News Karnataka Kannada
Friday, May 17 2024
ಕರಾವಳಿ

ಕ್ರಿಸ್‍ಮಸ್ ಹಬ್ಬದ ವಿಶೇಷ ರಂಗು: ಶಿರ್ತಾಡಿಯಲ್ಲಿ ಕಣ್ಣರಳಿಸುವ ‘ಸ್ವರ್ಣ ನಕ್ಷತ್ರ’

Photo Credit :

ಕ್ರಿಸ್‍ಮಸ್ ಹಬ್ಬದ ವಿಶೇಷ ರಂಗು: ಶಿರ್ತಾಡಿಯಲ್ಲಿ ಕಣ್ಣರಳಿಸುವ 'ಸ್ವರ್ಣ ನಕ್ಷತ್ರ'

ಮೂಡುಬಿದಿರೆ: ಕ್ರಿಸ್‍ಮಸ್ ಪ್ರಯುಕ್ತ ಶಿರ್ತಾಡಿ ಲೈಫ್ ಸೇವಾ ಸಂಸ್ಥೆಯು 6ನೇ ವರ್ಷದಲ್ಲಿ ಬೃಹತ್ ನಕ್ಷತ್ರವೊಂದನ್ನು ರಚಿಸಿದ್ದು, ಈ ಬಾರಿ ಅಪಘಾತದಲ್ಲಿ ಒಂದು ಕೈ ಕಳೆದುಕೊಂಡಿರುವ ಯುವಕ ನವೀನ್ ಶೆಟ್ಟಿ ಎಂಬವರು ಇದನ್ನು ಸಿದ್ಧಪಡಿಸಿರುವುದು ವಿಶೇಷ.

ಈ ನಕ್ಷತ್ರವು 12 ಅಡಿ ಅಗಲ, 13 ಅಡಿ ಎತ್ತರಕ್ಕಿದ್ದು, ಮರದ ಕೆತ್ತನೆ ಹುಡಿಯನ್ನು ಬಳಸಿ ರಚಿಸಿದ್ದು, ಜಗಮಗಿಸುವ ಬೆಳಕಿನೊಂದಿಗೆ ನಕ್ಷತ್ರವು ಬಂಗಾರದ ವರ್ಣದಲ್ಲಿ ಕಂಗೊಳಿಸುವುದರಿಂದ ‘ಸ್ವರ್ಣ ನಕ್ಷತ್ರ’ ಎಂಬ ಹೆಸರನ್ನಿಡಲಾಗಿದೆ.

ಈ ನಕ್ಷತ್ರವು ಬರೊಬ್ಬರಿ 1 ಕ್ವಿಂಟಾಲ್ ತೂಕವಿದ್ದು, ಶಿರ್ತಾಡಿಯ ಲೈಫ್ ಸರ್ವೀಸ್ ಸ್ಟೇಷನ್ ಎದುರಿಗೆ ಬೃಹತ್ ಮರದಲ್ಲಿ ತೂಗು ಹಾಕಲಾಗಿದೆ. 25 ಕಿಲೋ ಮರದ ಕೆತ್ತನೆಯ ಹುಡಿ ಬಳಸಲಾಗಿದ್ದು, ಆ ಮೂಲಕ ನೈಸರ್ಗಿಕ ವಸ್ತುಗಳನ್ನೇ ಬಳಸಿ, ಪ್ಲಾಸ್ಟಿಕ್‍ನಿಂದ ದೂರವಿರುವ ಸಂದೇಶವನ್ನು ರವಾನಿಸಲಾಗಿದೆ. ಈ ಹಿಂದಿನ 5 ವರ್ಷಗಳಲ್ಲಿ ಮಂಡಕ್ಕಿ, ಬೈಹುಲ್ಲು, ರಾಗಿ, ಜೋಳಾಪುರಿ, ಅಡಿಕೆ ಸಿಪ್ಪೆ ಉಪಯೋಗಿಸಿ ಕ್ರಿಸ್‍ಮಸ್ ನಕ್ಷತ್ರ ತಯಾರಿಸಲಾಗಿತ್ತು.

ಎರಡು ವರ್ಷಗಳ ಹಿಂದೆ ಅಪಘಾತದಿಂದ ಒಂದು ಕೈಕಳೆದುಕೊಂಡ ಶಿರ್ತಾಡಿಯ ನವೀನ್ ಶೆಟ್ಟಿಯವರು ಬದುಕುವ ಆತ್ಮಸ್ಥೈರ್ಯದೊಂದಿಗೆ ಇರುವ ಒಂದು ಕೈಯಲ್ಲೇ ಕೃಷಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಅಪಘಾತದಿಂದ ಅಂಗಾಂಗ ಕಳೆದುಕೊಂಡ ಅನೇಕರ ಬಾಳಿಗೆ ಸ್ಪೂರ್ತಿ ತುಂಬುವ ಸಲುವಾಗಿ ಇರುವ ಒಂದು ಕೈಯಲ್ಲೇ ಇಷ್ಟೊಂದು ದೊಡ್ಡ ನಕ್ಷತ್ರ ತಯಾರಿಸುವಲ್ಲಿ ಪರಿಶ್ರಮ ಪಟ್ಟಿರುವ ನವೀನ್ ಶೆಟ್ಟಿಯವರು ಇದಕ್ಕಾಗಿ 15 ದಿನಗಳನ್ನು ವ್ಯಯಿಸಿದ್ದಾರೆ. ಇವರ ಈ ಸಾಧನೆಗೆ ಜೊತೆಯಾಗಿ ಲೈಫ್ ಸಂಸ್ಥೆಯ ಕಾರ್ಯಕರ್ತರಾದ ಪ್ರಸನ್ನ ಜೋಯೆಲ್ ಸಿಕ್ವೇರಾ, ಯತೀಶ್ ಕುಲಾಲ್ ಕೈಜೋಡಿಸಿದ್ದಾರೆ.

ಸಾಧಿಸುವ ಹಂಬಲ : ಅಶಕ್ತರಿಗೆ ಸಂದೇಶ

ನನ್ನಂತೆ ಅಪಘಾತದಲ್ಲಿ ಗಾಯಗೊಂಡು ಅಂಗಾಂಗ ಕಳೆದುಕೊಂಡ ಅನೇಕರಿದ್ದಾರೆ. ಬದುಕೇ ಮುಗಿದು ಹೋಯಿತು ಎಂದು ಭಾವಿಸಬೇಕಿಲ್ಲ. ಪ್ರಪಂಚವು ಮನುಷ್ಯನಿಗೆ ಅವಕಾಶಗಳ ಆಗರವಾಗಿದ್ದು, ಪ್ರಕೃತಿಯ ಜೊತೆಗೂಡಿದರೆ ಸಾಧನೆಗೆ ಪೂರಕ ವಾತಾವರಣ ದೊರೆಯುತ್ತದೆ.

ನವೀನ್ ಶೆಟ್ಟಿ ಶಿರ್ತಾಡಿ, ನಕ್ಷತ್ರ ತಯಾರಕರು.

ಕನಸಿಗೆ ಬಣ್ಣ ತುಂಬಿದ ನಕ್ಷತ್ರ

ಸಾಧನೆಯ ಕನಸು ಕಾಣುವ ಮೂಲಕ ಬದುಕನ್ನು ಹಸನಾಗಿಸಬೇಕು ಎಂಬ ಸಂದೇಶ ಸಾರುವುದು ಈ ಬಾರಿಯ ನಕ್ಷತ್ರ ರಚನೆಯ ಉದ್ದೇಶವಾಗಿತ್ತು. ನವೀನ್ ಶೆಟ್ಟಿಯವರ ಪ್ರಯತ್ನಕ್ಕೆ ಬೆಂಬಲವಾಗಿ ನಿಲ್ಲುವ ಮೂಲಕ ಸಾಧಿಸುವ ಹಂಬಲಕ್ಕೆ ಬಲ ತುಂಬುವ ಪ್ರಯತ್ನ ಮಾಡಿದ್ದೇವೆ. ಶಾಂತಿ, ಸೌಹಾರ್ದತೆಯೇ ನಕ್ಷತ್ರದ ಮೂಲಕ ನಮ್ಮ ಕ್ರಿಸ್‍ಮಸ್ ಸಂದೇಶ.

ಪ್ರಸನ್ನ ಜೋಯೆಲ್ ಸಿಕ್ವೇರಾ, ಲೈಫ್ ಸಂಸ್ಥೆಯ ಕಾರ್ಯಕರ್ತ.

ಜಾತಿ ಧರ್ಮಗಳ ಬೇಧವಿಲ್ಲ

ಶಿರ್ತಾಡಿ ಪ್ರದೇಶದಲ್ಲಿ ಯಾವುದೇ ಜಾತಿ ಮತ ಪಂಥಗಳ ಬೇಧವಿಲ್ಲದೆ ಶಾಂತಿ, ಸೌಹಾರ್ದತೆಯನ್ನು ಕಾಪಾಡಿಕೊಂಡು ಬರಲಾಗಿದೆ. ಅದು ಮುಂದೆಯೂ ನೆಲೆಯೂರಬೇಕು ಎಂಬ ವಿಶ್ವಾಸದಿಂದ ಕ್ರಿಸ್‍ಮಸ್ ಶುಭಾಶಯ ಕೋರುವ ಹಿನ್ನಲೆಯಲ್ಲಿ ನಕ್ಷತ್ರ ತಯಾರಿಕೆಯಲ್ಲಿ ಪಾಲ್ಗೊಂಡಿದ್ದೇವೆ.

ಯತೀಶ್ ಕುಲಾಲ್, ನಕ್ಷತ್ರ ತಯಾರಿಕೆಗೆ ಸಹಕರಿಸಿದವರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
193
Deevith S K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು