತದ ಮನೆಯ ಮೇಲೆ ಗುಡ್ಡ ಕುಸಿದಿರುವ ಹಾಗೂ ಬಿರುಕು ಬಿಟ್ಟಿರುವ ಸರಕಾರಿ ಗುಡ್ಡಕ್ಕೆ ಉಪ ವಿಭಾಗಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ ಸಂಜೆ ವೇಳೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ 11 ಕುಟುಂಬಗಳನ್ನು ಸ್ಥಳಾಂತರಿಸಲು ಅವರು ಸೂಚಿಸಿದ್ದಾರೆ. ಬಿರುಕು ಬಿಟ್ಟಿರುವ ಜಮೀನಿನ ಆಸುಪಾಸಿನಲ್ಲಿರುವ ಮನೆಗಳಿಗೆ ಖುದ್ದು ಭೇಟಿ ನೀಡಿ ಮನೆಯವರೊಂದಿಗೆ ಮಾತನಾಡಿದ ಸಹಾಯಕ ಆಯಕ್ತರು ಮಳೆ ಕಡಿಮೆಯಾಗುವ ತನಕ ಸ್ಥಳಾಂತರಗೊಳ್ಳುವಂತೆ ಸೂಚಿಸಿದರು.ಆರಂಭದಲ್ಲಿ ಕೆಲವೊಂದು ಮನೆಯವರು ಸ್ಥಳಾಂತರಗೊಳ್ಳಲು ನಿರಾಕರಿಸಿದರಾದರೂ ಸಹಾಯಕ ಆಯುಕ್ತರು ಮನವರಿಕೆ ಮಾಡಿದ ಬಳಿಕ ಸ್ಥಳಾಂತರಗೊಳ್ಳಲು ಒಪ್ಪಿಗೆ ಸೂಚಿಸಿದರು.ಆ ಬಳಿಕ ಅಲ್ಲಿನ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ಏನೂ ಆಗದೇ ಇದ್ದರೆ ಒಳ್ಳೆಯದೇ….: ಸ್ಥಳೀಯರನ್ನು ಮುಂಜಾಗ್ರತಾ ಕ್ರಮವಾಗಿ ಅಲ್ಲಿಂದ ತೆರಳುವಂತೆ ಸಹಾಯಕ ಆಯುಕ್ತರು ಸೂಚಿಸಿದಾಗ, ಏನೂ ಆಗಲಾರದು ಎಂದು ಕೆಲವೊಂದು ಮನೆಯವರು ಎ.ಸಿ.ಯವರಲ್ಲಿ ಹೇಳಿದರು.ಏನೂ ಆಗದೇ ಇರಬೇಕೆಂಬುದೇ ಎಲ್ಲರ ಆಸೆ, ಅದೇ ರೀತಿ ಏನೂ ಆಗದೇ ಇದ್ದರೆ ಒಳ್ಳೆಯದೆ.ಏನೂ ಆಗದೇ ಇದ್ದರೆ ಮುಂದೆ ಬಂದು ವ್ಯವಸ್ಥೆ ಮಾಡಿಕೊಳ್ಳಬಹುದು.ಆದರೆ ಏನಾದ್ರೂ ಆದ್ರೆ ಏನು ಮಾಡೋದು,ಈ ನಿಟ್ಟಿನಲ್ಲಿ ಮಳೆ ನಿಲ್ಲುವ ತನಕವಾದರೂ ಸ್ಥಳಾಂತರಗೊಳ್ಳಬೇಕಾದುದು ಅನಿವಾರ್ಯ ಎಂದು ಎ.ಸಿ.ಯವರು ಮನವರಿಕೆ ಮಾಡಿದ ಬಳಿಕ ಸ್ಥಳಾಂತರಗೊಳ್ಳಲು ಒಪ್ಪಿಕೊಂಡರು.

ಇಂದಿರಾ ಕ್ಯಾಂಟೀನ್‍ನಲ್ಲಿ ಊಟ, ಸಮುದಾಯ ಭವನದಲ್ಲಿ ಆಶ್ರಯ: ಸ್ಥಳಾಂತರಗೊಂಡಿರುವ ಕುಟುಂಬಗಳ ಪೈಕಿ ಮೂರು ಕುಟುಂಬಗಳಿಗೆ ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿ ನೇತೃತ್ವದಲ್ಲಿ ನಗರಸಭಾ ಸಮುದಾಯ ಭವನದಲ್ಲಿ ಆಶ್ರಯ ಕಲ್ಪಿಸಿಕೊಡಲಾಗಿದೆ.ಅವರಿಗೆ ಪಕ್ಕದಲ್ಲಿರುವ ಇಂದಿರಾ ಕ್ಯಾಂಟೀನ್‍ನಲ್ಲಿ ನಗರಸಭೆಯ ವತಿಯಿಂದಲೇ ಊಟ ಹಾಗೂ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿದೆ.ಗಂಗಾಧರರವರ ಕುಟುಂಬದ 4 ಮಂದಿ, ಮಾಲಿನಿಯವರ ಕುಟುಂಬದ 3 ಮಂದಿ ಹಾಗೂ ಸುರೇಶ್‍ರವರ ಕುಟುಂಬದ 5 ಮಂದಿ ಸದಸ್ಯರು ಸಮುದಾಯ ಭವನದಲ್ಲಿ ಆಶ್ರಯ ಪಡೆದಿರುತ್ತಾರೆ.ಗುರುವ ಎಂಬವರ ಕುಟುಂಬದ 8 ಮಂದಿ ಸದಸ್ಯರು ಮಿತ್ತೂರಿನಲ್ಲಿರುವ ಅವರ ಸಂಬಂಧಿಕರ ಮನೆ, ಪೂವಪ್ಪ ಎಂಬವರ ಕುಟುಂಬದ 3 ಮಂದಿ ನಿಡ್ಪಳ್ಳಿಯಲ್ಲಿ, ಸೇಸಪ್ಪ ಗೌಡರ ಕುಟುಂಬದ 4 ಮಂದಿ ತೆಂಕಿಲ ಕಮ್ನಾರು ಹಾಗೂ ಶ್ರೀಧರ ನಾಯ್ಕ ಕುಟುಂಬದ 4 ಮಂದಿ ತೆಂಕಿಲ ಬೈಪಾಸ್‍ನಲ್ಲಿರುವ ಸಂಬಂ„ಕರ ಮನೆಯಲ್ಲಿ ಆಶ್ರಯ ಪಡೆದಿರುತ್ತಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
188

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು