News Karnataka Kannada
Friday, May 03 2024
ಕರಾವಳಿ

ಉಳ್ಳಾಲದಲ್ಲಿ ತೀವ್ರಗೊಂಡ ಕಡಲ್ಕೊರೆತ ಎರಡು ಮನೆ, ಶೆಡ್ ಸಮುದ್ರಪಾಲು

Photo Credit :

ಉಳ್ಳಾಲದಲ್ಲಿ ತೀವ್ರಗೊಂಡ ಕಡಲ್ಕೊರೆತ ಎರಡು ಮನೆ, ಶೆಡ್ ಸಮುದ್ರಪಾಲು

ಉಳ್ಳಾಲ: ಉಳ್ಳಾಲ-ಉಚ್ಚಿಲ ಭಾಗದಲ್ಲಿ ಕಡಲ್ಕೊರೆತ ಮಂಗಳವಾರ ಇನ್ನಷ್ಟು ತೀವ್ರಗೊಂಡಿದೆ. ಎರಡು ಮನೆಗಳು , ಎರಡು ಶೆಡ್ ಹಾಗೂ ಒಂದು ರೆಸಾರ್ಟ್ ಸಂಪೂರ್ಣ ಸಮುದ್ರಪಾಲಾಗಿದೆ. ಉಳಿದಂತೆ ಉಳ್ಳಾಲದಲ್ಲಿ ಐದು , ಸೋಮೇಶ್ವರ ಉಚ್ಚಿಲದಲ್ಲಿ ಎರಡು ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸಲು ಆರಂಭವಾಗಿದೆ.

ಕೈಕೋ, ಕಿಲಿರಿಯಾನಗರದಲ್ಲಿ ಮೈಮುನಾ ಇಕ್ಬಾಲ್ ಮತ್ತು ಝೊಹರಾ ಎಂಬವರ ಮನೆ ಸಂಪೂರ್ಣ ಸಮುದ್ರಪಾಲಾಗಿದೆ. ಉಳ್ಳಾಲ ಬೀಚ್ ಸಮೀಪದ ಅಲ್ಬುರ್ಕ್ ಅವರಿಗೆ ಸೇರಿದ ಸಮ್ಮರ್ ಸ್ಯಾಂಡ್ ರೆಸಾರ್ಟ್‍ನ ಶೌಚಾಲಯ ಕಟ್ಟಡ, ಉಚ್ಚಿಲ ಕೋಟೆ ಬಳಿ ವಿಶ್ವನಾಥ್ ಮತ್ತು ನಾಗೇಶ್ ಎಂಬವರ ಶೆಡ್, ಒಂದು ಗೆಸ್ಟ್ ಹೌಸ್ ಸಮುದ್ರ ಪಾಲಾಗಿವೆ. ಖಲೀಲ್, ಝೊಹರಾ, ಜೈನಬಾ, ಝೊಹರಾ ರಹೀಂ, ಜುಬೇರಾ ನಸೀಮಾ, ಉಚ್ಚಿಲ ಪೆರಿಬೈಲುವಿನ ಭವಾನಿ, ರೋಹಿತ್ ಮಾಸ್ಟರ್, ವಿಶ್ವನಾಥ್ ಮತ್ತು ನಾಗೇಶ್, ಸೋಮೇಶ್ವರ ರುದ್ರಪಾದೆ ಸಮೀಪದ ಮೋಹನ್, ಹೇಮಚಂದ್ರ , ಬಾಲು ಎಂಬವರ ಮನೆಗಳಿಗೆ ಅಲೆಗಳು ಅಪ್ಪಳಿಸಲು ಆರಂಭವಾಗಿ ಅಪಾಯದಂಚಿಗೆ ಸಿಲುಕಿದೆ.

ಕಿಲಿರಿಯಾ ಮಸೀದಿ ಮತ್ತು ಕೈಕೋ ದಲ್ಲಿರುವ ರಿಫಾಯಿಯ ಮಸೀದಿ ಕಟ್ಟಡಕ್ಕೂ ಅಲೆಗಳ ಹೊಡೆತ ಆರಂಭವಾಗಿದೆ.

ಶಾಶ್ವತ ಬ್ರೇಕ್ ವಾಟರ್ ಎರಡು ಪ್ರದೇಶಗಳಲ್ಲಿ ಮಾತ್ರ ಹಾಕಿರುವುದರಿಂದ ಉಚ್ಚಿಲ, ಪೆರಿಬೈಲು, ಬಟ್ಟಪ್ಪಾಡಿ ಸಮೀಪ ಸಮುದ್ರ ದೊಡ್ಡದಾಗಿದೆ. ಅರ್ಧ ಕಾಮಗಾರಿಯಿಂದಾಗಿ ಉಚ್ಚಿಲ ನಿವಾಸಿಗಳು ಮನೆಗಳನ್ನು ಕಳೆದುಕೊಳ್ಳುವಂತಾಗಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಮಾಡದೇ ಇದ್ದಲ್ಲಿ ರಸ್ತೆ ಸಹಿತ ಇಡೀ ಪ್ರದೇಶವೇ ಸಮುದ್ರದ ಒಡಲಿಗೆ ಸೇರುವುದು ಖಂಡಿತ ಎಂಬ ಅಭಿಪ್ರಾಯ ಉಚ್ಚಿಲ ನಿವಾಸಿಗಳಿಂದ ಕೇಳಿಬಂದಿದೆ.
ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಶಿವಾಜಿ ಜೀವರಕ್ಷಕ, ಜೀವರಕ್ಷಕ ಈಜುಗಾರರ ಸಂಘ , ಕರಾವಳಿ ನಿಯಂತ್ರಣ ದಳ , ಉಳ್ಳಾಲ ಠಾಣಾ ಪೊಲೀಸರು 24 ಗಂಟೆಯ ಕಾಲ ಕಾರ್ಯಾಚರಿಸುತ್ತಿದ್ದಾರೆ.
ಸ್ಥಳಕ್ಕೆ ಸಹಾಯಕ ಆಯುಕ್ತ ರವಿಚಂದ್ರ ನಾಯಕ್ , ಉಳ್ಳಾಲ ನಗರಸಭೆ ಪೌರಾಯುಕ್ತ ಶ್ರೀನಿವಾಸ ಮೂರ್ತಿ , ಗ್ರಾಮಕರಣಿಕ ಪ್ರಮೋದ್ ಕುಮಾರ್ , ತಹಸೀಲ್ದಾರ್ ಗುರುಪ್ರಸಾದ್ , ನಗರಸಭೆ ಸದಸ್ಯರುಗಳಾದ ಬಶೀರ್ ಮತ್ತು ಮಹಮ್ಮದ್ ಮುಕ್ಕಚ್ಚೇರಿ ಭೇಟಿ ನೀಡಿದ್ದಾರೆ.

ಇಂದು ಸಚಿವ-ಸಂಸದರ ಭೇಟಿ: ಕಡಲ್ಕೊರೆತ ಸಂಭವಿಸಿದ ಕೂಡಲೇ ಪ್ರತಿವರ್ಷವೂ ಭೇಟಿ ನೀಡುವ ಸಚಿವರು ಹಾಗೂ ಸಂಸದರು ಜೂ.12 ಕ್ಕೆ ಉಚ್ಚಿಲ, ಸೋಮೇಶ್ವರ ಹಾಗೂ ಉಳ್ಳಾಲ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಈ ಬಾರಿಯಾದರೂ ಶಾಶ್ವತ ಪರಿಹಾರ ಅಥವಾ ಬದಲಿ ವ್ಯವಸ್ಥೆ ಸಿಗುವ ನಿರೀಕ್ಷೆ ಸ್ಥಳೀಯರಲ್ಲಿ ಮೂಡಿದೆ. ಪಕ್ಷಬೇಧ ಮರೆತು ಇಬ್ಬರು ಜತೆಯಾಗಿ ಸ್ಥಳಕ್ಕೆ ಭೇಟಿ ಕೊಟ್ಟು ಕಾರ್ಯಾಚರಿಸಿದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ಅನುದಾನಗಳಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಅನ್ನುವುದು ಸ್ಥಳೀಯ ಹಿರಿಯರ ಅಭಿಪ್ರಾಯ.

` ಸಚಿವರು ಗಮನವೇ ಹರಿಸಿಲ್ಲ ‘
ಸಚಿವರು ಎಡಿಬಿ ಯೋಜನೆಯಡಿ ಬ್ರೇಕ್ ವಾಟರ್ ಕಾಮಗಾರಿ ನಡೆಸುವ ಭರವಸೆ ನೀಡಿದ್ದರು. ಆದರೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಸಾಧ್ಯವಾಗಿತ್ತು. ತಿಂಗಳ ಹಿಂದೆ ತಾತ್ಕಾಲಿಕ ಕಲ್ಲು ಹಾಕುವ ಕೆಲಸವನ್ನಾದರೂ ಮಾಡಿ ಅಂದಿದ್ದೆವು. ಗಮನವನ್ನೇ ಕೊಟ್ಟಿಲ್ಲ. ಹವಾಮಾನ ಇಲಾಖೆಯ ವರದಿ ಪಡೆಯುವ ಸಚಿವರು ದುರಂತ ಸಂಭವಿಸುವಾಗ ದೆಹಲಿ, ಬೆಂಗಳೂರು, ದುಬೈಗೆ ಹೋಗಿರುತ್ತಾರೆ. ಇದೀಗ ಮನೆಯಲ್ಲಿ ಸಂಪೂರ್ಣ ಸಮುದ್ರದ ಅಲೆಗಳು ಬಡಿಯಲು ಆರಂಭವಾಗಿದೆ. ಮಡದಿಯೂ ಅಸೌಖ್ಯದಿಂದ ಇದ್ದಾಳೆ. ಆರ್ಥಿಕವಾಗಿ ಹಿಂದುಳಿದಿರುವುದರಿಂದ ಉಳ್ಳಾಲ ಭಾಗದಲ್ಲಿ 10,000 ಬಾಡಿಗೆ ನೀಡಿ ಬದುಕಲು ಅಸಾಧ್ಯ. ಗಂಜಿ ಕೇಂದ್ರ ಇದ್ದರೂ, ಮಹಿಳೆಯರಿಗೆ ಶೌಚಾಲಯ ಬಳಸಲು ಅಸಾಧ್ಯ. ಮಕ್ಕಳಿಗೆ ಹಾಲುಣಿಸುವಂತಹ ಸ್ಥಿತಿ ಇರುವುದಿಲ್ಲ. ಅದಕ್ಕಾಗಿ ಗಂಜಿ ಕೇಂದ್ರ ಮಾಡಿದರೂ ಅಲ್ಲಿಗೆ ಹೋಗುವುದಿಲ್ಲ. 142 ಕಡಲ್ಕೊರೆತ ಸಂತ್ರಸ್ತ ಕುಟುಂಬಗಳಿಗೆ ಕೋಟೆಕಾರು ಗ್ರಾಮದಲ್ಲಿ ಒಂದೂವರೆ ಎಕರೆ ಜಮೀನು ಗುರುತಿಸಲಾಗಿದೆ. ಮನೆ ನಿರ್ಮಿಸಿ ಕೊಡುವ ಭರವಸೆ ಯಿದ್ದರೂ, ಈವರೆಗೂ ಜಾಗದ ಹಕ್ಕುಪತ್ರ ಸಿಕ್ಕಿಲ್ಲ. ಅಲ್ಲಿಯೂ ಅಸಾಧ್ಯವಾದ ಮಾತು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
184

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು