News Karnataka Kannada
Sunday, May 12 2024
ಕರಾವಳಿ

ಏರುತ್ತಿರುವ ಬಿಸಿಲ ಬೇಗೆ, ಬತ್ತುತ್ತಿರುವ ನೀರಿನ ಮೂಲಗಳು

Photo Credit :

 ಏರುತ್ತಿರುವ ಬಿಸಿಲ ಬೇಗೆ, ಬತ್ತುತ್ತಿರುವ ನೀರಿನ ಮೂಲಗಳು

ಸುಳ್ಯ: ಮಳೆಗಾಲದಲ್ಲಿ ಉಕ್ಕಿ ಹರಿದು ಜಲಪ್ರಳಯದ ಭೀತಿಯನ್ನೊಡ್ಡಿದ್ದ ನದಿ ಮತ್ತು ಇತರ ಜಲ ಮೂಲಗಳು ನಿರೀಕ್ಷೆಯನ್ನು ಹುಸಿಯಾಗಿಸಿ ಬಲು ಬೇಗನೇ ಬತ್ತಿ ಬರಿದಾಗಿರುವ ಕಾರಣ ಮತ್ತೆ ಬರಗಾಲದ ಕರಿ ನೆರಳು ಆವರಿಸಿದೆ. ಕಡು ಬೇಸಿಗೆಯ ದಿನಗಳು ಆರಂಭವಾಗುತ್ತಿದ್ದಂತೆ ಮಲೆನಾಡಾದ ಸುಳ್ಯ ತಾಲೂಕಿನಲ್ಲಿ ಭೀಕರ ಬರಗಾಲ ಅಪ್ಪಳಿಸಬಹುದೇ ಎಂಬ ಆತಂಕ ಕಾಡಿದೆ.

ಮೂರು ವರ್ಷದ ಹಿಂದೆ ಜನರನ್ನು ಕಾಡಿದ್ದ ಬರಗಾಲ, ಕೃಷಿ ವಲಯಕ್ಕೂ ಜೀವ ಜಾಲಕ್ಕೂ ಕುತ್ತು ತಂದಿತ್ತು. ಅದರ ಕಹಿ ನೆನಪು ಮಾಸುವ ಮುನ್ನವೇ ಈ ಬಾರಿಯೂ ಬೇಸಿಗೆ ಕೃಷಿ ವಲಯಕ್ಕೆ ಮಾರಕವಾಗಬಹುದೇ ಎಂಬ ಆತಂಕ ಕೃಷಿಕರನ್ನು ತಲ್ಲಣಗೊಳಿಸಿದೆ. ವಾಡಿಕೆಗಿಂತ ಹೆಚ್ಚೇ ಮಳೆ ಸುರಿದಿದ್ದರೂ ಮಲೆನಾಡಿನ ಬರಗಾಲ ಭೀತಿ ತಪ್ಪುವುದಿಲ್ಲ. ಜೂನ್‍ನಿಂದ ಸೆಪ್ಟಂಬರ್ ತಿಂಗಳ ಮಧ್ಯದವರೆಗೆ ಧೋ ಎಂದು ಆರ್ಭಟಿಸಿ ಮಳೆ ಸುರಿದರೂ ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಮಳೆರಾಯ ಸದ್ದಿಲ್ಲದೆ ಮರೆಯಾಗಿರುವುದು ನೀರಿನ ಮೂಲ ಬೇಗನೇ ಬತ್ತಲು ಕಾರಣವಾಗಿದೆ.

ಫೆಬ್ರವರಿ ತಿಂಗಳ ಮೊದಲ ವಾರದಲ್ಲೇ ಏರಿದ ಬಿಸಿಲ ಧಗೆಗೆ ಎಲ್ಲೆಡೆ ಇಳೆ ಒಣಗುತ್ತಿದೆ. ಮಳೆ ಇಲ್ಲದೇ ತಿಂಗಳುಗಳೇ ಕಳೆದ ಕಾರಣ ನದಿ, ಹಳ್ಳ, ಕೊಳ್ಳ, ಬಾವಿ, ಕೆರೆಗಳು ಬತ್ತಲು ಆರಂಭಿಸಿದೆ. ಪಯಸ್ವಿನಿ ನದಿ ಸೇರಿದಂತೆ ಎಲ್ಲೆಡೆ ನೀರಿನ ಪ್ರಮಾಣ ದಿನೇ ದಿನೇ ಕಡಿಮೆಯಾಗಿ ತಳ ಮಟ್ಟ ಸೇರಿದೆ. ಹಲವು ಕಡೆಗಳಲ್ಲಿ ಕುಡಿಯುವ ನೀರಿನ ಮೂಲಗಳು ಬತ್ತಲು ಆರಂಭಿಸಿರುವುದಾಗಿ ಜನರು ಆತಂಕ ತೋಡಿಕೊಳ್ಳುತ್ತಿದ್ದಾರೆ. ಜೀವನದಿ ಪಯಸ್ವಿನಿಯಲ್ಲಿ ಪ್ರತಿ ವರ್ಷಕ್ಕಿಂತ ಭಿನ್ನವಾಗಿ ಫೆಬ್ರವರಿ ತಿಂಗಳಿನಿಂದಲೇ ನೀರಿನ ಹರಿವು ತೀರಾ ಕಡಿಮೆಯಾಗಿದೆ. ಜೋಡುಪಾಲ, ಮೊಣ್ಣಂಗೇರಿಯಲ್ಲಿ ಕಳೆದ ಮಳೆಗಾಲದಲ್ಲಿ ಉಂಟಾದ ಜಲಪ್ರಳಯ ಮತ್ತು ಭೂ ಕುಸಿತದಿಂದ ಹರಿದು ಬಂದ ಟನ್ ಗಟ್ಟಲೆ ಮಣ್ಣು ಮತ್ತು ಮರಳು ತುಂಬಿ ನದಿಯ ಹೊಂಡಗಳೆಲ್ಲ ಮುಚ್ಚಿ ಹೋಗಿದ್ದು ನೀರಿನ ಸಂಗ್ರಹವೇ ಮಾಯವಾಗಿದೆ. ಇದು ಕೂಡ ನದಿ ಬಲು ಬೇಗ ಬರಿದಾಗಲು ಕಾರಣವಾಗಿದೆ.
ಸುಳ್ಯ ತಾಲೂಕಿನಲ್ಲಿ ಈ ಬಾರಿ 4900 ಮಿ.ಮೀ.ಗಿಂತಲೂ ಹೆಚ್ಚು ಮಳೆಯಾಗಿದ್ದರೂ ಮಳೆ ಸುರಿದಷ್ಟೇ ವೇಗದಲ್ಲಿ ನೀರು ಬತ್ತಿ ಹೋಗಿದೆ. 4500 ಮಿ.ಮೀ. ಸರಾಸರಿ ಮಳೆ ಸುರಿಯುತ್ತಿದ್ದ ಸುಳ್ಯ ಪ್ರದೇಶದಲ್ಲಿ ಈ ಬಾರಿ 4995 ಮಿ.ಮೀ. ಬಂದಿದೆ. ಮಳೆಗಾಲದಲ್ಲಿ ಭರ್ಜರಿ ಮಳೆ ಸುರಿದಿದ್ದರೂ ನೀರಿನ ಲಭ್ಯತೆ ಕೊನೆಯವರೆಗೂ ಉಳಿಸಲು ಸಹಾಯಕವಾಗುತ್ತಿದ್ದ ಹಿಂಗಾರು ಮಳೆ ಈ ಬಾರಿ ಈ ಇತ್ತ ಸುಳಿಯಲೇ ಇಲ್ಲ. ಇದರಿಂದ ಈ ಬಾರಿ ಬೇಗನೇ ನೀರಿನ ಮೂಲಗಳು ಬತ್ತಲು ಆರಂಭಗೊಂಡಿದ್ದು ಮತ್ತೊಮ್ಮೆ ಬರದ ಬರೆ ಎದುರಾಗುವ ಸಾಧ್ಯತೆ ನಿಚ್ಚಳವಾಗಿದೆ.

ಮಹಾ ಮಾರಿಯಾದ ಬರಗಾಲದ ಮಾಸದ ನೆನಪು
ಮೂರು ವರ್ಷದ ಹಿಂದೆ ಬೇಸಿಗೆಯಲ್ಲಿ ಈ ಭಾಗದಲ್ಲಿ ಭೀಕರ ಬರಗಾಲವೇ ಅಪ್ಪಳಿಸಿತ್ತು. ಕುಡಿಯುವ ನೀರಿಗೂ ತತ್ವಾರ ಎದುರಾಗಿತ್ತು. ಜೊತೆಗೆ ಹಲವಾರು ಎಕ್ರೆ ಅಡಕೆ ತೋಟಗಳು ಬಿಸಿಲ ಕೆನ್ನಾಲಿಗೆಗೆ ತುತ್ತಾಗಿ ಒಣಗಿ ಕರಟಿ ಹೋಗಿತ್ತು. ಅಂದು ಮಾರಕವಾಗಿ ಅಪ್ಪಳಿಸಿದ ಭೀಕರ ಬರಗಾಲ ಜನತೆಯ ಜೀವ ಜಲಕ್ಕೆ ಕುತ್ತು ತಂದಿರುವುದರ ಜೊತೆಗೆ ಕೃಷಿ ವಲಯಕ್ಕೂ ಮರ್ಮಾಘಾತವನ್ನಿಕ್ಕಿತ್ತು. ಪರಿಣಾಮವಾಗಿ ಕೃಷಿಕರ ಬದುಕಿನ ನಿರೀಕ್ಷೆಯಾದ ಕೃಷಿಯು ಸಂಪೂರ್ಣ ಕರಟಿ ಹೋಗಿತ್ತು. ನದಿ, ಹಳ್ಳ ಕೊಳ್ಳಗಳು, ಕೆರೆ, ಬಾವಿಗಳು ಬತ್ತಿ ಹೋಗಿ ನೀರುಣಿಸಲಾಗದೆ ಸುಳ್ಯ ತಾಲೂಕಿನ ಹಲವು ಗ್ರಾಮಗಳಲ್ಲಿ ಮತ್ತು ಗಡಿ ಗ್ರಾಮಗಳಲ್ಲಿ ಬರ ಕೃಷಿಯನ್ನು ಸಂಪೂರ್ಣ ಆಪೋಷನ ತೆಗೆದುಕೊಂಡಿತ್ತು. ಕಡು ಬೇಸಿಗೆಯಲ್ಲಿ ಒಂದೂವವರೆ ತಿಂಗಳಿಗಿಂತ ಹೆಚ್ಚು ಸಮಯ ಅಡಕೆ ತೋಟಕ್ಕೆ ನೀರು ಹಾಯಿಸಲು ಸಾಧ್ಯವಾಗದ ಕಾರಣ ಅಡಕೆ ತೋಟ ಸಂಪೂರ್ಣ ಒಣಗಿ ಹೋಗಿತ್ತು. ಅಡಕೆಯ ಹಸಿರು ಮಾಯವಾಗಿ ಬೆಂಕಿ ಹಾಯಿಸಿದಂತೆ ಕೆಂಪಾಗಿ ಅಡಕೆ ಮರವೇ ಒಣಗಿ ನೂರಾರು ಹೆಕ್ಟೇರ್ ಅಡಕೆ ಕೃಷಿ ನಾಶವಾಗಿ ಜೊತೆಗೆ ಅಡಕೆ ಮರದಲ್ಲಿದ್ದ ಮಿಡಿಗಳು ಸಂಪೂರ್ಣ ಧರಾಶಾಯಿಯಾಗಿತ್ತು. ಬೇಸಿಗೆಯಲ್ಲಿ 40 ಡಿಗ್ರಿಯವರೆಗೆ ಉಷ್ಣಾಂಶ ಏರಿತ್ತು. ಅಡಕೆ ಮಾತ್ರವಲ್ಲದೆ ತೆಂಗು, ಕರಿಮೆಣಸು, ಬಾಳೆ, ಕೊಕ್ಕೋ ಕೃಷಿಗೂ ನೀರಿನ ಅಭಾವ ತಟ್ಟಿತ್ತು. ಗೇರು, ರಬ್ಬರ್ ಇಳುವರಿಯೂ ಇಳಿಮುಖವಾಗಿತ್ತು. ಜನರಿಗೆ ಮತ್ತು ಸಾಕು ಪ್ರಾಣಿಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗಿರುವುದರ ಜೊತೆಗೆ ಜಲಚರಗಳು ಸಂಪೂರ್ಣ ನಾಶವಾಗಿ ಹೋಗಿತ್ತು. ಈ ಬಾರಿಯೂ ನೀರಿನ ಅಭಾವ ಎದುರಾಗುವ ಮುನ್ಸೂಚನೆ ನೀಡಿದ್ದು ಬೇಸಿಗೆಯಲ್ಲಿ ಉತ್ತಮ ಮಳೆಯಾಗದಿದ್ದರೆ ಬರಗಾಲ ಅಪ್ಪಳಿಸುವ ಭೀತಿ ಇದೆ.

ಆದುದರಿಂದ ಮುಂದೆ ಎದುರಾಗಬಹುದಾದ ಬರಗಾಲದ ಹೊಡೆತವನ್ನು ಎದುರಿಸಲು ನೀರಿನ ಮಿತವ್ಯಯ ಮತ್ತು ನೀರಿನ ಶೇಖರಣೆಗೆ ಸೂಕ್ತ ಕ್ರಮ ಕೈಗೊಳ್ಳುವುದು ಒಂದೇ ದಾರಿ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ತಾತ್ಕಾಲಿಕ ಕಟ್ಟ ನಿರ್ಮಾಣ:
ಬೇಸಿಗೆಯಲ್ಲಿ ಸುಳ್ಯ ನಗರದಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾತ್ತದೆ. ಬೇಸಿಗೆಯಲ್ಲಿ ನೀರು ಸರಬರಾಜಿಗೆ ನಗರ ಪಂಚಾಯಿತಿ ನೀರು ಸಂಗ್ರಹಿಸುವ ಕಲ್ಲುಮುಟ್ಲುವಿನ ಪಯಸ್ವಿನಿ ನದಿಯ ಹೊಂಡಕ್ಕೆ ಅಡ್ಡಲಾಗಿ ಮರಳು ತುಂಬಿದ ಚೀಲವನ್ನು ಬಳಸಿ ಕಟ್ಟವನ್ನು ನಿರ್ಮಿಸಲಾಗಿದೆ. ನಾಲ್ಕು ಲಕ್ಷ ರೂ ವೆಚ್ಚದಲ್ಲಿ ಮರಳಿನ ತಾತ್ಕಾಲಿಕ ಕಟ್ಟ ನಿರ್ಮಿಸಲಾಗಿದೆ. ಕಲ್ಲುಮುಟ್ಲು ಪಂಪ್‍ಹೌಸ್‍ನಿಂದ 50 ಹೆಚ್‍ಪಿಯ ಒಂದು ಮತ್ತು 45 ಹೆಚ್‍ಪಿಯ ಎರಡು ಪಂಪ್‍ಗಳನ್ನು ಬಳಸಿ ಈ ಕಟ್ಟದಿಂದ ನೀರನ್ನು ಎತ್ತಿ ಶುದ್ಧೀಕರಿಸಿ ನೀರು ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ. ನಗರದಲ್ಲಿ ಐದು ಸಾವಿರಕ್ಕೂ ಹೆಚ್ಚು ನಳ್ಳಿ ಸಂಪರ್ಕವಿದ್ದು. ಪಯಸ್ವಿನಿ ನದಿಯ ನೀರಿನ ಜೊತೆಗೆ 41 ಕೊಳವೆ ಬಾವಿಯನ್ನೂ ಬಳಸಿ ನೀರು ಹಾಯಿಸಲಾಗುತ್ತಿದೆ.

ಸುಳ್ಯ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ ಸರ್ಕಾರಕ್ಕೆ ಸಲ್ಲಿಸಿದ 65 ಕೋಟಿ ರೂ ಯೋಜನೆಯ ಪ್ರಸ್ತಾವನೆ ನೆನೆಗುದಿಗೆ ಬಿದ್ದಿದೆ. ಪಯಸ್ವಿನಿ ನದಿಗೆ ವೆಂಟೆಡ್ ಡ್ಯಾಂ, ಜಾಕ್ ವೆಲ್ ಪಂಪ್ ಹೌಸ್, ವಾಟರ್ ಟ್ರೀಟ್‍ಮೆಂಟ್ ಪ್ಲಾಂಟ್ ರಚನೆ ಮಾಡಿ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸುವ ಯೋಜನೆ ದಶಕದಿಂದ ನೆನೆಗುದಿಗೆ ಬಿದ್ದಿದೆ.

`ಮಳೆ ಬರುತ್ತಿದ್ದರೂ ಮಳೆಯ ಸಮಾನಾದ ಹಂಚಿಕೆಯಾಗುವುದಿಲ್ಲ ಮತ್ತು ಕಾಲ ಕಾಲಕ್ಕೆ ಸರಿಯಾಗಿ ಮಳೆ ಸುರಿಯದ ಕಾರಣ ಬೇಸಿಗೆಯಲ್ಲಿ ನೀರಿನ ತತ್ವಾರ ಎದುರಾಗುತ್ತದೆ. ಹಿಂಗಾರು ಮಳೆ ಕಡಿಮೆಯಾಗಿರುವ ಕಾರಣ ಬಾರಿ ನೀರಿನ ಮೂಲ ಬೇಗನೇ ಬತ್ತಲು ಕಾರಣವಾಗಿದೆ” ಎಂದು ಕೃಷಿಕ ಪಿ.ಜಿ.ಎಸ್.ಎನ್.ಪ್ರಸಾದ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
180

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು