News Karnataka Kannada
Friday, May 17 2024
ಕರಾವಳಿ

ಅಕ್ರಮ ಮದ್ಯ ಮಾರಾಟ ವಿರುದ್ಧ ತಕ್ಷಣ ಕ್ರಮ ಅಗತ್ಯ: ದಲಿತ ಮುಖಂಡರು ಎಚ್ಚರಿಕೆ

Photo Credit :

ಅಕ್ರಮ ಮದ್ಯ ಮಾರಾಟ ವಿರುದ್ಧ ತಕ್ಷಣ ಕ್ರಮ ಅಗತ್ಯ: ದಲಿತ ಮುಖಂಡರು ಎಚ್ಚರಿಕೆ

ಬಂಟ್ವಾಳ: ತಾಲೂಕಿನ ವಿವಿಧೆಡೆಗಳಲ್ಲಿ ಅಕ್ರಮ ಮದ್ಯ ಮಾರಾಟ ವ್ಯಾಪಕವಾಗಿ ನಡೆಯುತ್ತಿದ್ದು, ಈ ಬಗ್ಗೆ ಅಬಕಾರಿ ಇಲಾಖೆ ತಕ್ಷಣ ಕ್ರಮ ಕೈಗೊಳ್ಳದೇ ಇದ್ದಲ್ಲಿ ಅಬಕಾರಿ ಇಲಾಖೆಯ ಮುಂಭಾಗದಲ್ಲಿ ಧರಣಿ ಕುಳಿತುಕೊಳ್ಳುವುದಾಗಿ ದಲಿತ ಮುಖಂಡರು ಎಚ್ಚರಿಸಿದ್ದಾರೆ.

ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅಧ್ಯಕ್ಷತೆಯಲ್ಲಿ  ಸೆ. 14ರಂದು ಬಂಟ್ವಾಳ ತಾ.ಪಂ. ಸಭಾಂಗಣದಲ್ಲಿ ನಡೆದ ಪ.ಜಾತಿ ಪಂಗಡ ಕುಂದುಕೊರತೆ ಸಮಿತಿ ಸಭೆಯಲ್ಲಿ  ಈ ಆಗ್ರಹ ಕೇಳಿಬಂದಿದ್ದು, ಸೂಕ್ತಕ್ರಮಕ್ಕೆ ಒತ್ತಾಯಿಸಿದ್ದಾರೆ. ಪಲ್ಲಮಜಲು, ಕನ್ಯಾನ, ಕಡೇಶಿವಾಲಯ ಸಹಿತ ವಿವಿಧ ಕಡೆಗಳಲ್ಲಿ ಅಕ್ರಮ ಮದ್ಯ ಮಾರಾಟ ವ್ಯಾಪಕವಾಗಿ ನಡೆಯುತ್ತಿದೆ ಮಾತ್ರವಲ್ಲದೆ, ಪಲ್ಲಮಜಲು ಪ್ರದೇಶದಲ್ಲಿ  ಅಕ್ರಮ ಕಳ್ಳಭಟ್ಟಿ ತಯಾರಿಕೆಯೂ ನಡೆಯುತ್ತಿದೆ ಎಂದು ದಲಿತ ಮುಖಂಡ ರಾಜ ಪಲ್ಲಮಜಲು ಆರೋಪಿಸಿದರು.

ಕಡೇಶಿವಾಲಯ ಗ್ರಾಮ ಒಂದರಲ್ಲಿ 23 ಕಡೆಯ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದಾಗಿ ಜಯ ಕಡೇಶಿವಾಲಯ ಸಭೆಯ ಗಮನ ಸೆಳೆದರೆ, ಅಕ್ರಮ ಮಾರಾಟಕ್ಕೆ ಅಬಕಾರಿ ಇಲಾಖೆಗೆ ತಲ್ಲಾ 300 ರೂ. ಪ್ರತೀ ತಿಂಗಳು ಸಂದಾಯ ಆಗುತ್ತಿದೆ ಎಂದು ಸುರೇಶ ಮಂಡಾಡಿ ಟೀಕಿಸಿದರು. ಜಕ್ರಿಬೆಟ್ಟು ವೈನ್ ಶಾಪ್ ನಲ್ಲಿ ಬಾರ್ ಮಾದರಿಯಲ್ಲಿ ಕುಡಿಯಲು ಮದ್ಯ ವಿತರಣೆ ನಡೆಸಲಾಗುತ್ತಿದೆ ವಿಶ್ವನಾಥ ಚಂಡ್ತಿಮಾರು ಪ್ರಸ್ತಾಪಿಸಿದರು.
ಬೆಂಜನಪದವಿನಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಿತ ಸರಕಾರಿ ಪ್ರೌಢ ಶಾಲೆ, ಪ.ಪೂ. ಕಾಲೇಜು, ಇಂಜಿನಿಯರಿಂಗ್ ಕಾಲೇಜು ಇರುವ ಜನವಸತಿ ಪ್ರದೇಶದಲ್ಲಿ ವ್ಯಕ್ತಿಯೊಬ್ಬರಿಗೆ ಬಾರ್ ತೆರೆಯಲು ಅಬಕಾರಿ ಇಲಾಖೆ ಸಹಕರಿಸುತ್ತಿದೆ. ಇದನ್ನು ತಡೆಯದೇ ಇದ್ದಲ್ಲಿ  ಅಬಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಮುಖಂಡರು ಆಗ್ರಹಿಸಿದ್ದು, ಸುದೀರ್ಘ ಚರ್ಚೆ ನಡೆಯಿತು.

ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮ ಪರಾರಿ ಪರಿಶಿಷ್ಟ ಕಾಲೋನಿಯಲ್ಲಿ ರಸ್ತೆ ಕಾಂಕ್ರಿಟೀಕರಣಕ್ಕೆ 5ಲಕ್ಷ ರೂ. ಮಂಜೂರಾಗಿದ್ದರೂ ಕಾಮಗಾರಿ ಕೈಗೊಂಡಿಲ್ಲ. ದಾರಿ ದೀಪ ಅಳವಡಿಸಿಲ್ಲ. ಆದರೆ ಈ ಪರಿಸರದ ಅಲ್ಪಸಂಖ್ಯಾತ ಸಮುದಾಯದ ಪ್ರದೇಶದಲ್ಲಿ ಕಾಂಕ್ರಿಟೀಕರಣ ಕಾಮಗಾರಿ ನಡೆದಿದೆ. ಪುರಸಭೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಗಂಗಾಧರ ಗಾಂದೋಡಿ ಆರೋಪಿಸಿದರು. ಪೂಪಾಡಿಕಟ್ಟೆ ಸರಕಾರಿ ಪ್ರಾಥಮಿಕ ಶಾಲೆಯ ಸ್ಥಳದಾನಿ , ಗ್ರಾ.ಪಂ. ಅಧ್ಯಕ್ಷೆ ದಲಿತೆ ಎಂಬ ಕಾರಣಕ್ಕಾಗಿ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನಡೆಸಲು ಅವಕಾಶ ನೀಡದಿರುವ ಶಾಲೆಯ ಮುಖ್ಯಶಿಕ್ಷಕಿ ವಿರುದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜನಾರ್ದನ ಚಂಡ್ತಿಮಾರು ಒತ್ತಾಯಿಸಿದರು.

ಕಳೆದ ಐದು ವರ್ಷಗಳ ಹಿಂದೆ ಬಿ.ಸಿ.ರೋಡ್ ಮುಖ್ಯವೃತ್ತಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹೆಸರು ಅಳವಡಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ರಾಜಕೀಯ ಮಂದಿ ನೀಡಿದ ಮನವಿಗೆ ತ್ವರಿತ ಸ್ಪಂದಿಸಿದ ಪುರಸಭೆ ಆಡಳಿತಕ್ಕೆ  ಅಧಿಕಾರ ಇಲ್ಲದಿದ್ದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾನೂನನ್ನು ಅತಿಕ್ರಮಿಸಿ ಇಚ್ಚಾನುಸಾರ ವರ್ತಿಸಿದ ಉದಾಹರಣೆ ನಡೆದಿದೆ ಎಂದು ರಾಜ ಪಲ್ಲಮಜಲು, ಜನಾರ್ದನ ಚಂಡ್ತಿಮಾರು ಅಧಿಕಾರಿವರ್ಗವನ್ನು ತರಾಟೆಗೆ ತೆಗೆದುಕೊಂಡರು.

ಇದೇ ವೇಳೆ ಜಿಲ್ಲಾ ದಲಿತ ನಾಗರಿಕ ಹಿತರಕ್ಷಣಾ ಯುವ ವೇದಿಕೆಯಿಂದ ಬಿ.ಸಿ.ರೋಡ್ ಮುಖ್ಯವೃತ್ತಕ್ಕೆ ಡಾ. ಬಿ.ಆರ್.ಅಂಬೇಡ್ಕರ್ ಹೆಸರು ಇಡುವಂತೆ ಮನವಿ ಸಲ್ಲಿಸಲಾಯಿತು. ಬಿ.ಸಿ.ರೋಡ್ ನಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 25 ಸೆಂಟ್ಸ್ ಜಮೀನು ನೀಡಿದ್ದು , ಕಳೆದ ಸಭೆಯಲ್ಲಿ ಸಲ್ಲಿಸಿದ ಬೇಡಿಕೆಯಂತೆ ಉಳಿಕೆ 20 ಸೆಂಟ್ಸ್ ಜಮೀನು ಮತ್ತೆ ಸದ್ರಿ ಉದ್ದೇಶಕ್ಕೆ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ತಾ.ಪಂ. ಸಹಾಯಕ ನಿರ್ದೇಶಕಿ  ದಯಾವತಿ, ಸಮಾಜ ಕಲ್ಯಾಣ ಅಧಿಕಾರಿ ಮೋಹನ್ ಕುಮಾರ್, ಪಂಚಾಯತ್ ರಾಜ್ ಇಂಜಿನಿಯರಿಂಗ್  ವಿಭಾಗ ಎ.ಇ.ಇ. ನರೇಂದ್ರ ಬಾಬು, ದಲಿತಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು